Autobiography: ಆಧುನಿಕ ಶಕುಂತಲಾ ಕಥನ; ಬೆಂಗಳೂರಿನ ಸುಶೀಲಾ ರಸ್ತೆ, ಮೇಕೆಬಲಿ, ಹುಲಿವೇಷ, ವಸಂತಕುಮಾರಿ ಕಛೇರಿ
Life : ನನ್ನ ತಾಯಿ ಮಿಲ್ಲುಗಳಲ್ಲಿ ತೊಗರಿ ಬೇಳೆ ಬೆರ್ಪಡೆಯಾದನಂತರ ಕೆಳಗೆ ಬೀಳುತಿದ್ದ ತೊಗರಿ ನುಚ್ಚನ್ನು, ಕಾರ್ಪೊರೇಷನ್ ಮಾರುಕಟ್ಟೆಯಲ್ಲಿ ಕೊಳೆತ, ತಾಜಾ ತರಕಾರಿಗಳನ್ನು ವಿಂಗಡಿಸುವಾಗ ಚೆನ್ನಾಗಿದ್ದ ತರಕಾರಿಯನ್ನು ಖರೀದಿಸುತ್ತಿದ್ದರು.
ಆಧುನಿಕ ಶಕುಂತಲಾ ಕಥನ | Adhunika Shakuntala Kathana : ನನ್ನ ಬಾಲ್ಯವು ವಿವಿಧ ಸಂಸ್ಕೃತಿಗಳ ಸಮ್ಮಿಲನವಾಗಿತ್ತು. ಹುಟ್ಟಿದ ಕ್ಯಾಸಂಬಳ್ಳಿ, ಬೆಳೆದ ಕೋಲಾರ ಕರ್ನಾಟಕಕ್ಕಿಂತ ಭಾಷಾ ಮತ್ತು ಸಾಂಸ್ಕೃತಿಕವಾಗಿ ಆಂಧ್ರಪ್ರದೇಶಕ್ಕೆ ಹೆಚ್ತು ಹತ್ತಿರವಾಗಿದ್ದವು. ಇದರೊಟ್ಟಿಗೆ ನನ್ನ ಮಾತೃಭಾಷೆ ತೆಲುಗು ಆದ್ದರಿಂದ ನಾನು ತೆಲುಗು ಹುಡುಗಿಯಾಗಿ ಬೆಳೆದೆ. ಕೆಜಿಎಫ್ನ ಅಜ್ಜಿಯ ಮನೆಯಲ್ಲಿ ರಜಾದಿನಗಳನ್ನು ಕಳೆದೆ. ಅದು ತಮಿಳು ಭಾಷೆ ಮತ್ತು ರೋಮನ್ ಕ್ಯಾಥೋಲಿಕ್ ಚರ್ಚುಗಳ ಪ್ರಾಬಲ್ಯ ಹೊಂದಿದ್ದ ಕಾರಣ ಇವೆಲ್ಲವುಗಳ ಪ್ರಭಾವಗಳನ್ನು ಹೀರಿಕೊಂಡೆ. ನಂತರ ಬೆಂಗಳೂರು ದಕ್ಷಿಣದ ಮಾವಳ್ಳಿಗೆ ಬಂದು ಅಲ್ಲಿ ನಾಲ್ಕು ವರ್ಷಗಳು ಮಾಧ್ಯಮಿಕ ಶಾಲೆಯಲ್ಲಿ ಓದಿದೆ. ಇಲ್ಲಿ ಕಂಡ, ಅನುಭವಿಸಿದ ಸಾಂಸ್ಕೃತಿಕ ಸಮಾರಂಭಗಳು, ನಾವಿದ್ದ ಬೆಂಗಳೂರಿನ ಭಾಗ ಹೆಚ್ಚೂಕಡಿಮೆ ಹಳ್ಳಿಯಂತೆ ಇದ್ದ ಕಾರಣ (ಮಾವಳ್ಳಿ) ಹಳ್ಳಿಗಾಡಿನ ಹಬ್ಬಗಳು ಮುಂತಾದವು ನಾನು ಅಲ್ಲಿಯವರೆಗೆ ಕನಸಲ್ಲೂ ಕಾಣದಿದ್ದ ಅನುಭವಗಳಿಗೆ ನನ್ನನ್ನು ಒಡ್ಡಿದವು. 1956ರಲ್ಲಿ ನನ್ನ ತಂದೆ ಕೋಲಾರದಿಂದ ಬೆಂಗಳೂರಿಗೆ ವರ್ಗಾವಣೆಯಾದ ಕಾರಣ ಈ ಬಗೆಯ ಅಪೂರ್ವ ಸಂಗೀತ, ನಾಟ್ಯ, ನಾಟಕ, ಹಳ್ಳಿಯ ಹಬ್ಬಗಳ ಮತ್ತು ಆಟಗಳೇ ಮುಂತಾದುವುಗಳ ರಸದೌತನಣ ನನಗೆ ದಕ್ಕಿತು. ಡಾ. ಶಕುಂತಲಾ ಶ್ರೀಧರ್, ಮೂಷಕ ತಜ್ಞೆ (Dr. Shakuntala Sridhara)
(ಕಥನ 5)
ನನ್ನ ಜೀವನದ ಈ ಹಂತವು ಹಲವಾರು ಕಾರಣಗಳಿಂದಾಗಿ ಮನಸ್ಸಿನಲ್ಲಿ ಸ್ಪಷ್ಟವಾಗಿ ಊರಿದೆ. ಸಮೀಪದ ಸಜ್ಜನರಾವ್ ವೃತ್ತದಲ್ಲಿರುವ ಹಲವಾರು ದೇವಸ್ಥಾನಗಳು, ಕಾಮನಹಬ್ಬ, ವರ್ಣರಂಜಿತ ಗಣೇಶನ ಹಬ್ಬ, ವೈಶ್ಯರ ಮನೆಗಳಲ್ಲಿ ದಸರಾ ಹಬ್ಬದಲ್ಲಿ ಗೊಂಬೆಗಳ ಜೋಡಣೆ, ದೊಡ್ಡಮಾರಮ್ಮನ ಆವರಣದಲ್ಲಿ ನೂರಕ್ಕೆ ನೂರರಷ್ಟು ಗ್ರಾಮೀಣ ಹಬ್ಬವಾದ ಊರಹಬ್ಬ ಇವೆಲ್ಲವೂ ನನಗೆ ಸ್ಪಷ್ಟವಾಗಿ ನೆನಪಿದೆ. ಊರಹಬ್ಬದಲ್ಲಿ ನಡೆಯುತ್ತಿದ್ದ ಪಾರಂಪರಿಕ ಪೂಜಾ ವಿಧಾನಗಳು, ಗಣೇಶ ಹಬ್ಬ ಮತ್ತು ಕಾಮನ ಹಬ್ಬದಲ್ಲಿ ಆಚರಿಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಜ್ಜನರಾವ ವೃತ್ತದ ಶ್ರೀರಾಮ ದೇವಸ್ಥಾನದಲ್ಲಿ ಧಾರಾಳವಾಗಿ ವಿತರಿಸುತ್ತಿದ್ದ ಪ್ರಸಾದ, ಪಾದಚಾರಿಗಳಿಗೆ ಮತ್ತು ಯಾರಿಗೆ ಬೇಕಾದರೂ ಕೇಳಿದಷ್ಟು ನೀರು ಮತ್ತು ಮಜ್ಜಿಗೆ ನೀಡುತಿದ್ದ ಈಸ್ಟ್ ಎಂಡ್ ರೋಡಿನಲ್ಲಿದ್ದ ವ್ಯೆಶ್ಯರ ಮನೆಗಳು ಕೋಲಾರದಂಥ ತೆಲುಗು ಸಂಸ್ಕೃತಿಯ ನಡುವಿನಿಂದ ಬಂದ ನನಗೆ ಬೇರೊಂದು ಪ್ರಪಂಚವನ್ನು ತೆರೆದಿಟ್ಟಿದ್ದವು.
