Birthday; ಜಿಎಸ್​ಎಸ್​ ವಿಶೇಷ: ಕಡ್ಡಿ ಗೀಚುತ್ತ ದೀಪ ಮುಡಿಸುತ್ತ

ಇಂದು ರಾಷ್ಟ್ರಕವಿ ಜಿ.ಎಸ್​. ಶಿವರುದ್ರಪ್ಪ ಅವರ ಜನ್ಮದಿನ. ಅವರ 'ನನ್ನ ಹಣತೆ' ಇಂದಿಗೂ ವಿಧವಿಧದಲ್ಲಿ ಹಣತೆ ಹಚ್ಚುತ್ತಲೇ ಇದೆ. ಈ ಕವನವನ್ನು ನೆನಪಿಸಿಕೊಂಡಾಗ ತಕ್ಷಣಕ್ಕೆ ನಿಮ್ಮೊಳಗೆ ಮೂಡುವ ವಿಚಾರಗಳೇನು ಎಂದು ಕೆಲವು ಕಾವ್ಯಮೋಹಿಗಳಿಗೆ ಕೇಳಿದಾಗ...  

Birthday; ಜಿಎಸ್​ಎಸ್​ ವಿಶೇಷ: ಕಡ್ಡಿ ಗೀಚುತ್ತ ದೀಪ ಮುಡಿಸುತ್ತ
ಡಾ. ಜಿ. ಎಸ್​. ಶಿವರುದ್ರಪ್ಪ
Follow us
ಶ್ರೀದೇವಿ ಕಳಸದ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 07, 2021 | 6:10 PM

ಪ್ರೊ. ಪುರುಷೋತ್ತಮ ಬಿಳಿಮಲೆ: ಹಣತೆ ಬೀರುವ ಬೆಳಕಿನ ಹಾದಿಯಲ್ಲಿ

1979ರಿಂದ ಶಿವರುದ್ರಪ್ಪನವರೊಂದಿಗೆ ನನ್ನದು ನೇರ ಮತ್ತು ಪರೋಕ್ಷ ಸಂಬಂಧ. ಈ ಸಂಬಂಧವು ವ್ಯಾವಹಾರಿಕವಾಗಿರಲಿಲ್ಲ. ಬದಲು ಹಣತೆ ಬೀರುವ ಬೆಳಕಿನ ಹಾಗೆ ನಿಸ್ವಾರ್ಥವಾದದ್ದು. ನಾನು ಎಲ್ಲಿಯೋ ಕುವೆಂಪು ಬಗ್ಗೆ ಬರೆದ ಒಂದು ಪ್ರಬಂಧವನ್ನು ಓದಿದ ಅವರು ಎಲ್ಲಿಂದಲೋ ನನ್ನ ನಂಬರ್‌ ಸಂಗ್ರಹಿಸಿ ಫೋನ್ ಮಾಡಿ ಮಾತಾಡಿದ್ದರು. ಅಲ್ಲಿಂದ ಮುಂದೆ ನಾವು ‘ಆಗಾಗ ಕಡ್ಡಿ ಗೀಚಿದ್ದೇವೆ, ದೀಪ ಮುಡಿಸಿದ್ದೇವೆʼ. ದೆಹಲಿಗೆ ಅವರು ಬಂದಾಗಲೆಲ್ಲ ಸಾಯಂಕಾಲದ ಹೊತ್ತು ಜೊತೆ ಕುಳಿತು

‘ಇರುವಷ್ಟು ಹೊತ್ತು ಅವರ ಮುಖ ನಾನು, ನನ್ನ ಮುಖ ಅವರು ನೋಡಿಕೊಂಡುʼ

ಕತ್ತಲಿನಿಂದ ಬೆಳಕಿನ ಕಡೆಗೆ ನಡೆಯುವ ಹಾದಿಗಳ ಬಗ್ಗೆ ಚರ್ಚಿಸಿದ್ದೇವೆ. ದೀಪದ ಬೆಳಕು ಸುತ್ತಲೂ ಆವರಿಸಿಕೊಂಡ ಹಾಗೆ ಅವರೂ ತನ್ನ ಸುತ್ತ ಕುಳಿತವರನ್ನು ಆವರಿಸಿಕೊಳ್ಳುತ್ತಾರೆ.

ಜಿಎಸ್‌ಎಸ್‌ ತೀರಿಕೊಂಡ ದಿನ ನಾನವರ ಕೆಲವು ಕವಿತೆಗಳನ್ನು ಕೇವಲ ಸಮಾಧಾನಕ್ಕಾಗಿ ಓದಿದ್ದುಂಟು. ಹೆಚ್ಚಿನ ಶಬ್ದಾಡಂಬರವಿಲ್ಲದ, ರೂಪಕ-ಪ್ರತಿಮೆಗಳ ಭಾರವಿಲ್ಲದ ಅವರ ಕವಿತೆಗಳನ್ನು ಓದುವುದು ದೆಹಲಿಯಂಥ ಮಹಾನಗರದಲ್ಲಿ ಕುಳಿತ ನನಗೆ ಸದಾ ಇಷ್ಟ. ಎಷ್ಟೋ ಬಾರಿ ಅವು ಎದೆಯ ಭಾರವನ್ನು ಕಳೆದುಹಾಕುತ್ತವೆ.

ದೆಹಲಿಯ ಒಳಗೂ ಹೊರಗೂ ಏನೇನೋ ನಡೆಯುತ್ತಲೇ ಇರುತ್ತದೆ. ಎಳೆಯ ಮಗುವಿನ ಮೇಲೆ ಅತ್ಯಾಚಾರ, ದರೋಡೆ, ರಾಜಕಾರಣಿಗಳ ಪೊಳ್ಳು ಭಾಷಣಗಳು, ರೈತರ ಚಳುವಳಿ, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಆಕ್ರಮಣ, ಜನರ ವಿವೇಚನಾ ರಹಿತ ನಡವಳಿಕೆ, ಮಾರುಕಟ್ಟೆಯ ಏಳುಬೀಳುಗಳು- ಹೀಗೆ ಈ ನಗರಕ್ಕೆ ರಾತ್ರಿ ಹಗಲುಗಳ ಹಂಗಿಲ್ಲ, ದಣಿವೂ ಇಲ್ಲ. ಇದರೊಳಗೆ ಸಿಲುಕಿಕೊಂಡಿರುವ ನನ್ನ ನಿಜವಾದ ಜವಾಬ್ದಾರಿಗಳೇನು? ಹಲವರು ಸಲಹೆ ಮಾಡುವ ಹಾಗೆ, ಬರುವ ಸಂಬಳವನ್ನು ಸುಮ್ಮನೇ ಕಿಸೆಯಲ್ಲಿರಿಸಿಕೊಂಡು ಕಣ್ಣೆದುರೇ ನಡೆಯುತ್ತಿರುವ ಅನ್ಯಾಯಗಳನ್ನು ನೋಡಿದರೂ ನೋಡದಂತಿದ್ದು ಮೌನಿಯಾಗಿರಬಾರದೇ? ಕಾಂಕ್ರಿಟ್‌ ಕಾಡಿನ ಪಕ್ಕದ ಬಡವರ ಜುಗ್ಗಿಯಲ್ಲಿ ಬದುಕುತ್ತಿರುವ ಸಾವಿರಾರು ಕಂದಮ್ಮಗಳ ಕೂಗು ಕಿವಿಗೆ ಬಿದ್ದರೂ ಕಿವುಡನಂತಿರಬಾರದೇ?

