World Laughter Day 2021: ಕೊರೊನಾ ಚಿಂತೆ ಬಿಡಿ, ವಿಶ್ವ ನಗು ದಿನವನ್ನು ಆಚರಿಸಿ

ದೇಶ ಕೊರೊನಾ ಎಂಬ ಸಾಂಕ್ರಾಮಿಕ ಕಾಯಿಲೆಯ ವಿರುದ್ಧ ಹೋರಾಡುತ್ತಿದೆ. ದುಃಖದ ಮಡಿಲಿನಲ್ಲಿ ವಿಶ್ರಮಿಸುತ್ತಿದೆ. ಇಂತಹ ಸಮಯದಲ್ಲಿ ನಾವು ವಿಶ್ವ ನಗು ದಿನವನ್ನೂ ಮತ್ತಷ್ಟು ಹಿಮ್ಮಡಿಗೊಳಿಸಿ ಆಚರಿಸಬೇಕು. ನಗು ದಿನದ ಉದ್ದೇಶವನ್ನು ಜಗತ್ತಿಗೆ ಸಾರಬೇಕು.

  • TV9 Web Team
  • Published On - 13:38 PM, 2 May 2021
World Laughter Day 2021: ಕೊರೊನಾ ಚಿಂತೆ ಬಿಡಿ, ವಿಶ್ವ ನಗು ದಿನವನ್ನು ಆಚರಿಸಿ
ಅಂತರರಾಷ್ಟ್ರೀಯ ನಗು ದಿನ

‘ಎ ಡೇ ವಿತ್ ಔಟ್ ಲಾಫ್ ಈಸ್ ಡೇ ವೇಸ್ಟೆಡ್​’ (A Day Without Laughter Is Day Wasted) ಎಂಬ ಚಾರ್ಲಿ ಚಾಂಪ್ಲಿನ್​ ಮಾತು ಹೇಳಿರ್ತೀರಿ. ಅದ್ಭುತವಾದ ನಟನೆ, ಮ್ಯಾನರಿಸಂ ಮತ್ತು ಒಂದು ಪದವೂ ಮಾತನಾಡದೆ ಕೇವಲ ಹಾವಭಾವಗಳಿಂದ ಇಡೀ ಜಗತ್ತಿಗೆ ನಗುವಿನ ಔತಣ ಬಡಿಸುತ್ತಿದ್ದ ಹಾಸ್ಯ ಬ್ರಹ್ಮ, ಹಾಸ್ಯ ಚಕ್ರವರ್ತಿ ಚಾರ್ಲಿ ಚಾಂಪ್ಲಿನ್​ ಅವರ ನಾವು ಇಂದು ನೆನೆಯಲೇ ಬೇಕು. ಏಕೆಂದರೆ ಇಂದು ಮೇ 2 ವಿಶ್ವ ನಗು ದಿನ. ಆದರೆ ದೇಶದಲ್ಲಿನ ಮಹಾಮಾರಿಯ ಭೀಕರತೆಯಿಂದ ಜನರ ನಗು ಮಾಸಿ ಹೋಗಿದೆ. ಮುಖದ ಮೇಲಿನ ಮಾಸ್ಕ್ ನಗುವನ್ನು ಮರೆ ಮಾಚಿದೆ.

ಆದ್ರೆ ಇಂದು ನಾವು ಚಿಂತೆಯನ್ನು ಚಿಂದಿ ಮಾಡಿ ನಗುದಿನವನ್ನು ಆಚರಿಸಬೇಕಿದೆ. ಈ ದಿನವನ್ನು ಮೇ ತಿಂಗಳ ಮೊದಲ ಭಾನುವಾರದಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ನಗು ದಿನವಾಗಿ ಆಚರಿಸುತ್ತಾರೆ. ಇದು ಜಾಗತಿಕ ಮಟ್ಟದಲ್ಲಿ ಆಚರಿಸುವ ವಾರ್ಷಿಕ ಕಾರ್ಯಕ್ರಮವಾಗಿದ್ದು, ನಗೆಯಿಂದ ಗುಣಪಡಿಸಲಾಗುವ ಕಾಯಿಲೆಗಳು, ನಗೆಯ ಪರಿಣಾಮ, ನಗೆಯ ಪ್ರಾಮುಖ್ಯತೆ ಮತ್ತು ನಗುವಿನಿಂದ ಆರೋಗ್ಯಕರ ಮತ್ತು ಸಂತೋಷದಾಯಕ ಜೀವನ ನಡೆಸುವ ವಿಧಾನದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತೆ. ಈ ದಿನವನ್ನು ಮೊದಲ ಬಾರಿಗೆ 1998ರಲ್ಲಿ ಡಾ.ಮದನ್ ಕಟಾರಿಯಾ ಆಚರಿಸ ಚಿಂತಿಸಿದ್ದು ಇದನ್ನು 2008, ಜುಲೈ 28 ರಲ್ಲಿ ಮುಂಬಯಿಯಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು.