ಆ ದಿನಗಳಲ್ಲಿ ಬೆಂಗಳೂರು ಇಂದಿನಷ್ಟು ದೊಡ್ಡದಾಗಿರಲಿಲ್ಲ. ಇಡೀ ನಗರವನ್ನು ಮೂಲತಃ ಬೆಂಗಳೂರು ಸಿವಿಲ್ (ನಾಗರಿಕ) ಮತ್ತು ಬೆಂಗಳೂರು ಕಂಟೋನ್ಮೆಂಟ್ (ದಂಡು) ಎಂದು ವಿಂಗಡಿಸಲಾಗಿತ್ತು. ಸಿವಿಲ್ ಅಂದ್ರೆ ಚಿಕ್ಕಪೇಟೆ, ಬಳೆಪೇಟೆ, ನಗರ್ತ ಪೇಟೆ, ಕೆ.ಆರ್. ಮಾರುಕಟ್ಟೆ, ಕೋಟೆ, ವಿಕ್ಟೋರಿಯಾ-ವಾಣಿವಿಲಾಸ ಆಸ್ಪತ್ರೆಗಳಲ್ಲಿದ್ದ ಬೆಂಗಳೂರಿನ ಕೇಂದ್ರ ಪ್ರದೇಶ ಮತ್ತೆ ಅದನ್ನು ಸುತ್ತುವರೆದಿದ್ದ ಹಳೇ ಬೆಂಗಳೂರು ಅಂದರೆ ಬೆಂಗಳೂರು ನುಂಗಿಹಾಕಿದ್ದ ಸಣ್ಣ ಹಳ್ಳಿಗಳು. ಇವುಗಳ ಸುತ್ತಲೂ ಶ್ರೀಮಂತರ, ಅಚ್ಚುಕಟ್ಟಾಗಿ ಯೋಜಿಸಲಾಗಿದ್ದ ಲೇಔಟ್‌ಗಳಾದ ಗಾಂಧಿನಗರ, ಬಸವನಗುಡಿ,ಮಲ್ಲೇಶ್ವರಂ ಮುಂತಾದ ದೊಡ್ಡ ಬಂಗಲೆಗಳಿದ್ದ, ದೊಡ್ಡ ಸಾಲು ಮರಗಳ ಬೆಂಗಳೂರು. ಜಯನಗರ, ಜೆಪಿ ನಗರ, ರಾಜಾಜಿನಗರ… ಇನ್ನೂ ಪ್ಲ್ಯಾನಿಂಗ್ ಹಂತದಲ್ಲಿವು. ಬಸವೇಶ್ವರನಗರ, ರಾಜರಾಜೇಶ್ವರಿನಗರ, ಸಹಕಾರ ನಗರ ಯಾರ ಕನಸಿನಲ್ಲೂ ಇಣಿಕಿರಲಿಲ್ಲ.
ಬೆಂಗಳೂರು ನಗರ ತುಂಬಾ ಕಡಿಮೆ ಸಿಟಿ ಬಸ್‌ಗಳು ಮತ್ತು ಬೆರಳಣಿಕೆಯಷ್ಟು ಆಟೋರಿಕ್ಷಾಗಳನ್ನು ಹೊಂದಿತ್ತು. ಯಾವುದೇ ವಾಣಿಜ್ಯ ಸಂಕೀರ್ಣಗಳಿರಲಿಲ್ಲ. ಆದರೆ ಸಾಕಷ್ಟು ಸಿನಿಮಾ ಥಿಯೇಟರ್‌ಗಳಿದ್ದವು. ಬಡ ಮತ್ತು ಮಧ್ಯಮ ವರ್ಗದ ಜನರು ದೂರ ಕಡಿಮೆಯಿದ್ದರೆ ನಡೆದೇ ಹೋಗಿ ಸೇರಬೇಕಾದ ತಾಣ ತಲುಪುತಿದ್ದರು. ಹೆಚ್ಚು ದೂರ ಹೋಗಬೇಕಾದರೆ ಸೈಕಲ್ ಮತ್ತು ಹೆಚ್ಚು ಜನ ಇದ್ದರೆ ಇಲ್ಲ ಸಾಮಾನು ಸಾಗಿಸಬೇಕಾದರೆ ಜಟಕಾವನ್ನು ಬಳಸುತಿದ್ದರು. ಮೆಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಶಾಪಿಂಗ್ ಕೇಂದ್ರಗಳಾಗಿದ್ದವು. ದಂಡು ಪ್ರದೇಶವು ವಿಭಿನ್ನ ಕಥೆಯೇ ಆಗಿತ್ತು. ಅದು ಹಿಂದೆ ಬ್ರಿಟಿಷರ ಸೈನ್ಯವಿದ್ದ, ಸೈನ್ಯಾಧಿಕಾರಿಗಳಿoದ, ಇಂಗ್ಲಿಷ್ ಸರ್ಕಾರದ ಗೌರವ ಅಧಿಕಾರಿಗಳು ವಾಸವಿದ್ದ ದೊಡ್ಡದೊಡ್ಡ ಅರಮನೆಯಂಥ ಬಂಗಲೆಗಳಿದ್ದ ಬೇರೆಯದೇ ಲೋಕ. ಅದರಲ್ಲಿ ಹೆಚ್ಚಾಗಿ ಆಂಗ್ಲೋ ಇಂಡಿಯನ್ನರು, ಶ್ರೀಮಂತ ಮತ್ತು ಮಧ್ಯಮ ವರ್ಗದ ಕ್ರಿಶ್ಚಿಯನ್ನರಿದ್ದರೆ ಅವರ ಮನೆಗಳಲ್ಲಿ ಕೆಲಸ ಮಾಡಿಕೊಂಡೋ, ಸಣ್ಣಪುಟ್ಟ ವ್ಯಾಪಾರ ಮಾಡುತ್ತಲೋ ಬಡ ತಮಿಳರು ಮತ್ತು ಮುಸಲ್ಮಾನರು ವಾಸಿಸುತಿದ್ದರು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳು ಪಾಶ್ಚಿಮಾತ್ಯ ಫ್ಯಾಷನ್ ಕೇಂದ್ರಗಳಾಗಿದ್ದು, ಚಿಕ್ಕಪೇಟೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ರೇಷ್ಮೆ ಮಗ್ಗಗಳು, ಭಾರತಾದ್ಯಂತ ಪ್ರಸಿದ್ಧವಾಗಿದ್ದ ಬೆಂಗಳೂರು ರೇಷ್ಮೆ ಸೀರೆ ಅಂಗಡಿಗಳಿಗೆ ಪ್ರಸಿದ್ಧವಾಗಿದ್ದವು. ನಾಗರಿಕ ಪ್ರದೇಶಗಳಲ್ಲಿ ಕನ್ನಡವು ಪ್ರಮುಖ ಭಾಷೆಯಾಗಿದ್ದರೂ ತಮಿಳು ಭಾಷೆಯು ದಂಡು ಪ್ರದೇಶದ ಸಾಮಾನ್ಯ ಆಡುಭಾಷೆಯಾಗಿತ್ತು