ಆಗೆಲ್ಲ ಜಿಎಸ್‌ಎಸ್‌ ಮೆಲ್ಲನೇ ನನ್ನ ಕಿವಿಯೊಳಗೆ ಉಸಿರುತ್ತಾರೆ-

‘ನೀನೂ ಹಣತೆ ಹಚ್ಚು, ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ, ನೀನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿಯೂ ನಿನಗೆ ಬೇಡ, ನನಗೂ ಗೊತ್ತು, ಈ ಕತ್ತಲೆಗೆ ಕೊನೆಯಿರದ ಬಾಯಾರಿಕೆ ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ ತಿಂದರೂ, ಕುಡಿದರೂ, ಇದಕ್ಕೆ ಇನ್ನೂಬೇಕು, ಇನ್ನೂ ಬೇಕು ಎನ್ನುವ ಬಯಕೆʼ

ಈ ಸಾಲುಗಳು ಎದೆಯೊಳಕ್ಕೆ ಇಳಿಯುತ್ತಿರುವಂತೆಯೇ ಮೆಲ್ಲನೇ ಎದ್ದು ಸಿಂಘುಗಡಿಯಲ್ಲಿ ಕುಳಿತ ರೈತರ ನಡುವೆ ಒಂದು ದೀಪ ಹಚ್ಚಲು ಹೊರಡುತ್ತೇನೆ. ಕವಿ ಬದುಕಲು, ಕವಿತೆಯಿಂದ ನಾನು ಬದುಕಲು ಇಷ್ಟುಸಾಕು!

GSS

ಸುಶಿ ಕಾಡನಕುಪ್ಪೆ: ಸಂವೇದನೆಯನ್ನು ಕಟ್ಟಿಹಾಕುವ ಪ್ರಯತ್ನವೇಕೆ?

ವಾಸ್ತವ ನಮ್ಮ ಗ್ರಹಿಕೆಗೆ ತಕ್ಕಂತೆ ಇರುತ್ತದೆ. ಮನುಷ್ಯಜಗತ್ತಿನ ಸತ್ಯಗಳನ್ನು ಅದು ಅನಾವರಣೊಳಿಸುತ್ತದೆ. ಅಂದರೆ ನಮ್ಮ ಜೊತೆಗಿನ ಸಹಜೀವಿಗಳ ಸುಖ-ದುಃಖ, ಅವರ ಸಮಸ್ಯೆಗಳು, ಕಂಡುಕೊಂಡ ಪರಿಹಾರಗಳು, ಇನ್ನೂ ಕಂಡುಕೊಳ್ಳಲಾಗದಿರುವ ಒಳನೋಟಗಳು; ಆದರೂ ಗಡಿಗಳಾಚೆಗೆ ದಾಟುವ, ತಾಕುವ ಮನುಷ್ಯ ಸಂವೇದನೆಗಳು ನಮ್ಮನ್ನು ಸತ್ಯದ ಕಡೆಗೆ ಕರೆದೊಯ್ಯುತ್ತವೆ. ‘ಈ ಮನುಷ್ಯ ಸಂವೇದನೆಗಳಿಗೆ ಗಡಿಗಳನ್ನು ಕಟ್ಟಬೇಕು’ ಎನ್ನುತ್ತದೆ ಕೆಲವು ಜನರ ವಾಸ್ತವ! ‘ನಮ್ಮ ದುಃಖದ ಬಗ್ಗೆ ಬೆಳಕು ಚೆಲ್ಲಲು ನೀವು ಯಾರು?’ ಎಂದು ಪ್ರಶ್ನೆ ಕೇಳುವ ನಾವು ಸಂವೇದನೆಯನ್ನು ಕಟ್ಟಿಹಾಕಲು ಪ್ರಯತ್ನಿಸುತ್ತಿದ್ದೇವೆ. ‘ಹಣತೆ ಹಚ್ಚುತ್ತೇನೆ ನಾನು’ ಎಂದು ಕವಿ ಜಿಎಸ್ಎಸ್ ಹೇಳುವ ಹಾಗೆ ನಮ್ಮ ಮನಸ್ಸಿನ ಸಂವೇದನೆಯ ಶಕ್ತಿಯನ್ನು ತೋರಿಸುವ ಹಣತೆಯನ್ನು ನಾವು ಮೊದಲು ಹಚ್ಚಬೇಕು ಎಂದೆನಿಸುತ್ತದೆ. ಈ ಜೀವಪರ ಸಂವೇದನೆಯೇ ಅಲ್ಲವೆ ನಮ್ಮ ಬದುಕನ್ನು ಸಹನೀಯವಾಗಿರಿಸಿರುವುದು? ಇದಕ್ಕೆ ಗಡಿಗಳನ್ನು ಕಟ್ಟಿ, ‘ನಮ್ಮವರು, ಹೊರಗಿನವರು’ ಎಂದು ಕೂಗಾಡುವ ನಾವು ಮೊದಲು ಕತ್ತಲಲ್ಲಿ ಹೂತು ಹೋಗಿರುವ ನಮ್ಮ ಸಂವೇದನಯನ್ನು ಬೆಳಕಿಗೆ ತರಬೇಕಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಯಾವುದೇ ಜೀವಿಯ ನೋವನ್ನು ಅರ್ಥ ಮಾಡಿಕೊಳ್ಳುವ ಮತ್ತು ಹಿಂಸೆಯನ್ನು ಪ್ರತಿಭಟಿಸುವ ಹಣತೆಯನ್ನು ನಾವು ಎಂದೂ ಕೈಬಿಡಬಾರದಾಗಿದೆ. ಕವಿ ಜಿಎಸ್ಎಸ್ ಹೇಳುವ ಹಾಗೆ ‘ನನ್ನ ಮುಖ ನಿನಗೆ, ನಿನ್ನ ಮುಖ ನನಗೆ’ ಕಾಣಬೇಕಾಗಿದೆ. ಈಗಿನ ರೈತ ಹೋರಾಟದ ಹಿನ್ನೆಲೆಯಲ್ಲಿ ಈ ಕವಿತೆಯನ್ನು ನೆನಪಿಸಿಕೊಂಡಾಗ ಅನ್ನಿಸಿದ್ದಿಷ್ಟು.

ಜಯಶ್ರೀ ಜಗನ್ನಾಥ: ಪಕ್ಕದಲ್ಲಿರುವವರ ಕಣ್ಣಂಚಿನ ಕಂಬನಿಗೊಂದು ಪ್ರತಿಬಿಂಬ ಬೇಕಿತ್ತು

ಕತ್ತಲೆಯೆಂದರೆ ‘ಗುಮ್ಮ ಬರ್ತಾನೆ’ ಅನ್ನುವಂಥ ಭಯವೇಕೆ? ಕತ್ತಲೆಯನ್ನುಅಜ್ಞಾನಕ್ಕೂ, ಮೃತ್ಯುವಿಗೂ ಬೆಳಕನ್ನು ಜ್ಞಾನಕ್ಕೂ ಬದುಕಿಗೂ ಬಲ್ಲವರು ಹೋಲಿಸಿದ್ದಾರೆ. ಆದರೆ ಕತ್ತಲೆ ಅಷ್ಟೊಂದು ಕ್ರೂರಿಯೇ? ಕತ್ತಲೆಯೇನೂ ಎಲ್ಲಾ ಜೀವವನ್ನೂ ಭಯಬೀತರನ್ನಾಗಿ ಮಾಡುವ ಆಸುರೀ ಶಕ್ತಿಯಲ್ಲ. ಕತ್ತಲೆಯಿದೆಯೆಂದೇ ಬೆಳಕಿಗೆ ಬೆಲೆ. ಕತ್ತಲೆಯೇ ನಿರ್ವಾತದ ಸತ್ಯ. ಕತ್ತಲೆಯೇ ಅನ್ವೇಷಣೆಯಡೆಗೆ ಸೆಳೆದೊಯ್ಯುವ ಮಾಂತ್ರಿಕ ಶಕ್ತಿ. ವಿಕ್ಟರ್ ಹ್ಯೂಗೋ ಎಂಬ 19ನೇ ಶತಮಾನದ ಫ್ರೆಂಚ್ ಸಾಹಿತಿ ಹೇಳುತ್ತಾರೆ, ‘ನಾನು ಒಂದು ಕಪ್ಪು ಬೆಳಕನ್ನು ನೋಡುತ್ತೇನೆ. ಕತ್ತಲೆಯನ್ನು ನೋಡಿ ಬೆಳಕನ್ನು ಕಾಣದಿರುವುದು ಸಾಧ್ಯವೇ? ಕಣ್ಣಿಗೆ ಅಂಧಕಾರವಿದ್ದರೆ ಮನಸ್ಸು ಬೆಳಕನ್ನಲ್ಲವೇ ಯೋಚಿಸಿ ಊಹಿಸಿ ಹುಡುಕುವುದು?

