Reporter’s Diary: ಪ್ರೀತಿ ಅಂದರೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. ಅವರವರ ಭಾವಕ್ಕೆ ಅನುಭವಕ್ಕೆ ತಕ್ಕಂತೆ ಮಾತನಾಡುತ್ತಾರೆ. ಆದರೆ ನಾ ಕಂಡ ಈ ಇಬ್ಬರು ಪ್ರೇಮಿಗಳ ಮೌನಕಥನ ಮಾತ್ರ ಅಪರೂಪ. ಅಲ್ಲಿರುವುದು ಕೇವಲ ಉಸಿರಿನ ಬೆಸುಗೆ. ಐದು ವರ್ಷಗಳಿಂದ ದಿವ್ಯಾ ಕೋಮಾ ಸ್ಥಿತಿಯಲ್ಲಿದ್ಧಾರೆ. ಅವರ ಗಂಡ ರಘು ಎದೆಯಲ್ಲಿ ಮಾತ್ರ ಕಡಲಪ್ರೀತಿ. 2017ರಲ್ಲಿ ಪರಿಚಯಸ್ಥರೊಬ್ಬರು ಕರೆ ಮಾಡಿ, ಇವರ ಸ್ಥಿತಿಯನ್ನು ತಿಳಿಸಿದರು. ತಡಮಾಡದೆ ಹೊರಟೆ. ಖಾಸಗಿ ಆಸ್ಪತ್ರೆಯ ವೈದ್ಯರು ದಿವ್ಯಾ ಅವರ ಹೆರಿಗೆ ವೇಳೆಯಲ್ಲಿ ಅಜಾಗರೂಕತೆಯಿಂದ ಅರೆವಳಿಕೆ ನೀಡಿದ ಪರಿಣಾಮ ಹೆರಿಗೆಯಾಗಿ ಮೂರು ತಿಂಗಳು ಕಳೆದಿದ್ದರೂ ಕೋಮಾದಿಂದ ಹೊರಬಂದಿರದ ಮನಕಲಕುವ ಸಂಗತಿ ಅದಾಗಿತ್ತು. ವೈದ್ಯರು ದೇವರ ಸಮಾನ ಎಂದು ನಂಬುತ್ತಲೇ ಬಂದಿದ್ದೇವೆ. ಆದರೆ ಒಂದು ನಿರ್ಲಕ್ಷ್ಯ ಹೀಗೆ ಒಂದು ಕುಟುಂಬವನ್ನು ಜೀವನಪೂರ್ತಿ ಕಣ್ಣೀರಲ್ಲಿ ತೊಳೆಯುವಂತೆ ಮಾಡುತ್ತದೆ ಎನ್ನುವುದಕ್ಕೆ ಈ ಘಟನೆಯೇ ಜೀವಂತಸಾಕ್ಷಿ. ಇಲ್ಲಿ ಯಾರನ್ನು ದೂಷಿಸುವುದು? ಯಾರನ್ನು ಶಿಕ್ಷಿಸುವುದು? ಕಳೆದದ್ದು ಮರಳುವುದೇ?
ರಾಜೇಂದ್ರ ಸಿಂಹ, ಟಿವಿ9 ಕನ್ನಡ ಪ್ರತಿನಿಧಿ, ಕೋಲಾರ (Rajendra Simha)
ಆ ದಿನ ರಘು-ದಿವ್ಯಾ ಮನೆಗೆ ಹೋಗಿ ಶೂಟ್ ಮಾಡಿಕೊಂಡು ಎಲ್ಲ ವಿವರವನ್ನೂ ಪಡೆಯಲಾಯಿತು. ದಿವ್ಯಾ ತಂದೆತಾಯಿಯ ಬಳಿಯೂ ತೆರಳಿ ಮಾತನಾಡಿಸಲಾಯಿತು. ವಿಶೇಷ ವರದಿ ಪ್ರಸಾರವಾದ ನಂತರ ರಘು ಮತ್ತು ದಿವ್ಯಾ ಅವರ ತಂದೆತಾಯಿಯನ್ನು ಟಿವಿ9 ಸ್ಟುಡಿಯೋಗೆ ಕರೆದುಕೊಂಡು ಹೋಗಿ ವಿಶೇಷ ಚರ್ಚೆ ಕಾರ್ಯಕ್ರಮವನ್ನು ಮಾಡಲಾಯಿತು. ಇದು ಪ್ರಸಾರವಾದ ನಂತರ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಸಚಿವರು ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸಿ ಸಂಬಂಧಪಟ್ಟ ಆಸ್ಪತ್ರೆಯ ವಿರುದ್ದ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದರು. ಅದಾದ ನಂತರ ಆಸ್ಪತ್ರೆಯವರಿಗೆ ದಿವ್ಯಾ ಅವರಿಗೆ ಆಕ್ಸಿಜನ್ ಸೇರಿದಂತೆ ಚಿಕಿತ್ಸೆಗೆ ಬೇಕಾದ ನೆರವು ನೀಡುವಂತೆ ಆದೇಶ ಮಾಡಲಾಯಿತು.