ಬೆಂಗಳೂರು ದಕ್ಷಿಣದಲ್ಲಿರುವ ವಿಶ್ವೇಶ್ವರಪುರಂನಲ್ಲಿ ಕಾರ್ಪೋರೇಷನ್ ಕಚೇರಿಯ ಎದುರಿಗಿದ್ದ ತಮ್ಮ ಕಚೇರಿಗೆ ಹತ್ತಿರವಾದ ಮನೆಯನ್ನು ತಂದೆ ಬಾಡಿಗೆಗೆ ಪಡೆದಿದ್ದರು. ನಮ್ಮ ಮನೆಯು ವಿಶ್ವೇಶ್ವರಪುರದ (ವಿವಿ ಪುರಂ) ಈಸ್ಟ್ ಎಂಡ್ ರಸ್ತೆಯನ್ನು ಮಾವಳ್ಳಿಯೊಂದಿಗೆ ಸಂಪರ್ಕಿಸುವ ಸಣ್ಣ ರಸ್ತೆಯಲ್ಲಿತ್ತು. ವಿವಿಪುರಂ ವೈಶ್ಯರು ವಾಸಿಸುವ ಶ್ರೀಮಂತ ಪ್ರದೇಶವಾಗಿದ್ದರೆ, ಮಾವಳ್ಳಿಯಲ್ಲಿ ಕೆಳಮಧ್ಯಮ ವರ್ಗದ ಕುಟುಂಬಗಳು ವಾಸಿಸುತ್ತಿದ್ದರು. ಮಾವಳ್ಳಿಯನ್ನು ನಡುಮಧ್ಯೆ ಸುಶೀಲ ರೋಡ್ ಎಂಬ ನೀಳರಸ್ತೆ ಲಾಲ್ಬಾಗಿನ ಚಿಕ್ಕ ಗೇಟಿನ ಹಿಂಭಾಗದಿಂದ ಹೊರಟು ದೊಡ್ಡ ಗೇಟಿನ ಹತ್ತಿರದವರೆಗೆ ಹರಡಿತ್ತು. ಅದರ ಮಧ್ಯಭಾಗದ, ಬಲಬದಿಯಲ್ಲಿ ದೊಡ್ಡ ಮಾರಮ್ಮನ ದೇವಸ್ಥಾನವಿತ್ತು. ಅದರ ಮುಂದಿದ್ದ ವಿಶಾಲವಾದ ಬಯಲಿನಲ್ಲಿ ಸಣ್ಣಪುಟ್ಟ ವ್ಯಾಪಾರಿಗಳು ಹೆಚ್ಚಾಗಿ ಮಹಿಳೆಯರು ಪ್ರತಿದಿನ ಗೋಣಿಚೀಲದ ಮೇಲೆ ಹೂವು, ಸೊಪ್ಪನ್ನು ಹರಡಿ ಮಾರುತ್ತಿದ್ದರು. ಮಾವಳ್ಳಿಯನ್ನು ದೊಡ್ಡಮಾವಳ್ಳಿ ಮತ್ತು ಚಿಕ್ಕಮಾವಳ್ಳಿ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ನಾವಿದ್ದ ಜಾಗ ಚಿಕ್ಕಮಾವಳ್ಳಿ. ಮಾವಳ್ಳಿಯ ಒಂದು ತುದಿಯು ಲಾಲ್‌ಬಾಗ್ ಅನ್ನು ಗಡಿಯಾಗಿ ಹೊಂದಿದ್ದರೆ ದೊಡ್ಡಮಾವಳ್ಳಿಯು ಜೆ.ಸಿ.ರೋಡ್‌ಗೆ ಹೊಂದಿಕೊಂಡಿತ್ತು…
ವಿವಿ ಪುರಂ ವೈಶ್ಯರು ವಾಸಿಸುವ ಶ್ರೀಮಂತ ಪ್ರದೇಶವಾಗಿದ್ದರೆ, ಮಾವಳ್ಳಿಯಲ್ಲಿ ಕೆಳಮಧ್ಯಮ ವರ್ಗದ ಕುಟುಂಬಗಳು ವಾಸಿಸುತ್ತಿದ್ದರು. ಸುಶೀಲಾ ರಸ್ತೆ ಮಧ್ಯ, ಬಲಬದಿಯಲ್ಲಿ ದೊಡ್ಡ ಮಾರಮ್ಮನ ದೇವಸ್ಥಾನವಿತ್ತು ಅದರ ಮುಂದೆ ದೊಡ್ಡ ವಿಶಾಲವಾದ ಖಾಲಿ ಜಾಗದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳು ಹೆಚ್ಚಾಗಿ ಮಹಿಳೆಯರು ಗೋಣಿಚೀಲದ ಮೇಲೆ ಹೂ ಮತ್ತು ಸೊಪ್ಪನ್ನು ಹರಡಿ ಮಾರುತ್ತಿದ್ದರು. ಲಾಲ್‌ಬಾಗ್ ಆ ಕಡೆಗೆ ಹಳೆಯ ಬೆಂಗಳೂರಿನ ಸಮೃದ್ಧ ವಸತಿ ಪ್ರದೇಶಗಳಾದ ಗಾಂಧಿನಗರ ಮತ್ತು ಬಸವನಗುಡಿಗಳು ಆರಾಮವಾಗಿ ಮೈ ಚಾಚಿಕೊಂಡಿದ್ದವು. ಈಸ್ಟ್ ಎಂಡ್ ರಸ್ತೆ ಮತ್ತು ಜೆಸಿ ರಸ್ತೆಯ ಜಂಕ್ಷನ್‌ನಲ್ಲಿರುವ ವೃತ್ತವನ್ನು ಮಿನರ್ವ ವೃತ್ತ ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಇತ್ತೀಚಿನವರೆಗೂ ಆ ಹೆಸರಿನ ಚಿತ್ರಮಂದಿರ ಅಲ್ಲಿತ್ತು ಇದು ಹೆಚ್ಚಾಗಿ ತೆಲುಗು ಮತ್ತು ಕೆಲವೊಮ್ಮೆ ತಮಿಳು ಚಲನಚಿತ್ರಗಳನ್ನು ಪ್ರದರ್ಶಿಸುತ್ತಿತ್ತು. ಅದರ ಎದುರುಗಡೆ ಇದ್ದ ಕಟ್ಟಡದಲ್ಲಿ ಒಂದು ಕಾಲದಲ್ಲಿ ಬೆಳಿಗ್ಗೆ 7 ರಿಂದ 12 ಗಂಟೆಯವರೆಗೂ ಸರ್ಕಾರಿ ಬಾಲಕಿಯರ ಮಾಧ್ಯಮಿಕ ಶಾಲೆಯ ತರಗತಿಗಳೂ, ಮಧ್ಯಾಹ್ನದ ನಂತರ ಸರ್ಕಾರಿ ಬಾಲಕರ ಮಧ್ಯಮಶಾಲೆಯ ತರಗತಿಗಳೂ ನಡೆಯುತಿದ್ದವು, ಟೂ ಇನ್ ಒನ್. ಈಗ ಆ ಶಾಲೆಯ ಆವರಣದಲ್ಲಿ ಡಿಗ್ರಿ ಕಾಲೇಜು ಇದೆ.