ಕೋವಿಡ್‍ ಎನ್ನುವ ವಿಶ್ವವ್ಯಾಪೀ ಸೋಂಕಿನ ಅಂಧಕಾರ ಹರಡುತ್ತಿರುವಂತೆಯೇ ಸಾವಿರಾರು ವಿಜ್ಞಾನಿಗಳು ತಮ್ಮತಮ್ಮ ಪ್ರಯೋಗಾಲಯಗಳಿಗೆ ತೆರಳಿ ಸಣ್ಣ ಸಣ್ಣ ಹಣತೆ ಹಚ್ಚಲು ಒಂದು ವರ್ಷಕ್ಕೆ ಮುಂಚೆಯೇ ಪ್ರಾರಂಭಿಸಿದರು. ಏಕೆ? ಅವರಲ್ಲಿ ಯಾರೊಬ್ಬರಿಗೂ ಈ ಭಯಂಕರ ಸೋಂಕನ್ನುತಮ್ಮ ಮಿಡಿದೀಪದಿಂದ ಮಾತ್ರವೇ ಹೊಡೆದೋಡಿಸಿ ಬಿಡುವ ಆತ್ಮಸ್ಥೈರ್ಯವೇನೂ ಇರಲಿಲ್ಲ. ಒಂದು ಸೋಂಕನ್ನು ಹತೋಟಿಗೆ ತರಲು ನಾನಾ ದೇಶಗಳ ನಾನಾ ನಾಗರೀಕತೆಗಳ ಸಹಸ್ರಾರು  ಅನ್ವೇಷಕರು ನೂರಾರು ವರ್ಷಗಳಿಂದ ಕೆಲಸ ಮಾಡಿ ಅದರ ಮಾರ್ಗಗಳನ್ನು ದಾಖಲಿಸಿದ್ದಾರೆ. ಆ ದಿಕ್ಸೂಚಿಗಳು ಇನ್ನೂ ದಾರಿ ತೋರುತ್ತಿವೆ. ಆ ಎಳೆಯನ್ನೇ ಹಿಡಿದು ಹೊರಟ ಅನ್ವೇಷಕರುಗಳಿಗೆ ಗೊತ್ತುಇದು ಬಿರುಗಾಳಿಯಲ್ಲಿ ಸುರಿಯುವ ಮಳೆಯಲ್ಲಿ ತೇಲುವ ದೋಣಿಯ ಮೇಲೆ ಕಡ್ಡಿಗೀರಿ ದೀಪ ಹಚ್ಚುವ ಹರಸಾಹಸ. ಯಾವುದೇ ಸಂಶೋಧನೆಯಲ್ಲಿ ಒಂದು ಅಂಶವನ್ನು ಕಂಡು ಹಿಡಿಯಲು ಅಪ್ರಯೋಜಕವೆನಿಸುವ ನೂರಾರು ಪ್ರಯತ್ನಗಳನ್ನು ನಡೆಸಬೇಕು. ದಿನದಿನವೆಲ್ಲಾ ಎಡೆಬಿಡದೆ ಕೆಲಸ ಮಾಡಿದರೂ ರಾತ್ರಿಯಾಗುವಾಗ ಮಾಡಿದ್ದೆಲ್ಲಾ ವ್ಯರ್ಥ ಅನ್ನಿಸಬಹುದು. ಮತ್ತೆ ಮತ್ತೆ ಪ್ರಭೆಯನ್ನರಸಬೇಕು. ಹಣತೆ ಹಚ್ಚುವುದಷ್ಟೇ ನಮ್ಮ ಕೆಲಸ ಬೆಳಕಿನ ಕೆಲಸ ಬೆಳಕು ಮಾಡುತ್ತದೆ. ನನ್ನ ಹಣತೆಯಿಂದ ನಿನ್ನಒಂದು ಹೆಜ್ಜೆಗೆ ದಾರಿ ಕಾಣಬಹುದು. ಮುಂದಿನ ಹೆಜ್ಜೆಗೆ ಮತ್ಯಾರೋ ದೀಪ ಮೂಡಿಸಬಹುದು. ಪ್ರತಿಯೊಂದು ದೇಶದಲ್ಲೂ ಪ್ರತಿಯೊಂದು ಪ್ರಯೋಗಾಲಯಗಳಲ್ಲೂ ಸದ್ದಿಲ್ಲದೆ ಬಿಳಿಯ ನಿಲುವಂಗಿಗಳನ್ನು ತೊಟ್ಟು ಪ್ರಾಣಾಂತಿಕ ವೈರಾಣುಗಳನ್ನು ಸೂಕ್ಷ್ಮದರ್ಶಕಗಳ ಕೆಳಗಿಟ್ಟು ವರ್ಧಿಸಿ ಸಾಯಿಸಿ ಕೂಡಿಸಿ ಕಳೆದು ಸಾವಿನೊಂದಿಗೆ ಸರಸವಾಡಿದರು. ಅವೆಲ್ಲಾ ದೀಪದ ಕುಡಿಗಳಂತೆ ನಿಮಗೆ ಕಾಣಲಿಲ್ಲವೇ? ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಯವರು ದಿನಂಪ್ರತೀ ಹಗಲು ರಾತ್ರಿಗಳೆನ್ನದೆ ಕತ್ತಲೊಡನೆ ಸೆಣಸಿದರು; ಕತ್ತಲೆಯ ಆಹ್ವಾನವನ್ನು ಸ್ವೀಕರಿಸಿ ಹಣತೆಯೊಂದನ್ನು ಹಚ್ಚಿ ಅದರೆಡೆಗೆ ಹೆಜ್ಜೆಯಿಟ್ಟರು. ಮನೆಮನೆಗಳಲ್ಲಿ ಹೆಸರಿಲ್ಲದ ಪ್ರಸಿದ್ಧರಲ್ಲದ ಅಸಂಖ್ಯಾತ ಜನ ಸೋಂಕಿನ ಕತ್ತಲಿನ ಸವಾಲಿಗೆ ಸಡ್ಡು ಹೊಡೆದು ತಮ್ಮ ಕಿರುದೀಪಗಳನ್ನು ಆರದಂತೆ ಕಾದರು.

ತಿಂಗಳಾನುಗಟ್ಟಲೆ ಸತತವಾಗಿಯಾವ ಬಾಜಾ ಭಜಂತ್ರಿಗಳೂ ಇಲ್ಲದಂತೆ, ಯಾರ ಜಯಜಯಕಾರಗಳಿಗೂ ಇಲ್ಲದಂತೆ ಬ್ರಹ್ಮಾಂಡದಂಥ ಕತ್ತಲಿನ ಮುಂದೆ ಹಣತೆ ಬೆಳಗಿದರು. ಇದೋ ಈಗ ಅಲ್ಪಸ್ವಲ್ಪ ಬೆಳಕು ಮೂಡುತ್ತಿದೆ. ಇದೋ ಈಗ ಸೂರ್ಯನ ಕುದುರೆಯಂತೆ ಕಿರಣವೊಂದು ಒಳಬರುತ್ತಿದೆ. ಕಾಣುತ್ತಿದೆಯೇ ನನ್ನ ಕಣ್ಣಲ್ಲಿರುವ ಅಚಲ ವಿಶ್ವಾಸ? ನನ್ನ ತುಟಿಯಂಚಿನ ನಗೆಯ ಸಣ್ಣ ಸುರುಳಿ? ಅದಷ್ಟೇ ನನ್ನತೃಪ್ತಿ, ನನ್ನ ನೆಮ್ಮದಿ. ನನ್ನ ಮುಖ ನಿನಗೆ ನಿನ್ನ ಮುಖ ನನಗೆ ಕಾಣಬೇಕಿತ್ತು, ಅದಕ್ಕೊಂದು ದೀಪ ಬೇಕಿತ್ತು. ದಿಗಂತದವರೆಗೂ ಪಸರಿಸಿದ್ದ ಕತ್ತಲೆಯನ್ನೆಲ್ಲಾ ಹೊಡೆದೋಡಿಸುವ ದಿವ್ಯಜ್ಯೋತಿಯ ಜ್ವಾಲೆಯನ್ನು ತರಲು ಹೊರಟಿದ್ದವರಲ್ಲ ನಾವು. ನನ್ನ ಪಕ್ಕದಲ್ಲಿರುವವರ ಕಣ್ಣಂಚಿನ ಕಂಬನಿಗೊಂದು ಪ್ರತಿಬಿಂಬ ಬೇಕಿತ್ತು.

