ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಕವಿ ಸುಬ್ರಾಯ ಚೊಕ್ಕಾಡಿ

ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಈ ವರ್ಷದ ಓದಿನಲ್ಲಿ ಹೆಚ್ಚು ಆಪ್ತವೆನ್ನಿಸಿದ್ದು ಕವಿ ಎಚ್. ಎಸ್.​ ವೆಂಕಟೇಶಮೂರ್ತಿಯವರ ‘ಬುದ್ಧ ಚರಣ‘ ಮತ್ತು ಉಪಯುಕ್ತವೆನ್ನಿಸಿದ್ದು ಎಸ್. ಆರ್. ವಿಜಯಶಂಕರ್ ಅವರ ‘ಮಾಸ್ತಿ ವೆಂಕಟೇಶ ಅಯ್ಯಂಗಾರ್‘ ಕುರಿತ ಬದುಕು ಬರಹ.

ವರ್ಷಾಂತ್ಯ ವಿಶೇಷ 2020: 'ಓದಿನಂಗಳ'ದಲ್ಲಿ ಕವಿ ಸುಬ್ರಾಯ ಚೊಕ್ಕಾಡಿ
ಕವಿ ಸುಬ್ರಾಯ ಚೊಕ್ಕಾಡಿ
Follow us
ಶ್ರೀದೇವಿ ಕಳಸದ
|

Updated on:Dec 30, 2020 | 11:18 AM

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿಯನ್ನು ಬರೆದುಕೊಟ್ಟಿದ್ದಾರೆ. ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರ ಆಯ್ಕೆ ಇಲ್ಲಿದೆ.

ಕೃ :ಮಾಸ್ತಿ ವೆಂಕಟೇಶ ಅಯ್ಯಂಗಾರ್ ಲೇ : ಎಸ್ ಆರ್ ವಿಜಯ ಶಂಕರ್ ಪ್ರ : ಸಾಹಿತ್ಯ ಅಕಾಡೆಮಿ

ಈ ವರ್ಷ ನಾನು ಓದಿ ಇಷ್ಟಪಟ್ಟ ಪುಸ್ತಕಗಳ ಪೈಕಿ ವಿಮರ್ಶಕ ಎಸ್.ಆರ್.ವಿಜಯಶಂಕರ್ ಅವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಬದುಕು-ಬರಹಗಳ ಕುರಿತಾಗಿ ಬರೆದಿರುವ ಪುಸ್ತಕ. ಇದು ಭಾರತೀಯ ಸಾಹಿತ್ಯ ನಿರ್ಮಾತೃಗಳು ಸರಣಿಯಲ್ಲಿ ಇತ್ತೀಚೆಗೆ ಪ್ರಕಟವಾಗಿದೆ. ಮಾಸ್ತಿಯವರ ಬಗ್ಗೆ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ವಿಮರ್ಶಾ ಬರಹಗಳು ಬಂದಿವೆಯಾದರೂ, ಕಾಲದ ಅಂತರದಲ್ಲಿ ನಿಂತು ನೋಡಿದಾಗ ಮಾಸ್ತಿ ಬರಹಗಳು ಹೇಗೆ ಕಾಣಿಸುತ್ತವೆ ಎಂಬುದು ಕುತೂಹಲದ ಸಂಗತಿಯಾಗಿದೆ. ವಿಜಯ ಶಂಕರ್ ಅವರು ಹೇಳುವಂತೆ ಈ ಕೃತಿಯು ಮಾಸ್ತಿಯ ಕೃತಿಗಳ ಮರು ಓದು ಮತ್ತು ಅವುಗಳ ಕುರಿತಾದ ಮೂರನೇ ತಲೆಮಾರಿನ ಪ್ರತಿಕ್ರಿಯೆ.