ಮಾವಳ್ಳಿಯಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಊರಹಬ್ಬ ಅತ್ಯಂತ ವರ್ಣರಂಜಿತ ಮತ್ತು ರುದ್ರರಮಣೀಯವಾಗಿತ್ತು. ಮಾವಳ್ಳಿ ಗ್ರಾಮವನ್ನು ಸುತ್ತಲೂ ಸಹೋದರಿಯರಾದ ದುರ್ಗಮ್ಮ, ದೊಡ್ಡ ಮಾರಮ್ಮ, ಚಿಕ್ಕ ಮಾರಮ್ಮ ಮತ್ತು ಸತ್ಯಮ್ಮ ಎಂಬ ನಾಲ್ಕು ದೇವತೆಗಳು ಕಾವಲು ಕಾಯುತ್ತಿದ್ದರು ಎಂದು ಪುರಾಣ ಹೇಳುತ್ತದೆ. ದೇವಿ ಎತ್ತರದ ಕಲ್ಲಿನ ವೇದಿಕೆಯ ಮೇಲೆ ಸ್ಥಾಪಿತಳಾಗಿದ್ದಾಳೆ. ನಂಬಿಕೆಯ ಪ್ರಕಾರ ಮೈಸೂರು ಚಾಮುಂಡೇಶ್ವರಿ ವಿಹಾರಾರ್ಥ ಹೋಗುತಿದ್ದಾಗ ದಾರಿಯಲ್ಲಿದ್ದ ಮಾವಿನ ತೋಪಿನ ಹಳ್ಳಿಯಲ್ಲಿ (ಮಾವಳ್ಳಿ) ವಿಶ್ರಮಿಸಲು ಕೂತ ಸ್ಥಳವೇ ದೊಡ್ಡ ಮಾರಮ್ಮನ ಗುಡಿ. ಸೂರ್ಯನ ಕೆಳಗೆ ಕುಳಿತುಕೊಳ್ಳಬೇಕೆಂಬ ಆಕೆಯ ಬಯಕೆಯಂತೆ ಈ ದೇವಸ್ಥಾನದ ಮೇಲೆ ಯಾವ ಗೋಪುರವು ಇಲ್ಲದೆ, ತಾಯಿ ಬಯಲಿನಲ್ಲಿ ಸ್ಥಾಪಿತಳಾಗಿದ್ದಾಳೆ. ಯುಗಾದಿಯ ನಂತರ ಆಕೆಯ ಪ್ರಾಂಗಣದಲ್ಲಿ ಊರಹಬ್ಬವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ : Indian Woman: ವೈಶಾಲಿಯಾನ; ತರಗತಿಯಲ್ಲಿ ಬಳೆಗಳ ಶಬ್ದದಿಂದಲೇ ಆಕೆ ತನ್ನ ಹಾಜರಾತಿ ಸೂಚಿಸಬೇಕಾಗಿತ್ತು
ಕ್ಯಾಸಂಬಳ್ಳಿಯ ಶ್ರೀರಾಮ ದೇವಸ್ಥಾನ ಮತ್ತು ಕೋಲಾರದ ಕೋಲಾರಮ್ಮ ದೇವಸ್ಥಾನವನ್ನು ಹೊರತುಪಡಿಸಿದರೆ ಬೇರೆ ಯಾವುದೇ ದೇವಾಲಯಗಳನ್ನು ಇದುವರೆಗೆ ನೋಡದ ನಾನು ಮೊದಲ ದಿನ ದೊಡ್ಡ ಮಾರಮ್ಮನನ್ನು ಸಮಾಧಾನಪಡಿಸಲು ಮೇಕೆಯನ್ನು ಬಲಿ ನೀಡಿದಾಗ ಹೆದರಿ ದಿಗ್ಭ್ರಮೆಗೊಂಡಿದ್ದೆ. ಎರಡನೇ ದಿನ ನಾಲ್ಕು ದೇವಿಯರ ಅಲಂಕೃತ ಮೂರ್ತಿಗಳು ಸುಶೀಲಾರೋಡಿನ ಮೂಲಕ ದೊಡ್ಡ ಮಾರಮ್ಮನ ದೇವಸ್ಥಾನ ಸೇರುವ ಮುನ್ನ ನಡೆಯುತ್ತಿದ್ದ ಮೆರವಣಿಗೆ ಕಣ್ಣು ಮತ್ತು ಕಿವಿಗೆ ಹಬ್ಬ. ಡೊಳ್ಳು ಕುಣಿತ, ಕೀಲುಕುದುರೆ, ವೇಷ, ಹುಲಿವೇಷ, ತಮಟೆ ವಾದ್ಯ ಮತ್ತು ನಾದಸ್ವರದ ಸಂಗೀತವನ್ನು ಪ್ರದರ್ಶಿಸುವ ಮನರಂಜನಾ ತಂಡಗಳ ಸರಣಿ ನನ್ನನ್ನು ಉಸಿರುಗಟ್ಟಿಸುತಿದ್ದವು. ದೊಡ್ಡ ಮಾರಮ್ಮನ ದೇವಸ್ಥಾನದ ಒಳಗೆ ಮಹಿಳೆಯರು ತಂಬಿಟ್ಟು ದೀಪದಲ್ಲಿ ಆರತಿ ಬೆಳಗಿದರೆ, ಅದರ ಹೊರಗೆ ಒಂದು ಹೊಂಡದಲ್ಲಿ ಇದ್ದಿಲು ಉರಿಯುತ್ತಿತ್ತು. ಬೆಂಕಿ ಮೇಲೆ ನಡೆಯುತ್ತೇನೆ ಎಂದು ಹರಕೆ ಹೊತ್ತ ಭಕ್ತರು ಕೆಂಪು ಜ್ವಾಲೆಯ ಮೇಲೆ ಓಡುತಿದ್ದರೆ ನನ್ನ ಪ್ರಾಣ ಬಾಯಿಗೆ ಬರುತಿತ್ತು.
ಹೆಚ್ಚು ಶ್ರದ್ಧಾಭಕ್ತಿಯುಳ್ಳ ಕೆಲ ಭಕ್ತರು ತಮ್ಮ ಬಾಯಿಯನ್ನು ತೆಳುವಾದ ಬೆಳ್ಳಿಯ ಕಂಬಿಯನ್ನು ಎರಡು ಕೆನ್ನೆಗಳ ಮೂಲಕ ಹಾಯಿಸಿ, ಆ ಕಂಬಿಗೆ ಬೀಗ ಹಾಕಿಕೊಂಡು ಬೆಂಕಿಯ ಮೇಲೆ ಓಡಿ ನಂತರ ಬೀಗ ಬಿಚ್ಚಿಸಿಕೊಳ್ಳುತಿದ್ದರು. ಇದಕ್ಕೆ ಬಾಯಿಬೀಗ ಅಂತ ಹೆಸರು. ನಾಲ್ಕನೇ ಮತ್ತು ಕೊನೆಯ ದಿನ ದೊಡ್ಡ ಮಾರಮ್ಮನನ್ನು ಉಯ್ಯಾಲೆಯ ಮೇಲೆ ಕೂರಿಸಿ ಉಯ್ಯಾಲೆಯಾಡಿಸುತ್ತಿದ್ದರು. ಮಧ್ಯಾಹ್ನ ಮರದಿಂದ ತೂಗಾಡುವ ತೆಂಗಿನಕಾಯಿಯನ್ನ ಒಂದು ದೊಡ್ಡ ದೊಣ್ಣೆಯಿಂದ ಹೊಡೆಯುವ ಸ್ಪರ್ಧೆ ಎರಡು ಪುರುಷ ತಂಡಗಳ ನಡುವೆ ಏರ್ಪಡಿಸಲಾಗುತ್ತಿತ್ತು. ಈ ಊರಹಬ್ಬವು ಬೇಸಿಗೆಯ ರಜಾದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದುದರಿಂದ ನಾನು ನಾಲ್ಕು ದಿನವೂ ಮಧ್ಯಾಹ್ನದ ವೇಳೆ ಈ ಸಮ್ಮೋಹನಗೊಳಿಸುವ ಉತ್ಸವ, ಆರತಿ ಆಟಗಳನ್ನು ವೀಕ್ಷಿಸುತ್ತಿದ್ದೆ.