ಹಚ್ಚುತ್ತಿರುತ್ತೇವೆ, ಹೀಗೇ. ಪುಟ್ಟ ಪುಟ್ಟ ಬತ್ತಿಗಳಿಗೆ ಪುಟ್ಟ ಪುಟ್ಟ ಮೋಂಬತ್ತಿಗಳಿಗೆ ಬೆಳಕನ್ನು ದಾನ ಮಾಡಿ ಮಾನವತೆಯನ್ನುಆಹ್ವಾನಿಸುವ ನಂದಾದೀಪಗಳನ್ನಾಗಿ ಮಾಡುತ್ತೇವೆ.

GSS

ಡಿ.ಕೆ. ರಮೇಶ: ಸಮಷ್ಟಿಯ ಸಂಕೇತ ನಿರಹಂಕಾರದ ಸೊಲ್ಲು

ಕತ್ತಲು ಶಾಶ್ವತವೇ, ಬೆಳಕು ಶಾಶ್ವತವೇ ಎಂದು ಎಲ್ಲರ ಒಳಗನ್ನೂ ಮುಟ್ಟಿ ಪ್ರಶ್ನಿಸುವ ಜಿಎಸ್ಎಸ್​ ಅವರ ಈ ಕವಿತೆ ನಾನು ಸದಾ ಗುನುಗಿಕೊಳ್ಳುವ ಕವನಗಳಲ್ಲಿ ಒಂದು. ಜಗತ್ತೇ ಅಜ್ಞಾನದ ಅಂಧಕಾರಕ್ಕೆ ನಿಧಾನವಾಗಿ ಸರಿಯುವಂತೆ ಭಾಸವಾಗುತ್ತಿರುವ ಈ ಹೊತ್ತಿನಲ್ಲಿ ಕವಿತೆಯೇ ಒಂದು ಬೆಳಕಾಗಿ ಎಲ್ಲ ಕತ್ತಲ ಮುಖಗಳನ್ನು ಎದುರುಗೊಳ್ಳುವುದು ಸೋಜಿಗ. ಹಣತೆ ಹಚ್ಚುತ್ತೇನೆ ನಾನೂ ಎಂಬ ಸಾಲನ್ನೇ ಗಮನಿಸಿ. ಆ ‘ನಾನೂʼ ಎಂಬುದು ಒಂದು ಸಮಷ್ಟಿಯ ಸಂಕೇತ. ನಿರಹಂಕಾರದ ಸೊಲ್ಲು. ಎಲ್ಲರಂತೆಯೇ ನಾನೂ ಹಣತೆ ಹಚ್ಚಿರುವೆ ಎಂಬ ನಿರ್ಲಿಪ್ತತೆ. ಕವಿ ಹಣತೆ ಹಚ್ಚಿರುವುದು ಜಿದ್ದು, ಭ್ರಾಂತಿ, ಆಸೆ, ಭ್ರಮೆಯಿಂದಲ್ಲ ಬರೀ ಪ್ರೀತಿಯಿಂದ. ಆದರೆ ಆ ಪ್ರೀತಿಯ ಒರತೆಯೇ ಈಗ ಕಾಣೆಯಾಗುತ್ತಿದೆ. ಜಿದ್ದು, ಭ್ರಾಂತಿ, ಭ್ರಮೆ, ಆಸೆ ಆಕಾಂಕ್ಷೆಗಳು ಮನುಷ್ಯ ಮನುಷ್ಯರ ನಡುವೆ ಗೋಡೆಯಾಗಿ ನಿಲ್ಲುತ್ತಿವೆ. ನಾವು ನಂಬಿದ್ದೇ ಶ್ರೇಷ್ಠ, ಎಂಬ ಮೊನಚು ಮುಳ್ಳುಗಳನ್ನು ಹಾದಿಗೆ ಹಾಸಲಾಗಿದೆ. ಯಾವುದನ್ನೂ ಪ್ರಶ್ನಿಸದ, ಪರೀಕ್ಷಿಸದ ಮಸಿಯೊಂದು ಎಲ್ಲರ ತಲೆಯೊಳಗೆ ಕುಳಿತಿದೆ. ಅದೇ ಕಡೆಗೆ ನಮ್ಮ ಕೈಗಳಿಗೂ, ಸಿಕ್ಕವರ ಮುಖಗಳಿಗೂ ಅಂಟಿಕೊಳ್ಳುತ್ತಿದೆ. ಕವಿಗೆ ಗೊತ್ತು; ಈ ಅಂಧಕಾರವೇನೂ ಹೊಸತಲ್ಲ ಎಂಬುದು. ಗಾಢಾಂಧಕಾರ ಆಗಲೂ ಇತ್ತು ಈಗಲೂ ಇದೆ. ಹೆಸರು ಬೇರೆ ಬೇರೆಯಾಗಿದೆಯಷ್ಟೇ.

‘ಕತ್ತಲಿನಿಂದ ಕತ್ತಲಿಗೆ ತಡಕಾಡಿ ಬಂದಿದೆ ಹೆಜ್ಜೆ ಶತಮಾನಗಳಿಂದಲೂ’ ತಮಸೋಮಾ ಜ್ಯೋತಿರ್ಗಮಯ ಎನ್ನುತ್ತಾ ಬರೀ ಬೂದಿಯನ್ನೇ ಕೊನೆಗೆ ಕಂಡಿದ್ದೇವೆ ಎಂಬ ಸಾಲುಗಳ ಜೊತೆ ನಾವು ಸದಾ ಉಸಿರಾಡುತ್ತಿರಬೇಕು. ಇಂತಹ ಸಾಲುಗಳು ಮಾತ್ರ ಬೆಂಕಿಚೆಂಡನ್ನೇ ಹೂಚೆಂಡು ಎಂದು ಮುಡಿದಿರುವ ಕಾಲದಲ್ಲಿ. ಬಾಂಬುಗಳನ್ನೇ ಬಳಪ ಎಂದು ನಂಬಿರುವ ಕಾಲದಲ್ಲಿ ನಮ್ಮನೆಲ್ಲಾ ಪೊರೆಯಬಲ್ಲವು. ಕವಿಯ ಆಳದಲ್ಲೆಲ್ಲೋ ಸಣ್ಣದೊಂದು ಆಸೆ ಇದೆ. ಅದು: ಆದರೂ ಹಣತೆ ಹಚ್ಚುತ್ತೇನೆ ನಾನು; ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ; ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ ನಾನು ಯಾರೋ. ಬೆಳಕು ಆರಿದೆಯೇ? ನೀನು ಯಾರೋ ನಾನು ಯಾರೋ ಎಂಬ ಸ್ಥಿತಿಗೆ ನಾವು ತಲುಪಿದ್ದೇವೆಯೇ ಎಂದು ಪ್ರಶ್ನಿಸಿಕೊಂಡಾಗ ನಮ್ಮನ್ನು ಎದುರುಗೊಂಡಿರುವ ಮೌಢ್ಯ, ಅಹಮು, ಜಿದ್ದು, ಶ್ರೇಷ್ಠತೆ, ಕ್ರೌರ್ಯ ಎಂಬ ಗಾಡಾಂಧಕಾರದ ನಡುವೆಯೂ ದೂರದಲ್ಲೆಲ್ಲೋ ಬೆಳಕೊಂದು ಮಿಡುಕಿದಂತೆ ತೋರುತ್ತದೆ. ಆ ಬೆಳಕೇ ಪ್ರೀತಿ. ಅಪ್ಪಟ ಮನುಷ್ಯ ಪ್ರೀತಿ, ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಪ್ರೀತಿ. ಬನ್ನಿ ಆ ಬೆಳಕ ಹಿಡಿಯೋಣ. ಹಣತೆ ಹಚ್ಚೋಣ.