ಆದರೆ ರಘು ಅವರಿಗೆ ತನ್ನ ಹೆಂಡತಿ ಆದಷ್ಟು ಬೇಗ ಕೋಮಾದಿಂದ ಹೊರಬರಬೇಕಿತ್ತು. ಅದಕ್ಕಾಗಿ ಸೂಕ್ತ ವೈದ್ಯರನ್ನು ಸಂಪರ್ಕಿಸಲು ದಾರಿತೋರಿಸಿ ಎಂಬ ಯಾಚನೆಯಲ್ಲಿದ್ದರೇ ವಿನಾ, ತನ್ನ ಹೆಂಡತಿಯನ್ನು ಈ ಸ್ಥಿತಿಗೆ ತಳ್ಳಿದ ಆಸ್ಪತ್ರೆಯವರಿಂದ ಹಣವನ್ನಾಗಲೀ ಮತ್ತೇನನ್ನಾಗಲೀ ನಿರೀಕ್ಷಿಸಿರಲಿಲ್ಲ. ಆದರೆ ಸರ್ಕಾರ, ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಸ್ಥಳೀಯ ಮುಖಂಡರು ಪರಿಹಾರ ಕೊಡಿಸುವ ನಿರ್ಧಾರ ಮಾಡಿದರು. ಅಲ್ಲಿಗೆ ರಘು ಅವರಿಗೆ ವಾಸ್ತವ ಅರ್ಥವಾಯಿತು. ತನ್ನ ಹೆಂಡತಿ ಇನ್ನೆಂದೂ ಸ್ವಸ್ಥಿತಿಗೆ ಮರಳುವುದಿಲ್ಲ ಎಂದು. ಈ ಕ್ಷಣದವರೆಗೂ ಹೆಂಡತಿಯ ಸೇವೆ ಮಾಡುತ್ತ ಮಗುವಿಗಿಂತ ಮಿಗಿಲಾಗಿ ನೋಡಿಕೊಳ್ಳುತ್ತಿದ್ದಾರೆ. ಮಾತಿಲ್ಲ, ಪ್ರತಿಸ್ಪಂದನೆ ಇಲ್ಲ. ಬರೀ ಮೌನ. ಸದ್ಯ, ಕಣ್ಸನ್ನೆ ಮತ್ತು ಉಸಿರು ಅಷ್ಟೇ ಅವರ ಮಧ್ಯೆ ಇರುವ ತಂತು.
ಇದನ್ನೂ ಓದಿ : Reporter’s Diary: ನಿರ್ಜನ ಪ್ರದೇಶದಲ್ಲಿ ಬೆನ್ನ ಹಿಂದೆ ನಿಂತವನ ಕಂಡು ಎದೆಬಡಿತವೇ ನಿಂತಿತ್ತು
ಇವರಿಬ್ಬರೂ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ದೊಡ್ಡಕಡತೂರು ಗ್ರಾಮದವರು. ಇಬ್ಬರ ನಡುವೆ ಪ್ರೀತಿ ಶುರುವಾಗಿ ಆರು ವರ್ಷ ಕಳೆದವು. ನಂತರ ಕುಟುಂಬಸ್ಥರ ವಿರೋಧದ ನಡುವೆ 2013 ಮೇ 24 ರಂದು ಧರ್ಮಸ್ಥಳದಲ್ಲಿ ಮದುವೆಯಾಯಿತು. ವರ್ತೂರಿನಲ್ಲಿ ಪುಟ್ಟದೊಂದು ಮನೆ ಮಾಡಿ ಸಂಸಾರ ಪ್ರಾರಂಭಿಸಿದರು. ರಘು ಎಲೆಕ್ಟ್ರಿಕಲ್ ಕೆಲಸ ಮಾಡುತ್ತಾ ದಿವ್ಯಾಳ ಆಸೆಯಂತೆ ಅವಳನ್ನು ಓದಿಸಿದರು. ಬಿಎಸ್ಸಿ ಪದವೀಧರೆಯಾಗುತ್ತಿದ್ದಂತೆ ಸಣ್ಣದೊಂದು ಕೆಲಸವೂ ಸಿಕ್ಕಿತು. ಈ ಸಂತಸದಲ್ಲಿರುವಾಗಲೇ ಇವರ ಪ್ರೀತಿಗೆ ಸಾಕ್ಷಿಯಾಗಿ ದಿವ್ಯಾ ಒಡಲೊಳಗೆ ಹೊಸ ಜೀವವೊಂದು ಅರಳತೊಡಗಿತು. 2017 ರ ಮಾರ್ಚ್ 31 ರಂದು ದಿವ್ಯಾ ಹೆರಿಗೆಗೆಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದರು. ಹುಟ್ಟಿದ್ದು ಗಂಡುಮಗುವಾದರೂ ಕುಟುಂಬ ಸಂತೋಷಪಡದಂಥ ಸಂದರ್ಭ. ಕೋಮಾಕ್ಕೆ ಹೋದ ಹೆಂಡತಿಗಾಗಿ ಈತನಕ ಮಾಡದ ಪೂಜೆ, ಭೇಟಿಯಾಗದ ಆಸ್ಪತ್ರೆಗಳಿಲ್ಲ. ಇಷ್ಟೆಲ್ಲವಾದರೂ ಸರ್ಕಾರ, ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ, ಹೋರಾಟ ಏನನ್ನೂ ಮಾಡದೆ ಮೌನವಾಗಿಯೇ ಉಳಿದರು ರಘು.