1998 ರಲ್ಲಿ ವಿಶ್ವ ನಗೆ ದಿನವನ್ನು ರಚಿಸಿದವರು ಡಾ. ಕಟಾರಿಯಾ, ನಗುವಿನಿಂದ ಆಗುವ ಆಶ್ಚರ್ಯಕರ ಫಲಿತಾಂಶಗಳಿಂದ ಆಕರ್ಷಿತರಾದರು, ವಿಶೇಷವಾಗಿ ಮುಖದ ಪ್ರತಿಕ್ರಿಯೆ, ಕಲ್ಪನೆಗಳು, ನಗುವಾಗ ಉಂಟಾಗುವ ಮುಖದ ಸ್ನಾಯುಗಳ ಭಾಗಿಯಾಗುವಿಕೆ, ಭಾವನೆಯ ಬದಲಾವಣೆ ಬಗ್ಗೆ ಗಮನಿಸಿದ್ದರು. ಜನ ಈ ನಗು ದಿನವನ್ನು ಆಚರಿಸಿ ನಕ್ಕು ನಲಿಯುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಅನುಕೂಲವಿದೆ ಎಂದು ಡಾ. ಕಟಾರಿಯಾ ಹೇಳುತ್ತಾರೆ. ವಿಶ್ವ ಶಾಂತಿಯನ್ನು ಸೃಷ್ಟಿಸುವುದು ಮತ್ತು ಜಾಗತಿಕ ಜಾಗೃತಿ, ಬಂಧದ ಪ್ರಜ್ಞೆಯನ್ನು ಉತ್ತೇಜಿಸುವುದು ಈ ದಿನದ ಪ್ರಯತ್ನವಾಗಿದೆ.

ನಗು ದಿನ ಏಕೆ?
ಸರ್ವ ರೋಗಕ್ಕೂ ನಗು ನಮ್ಮಲ್ಲಿರುವ ಮದ್ದು. ವಿಶ್ವ ನಗೆ ದಿನವು ನಗುವಿನೊಂದಿಗೆ ಶಾಶ್ವತವಾದ ಅತ್ಯಂತ ಸುಂದರವಾದ, ಶಕ್ತಿಯುತ, ಸಕಾರಾತ್ಮಕ ಭಾವನೆಯನ್ನು ಪೋಷಿಸಲು ಮೀಸಲಾಗಿರುವ ದಿನವಾಗಿದೆ. ಅದರಲ್ಲೂ ಜಗತ್ತು ಕೊರೊನಾ ಎಂಬ ಮಹಾಮಾರಿಯನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಜನರು ನಗುವಿನೊಂದಿಗೆ ಮಹಾಮಾರಿಯ ವಿರುದ್ಧ ಹೋರಾಡಬೇಕಿದೆ. ಸಮಸ್ಯೆ ಕಠಿಣವಾದಾಗ ನಿಮ್ಮ ಚಿಂತೆಗಳನ್ನು ನಗುವಿನೊಂದಿಗೆ ಎದುರಿಸುವ ಉತ್ತಮವಾದ ದಾರಿ ಬೇರೊಂದಿಲ್ಲ. ನಗು ನಿಜಕ್ಕೂ ಅತ್ಯುತ್ತಮವಾದ ಔಷಧಿ. ನಗುವಿನ ಮಹತ್ವ ನಂಬಲಾಗದಷ್ಟು ದೊಡ್ಡದಾಗಿದೆ. ಸಂತೋಷವಾಗಿರುವುದು ಆರೋಗ್ಯಕರ ಜೀವನಶೈಲಿಯ ಕೀಲಿಕೈ.

ನಗುವುದರಿಂದ ನಿಮ್ಮ ಚಿಂತೆಗಳು ಸಾಂಕೇತಿಕವಾಗಿ ಮಾಯವಾಗುವುದಿಲ್ಲ, ಆದರೆ ದೈಹಿಕವಾಗಿ ದೇಹಕ್ಕೆ ಅದ್ಭುತವಾದ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಒಬ್ಬರು ಸಂತೋಷವಾಗಿರುವಾಗ ಮತ್ತು ವಿನೋದದಿಂದ ತುಂಬಿದ ಜೀವನಶೈಲಿಯನ್ನು ಹೊಂದಿರುವಾಗ ಒತ್ತಡದಿಂದ ಉಂಟಾಗುವ ಅನೇಕ ಸಮಸ್ಯೆಗಳನ್ನು ಎದರಿಸಲು ನಗು ಸಹಾಯ ಮಾಡುತ್ತದೆ. ಇದಕ್ಕಾಗಿಯೇ ಅನೇಕ ಮಂದಿ ಬೆಳಗೆದ್ದ ತಕ್ಷಣ ವಾಕಿಂಗ್ ಎಂದು ಪಾರ್ಕ್ಗಳಿಗೆ ತೆರಳಿ ನಗುವಿನ ವ್ಯಾಯಾಮ ಮಾಡ್ತಾರೆ. ಒಂದು ಕಡೆ ನಿಂತು ಸ್ನೇಹಿತರೆಲ್ಲರೂ ಒಟ್ಟಾಗಿ ನಕ್ಕಿ ನಲಿತಾರೆ. ಹೀಗೆ ಮಾಡುವುದರಿಂದ ನಮ್ಮಲಿರು ಒತ್ತಡ ಕಮ್ಮಿಯಾಗಿ ಆರೋಗ್ಯಕ್ಕೆ ಉತ್ತಮ ಪ್ರಯೋಜನವಾಗುತ್ತದೆ ಎಂತೆ.