ತಿರು ಶ್ರೀಧರ: ದೀಪ ಕಾಣಲು ಭಯಪಡುವ ಭಂಡ ಬದುಕು ನಮ್ಮದು

ಜಿಎಸ್ಎಸ್ ಒಮ್ಮೆ ನಾವು ಆಯೋಜಿಸಿದ ಕಾರ್ಯಕ್ರಮಕ್ಕೆ ಬಂದಾಗ ಹೇಳುತ್ತಿದ್ದರು. ‘ನಾವು ವಿಜ್ಞಾನದ ಉಪಯೋಗವನ್ನು ಬಯಸುತ್ತೇವೆಯೇ ವಿನಃ ವೈಜ್ಞಾನಿಕ ಮನೋಭಾವವನ್ನು ತಾಳುವುದಿಲ್ಲ ಎಂದು’. ಈ ಮಾತು ಈ ಪದ್ಯವನ್ನು ನೆನೆದಾಗಲೂ ನೆನಪಾಗುತ್ತಿದೆ. ಜಿಎಸ್ಎಸ್ ಅವರಿಗೆ ಎಲ್ಲವೂ ವಾಸ್ತವದ ನೆಲೆಗಟ್ಟಿನಲ್ಲಿರಬೇಕು. ಬಾಯಲ್ಲಿ ಪಿಟಿಪಿಟಿ ಮಾತನಾಡುವ ನರಬೊಂಬೆ ತನ್ನ ಅಭೀಷ್ಟೆಗಳ ಅರಸುವಿಕೆಯಲ್ಲಿ ತನ್ನೊಳಗಿನ ಬೆಳಕನ್ನು ಲೆಕ್ಕಕ್ಕಿಡದೆ ಬೆಳಕೆಂದರೆ ಕತ್ತಲಿನಲ್ಲಿದ್ದಾಗ, ತನ್ನ ಮೊಬೈಲ್ ಟಾರ್ಚ್ ಆಗಿ ಸಹಾ ಕೆಲಸ ಮಾಡಬಲ್ಲದು ಎಂಬಷ್ಟೇ ತನ್ನ ಅರಿವನ್ನು ಬಳಸುವವ. ನಮಗೆ ಗೊತ್ತು, (ನಮ್ಮೊಳಗಿನ ತಾಮಸದ) ಈ ಕತ್ತಲೆಗೆ ಕೊನೆಯಿರದ ಬಾಯಾರಿಕೆ ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ ತಿಂದರೂ, ಕುಡಿದರೂ, ಇದಕ್ಕೆ ಇನ್ನೂ ಬೇಕು ಇನ್ನೂ ಬೇಕು ಎನ್ನುವ ಬಯಕೆ.

ನಾವು ಸಂಪ್ರದಾಯಸ್ಥ ನಿಟ್ಟಿನಲ್ಲೇ ಎಲ್ಲವನ್ನೂ ನೋಡುತ್ತೇವೆಯೇ ವಿನಃ ಅರಿವಿನ ಆಳದ ಬೆಳಕಿನಿಂದಲ್ಲ. ಕತ್ತಲಿನಿಂದ ಕತ್ತಲೆಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ ಶತಮಾನದಿಂದಲೂ. ನಡು ನಡುವೆ ಒಂದಷ್ಟು ಬೆಳಕು ಬೇಕೆಂದು ಆಗಾಗ ಕಡ್ಡಿ ಗೀಚಿದ್ದೇವೆ, ದೀಪ ಮುಡಿಸಿದ್ದೇವೆ, ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ ಸುಟ್ಟಿದ್ದೇವೆ. ‘ತಮಸೋ ಮಾ ಜ್ಯೋತಿರ್ಗಮಯಾ’ ಎನ್ನುತ್ತ ಬರೀ ಬೂದಿಯನ್ನೇ ಕೊನೆಗೆ ಕಂಡಿದ್ದೇವೆ. ನಮಗೆ ನಮಗಿರುವ ಯೋಗ್ಯತೆಗೆ ಇನ್ನೇನು ತಾನೇ ಲಭಿಸೀತು. ಎಲ್ಲವನ್ನೂ ಮಾಡುತ್ತಿದ್ದೇವೆ. ನಮಗೇ ನಂಬಿಕೆ ಆತ್ಮವಿಶ್ವಾಸಗಳಿಲ್ಲದ ಸಂಪ್ರದಾಯದ ಪಿಟಿ ಪಿಟಿ ಗಿಳಿ ಮಾತಿನ ತೋರ್ಪಡಿಕೆಯ ಮಂತ್ರಗಾರಿಕೆಯ ಸೋಗಿನಲ್ಲಿ. ಸೊರಗಿದ್ದೇವೆ ಸತ್ವರಾಹಿತ್ಯದಲ್ಲಿ ಎಂಬ ಕಿಂಚಿತ್ತೂ ಅರಿವಿಲ್ಲದ, ಶುದ್ಧ ಅನುಭವ ಪಡೆಯಲು ಶ್ರಮಿಸುವ ಮನವಿಲ್ಲದ ತಮಸ್ಸಿನ ಆಳದಲ್ಲಿ. ಎಲ್ಲೋ ಹುಡುಕುತ್ತಿದ್ದೇವೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯಲ್ಲಿ ಒಂದಿನಿತೂ ಶ್ರಮಿಸದೆ ಹೇಳುತ್ತ ‘ಎಷ್ಟು ಕಷ್ಟ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲ್ಲಿ’ ಎಂದುಲಿಯಿತ್ತಲೇ ಯಾಂತ್ರಿಕವಾಗಿ ದೀಪ ಹಚ್ಚುತ್ತ. ಕಾಣದ ಕಡಲಿಗೆ ಹಂಬಲಿಸಿದ ಜಿಎಸ್ಎಸ್ ಅಂತಹ ಭವ್ಯ ಮನವೆಲ್ಲಿ, ನಮ್ಮ ಅಪಕ್ವ ಕಲ್ಪನೆಗಳೇ ಮಂಡೂಕಗಳಾದ ನಮ್ಮನ್ನು ನಮ್ಮದೇ ಕೂಪಗಳನ್ನೇ ಕಡಲೆಂದು ಭ್ರಮಿಸಿ ಚಿತ್ರಿಸಿ, ಚಿಂತಿಸಿ, ಸುಯ್ಯತ್ತಿರುವಾಗ. ನಮಗೆ ಎಲ್ಲವೂ ಬೇಕೆಂದಾಗ ಮಾತ್ರಾ ಬೇಕು.

ಆದರೂ ‘ಮನುಷ್ಯ ವಿನಾಶದ ಅಂಚಿನಲ್ಲಿದ್ದಾಗಲೂ ಬದುಕಿನ ತಂತು ಎಟುಕೀತೆ ಎಂದು ಅರಸಬೇಕು’ ಎನ್ನತ್ತಾನೆ ಒಬ್ಬ ಕವಿ. ಹಾಗೇಯೇ ಜಿಎಸ್ಎಸ್ ಹೇಳುತ್ತಾರೆ ಆದರೂ ಹಣತೆ ಹಚ್ಚುತ್ತೇನೆ ನಾನೂ, ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ; ವ್ಯಥೆ ಎಂದರೆ ನಾವು ಪುನಃ ಹಿಡಿಯುವ ಅದೇ ಜಾಡು. ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ ನಾನು ಯಾರೋ. ಬೆಳಕನ್ನು ಕಂಡ ಬುದ್ಧನಂತವರು ನಮಗೆ ಚಿತ್ರವಾಗುತ್ತಾರೆ. ದೇವರಾಗಿ ಕಲ್ಲಾಗಿ ಬಿಡುತ್ತಾರೆ. ನಾವೇ ಆ ಬೆಳಕಾಗಬೇಕೆಂದು ಬಯಕೆಯೇ ಉರಿಯುವುದಿಲ್ಲ. ಕತ್ತಲೆಯಾಗಿ ನಮ್ಮ ಕ್ಷೀಣತೆ ಲೋಕಕ್ಕೆ ಕಂಡುಬಿಟ್ಟಿತೇನೊ ಎಂದು ದೀಪವನ್ನು ಕಾಣಲು ಭಯಪಡುವ ಭಂಡ ಬದುಕು.