ಮಾಸ್ತಿಯವರ ಸಮಗ್ರ ಕೃತಿಗಳ ಬಗ್ಗೆ ಬರೆಯುವುದು ಸುಲಭದ ಸಂಗತಿಯೇನಲ್ಲ. ಅವರು ವಿವಿಧ ಪ್ರಕಾರಗಳಲ್ಲಿ 126 ಕೃತಿಗಳನ್ನು ರಚಿಸಿದ್ದಾರೆ. ಆ ಕೃತಿಗಳನ್ನು ಮತ್ತವುಗಳಿಗೆ ಸಂಬಂಧಿಸಿದ ವಿವಿಧ ವಿಮರ್ಶಾ ಬರಹಗಳನ್ನು ಅಧ್ಯಯನ ಮಾಡಿ ಬರೆಯುವುದೆಂದರೆ ಸುಲಭದ ಸಂಗತಿಯೇನಲ್ಲ. ಈ ಸವಾಲನ್ನು ವಿಜಯಶಂಕರರು ಸಮರ್ಥವಾಗಿ ನಿಭಾಯಿಸಿದ್ದಾರೆ. ಮಾಸ್ತಿಯವರ ಬದುಕು-ಬರಹ, ಸಣ್ಣಕತೆ, ಕಾದಂಬರಿ, ನಾಟಕ, ಕಾವ್ಯ, ಅನುವಾದ, ವಿಮರ್ಶೆ, ಪತ್ರಿಕೋದ್ಯಮ ಅವರ ಸಮಸ್ತ ಕೃತಿಗಳ ಅಧ್ಯಯನದ ಸಾರ ಇದರಲ್ಲಿದೆ. ವಿಶಿಷ್ಟಾದ್ವೈತದ ತಾತ್ವಿಕತೆಯನ್ನು, ಅವರ ರೂಪಕ ಶಕ್ತಿ, ಕಥನ ಪ್ರತಿಭೆಯನ್ನು ಖಚಿತವಾಗಿ ಗುರುತಿಸಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಮಾಸ್ತಿಯವರನ್ನು ಅಧ್ಯಯನ ಮಾಡುವವರಿಗೆ ಈ ಕೃತಿಯು ಅತ್ಯಂತ ಉಪಯುಕ್ತವಾದ ಆಕರಗ್ರಂಥವಾಗಿದೆ ಎಂದು ಖಚಿತವಾಗಿ ಹೇಳಬಹುದು.

ಕೃ : ಬುದ್ಧಚರಣ ಲೇ : ಎಚ್ ಎಸ್ ವೆಂಕಟೇಶಮೂರ್ತಿ ಪ್ರ: ಅಂಕಿತ ಪುಸ್ತಕ

ಈ ವರ್ಷ ಓದಿದ ಕೃತಿಗಳ ಪೈಕಿ ನಾನು ಹೆಚ್ಚು ಇಷ್ಟಪಟ್ಟಿರುವ ಕೃತಿಯಾದ ಕವಿ ಎಚ್ಚೆಸ್ವಿಯವರ ‘ಬುದ್ಧ ಚರಣ’ವನ್ನು ಪರಿಚಯಿಸುವುದಷ್ಟೇ ಈ ಟಿಪ್ಪಣಿಯ ಉದ್ದೇಶ. ಬುದ್ಧನ ಕುರಿತಾಗಿ ಈಗಾಗಲೇ ಕನ್ನಡದಲ್ಲಿ ಮಾಸ್ತಿ, ಕುವೆಂಪು, ಜಿ.ಪಿ.ರಾಜರತ್ನಂ, ಎಲ್.ಬಸವರಾಜು ಮೊದಲಾದವರ ಕೃತಿಗಳು ಬಂದಿವೆ. ಆದರೆ ಇವೆಲ್ಲ ಕೃತಿಗಳು ಬುದ್ಧನ ಉಪದೇಶಗಳಿಗೆ ಹೆಚ್ಚು ಒತ್ತು ಕೊಟ್ಟವುಗಳು. ಆದರೆ ಈ ಕೃತಿಯು ಅವುಗಳಿಗಿಂತ ಭಿನ್ನವಾಗಿ ಬುದ್ಧನ ಬದುಕು ಅರಳಿದ ಬಗೆಗೆ, ಅವನ ಸಮಾಜದ ಕುರಿತಾಗಿ ವ್ಯಕ್ತಪಡಿಸಿದ ಅನುಕಂಪಕ್ಕೆ, ಧ್ಯಾನಸ್ಥಿತಿಗೆ, ಅವನು ಪ್ರತಿಪಾದಿಸಿರುವ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಒತ್ತು ಕೊಟ್ಟಿದೆ. ಮುಗಿಯದಾಸೆಯ ತೀರದೆಡೆಗೆ ಧಾವಿಸುತ್ತಿರುವ ಮಾನವ ಜನಾಂಗಕ್ಕೆ ಬುದ್ಧನ ಚಾರಿತ್ರ್ಯ ಮತ್ತು ಅನುಸಂಧಾನವು ಸಮಾಧಾನವನ್ನೂ, ಸಮಚಿತ್ತವನ್ನೂ ಒದಗಸೀತು ಎಂಬ ನಂಬುಗೆಯು ಈ ಕೃತಿರಚನೆಯ ಹಿಂದೆ ಇದೆ ಎಂದು ನಾನು ಭಾವಿಸಿದ್ದೇನೆ.