ಆಗಾಗ ಮೇಕೆ ಬಲಿ ನೆನೆಸಿ ಹೆದರಿ ತಲ್ಲಣಿಸುತ್ತಿದ್ದೆ. ಉಸಿರು ಬಿಗಿಹಿಡಿದು ನಿಗಿ ನಿಗಿ ಕೆಂಡದ ಮೇಲೆ ನಡೆಯುತ್ತಿದ್ದ ಭಕ್ತಾದಿಗಳು ಕನಸಲ್ಲೂ ಕಾಡುತಿದ್ದರು. ಬಾಯಿಗೆ ಬೀಗ ಹಾಕಿಕೊಂಡಿದ್ದ ಹರಕೆ ಹೊತ್ತವರನ್ನು ಕಂಡ ಭಯ ತೊಲಗಬೇಕಾದರೆ ತಿಂಗಳುಗಳೇ ಬೇಕಾದವು. ನಾಲ್ಕನೇ ದಿನ ಸಂಜೆ ನಾಲ್ಕು ದೇವತೆಗಳನ್ನ ಮೆರವಣಿಗೆಯಲ್ಲಿ ಮಿನರ್ವ ವೃತ್ತದ ಬಳಿಯಿರುವ ಭೋಗ ನಂಜುಂಡೇಶ್ವರ ದೇವಸ್ಥಾನದ ಬಳಿ ಇರುವ ಗ್ರಾಮದೇವತೆಯ ಮಣ್ಣಿನ ಪ್ರತಿಮೆಯ ಬಳಿಗೆ ಕೊಂಡೊಯ್ಯುತಿದ್ದರು. ಈ ಗ್ರಾಮದೇವತೆಯನ್ನು ಲಾಲ್ಬಾಗ್ ಕೆರೆಗೆ ಕಳುಹಿಸಿದ ನಂತರ ನಾಲ್ಕು ದೇವತೆಗಳು ತಮ್ಮ ತಮ್ಮ ದೇವಾಲಯಗಳಿಗೆ ಹಿಂತಿರುಗುತ್ತಿದ್ದರು. ಎಂತಹ ನಾಲ್ಕು ದಿನಗಳ ಮರೆಯಲಾಗದ ಅನುಭವ! ಈ ಮಾವಳ್ಳಿಯ ಊರ ಹಬ್ಬ, ಹಿಂದೂ ಪುರಾಣ, ಜಾನಪದ, ನಂಬಿಕೆಗಳು, ಆಚರಣೆಗಳು ಮತ್ತು ಭವ್ಯತೆಗಳು ಹೋಲಿಸಲಾರದಷ್ಟು ಶ್ರೀಮಂತವಾಗಿದ್ದವು. ಇದು ನನ್ನ ಬಾಲ್ಯದ ಮತ್ತೊಂದು ಮರೆಯಲಾಗದ ನೆನಪು.
ಇದನ್ನೂ ಓದಿ : Dr. H. Girijamma Obituary : ‘ಆತ್ಮಕಥನದ ಮುಖಪುಟದಲ್ಲಿ ನನ್ನ ಫೋಟೋ ಮಸುಕಾಗಿಯೇ ಇರಲಿ’
ಊರ ಹಬ್ಬಕ್ಕೆ ಹೋಲಿಸಿದರೆ ವೈಭವದಲ್ಲಿ ಕಡಿಮೆಯಾದರೂ ಆದರೆ ಪ್ರತಿ ವರ್ಷವೂ ಕಾಮನ ಹಬ್ಬವನ್ನು ಯುಗಾದಿಗೆ ಸ್ವಲ್ಪ ಮೊದಲು ಮಾರ್ಚ್ ಮಧ್ಯದಲ್ಲಿ ಆಚರಿಸಲಾಗುತ್ತಿತ್ತು. ಕಾಮದೇವ ಮತ್ತು ರತಿದೇವಿಯ ವಿಗ್ರಹಗಳನ್ನು ಪೆಂಡಾಲ್‌ನಲ್ಲಿ ಸಣ್ಣ ವೇದಿಕೆಯ ಮೇಲೆ ಇಟ್ಟು, ಅವರಿಬ್ಬರನ್ನೂ ಪ್ರತಿದಿನ ಸುಂದರವಾಗಿ ಅಲಂಕರಿಸಲಾಗುತ್ತಿತ್ತು. ಇಲ್ಲಿ ನಡೆಯುತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿರಲಿಲ್ಲ. ಅವು ಹೆಚ್ಚಾಗಿ ಸ್ಥಳೀಯ ಆರ್ಕೆಸ್ಟ್ರಾಗಳಾಗಿದ್ದು ಅದರ ಗಾಯಕ, ಗಾಯಕಿಯರು ಕನ್ನಡ, ಹಿಂದಿ ಮತ್ತು ಕೆಲವೊಮ್ಮೆ ತೆಲುಗು ಚಲನಚಿತ್ರ ಗೀತೆಗಳನ್ನು ಹಾಡುತ್ತಿದ್ದರು. ಹನ್ನೊಂದನೇ ದಿನ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ನಂತರ ಅಗ್ನಿಗೆ ಅರ್ಪಿಸುತಿದ್ದರು. ಇಡೀ ಮಾವಳ್ಳಿ ಜನತೆ ಭಾಗವಹಿಸಿದ ಊರ ಹಬ್ಬಕ್ಕಿಂತ ಭಿನ್ನವಾಗಿ ಕಾಮನ ಹಬ್ಬವನ್ನು ಯುವಕರು ಸಂಭ್ರಮದಿಂದ ಆಚರಿಸುತ್ತಿದ್ದರು.
ಯುಗಾದಿಯ ನಂತರ ನಾನು ಮತ್ತು ನನ್ನ ಒಡಹುಟ್ಟಿದವರು ಸಜ್ಜನರಾವ್ ವೃತ್ತದಲ್ಲಿರುವ ಶ್ರೀರಾಮ ದೇವಸ್ಥಾನಕ್ಕೆ ರಾಮ ನವಮಿಯ ಒಂಬತ್ತು ದಿನಗಳೂ ಹೋಗುತಿದ್ದೆವು. ಆದರೆ ದೇವರನ್ನು ಪೂಜಿಸಲು ಅಲ್ಲ, ಅಲ್ಲಿ ಆರತಿಯ ನಂತರ ವಿತರಿಸುತಿದ್ದ ರುಚಿಯಾದ ಪ್ರಸಾದವನ್ನು ತಿನ್ನಲು. ಮೊದಲ ಸುತ್ತಿನಲ್ಲಿ ನಾವೇ ಪ್ರಸಾದ ತಿಂದು, ಮತ್ತೆ ಎರಡನೇ ಸುತ್ತಿನ ಪ್ರಸಾದಕ್ಕೆ ಹೋಗುತ್ತಿದ್ದೆವು, ಅದನ್ನು ತಂದು ಮನೆಯಲ್ಲಿದ್ದ ಅಮ್ಮ, ಮಲಅಕ್ಕ ಮತ್ತು ಸೋದರಮಾವನವರಿಗೆ ಒಯ್ಯುತ್ತಿದ್ದೆವು. ಮಾರಮ್ಮ ಮತ್ತು ಕಾಮರಂತೆ, ಭಗವಾನ್ ರಾಮನಿಗೆ ಅವನನ್ನು ಅಥವಾ ಅವನ ಭಕ್ತರನ್ನು ರಂಜಿಸಲು ಯಾರೂ ಇರಲಿಲ್ಲ.