GSS

ಡಾ. ಸುಜಾತಾ ಲಕ್ಷ್ಮೀಪುರ : ಹಚ್ಚಬೇಕು ಹೊಸ ದರುಶನಕೆ ಕಾಣ್ಕೆಯ ಹಣತೆ

…ಆದರೂ ಹಣತೆ ಹಚ್ಚುತ್ತೇನೆ ನಾನೂ ಕತ್ತಲೆ ದಾಟುತ್ತೇನೆಂಬ ಭ್ರಮೆಯಿಂದಲ್ಲ. ಇರುವಷ್ಟು ಹೊತ್ತು ನನ್ನ ಮುಖ ನೀನು, ನಿನ್ನ ಮುಖ ನಾನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ ಎಂದೆನ್ನುತ್ತಾ ಇಲ್ಲಿ ಕವಿ ಪ್ರಾಪಂಚಿಕ ವಸ್ತುನಿಷ್ಠ ಸತ್ಯದರುಶನ ಮಾಡಿಸುತ್ತಿದ್ದಾರೆ‌. ನನ್ನ ಮುಖ ನೀನು ನಿನ್ನ ಮುಖ ನಾನು ನೋಡಲು ಎಂಬ ಮಾತಿದೆಯಲ್ಲಾ ಅದು  ಪ್ರತಿಯೊಂದು ವ್ಯಕ್ತಿ, ವಸ್ತು, ವಿಷಯವನ್ನು ಕಾಣಲು ನಾವು ಹಚ್ಚಿಕೊಳ್ಳಬೇಕಾದ ಬೆಳಕನ್ನು ಕುರಿತು ಹೇಳುತ್ತಿದೆ ಅಂತ ಅನ್ನಿಸುತ್ತಿದೆ. ಪ್ರತಿ ಕಾಲ ಕೂಡ ಹಲವು ಹಣತೆಗಳನ್ನು ತನ್ನೊಡಲೊಳಗೆ ಹಚ್ಚಿಕೊಳ್ಳುತ್ತದೆ. ಅದು ವೇದವ್ಯಾಸ, ವಾಲ್ಮೀಕಿ, ಬಸವಣ್ಣ, ಅಲ್ಲಮಪ್ರಭು, ಕನಕದಾಸ, ಕುವೆಂಪು, ಬೇಂದ್ರೆ, ಅಂಬೇಡ್ಕರ್, ಲೋಹಿಯಾ ಹೀಗೆ ಬೆಳಕಿನ ಕಿಡಿಗಳನ್ನು ಆಗಾಗ ಹತ್ತಿಸಿ, ಉರಿಸಿ, ಇನ್ನಷ್ಟು ಹಣತೆಗಳು ಬೆಳಕು ಪಡೆದು ಹೊತ್ತಿಕೊಳ್ಳಲು ಕಾರಣವಾಗುತ್ತದೆ. ಆದರೆ ಈ ಹಣತೆ ಹಚ್ಚುವ ಕ್ರಿಯೆ ನಿರಂತರವಾಗಿ ಸಾಗುವಂತಹದ್ದು ಮತ್ತು ನಮ್ಮೊಳಗಿನ, ಹೊರಗಿನ ಕತ್ತಲು ಕಳೆಯಲು ನಾವು ನಿರಂತರವಾಗಿ ಅರಿವಿನ ಹಣೆತೆಯನ್ನು ಹಚ್ಚುತ್ತಲೇ ಇರಬೇಕಾಗುತ್ತದೆ. ದ್ವೇಷಕ್ಕೆ ಪ್ರೀತಿಯ ಹಣತೆ, ಅನ್ಯಾಯಕ್ಕೆ ನ್ಯಾಯದ ಹಣತೆ, ಅಶಾಂತಿಗೆ ಶಾಂತಿಯ ಹಣತೆ… ಹೀಗೆ ಅಗಾಧ ಅರ್ಥವ್ಯಾಪ್ತಿಯನ್ನು ಹಣತೆ ಹಚ್ಚುವ ಕ್ರಿಯೆ ಪಡೆದುಕೊಳ್ಳುತ್ತದೆ.

ಪ್ರತಿದಿನವೂ ಬೆಳಗಿಗೆ ಸೂರ್ಯ ಬೆಳಕಿನ ಹಣತೆ ಹಚ್ಚುವಂತೆ ಪ್ರತಿಯೊಂದು ಗಳಿಗೆಯೂ ಸತ್ಯ ದರುಶನಕೆ, ನೆಮ್ಮದಿ ಬಾಳಿಗೆ ನಮಗೆ ನಾವೇ ತಿಳಿವಳಿಕೆಯ ಹಣತೆ ಹಚ್ಚಿಕೊಳ್ಳುತ್ತಲೇ ಇರಬೇಕು. ಇದು ನಿರಂತರವಾದ ಪ್ರಕ್ರಿಯೆ. ಹಸಿವಿಗೆ ಅನ್ನದ ಹಣತೆ, ಬಯಕೆಗೆ ಪ್ರೀತಿಯ ಹಣತೆ, ಅಜ್ಞಾನಕ್ಕೆ ಜ್ಞಾನದ ಹಣತೆ, ಜಗತ್ತು ಇಂತಹ ಹಣತೆಗಳಿಂದಲೇ ಸಾಗಿದೆಯಲ್ಲವೇ.

ಕವಿತೆಯ ಕೊನೆ ಸಾಲು ದಾರ್ಶನಿಕವಾದದ್ದು. ಹಣತೆ ಆರಿದ ಮೇಲೆ ನೀನು ಯಾರೋ, ಮತ್ತೆ ನಾನು ಯಾರೋ… ಎನ್ನುವಲ್ಲಿ ಈ ಹಣತೆ ದೇಹ, ಮನಸ್ಸು, ಪ್ರಜ್ಞೆ, ಒಬ್ಬರನ್ನು ಮತ್ತೊಬ್ಬರು ಅರ್ಥ ಮಾಡಿಕೊಳ್ಳುವುದು, ಒಬ್ಬರು ಮತ್ತೊಬ್ಬರನ್ನು ಪ್ರೀತಿಸುವುದು ಇವೆಲ್ಲವೂ ಆಗಿ ಹಚ್ಚಿಕೊಂಡು ಉರಿಯುವ ತನಕ ಮಾತ್ರ ನಡೆಯುವ ಬೆಳಕಿನ ಕ್ರಿಯೆಗಳು. ಒಮ್ಮೆ ಆರಿಹೋದರೆ. ಏನೂ ಉಳಿಯುವುದಿಲ್ಲ ಮತ್ತೆ ಮತ್ತೆ ಭರವಸೆಗಾಗಿ ಹಣತೆ ಹಚ್ಚಿಕೊಳ್ಳಬೇಕು ನಿರಂತರವಾಗಿ. ಯುದ್ದ, ಕೋಮುಗಲಭೆ, ಹಿಂಸೆ, ಕ್ರೌರ್ಯ ಎಷ್ಟೇ ಸುಟ್ಟು ಬೂದಿಮಾಡುತ್ತಿದ್ದರೂ ಶಾಂತಿ ಸಹಿಷ್ಣುತೆ, ಸಹಬಾಳ್ವೆ, ಸರ್ವೋದಯದ ಹಣತೆಗಳನ್ನು ಹಚ್ಚುತ್ತಲೇ ಇರಬೇಕು. ನಾನು ಜಗತ್ತಿನಲ್ಲಿ ಇರುವಷ್ಟು ಹೊತ್ತು ‌ಪರಸ್ಪರರ ಮುಖ ನೋಡಲು, ಸಹಬಾಳ್ವೆ ನಡೆಸಲು ಅರಿವಿನ ಪ್ರೀತಿಯ ಹಣತೆ ಹಚ್ಚುತ್ತಲೇ ಇರಬೇಕು ಎಂದು ಕವಿ ಮಾರ್ಮಿಕವಾಗಿ ನುಡಿದಿದ್ದಾರೆ.