ಈ ಕಾವ್ಯದ ಹೊನಲು ಎಂಟು ಭಾಗಗಳಲ್ಲಿ ಹರಿದಿದ್ದು, ಬುದ್ಧನ ಬದುಕು ಭಾವಗಳನ್ನು, ಧ್ಯಾನದ ಫಲಗಳನ್ನು, ಬುದ್ಧಚೇತನವು ಅರಳಿ ಮಾಗಿದ ಬಗೆಯನ್ನು ತನ್ಮಯವಾಗಿ ನಿರೂಪಿಸುತ್ತದೆ. ಮೊದಲೆರಡು ಕಾಂಡಗಳು ಹಾಗೂ ಕೊನೆಯ ಕಾಂಡವು ಚೌಪದಿಯ ಛಂದಸ್ಸಿನಲ್ಲಿದ್ದರೆ, ಉಳಿದೆಲ್ಲ ಕಾಂಡಗಳು ಅಷ್ಟಷಟ್ಪದಿ ಅಥವಾ ಚತುರ್ದಶಪದಿಗಳಲ್ಲಿವೆ. ಮೊದಲೆರಡು ಕಾಂಡಗಳು ಪೂರ್ವ ಪೀಠಿಕೆಗಳಾಗಿದ್ದರೆ ಮಧ್ಯ ಕಾಂಡದ ಈ ಸಾಲುಗಳಿಂದ ಕಾವ್ಯಾರಂಭವಾಗುತ್ತದೆ. ‘ಭೂಮಿ ಪರಿವೀಕ್ಷಣೆಯ ಮಾಡುತ್ತ ಮಾಡುತ್ತ ಹಾರುತ್ತ ಇದೆ ಒಂದು ಶ್ವೇತ ಶುಭ್ರ ಮರಾಳ.’ ಹೀಗೆ ಆರಂಭವಾದ ಕಾವ್ಯವು ಬುದ್ಧನ ಪರಿನಿರ್ವಾಣದ ಸೂಕ್ಷ್ಮ ಹಾಗೂ ಭವ್ಯ ರೂಪಕಾತ್ಮಕ ಚಿತ್ರಗಳೊಂದಿಗೆ ಪರಿಸಮಾಪ್ತಿಯಾಗುತ್ತದೆ: ದೀಪ ನಂದಿತು ದೀಪದಲ್ಲಿ, ಮುಳುಗಿತು ನೀರು ನೀರಲ್ಲಿ. ಸೊನ್ನೆ ತೆರೆಯಿತು ಕಣ್ಣ ಅಂತರಾ ಲೋಕಕ್ಕೆ. ಭೂಮಿ ನಡುಗಿತು ಶೂನ್ಯ ಆಡಿಸುವ ಡಿಂಡಿಮದ ಹಾಗೆ, ಮೂಡಣದ ಬಾಂದಳದಲ್ಲಿ ಲೆಕ್ಕವಿರದಷ್ಟು ಬಂಗಾರ ಗರಿ ಹಗುರಾಗಿ ಹಾರುತ್ತ ಇವೆ ಹಕ್ಕಿ ಮರದಿಂದ ಗಿಡದಿಂದ; ರೆಕ್ಕೆ ನೇವರಿಸುತ್ತ ಕೊಕ್ಕಿರಿಸಿ ಮುದ್ದಿಸಿವೆ. ತೊಂಗಲಲಿ ತೂಗುತಿವೆ ಬಣ್ಣದಿರುಗಿದ ಹಣ್ಣು. ಶರಣು ಶ್ರೀ ಬುದ್ಧಾಂತಃಕರಣಕ್ಕೆ, ಚರಣಕ್ಕೆ.ಶರಣು ಅಷ್ಟಾಂಗಗಳ, ನಿಷ್ಠ ಆಚರಣಕ್ಕೆ. ಶರಣು ಬುದ್ಧಸ್ಮೃತಿಯ ಪ್ರತಿಯೊಂದು ಚರಣಕ್ಕೆ ಶರಣು ಮಧ್ಯಮಮಾರ್ಗದಾಪ್ತ ಸಂಚರಣಕ್ಕೆ. ಶಾಂತಿ ಶಾಂತಿ ಶಾಂತಿಃ

ಬಹು ಕಾಲದ ಅಧ್ಯಯನ,ಮನನ,ಇತ್ಯಾದಿಗಳಿಂದ ಬುದ್ಧನನ್ನು ತನ್ನಲ್ಲಿ ಆವಾಹಿಸಿಕೊಂಡು ಬರೆದಂತಿರುವ ಈ ಕಾವ್ಯವು ಎಚ್ಚೆಸ್ವಿಯವರ ಪಕ್ವ ಮನದ ಫಲವಾಗಿ ಮೂಡಿಬಂದಿದೆ ಎಂದೇ ಈ ಕೃತಿಯು ಈ ವರ್ಷದ ಮುಖ್ಯ ಕೃತಿಗಳಲ್ಲಿ ಒಂದು ನಾನು ಭಾವಿಸುತ್ತೇನೆ.

ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದ ಓನಾಮ ಹಿರಿಯ ಕವಿ ಎಚ್​. ಎಸ್​. ವೆಂಕಟೇಶಮೂರ್ತಿಯವರಿಂದ

Published On - 5:20 pm, Mon, 28 December 20

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?