ಇದನ್ನೂ ಓದಿ : Reporter‘s Diary: ನೊಂದ ತಾಯಿ ಜೊತೆ ನಿಂತ ಟಿವಿ9; ತಾಯಿ ಮಡಿಲು ಸೇರಿದ ಕಂದಮ್ಮಗಳು
ಪರಿಸ್ಥಿತಿ ತಿಳಿದ ಪರಸ್ಪರರ ಪೋಷಕರು ಆಸ್ಪತ್ರೆಗೆ ಧಾವಿಸಿದರು. ಆತನಕವೂ ದಿವ್ಯಾಳ ಪೋಷಕರಲ್ಲಿ, ತನ್ನ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ ಆ ಹುಡುಗ ಎಲ್ಲಿ ತಮ್ಮ ಮಗಳನ್ನು ಅರ್ಧಕ್ಕೆ ಕೈಬಿಟ್ಟುಬಿಡುತ್ತಾನೋ ಎಂಬ ಆತಂಕದಲ್ಲೇ ದೂರವಿದ್ದರೆನ್ನಿಸುತ್ತದೆ. ಆದರೆ ಈ ಘಟನೆಯಿಂದ ಅವರಿಗೆ ಅನ್ನಿಸಿದ್ದು, ನಾವೇ ಹುಡುಕಿ ಮದುವೆ ಮಾಡಿದ್ದರೂ ರಘುವಿನಂಥ ಹುಡುಗ ಸಿಗುತ್ತಿರಲಿಲ್ಲ ಎಂದು. ಸಂಕಷ್ಟದಲ್ಲಿದ್ದ ರಘುವಿಗೆ ಸಾಥ್ ಕೊಡಲು ಮತ್ತು ತಮ್ಮ ಮಗಳನ್ನು ಉಳಿಸಿಕೊಳ್ಳಲು ಚಿಕಿತ್ಸೆಗಾಗಿ ತಮ್ಮ ಬಳಿ ಇದ್ದ ಜಮೀನನ್ನೇ ಮಾರಿದರು. ಆದರೆ ಮಗಳು ಮರಳುವಳೆ?
ಇಂಥ ಸಂಕಷ್ಟಕ್ಕೆ ನೂಕಿದ ಆಸ್ಪತ್ರೆಯವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಸಾಕಷ್ಟು ಜನ ಹೋರಾಟ ಮಾಡಿದರು. ಜನಪ್ರತಿನಿಧಿ, ಅಧಿಕಾರಿಗಳಲ್ಲಿ ಕೇಳಿಕೊಂಡರು. ಆದರೆ ಏನೂ ಪ್ರಯೋಜನವಾಗಲಿಲ್ಲ.
ಐದು ವರ್ಷಗಳಿಂದ ದಿವ್ಯಾ ಜೀವಂತ ಶವವಾಗಿದ್ದಾರೆ. ಅವರ ಇಡೀ ದೇಹ ಹಿಡಿಯಷ್ಟಾಗಿದೆ. ರಘು ನಿಯಮಿತವಾಗಿ ಕೆಲಸಕ್ಕೆ ಹೋಗಲಾಗುತ್ತಿಲ್ಲ. ದಿವ್ಯಾ ಅವರ ಅಮ್ಮ ಅಪ್ಪನ ಬಳಿ ಬೆಳೆಯುತ್ತಿರುವ ಐದು ವರ್ಷದ ಮಗ, ಆಗಾಗ ಬಂದು ಅಮ್ಮನೆಂಬ ಗೊಂಬೆಯೊಂದಿಗೆ ಆಡಿಹೋಗುತ್ತದೆ.
*
ಸಹಾಯ ಮಾಡಲಿಚ್ಛಿಸುವವರಿಗಾಗಿ :
Raghupati M. SBI, Malur. A/C 30848749804. IFSC Code- SBIN0011294. PhonePe – 99720 04710
*
ಪ್ರತಿಕ್ರಿಯೆಗಾಗಿ : tv9kannadadigital@gmail.com
ಈ ಅಂಕಣದ ಎಲ್ಲಾ ಬರಹಗಳನ್ನೂ ಓದಲು ಕ್ಲಿಕ್ ಮಾಡಿ
Published On - 11:39 am, Sat, 18 June 22