ಇನ್ನು ಮಾವಳ್ಳಿ ಕೆಳಮಧ್ಯಮ ವರ್ಗದ ಪ್ರದೇಶವಾದರೂ ಅಲ್ಲಿ ಗಣೇಶನ ಹಬ್ಬವನ್ನು ಭಾರೀ ಅದ್ದೂರಿಯಾಗಿ ಆಚರಿಸುತ್ತಿದ್ದರು. ಲಾಲ್‌ಬಾಗ್ ಕಡೆಗೆ ಸುಶೀಲಾ ರಸ್ತೆಯ ಕೊನೆಯಲ್ಲಿ ದೊಡ್ಡ ವೇದಿಕೆಯ ಮೇಲೆ ಬೃಹತ್ ಗಣೇಶನನ್ನು ಸ್ಥಾಪಿಸಿ. ಸುಮಾರು 13 ರಿಂದ 15 ದಿನಗಳ ಕಾಲ ಪ್ರತಿದಿನ ಏರ್ಪಡಿಸಲಾಗುತ್ತಿದ್ದ ಸಂಗೀತ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಸಂಜೆಯ ವೇಳೆಗೆ ಎಲ್ಲ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿತ್ತು. ಮತ್ತೊಮ್ಮೆ ನಾನು ನನ್ನ ಒಡಹುಟ್ಟಿದವರ ಜೊತೆ ಇಲ್ಲಿ ಪ್ರತಿ ದಿನ ಹಾಜರ್. ಆರಂಭದಲ್ಲಿ ಪ್ರಸಾದ ಸೇವಿಸಬೇಕೆಂಬ ಆಸೆಯಿಂದ ಹೋದರೂ ಆಮೇಲಾಮೇಲೆ ಅಲ್ಲಿ ನಿಯೋಜಸಲಾಗುತಿದ್ದ ಕಾರ್ಯಕ್ರಮಗಳು ತುಂಬಾ ಆಕರ್ಷಕವಾಗಿದ್ದವು, ನಾವು ಸಂಜೆ 6 ರಿಂದ ರಾತ್ರಿ 10 ರವರೆಗೆ ಎಂ.ಎಲ್.ವಸಂತ ಕುಮಾರಿ, ಡಿ.ಕೆ ಪಟ್ಟಮ್ಮಾಳ್ ರ ಸಂಗೀತ, ಚೌಡಯ್ಯನವರ ಪಿಟೀಲು, ಟಿ.ಆರ್. ಮಹಾಲಿಂಗಂ ಅವರ ಕೊಳಲು, ಗುರುರಾಜುಲು ನಾಯ್ಡು ಅವರ ಹರಿಕಥೆಗಳು, ಪಿ.ಕಾಳಿಂಗರಾವ್ ಮತ್ತು ಅವರ ಪತ್ನಿಯರ ಲಘುಸಂಗೀತ ಮತ್ತು ಇನ್ನೂ ಅನೇಕರ ಸಂಗೀತವನ್ನ ಕೂತಲ್ಲಿಂದ ಏಳದೆ ಕೇಳುತಿದ್ದೆವು. ಅದರಲ್ಲೂ ಮಹಾಲಿಂಗಂ ಅವರ ಮಂತ್ರಮುಗ್ಧಗೊಳಿಸುವ ಕೊಳಲು, ನಾಯುಡುರವರ ಮನರಂಜಿಸುವ ಹರಿಕಥೆಗಳು, ವಸಂತಕುಮಾರಿಯವರ ಪುರಂದರದಾಸರ ಕೀರ್ತನೆಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಕಾಳಿಂಗರಾವ್ ಅವರ ಕಾಲು ಕುಣಿಯುವಂತೆ, ಮನಸ್ಸು ಮತ್ತೆಮತ್ತೆ ಮೆಲುಕು ಹಾಕುವಂತಿದ್ದ ಸುಶ್ರಾವ್ಯ ಹಾಡುಗಳು, ಭಾವಗೀತೆಗಳು, ಜಾನಪದ ಗೀತೆಗಳು ನನಗೆ ಇಂದಿಗೂ ನೆನಪಿದೆ. “ಉದಯವಾಯ್ತು ನಮ್ಮ ಚೆಲುವ ಕನ್ನಡ ನಾಡು” ಬಾರಯ್ಯ ಬೆಳದಿಂಗಳೆ, ನಮ್ಮೂರ ಹಾಲಿನಂಥ ಬೆಳದಿಂಗಳೇ”, ಚೆಲುವಯ್ಯ ಚೆಲುವೋ” ಎಂದು ಅವರು ಹಾಡಿದ್ದನ್ನು ಹೇಗೆ ಮರೆಯಲಾದೀತು. ಚೆಲುವಯ್ಯ ಚೆಲುವೋ ಹಾಡಿನ ತಾಳಗತಿ ಎಷ್ಟು ಜನಪ್ರಿಯವಾಗಿತ್ತೆಂದರೆ ಶಾಲೆಯ ಸಮಾರಂಭಗಳಲ್ಲಿ ನಾವೆಲ್ಲಾ ಆ ಹಾಡಿಗೆ ಕೋಲಾಟದೊಂದಿಗೆ ಹೆಜ್ಜೆ ಹಾಕುತಿದ್ದೆವು.
ಇದನ್ನೂ ಓದಿ : Book Release : ಅಚ್ಚಿಗೂ ಮೊದಲು : ಭಾರತಿ ಹೆಗಡೆ ನಿರೂಪಿಸಿದ ಮೀನಾಕ್ಷಿ ಭಟ್ಟರ ಆತ್ಮಕಥನ ‘ಹರಿವ ನದಿ’ ಲೋಕಾರ್ಪಣೆಗೆ ಸಿದ್ಧ
ಮೊಟ್ಟಮೊದಲ ಬಾರಿಗೆ ನಾವು ಒಂದಷ್ಟರ ಮಟ್ಟಿನ ಬಡತನವನ್ನು ಬೆಂಗಳೂರಿನಲ್ಲಿ ಅನುಭವಿಸಲು ಪ್ರಾರಂಭಿಸಿದೆವು ಎಂದು ನಾನು ಮೊದಲೇ ಸುಳಿವು ನೀಡಿದ್ದೆ. ಈಗ ಮನೆಯಲ್ಲಿ ನಾವು ಐವರು ಒಡಹುಟ್ಟಿದವರು, ನನ್ನ ತಂದೆತಾಯಿಯರಲ್ಲದೆ, ಬೆಂಗಳೂರಿಗೆ ಓದಲು ಬಂದ ನನ್ನ ತಾಯಿಯ ಕಿರಿಯ ಸಹೋದರ ಮತ್ತು ನನ್ನ ಮಲಅಕ್ಕ ಜೊತೆಗೂಡಿದರು. ನಮ್ಮ ಕುಟುಂಬವು ದೊಡ್ಡದಾಯಿತು, ಬೆಂಗಳೂರು ದುಬಾರಿಯಾಗಿತ್ತು ಮತ್ತು ತಂದೆಯ ಆದಾಯ ಸಾಲುತ್ತಿರಲಿಲ್ಲ. ಅವರು ಮಾಸಿಕ ದಿನಸಿಗಳನ್ನು ಖರೀದಿಸುತ್ತಿದ್ದರೆ ಮನೆಯ ಉಳಿದ ಖರ್ಚುಗಳನ್ನು ತಾಯಿಯು ಅತಿ ಜಾಣ್ಮೆಯಿಂದ ನಿರ್ವಹಿಸುತ್ತಿದ್ದಳು. ಅವಳು ಎಂದಿಗೂ ಏನನ್ನೂ ವ್ಯರ್ಥ ಮಾಡಲಿಲ್ಲ. ವಾರದಲ್ಲಿ ನಾಲ್ಕುದಿನ ತರಕಾರಿ ಸಾಂಬಾರ್, ಒಂದು ದಿನ ಮಸ್ಸೊಪ್ಪು, ಶನಿವಾರ ಬೆರಕೆ ಸೊಪ್ಪಿನ ಬಸ್ಸಾರು ಮತ್ತು ಭಾನುವಾರ ಮಾಂಸದೂಟ. ಇಷ್ಟು ದೊಡ್ಡ ಕುಟುಂಬಕ್ಕೆ ಅರ್ಧ ಕಿಲೋ ಮಾಂಸ. ಶನಿವಾರ ಮಧ್ಯಾಹ್ನ ಪಲ್ಯದೊಂದಿಗೆ ಬಸ್ಸಾರು ಮತ್ತು ರಾತ್ರಿ ಬಸ್ಸಾರಿಗೆ ಮಸಾಲೆ ವಡೆ ಮತ್ತು ಪಾಯಸ. ಈ ಊಟದ ದಿನಚರಿ ಎಂದಿಗೂ ಬದಲಾಗಲಿಲ್ಲ.