ಯಾವ ಹಣತೆ ಕೂಡ ಶಾಶ್ವತವಲ್ಲಾ. ಅದು ಕೆಲಕಾಲ ಉರಿದು ಆರಿ ಹೋಗುತ್ತದೆ ಎನ್ನುತ್ತಾ ಕವಿತೆ ವಾಸ್ತವದ ಅರಿವಿನ ಮೂಲಕ ಕಾಲಕಾಲಕ್ಕೆ ಹೊಸ ದರುಶನದ ಕಾಣ್ಕೆಯ ಹಣತೆ ಹಚ್ಚಬೇಕು ಎಂಬ ತಾತ್ವಿಕತೆಯನ್ನು ಶಿವರುದ್ರಪ್ಪನವರು ಹಣತೆ ಬೆಳಗುತ್ತದೆ.

GSS

ಪೂರ್ಣಿಮಾ ಮಾಳಗಿಮನಿ; ಕದನ ಮುಗಿದ ಮೇಲೆ ಏನಾದರೇನು ಬಂತು?

ನನ್ನ ಹಣತೆ, ಬೆಂಕಿ ಕಿಡಿಯಷ್ಟೇ ತೀಕ್ಷ್ಣವಾದದು. ಜಗತ್ತಿನ ಸಕಲ ಜೀವರಾಶಿಗಳೂ ಸ್ವಭಾವತಃ ಆಶಾವಾದಿಗಳೇ. ಇಲ್ಲಿ ಬೆಳಕು ಎನ್ನುವುದು ಬದುಕನ್ನು ಬಿಂಬಿಸುತ್ತದೆ. ನಮ್ಮ ಸುತ್ತ ಎಷ್ಟೇ ನಿರಾಶಾದಾಯಕವಾದ ಪರಿಸರವಿದ್ದರೂ ಪ್ರಯತ್ನಗಳನ್ನು ನಿಲ್ಲಿಸಬಾರದು ಎಂದು ಸಾರುವ ಈ ಕವಿತೆ ಇಂದಿನ ಪ್ರಸ್ತುತ ವಿದ್ಯಮಾನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಎಷ್ಟೊಂದು ಅರ್ಥಗರ್ಭಿತ ಮತ್ತು ಸ್ಪೂರ್ತಿದಾಯಕ ಎಂದು ತಿಳಿಯುತ್ತದೆ. ಹೆಜ್ಜೆಹೆಜ್ಜೆಗೂ ಇದಿರಾಗುವ ಸಾವಿನಂತಹ ಕತ್ತಲನ್ನು, ಕ್ರೌರ್ಯವನ್ನೂ, ಜೀವ ಸಂಕುಲಕ್ಕೇ ಚ್ಯುತಿ ತರುವ ಮೂರ್ಖತೆಗಳನ್ನೂ, ಅಂಧಾಭಿಮಾನ, ಅಹಮ್ಮುಗಳನ್ನೂ ಕಂಡೂ ಕಾಣದಂತೆ ಅಲಕ್ಷಿಸಿ ಪುಟ್ಟದಾದರೂ ಪುಟಿದೇಳುವ ಹಣತೆಯ ಬೆಳಕಿನಂತಹ ಜೀವದ ಕಡೆಗಿನ ನಿರಂತರಪಯಣ ಎಷ್ಟು ಮಹತ್ವಪೂರ್ಣವಾದುದು ಎಂದು ಕವಿ ಇಲ್ಲಿ ಹೇಳುತ್ತಾರೆ.

ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳಂತಹ ಶಾಶ್ವತವಾದ ದೊಡ್ಡ ದೊಡ್ಡ ಜ್ವಾಲೆಗಳನ್ನೇ ನುಂಗಿ ನೀರು ಕುಡಿದಿರುವ ಆಜ್ಞಾನದ ಕತ್ತಲು; ಮೊದಲೇ ಆಸೆಬುರುಕ ಕತ್ತಲು; ಹಣತೆಯ ಕೆಳಗೇ ಬಚ್ಚಿಟ್ಟು ಕೊಂಡು ಮಳೆಗಾಳಿಗೆ ಹೊಯ್ದಾಡುವ ಬೆಳಕನ್ನು ಅರೆ ಜೀವವಾದ ಪ್ರಾಣಿಯನು ಹದ್ದಿನಂತೆ ತಿಂದುಬಿಡಲು ಕಾಯುತಿರುವುದು. ಕತ್ತಲಿನಿಂದ ಕತ್ತಲನ್ನು ಓಡಿಸುವುದು ಸಾದ್ಯವಿಲ್ಲ, ಅದಕ್ಕೆ ಬೆಳಕೇ ಬೇಕು.  ಕತ್ತಲ ಸೈನ್ಯ ದೊಡ್ಡದ್ದಿದ್ದಷ್ಟೂ ಪುಟ್ಟ ಹಣತೆಯನ್ನು ಗುರುತಿಸುವುದು ಸುಲಭ. ಕತ್ತಲು ಬಚ್ಚಿಟ್ಟುಕೊಂಡು ಸೆಣಸುವ ಶತ್ರು. ಅದನ್ನು ಇದುರಿಸಲು ಪುಟ್ಟ ಹಣತೆ ಯಾವ ರೀತಿಯಲ್ಲಿಯೂ ಸಾಟಿಯಲ್ಲ; ಆದರೆ ಎಣ್ಣೆ ಬತ್ತಿಗಳಿರುವಷ್ಟು ಹೊತ್ತು ಬೆಳಗಿ ಪ್ರೀತಿಪಾತ್ರರ ಎದುರು ಬದುಕಿಬಿಡುವ; ಕದನ ಮುಗಿದ ಮೇಲೆ ಏನಾದರೇನು ಬಂತು ಎನ್ನುವುದು ಈ ಕವಿತೆಯ ಮೂಲಕ ಕೊಟ್ಟ ಎಚ್ಚರಿಕೆ ಕೂಡ!