ನೀವು ನಗುವುದರ ಮೂಲಕ 40-60 ಕ್ಯಾಲೋರಿಯನ್ನು ಬರ್ನ್ ಮಾಡಬಹುದು. ಮತ್ತು ನಗುವುದರಿಂದ ಮುಖದ ಸ್ನಾಯು ವ್ಯಾಯಾಮ ಕೂಡ ಆಗುತ್ತದೆ. ಇದರಿಂದ ಮುಖದ ತ್ವಚೆ ಹೆಚ್ಚು ಕಾಂತಿದಾಯಕವಾಗುತ್ತದೆ. ಇದರಿಂದ ಟಿ-ಕೋಶಗಳು (T-cells) ಸುಧಾರಿಸುತ್ತದೆ. ಹೃದಯ ಸಂಬಂಧಿ ಕಾಯಿಲೆ ಇರುವವರೂ ನಗುವನ್ನೇ ಸಂಗತಿಯನ್ನಾಗಿಸಿಕೊಂಡರೆ ಉತ್ತಮ. ಏಕೆಂದರೆ ನಗುವಿನಿಂದ ರಕ್ತದ ಒತ್ತಡ ಸಮಸ್ಯೆ ಬಗೆ ಹರಿಯುತ್ತೆ. ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಇದು ಅದ್ಭುತ ಮಾರ್ಗವಾಗಿದೆ. ಇದಲ್ಲದೆ, ನಗು ಜನರನ್ನು ಹತ್ತಿರ ತರುತ್ತದೆ ಮತ್ತು ಎಷ್ಟೇ ಕಷ್ಟ, ಒತ್ತಡವಿದ್ದರೂ ಅದರ ವಿರುದ್ಧ ಹೋರಾಡಲು ಶಕ್ತಿಯನ್ನು ತುಂಬುತ್ತದೆ.

ಕೊರೊನಾ ಚಿಂತೆ ಬಿಡಿ ನಗುವನ್ನು ಹರಡಿ
ಪ್ರಸ್ತುತ ದೇಶ ಕೊರೊನಾ ಎಂಬ ಸಾಂಕ್ರಾಮಿಕ ಕಾಯಿಲೆಯ ವಿರುದ್ಧ ಹೋರಾಡುತ್ತಿದೆ. ದುಃಖದ ಮಡಿಲಿನಲ್ಲಿ ವಿಶ್ರಮಿಸುತ್ತಿದೆ. ಇಂತಹ ಸಮಯದಲ್ಲಿ ನಾವು ವಿಶ್ವ ನಗು ದಿನವನ್ನೂ ಮತ್ತಷ್ಟು ಹಿಮ್ಮಡಿಗೊಳಿಸಿ ಆಚರಿಸಬೇಕು. ನಗು ದಿನದ ಉದ್ದೇಶವನ್ನು ಜಗತ್ತಿಗೆ ಸಾರಬೇಕು. ಎಲ್ಲರೂ ನಿಮ್ಮ ನಿಮ್ಮ ಮನೆಗಳಲ್ಲಿ ವಿಶ್ವ ನಗು ದಿನವನ್ನು ಆಚರಿಸಿ. ಸುರಕ್ಷಿತವಾಗಿರಿ ಮತ್ತು ಸಂತೋಷವನ್ನು ಹರಡಿ. ಜೋಕ್‌ಗಳು, ಕುಚೇಷ್ಟೆಗಳನ್ನು ಮಾಡಿ ಸಂಭ್ರಮಿಸಿ. ನಿಮ್ಮ ಸ್ನೇಹಿತರಿಗೆ ವಿಡಿಯೋ ಕಾಲ್ಗಳ ಮೂಲಕ ಅವರೊಂದಿಗೆ ನಡೆದ ಸಂತೋಷದಾಯಕ ಸಂಗತಿಗಳನ್ನು ಮೆಲುಕು ಹಾಕಿ. ನಿಮ್ಮ ಹಳೆಯ ಸುಖಕರ ಸಮಯವನ್ನು ನೆನಪಿಸಿಕೊಳ್ಳಿ ತಮಾಷೆಯ ಘಟನೆಗಳ ಬಗ್ಗೆ ಮಾತನಾಡಿ ಕೊರೊನಾದ ಚಿಂತೆಯನ್ನು ತಳ್ಳಿಹಾಕಿ.

ಇದನ್ನೂ ಓದಿ: World Laughter Day 2021: ವಿಶ್ವ ನಗು ದಿನಕ್ಕೆ ಮೀಮ್ಸ್ ಮತ್ತು ವಿಡಿಯೋಗಳ ಕೊಡುಗೆ ಏನು?