ನನ್ನ ತಂದೆಯ ನಿಗದಿತ ಸಂಬಳದೊಳಗೆ ನನ್ನ ತಾಯಿ ಮನೆಯ ವೆಚ್ಚವನ್ನು ನೀಗಿಸುತ್ತಿದ್ದ ಜಾಣ್ಮೆಯನ್ನ ನಾನೆಂದೂ ಮರೆಯಲಾರೆ. ಮಿಲ್ಲುಗಳಲ್ಲಿ ತೊಗರಿ ಬೇಳೆ ಬೆರ್ಪಡೆಯಾದನಂತರ ಕೆಳಗೆ ಬೀಳುತಿದ್ದ ತೊಗರಿ ನುಚ್ಚನ್ನ ಖರೀದಿಸಿ ತಾಯಿ ಖರ್ಚುಗಳನ್ನು ಉಳಿಸುತ್ತಿದ್ದಳು. ತರಕಾರಿಗಳ ಖರ್ಚು ಕಡಿಮೆ ಮಾಡಲು ಅಸಾಧಾರಣ ಮಾರ್ಗವೊಂದನ್ನು ಆಕೆ ಕಂಡು ಹಿಡಿದಿದ್ದಳು. ಲಾಲ್‌ಬಾಗ್ ಬಳಿಯ ಕಾರ್ಪೊರೇಷನ್ ಮಾರುಕಟ್ಟೆಯಲ್ಲಿ ಕೊಳೆತ ಮತ್ತು ತಾಜಾ ತರಕಾರಿಗಳನ್ನು ವಿಂಗಡಿಸಲು ಒಬ್ಬ ವೃದ್ಧೆ ಇದ್ದಳು. ಅವಳು ಕೊಳೆತ, ಅರ್ಧ ಕೊಳೆತ ಮತ್ತು ಅದರೊಂದಿಗೆ ಸುಮಾರು ಚೆನ್ನಾಗಿದ್ದ ತರಕಾರಿ ಹೊರೆಯನ್ನು ತಾಯಿಗೆ ತಂದು ಕೊಡುತಿದ್ದಳು. ಅದರಿಂದ ಅಮ್ಮ ಸುಮಾರು ಚೆನ್ನಾಗಿರುವ, ತಿನ್ನಬಹುದಾದಂತಹ ತರಕಾರಿಗಳನ್ನು ಹೆಕ್ಕಿಕೊಳ್ಳುತಿದ್ದಳು. ಅಂತೆಯೇ ಮನೆಗೆ ಬಂದ ಮಾರಾಟಗಾರರಿಂದ ಮೊಟ್ಟೆ ಚೌಕಾಸಿ ಮಾಡಿ ಖರೀದಿಸುತಿದ್ದಳು. ಈ ಎಲ್ಲಾ ಮಿತಿಗಳೊಂದಿಗೆ ಅವಳು ಅದ್ಭುತ ಅಡುಗೆ ತಯಾರು ಮಾಡುತಿದ್ದಳು. ತಂದೆಯವರು ಯಾವಾಗಲೂ ನೂರುಗಟ್ಟಲೆ ತಾಜಾ ಹಣ್ಣುಗಳನ್ನ ವಿಶೇಷವಾಗಿ ಮಲಗೋಬಾ ಮಾವು ಮತ್ತು ಸೇಬುಗಳನ್ನು ಕೊಂಡು ತರುತಿದ್ದರು. ಮನೆಯ ಒಂದು ಮೂಲೆಯಲ್ಲಿದ್ದ ಆ ಹಣ್ಣುಗಳ ರಾಶಿಯನ್ನು ನೋಡುವುದೇ ಒಂದು ಅಪೂರ್ವ ದೃಶ್ಯವಾಗಿತ್ತು
ತಂದೆಯು ಹಲವಾರು ಗಜಗಳಷ್ಟು ತಿಳಿನೀಲಿ ಮತ್ತು ತಿಳಿ ಹಸಿರು ಹತ್ತಿ ಬಟ್ಟೆಯನ್ನು ಖರೀದಿಸಿ, ನಮಗೆಲ್ಲರಿಗೂ ಒಂದೇ ಬಗೆಯ ಲಂಗ ಹೋಲಿಸುತಿದ್ದರು ಅದರ ಮೇಲೆ ಬಿಳಿ ರವಿಕೆ. ಹೀಗೆ ಮಾಡುವುದರ ಮೂಲಕ ಬಟ್ಟೆಗಳ ವೆಚ್ಚವನ್ನು ಕಡಿಮೆ ಮಾಡುತಿದ್ದರು. ಮೂವರು ಸಹೋದರಿಯರಿಗೆ ವರ್ಷಕ್ಕೆ ಎರಡು ಜೊತೆ ಬಟ್ಟೆ ನಮ್ಮ ಸಹಪಾಠಿಗಳು ಬಣ್ಣ ಬಣ್ಣ ಹೂವುಗಳಿದ್ದ ಬಟ್ಟೆಗಳನ್ನು ಧರಿಸಿದಾಗ ನಾವು ವರ್ಷದಿಂದ ವರ್ಷಕ್ಕೆ ಈ ಎರಡು ಬಣ್ಣಗಳನ್ನೇ ಧರಿಸಲು ನಾಚಿಕೆಪಡುತ್ತಿದ್ದೆವು. ಅವರ ಶಿಸ್ತು ಇನ್ನೂ ಮುಂದುವರೆದು ಮಕ್ಕಳಿಗೆ ಕಾಫಿ ಮತ್ತು ಚಹಾ, ಹಾಗೆಯೇ ದಿಂಬುಗಳನ್ನು ಅಭ್ಯಾಸ ಮಾಡಿಸಲಿಲ್ಲ.