ಭವ್ಯ ಕಬ್ಬಳಿ: ತನ್ನ ತಾನರಿಯದೆ ತಾನಾರೆಂದು ತಿಳಿದೊಡೆ

ಈ ಕವನ ಮೊದಲಿನಿಂದಲೂ ನನಗೊಂದು ಸವಾಲಿನಂತೆಯೇ. ಪ್ರತಿ ಓದಿನಲ್ಲೂ ಬೇರೆ ಬೇರೆ ರೀತಿಯಲ್ಲಿ ದಕ್ಕಬಹುದಾದ ಕವಿತೆಗಳಲ್ಲೊಂದು. ಕವಿತೆಯ ‘ನಾನೂ’ ಅನ್ನುವ ಪದವಾಗಲೀ ‘ಹಣತೆ’ ಎನ್ನುವ ಪದವಾಗಲೀ ಓದುಗರಿಗೆ ಬೇರೆ ಬೇರೆ ರೀತಿಯಲ್ಲಿ ಅರ್ಥಕಾಣಿಸಿದರೂ, ಈ ಪದ್ಯ ನನಗೆ ಹೆಚ್ಚಾಗಿ ಆಧ್ಯಾತ್ಮಿಕವಾಗಿ ಕಾಣುವುದಂತೂ ನಿಜ. ಇಲ್ಲಿ ಹಣತೆ ಹಚ್ಚುವುದು ಎನ್ನುವ ಮಾತು ಮನುಷ್ಯನ ಅಸ್ತಿತ್ವದ ಅರಿವು ಎಂದಿರಬಹುದು. ಲೆಕ್ಕವೇ ಇರದ ದೀಪಾವಳಿಯ ಹಡಗುಗಳು ಎಂದರೆ ಎಂತೆಂಥಾ ಸಾಧಕರಿಗೂ ಕೊನೆಗೊಂದು ಕತ್ತಲೆಂಬ ದಿನವಿದೆ ಎಂದರ್ಥವಿರಬಹುದು.‌ ವೇದ ಶಾಸ್ತ್ರಗಳಿಂದ ಹಿಡಿದು ವಿಜ್ಞಾನದವರೆಗೂ ತಿಳಿದರು ಬೆಳೆದರೂ ಕೊನೆಗದೂ ಬೂದಿಯೇ. ಕಾಲ ಕಾಲಗಳುರುಳಿದರೂ ನಾವೂ ಏನನ್ನೋ ಸಾಧಿಸಿರಬಹುದೆಂಬ ಬೆಳಕ ಭ್ರಮೆಯೊಂದಿಗೆ ಮತ್ತೆ ನಾವು ಕತ್ತಲೆಡೆಗೇ ಸಾಗುತ್ತೇವೆಂಬ ಮಾತು ನಿಜ ದರ್ಶನದಂತೆನಿಸುತ್ತದೆ. ಆದರೂ ಮತ್ತೆ ಮತ್ತೆ ಅರಿವಿನ ಕಿಡಿ ನನ್ನೊಳಗಿರಿಸಿಕೊಳ್ಳುತ್ತೇನೆ, ನಾನೆಂಬ ನನ್ನನ್ನು ನೋಡಿಕೊಳ್ಳಲು ನನ್ನನ್ನು ನಾನು ತಿಳಿಯಲು ಎಂದು ‘ನನ್ನ ಹಣತೆ’ ಪದ್ಯವೆಂಬ ಹಣತೆ ಹಚ್ಚುತ್ತಾರೆ ಶಿವರುದ್ರಪ್ಪನವರು. ಹಾಗಾಗಿ ಇಲ್ಲಿ ‘ನಾನೂ’ ಎಂದರೆ ಆಗಾಗ ಪದ್ಯದ ಮೂಲಕ ಅರಿವಿ‌ನ ಹಣತೆ ಹಚ್ಚುವ ಕವಿಯೂ ಆಗಿರಬಹುದು. ‘ತನ್ನ ತಾನರಿಯದೆ’ ಎಂಬ ಮಾತು ನಮ್ಮ ವಚನ ಸಾಹಿತ್ಯದಲ್ಲೂ ಬಹಳಷ್ಟು ಕಂಡುಬರುತ್ತದೆ.

ಗಿರಿಧರ ಕಾರ್ಕಳ: ಕಳವಳದ ನೆರಳಿನಲಿ

ಸದ್ಯಕ್ಕಂತೂ ಎಷ್ಟು ಹಣತೆ ಹಚ್ಚಿದರೂ ಅನ್ಯಾಯದ ಕತ್ತಲು ಸರಿಯುತ್ತಿಲ್ಲ. ಹಣತೆಯನ್ನು ಹಚ್ಚುವವರಿಗಿಂತ ಹಚ್ಚಿಟ್ಟ ಹಣತೆಗಳನ್ನು ಆರಿಸಿ ಅಂಧ ಶೃದ್ಧೆಯ ಕತ್ತಲೆಯೇ ಇರಲಿ ಅನ್ನುವವರ ಸಂಖ್ಯೆ ಹೆಚ್ಚಾಗುತ್ತಿರುವುದೇ ಕಳವಳ ಹುಟ್ಟಿಸುತ್ತಿದೆ.

ರಮೇಶ್ ಗುರುರಾಜರಾವ್: ನಿರಾಶಾವಾದದಿಂದ ಆಶಾವಾದದೆಡೆಗೆ

ಆ ಕವಿತೆ ಓದಿದಾಗಲೆಲ್ಲ, ನಿರಾಶಾವಾದ ಅನಿಸುವ ಹೊತ್ತಲ್ಲೇ ಆಶಾವಾದ ಮೂಡುತ್ತದೆ. ಕತ್ತಲೆಯೊಳಗಿನ ಬೆಳಕಿನ ಕಿಡಿ, ಬದುಕಿಗೆ ಉಂಟು ಮಾಡಬಹುದಾದ ಬದಲಾವಣೆಯನ್ನು ಕಟ್ಟಿಕೊಡುವ ಇದರ ಸಾಲುಗಳು ಯಾವತ್ತಿಗೂ ಹಸಿರು. ಇದರಲ್ಲಿ ಬರುವ “ದೀಪ ಮುಡಿಸಿದ್ದೇವೆ” ಅನ್ನುವ ಪರಿಕಲ್ಪನೆ ಎಷ್ಟು ಚಂದ…. ಅದರ ಜೊತೆಗೆ, ಎಲ್ಲವೂ ಬೂದಿಯಾಗುವ ಮಾತು, ಬದುಕಿನ ನಶ್ವರತೆಯನ್ನು ಹೇಳುತ್ತದೆ. ಇಂಥಾ ನಶ್ವರ ಬದುಕಲ್ಲೂ, ಬರುವ ಬೆಳಕಲ್ಲಿ ಒಬ್ಬರನ್ನೊಬ್ಬರು ಅರಿತುಕೊಳ್ಳುವ, ಆಕ್ಷಣಗಳನ್ನು ಜೀವಿಸುವ ಖುಷಿಯ ಕ್ಷಣಗಳನ್ನು ಕಟ್ಟಿಕೊಡುತ್ತದೆ. ಕತ್ತಲೊಳಗಿನ ಬದುಕಿಗೆ ಬೇಕಾದದ್ದು ಈ ಕ್ಷಣಗಳು ಮತ್ತು ಅವೇ ಬದುಕನ್ನು ಅರ್ಥಪೂರ್ಣಗೊಳಿಸುವುದು ಈ ಕ್ಷಣಗಳೇ ಎಂಬಲ್ಲಿಗೆ ಕವನ ನಿರಾಶಾವಾದದಿಂದ ಆಶಾವಾದದೆಡೆಗೆ ನಮ್ಮನ್ನು ಕರೆದೊಯ್ಯುತ್ತದೆ. ಇದಿಷ್ಟು, ಕವನ ಓದಿದಾಗ ನನಗನ್ನಿಸಿದ್ದು. ಈ ಕವನ ಪ್ರತಿ ಬಾರಿ ಓದಿದಾಗಲೂ ಹೊಸದಾಗಿ ಕಾಣುತ್ತದೆ, ಬದುಕಿನೆಡೆಗೆ ನಮ್ಮ ದೃಷ್ಟಿ ವಿಶಾಲವಾಗುತ್ತಾ ಹೋಗುತ್ತದೆ.

ಕನಕರಾಜು ಬಿ: ಇದು ವೈಯಕ್ತಿಕವಲ್ಲ ಸಾಮೂಹಿಕ ಪ್ರಜ್ಞೆ

ಜಿಎಸ್ಎಸ್ ಅವರ ಈ ಕವನದ ಸಾಲುಗಳು ಮೂಡಿಸುವ ಎಚ್ಚರ ಕೇವಲ ವೈಯುಕ್ತಿಕ ನಿಲುವಿನದಲ್ಲ, ಬದಲಿಗೆ ಸಾಮೂಹಿಕ ಪ್ರಜ್ಞೆಯಿಂದ ಕೂಡಿದ್ದು. ಧರ್ಮ- ವಿಜ್ಞಾನಗಳಾಚೆಗೆ ಸಾಗಬೇಕಿರುವ ಹೊಸ ‘ಪ್ರಸ್ತುತ’ದ ನಡೆಯ ಅವಶ್ಯವನ್ನು ಹೇಳುವಂಥದ್ದು. ಕೊನೆಯ ಸಾಲುಗಳ ಮಾರ್ಮಿಕತೆ ಮನುಷ್ಯರ ಆದಿ ಪ್ರಶ್ನೆಗಳನ್ನು ಕೆಣಕಿ ಪದ್ಯವನ್ನು ‘ಶಾಶ್ವತ’ಗೊಳಿಸುತ್ತದೆ!

57 ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ನಮ್ಮ ಮಗುವೀಗ ವಾಪಾಸು ಬಂದಿದೆ…

Published On - 4:11 pm, Sun, 7 February 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್