ಇದನ್ನೂ ಓದಿ : ಶೆಲ್ಫಿಗೇರುವ ಮುನ್ನ: ‘ಬಿದಿರು ನೀನ್ಯಾರಿಗಲ್ಲದವಳು’ ಮೋಟಮ್ಮನವರ ಆತ್ಮಕಥನ ಜೂನ್ 11ರಂದು ಬಿಡುಗಡೆ
ನನ್ನ ದಿನಚರಿಯು ಬೆಳಿಗ್ಗೆ 7 ಗಂಟೆಗೆ ಶಾಲೆಗೆ ಹೋಗುವ ಮೊದಲು ಸಗಣಿ ತಂದು ಮಣ್ಣಿನ ವರಾಂಡ ಸಾರಿಸಿ, ರಂಗೋಲಿ ಬಿಡಿಸಿ, ಪಾತ್ರೆ ತೊಳೆದು, ಸಿದ್ಧವಾಗಿ ಶಾಲೆಗೆ ಹೋಗುವುದು. ಮಧ್ಯಾಹ್ನ ಮನೆಗೆ ಹಿಂತಿರುಗಿದ ನಂತರ ಊಟಮಾಡಿ ಬೀದಿ ನಲ್ಲಿಯಿಂದ ಬಿಂದಿಗೆಗಟ್ಟಲೆ ನೀರು ತಂದು ತೊಟ್ಟಿಗೆ, ಹಂಡೆಗೆ ತುಂಬುವುದು. ಶಾಲೆಯ ಪಾಠಗಳನ್ನ ಓದುತಿದ್ದದ್ದು ಪರೀಕ್ಷೆಗೆ ಮೊದಲು ಮಾತ್ರ. ಮಧ್ಯಾಹ್ನ ಕೈಗೆ ಸಿಕ್ಕ ಪುಸ್ತಕ ಓದುವುದು. ಅದೃಷ್ಟವಶಾತ್ ತಂದೆಯ ಸಂಗ್ರಹದಲ್ಲಿ ಸ್ವಾಮಿ ರಾಮಕೃಷ್ಣ ಪರಮಹಂಸರ ವಿವರವಾದ ಕಥೆಗಳು, ನರೇಂದ್ರನಾಥ ಹೇಗೆ ಸ್ವಾಮಿ ವಿವೇಕಾನಂದ ಆದರು ಎಂಬ ಪುಸ್ತಕ ಮತ್ತು ಮಾನವ ಜೀವನವನ್ನು ಬದಲಾಯಿಸಿದ ಸಂಶೋಧನೆಗಳು ಮತ್ತು ಅವುಗಳನ್ನು ಕಂಡು ಹಿಡಿದ ವಿಜ್ಞಾನಿಗಳು ಅನುಭವಿಸಿದ ಕಷ್ಟಗಳ ಪುಸ್ತಕಗಳು ನನ್ನನ್ನು ತುಂಬಾ ಪ್ರಭಾವಗೊಳಿಸಿದವು. ನನ್ನ ಐದನೇ ತರಗತಿಗಯಲ್ಲಿ ಬೋಧನಾ ಮಾಧ್ಯಮ ಕನ್ನಡವಾಗಿದ್ದರೂ, ಇಂಗ್ಲಿಷ್ ಅನ್ನು ಎರಡನೇ ಭಾಷೆಯಾಗಿ ಪರಿಚಯಿಸಲಾಯಿತು. ಈ ಹೊಸ ಭಾಷೆ ನನಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ, Bltz ನಿಂದ ಇಂಗ್ಲಿಷ್ ಕಲಿಕೆ ಸುಲಭವಾಯಿತು. ಇದರ ಜೊತೆಗೆ Indian Express ತರಿಸುತ್ತಿದ್ದರು. ನಾನು ಪ್ರಬಂಧ ಬರೆಯುವುದರಲ್ಲಿ, ಪದ್ಯಗಳನ್ನು ಬಾಯಿಪಾಠ ಹೇಳುವುದರಲ್ಲಿ, ಪರೀಕ್ಷೆಗಳಲ್ಲಿ ಅಂಕ ಗಳಿಸುವುದರಲ್ಲಿ ತರಗತಿಯಲ್ಲಿ ಮೊದಲಿಗಳಾಗಿದ್ದೆ. ಈಗ ನನಗೆ ಅನೇಕ ಸ್ನೇಹಿತರಿದ್ದರು ಆದರೆ ನಾನು ಕೇವಲ ಇಬ್ಬರೊಂದಿಗೆ ತುಂಬಾ ಸ್ನೇಹ ಬೆಳೆಸಿದೆ. ಅವರೆಂದರೆ ಪದ್ಮಿನಿ ಮತ್ತು ಶಾರದ. ಇಬ್ಬರೂ ಈಗ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಪದ್ಮಿನಿ ನನ್ನೊಂದಿಗೆ ಕೋಲಾರದ ಮಿಷನ್ ಶಾಲೆ, ಮಹಾರಾಣಿ ಮತ್ತು ಸೆಂಟ್ರಲ್ ಕಾಲೇಜುಗಳಲ್ಲಿ ಓದಿದಳು. ಶಾರದಾ ಮತ್ತು ನಾನು ಮಹಾರಾಣಿಯವರೆಗೆ ಸಹಪಾಠಿಗಳಾಗಿದ್ದೆವು. ಬಿ.ಎಸ್ಸಿ. ನಂತರ ಅವಳು ಎಂಬಿಬಿಎಸ್ ಮಾಡಿ ಅಮೆರಿಕಕ್ಕೆ ವಲಸೆ ಹೊರಟು ಹೋದಳು. ನಾನು ಶಾರದೆಗೆ ಹತ್ತಿರವಾಗಿದ್ದೆ ಮತ್ತು ನಾವು ಒಟ್ಟಿಗೆ ಓದುತ್ತಿದ್ದೆವು.
ನೋಡತಾ ನೋಡತಾ ನಾನು ಎಂಟನೇ ಸ್ಟ್ಯಾಂಡರ್ಡ್ ಮುಗಿಸಿದೆ. ಆಗ ನನಗೊಬ್ಬ ತಮ್ಮ ಹುಟ್ಟಿದ್ದ. ತಂದೆಗೆ ಮತ್ತೆ ವರ್ಗ, ಆದರೆ ಈ ಸಲ ಮಲೆನಾಡಿನ ಸೆರಗಾಗಿದ್ದ ಬಡವರ ಊಟಿ ಹಾಸನಕ್ಕೆ. ನನ್ನಕ್ಕ ನನ್ನ ಸೋದರ ಮಾವನನ್ನ ಮದುವೆ ಆಗಿ ಕೆಜಿಫ್ ಗೆ ಅವರಿಬ್ಬರೂ ಹೊರಟು ಹೋದರು. ಮತೊಮ್ಮೆ ಟಿ.ಸಿ ತರಲು ಹೋದ ತಂದೆಗೆ ಅದೇ ಸಲಹೆ, ಮಗಳು ಜಾಣೆ ಅವಳನ್ನು ಚೆನ್ನಾಗಿ ಓದಿಸಿ ಅಂತ. ಜೊತೆಗೆ ಕ್ಲಾಸಿನಲ್ಲಿ ನಿರಂತರವಾಗಿ ಫಸ್ಟ್ ಬರುತಿದ್ದ ಕಾರಣ ನನಗೆ ಒಂದು ಇಂಗ್ಲಿಷ್ – ಕನ್ನಡ ನಿಘಂಟು, ಒಂದು ಖಾದಿ ಸೀರೆ ಬಹುಮಾನವಾಗಿ ಸಿಕ್ಕವು. ಮತ್ತೆ ನಾವು ಆರು ಜನ ಮಕ್ಕಳು ತಂದೆತಾಯಿಯೊಂದಿಗೆ ಹಾಸನಕ್ಕೆ ನಮ್ಮ ಬಿಡಾರ ಎತ್ತಿದೆವು. ಬಯಲುಸೀಮೆಯಿಂದ ಮಲೆನಾಡಿನ ಬದುಕಿಗೆ ಹೊಂದಿಕೊಂಡಿದ್ದು ಮತ್ತೊಂದು ಅಪೂರ್ವ ಅನುಭವ.
(ಮುಂದಿನ ಕಥನ : 26.6.2022)
ಈ ಅಂಕಣದ ಎಲ್ಲಾ ಭಾಗಗಳನ್ನು ಓದಲು ಕ್ಲಿಕ್ ಮಾಡಿ
ಪ್ರತಿಕ್ರಿಯೆಗಾಗಿ : tv9kannadadigital@gmail.com