ವರ್ಷಾಂತ್ಯ ವಿಶೇಷ 2020: ’ಓದಿನಂಗಳ‘ದಲ್ಲಿ ಸಾಹಿತಿ ಜಿ.ಪಿ. ಬಸವರಾಜು

ಹಿರಿಯ ಪತ್ರಕರ್ತ, ಸಾಹಿತಿ ಜಿ.ಪಿ.ಬಸವರಾಜು ಅವರು, ಕವಿಗಳಾದ ಮೌಲ್ಯ ಸ್ವಾಮಿ ಮತ್ತು ಚಾಂದ್ ಪಾಷ ಎನ್. ಎಸ್. ಅವರ ಕವನಗಳ ಬಗ್ಗೆ ಬರೆಯುತ್ತಾ, ‘ಕಿರಿಯ ತಲೆಮಾರೊಂದು ಸಾಹಿತ್ಯದ ಬಗ್ಗೆ ತೋರುತ್ತಿರುವ ಗಾಢ ಶ್ರದ್ಧೆ ಮತ್ತು ಅದಮ್ಯ ಉತ್ಸಾಹ ಈ ಎರಡು ಸಂಕಲನಗಳಲ್ಲಿ ಕಂಡುಬರುತ್ತಿವೆ‘ ಎನ್ನುತ್ತಾರೆ.

ವರ್ಷಾಂತ್ಯ ವಿಶೇಷ 2020: ’ಓದಿನಂಗಳ‘ದಲ್ಲಿ ಸಾಹಿತಿ ಜಿ.ಪಿ. ಬಸವರಾಜು
ಜಿ. ಪಿ. ಬಸವರಾಜು
Follow us
ಶ್ರೀದೇವಿ ಕಳಸದ
|

Updated on:Dec 30, 2020 | 11:17 AM

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿಯನ್ನು ಬರೆದುಕೊಟ್ಟಿದ್ದಾರೆ. ಈಗಿಲ್ಲಿ ಹಿರಿಯ ಪತ್ರಕರ್ತ ಸಾಹಿತಿ ಜಿ.ಪಿ.ಬಸವರಾಜು ಅವರ ಆಯ್ಕೆ.

ಕೃ: ಸುಮ್ಮನೆ ಬಿದ್ದಿರುವ ಬಿಕ್ಕುಗಳು (ಕವಿತೆಗಳು)

ಲೇ: ಮೌಲ್ಯ ಸ್ವಾಮಿ

ಪ್ರ: ವಾಗರ್ಥ

ಈ ವರ್ಷದಲ್ಲಿ ನಾನು ಓದಿದ ಪುಸ್ತಕಗಳನ್ನು ನೆನೆಯುವಾಗ ಥಟ್ಟನೆ ಕಣ್ಮುಂದೆ ಇಬ್ಬರು ತರುಣರ ಪುಸ್ತಕಗಳು ಎದುರಾಗುತ್ತವೆ. ಎರಡೂ ಕಾವ್ಯ ಸಂಕಲನಗಳು. ಕಿರಿಯ ತಲೆಮಾರೊಂದು ಸಾಹಿತ್ಯದ ಬಗ್ಗೆ ತೋರುತ್ತಿರುವ ಗಾಢ ಶ್ರದ್ಧೆ ಮತ್ತು ಅದಮ್ಯ ಉತ್ಸಾಹ ಈ ಎರಡು ಸಂಕಲನಗಳಲ್ಲಿ ಕಂಡುಬರುತ್ತಿವೆ. ಅವುಗಳನ್ನು ನಾನೇಕೆ ಮೆಚ್ಚುತ್ತೇನೆ ಎಂದು ಚಿಂತಿಸಿದಾಗ:

ನಡೆದು ನಡೆದು, ಜಾಳುಜಾಳಾಗಿ, ಸವೆದು ಹೋದ ಸವಕಲು ಹಾದಿಯ ಕವಿತೆಗಳನ್ನೇ ಓದಿ ಓದಿ ಮಂಕಾದ ಮನಸ್ಸಿಗೆ ಇಲ್ಲಿನ ಕವಿತೆಗಳ ಚೇತೋಹಾರಿ ನಡೆ ಮುದನೀಡುತ್ತದೆ. ಯಾವುದೇ ಕವಿತೆಯ ಎದುರು ನಿಂತು ಕೈಗೆ ಸಿಗುವ ಯಾವುದೇ ನುಡಿಯನ್ನು ಎತ್ತಿಕೊಂಡರೂ ಇಲ್ಲಿ ಹೊಸತನ ಕಾಣಿಸುತ್ತದೆ. ಜೊಂಪೆ ಜೊಂಪೆ ರೂಪಕಗಳು, ಪ್ರತಿಮೆ, ಪ್ರತೀಕಗಳು ಸಿಕ್ಕುತ್ತವೆ.

ಮಾತು ಇಲ್ಲಿ ಗರಿಬಿಚ್ಚಿ ಕುಣಿಯುತ್ತದೆ; ರೂಪರೂಪಕಗಳನ್ನು ಕಟ್ಟುತ್ತದೆ. ಹೊಸ ರೀತಿಯ ತುಡಿತ, ಗ್ರಹಿಕೆ ಮತ್ತು ನೋಟಗಳಿಂದ ಮಾತ್ರ ಇಂಥ ಕಾವ್ಯ ಹುಟ್ಟುತ್ತದೆ. ಮೊದಲ ಸಂಕಲನದಲ್ಲಿಯೇ ಇದನ್ನು ಸಾಧ್ಯ ಮಾಡಿರುವುದು, ಮೌಲ್ಯ ಕಾವ್ಯವನ್ನು ಗಂಭೀರವಾಗಿ ಪರಿಭಾವಿಸಿರುವುದರ ಸೂಚನೆಯಾಗಿ ತೋರುತ್ತದೆ.

ಈ ಸಂಕಲನದ ಹೆಸರೇ-ಸುಮ್ಮನೇ ಬಿದ್ದಿರುವ ಬಿಕ್ಕುಗಳು. ಈ ಬಿದ್ದುಕೊಂಡಿರುವ ಸ್ಥಿತಿ ಆಲಸ್ಯದ್ದಲ್ಲ. ಪುಟಿಯುವ, ನೆಗೆಯುವ, ಗರಿಬಿಚ್ಚಿ ಹಾರುವ ಉಮೇದು ಇದ್ದರೂ, ಈ ಚೇತನ ಹಾರಲಾರದು, ಜಿಗಿಯಲಾರದು. ಇದರ ರೆಕ್ಕೆಯನ್ನು ಕತ್ತರಿಸಲಾಗಿದೆ. ಹೆಜ್ಜೆ ಹೆಜ್ಜೆಗೂ ವಿಧಿನಿಷೇಧಗಳನ್ನು ಹೇರಲಾಗಿದೆ. ಅನುಮಾನಗಳು ಸಂಬಂಧಗಳನ್ನು ಮುರಿದಿವೆ. ನಂಬಿಕೆಗಳು ಅರ್ಥ ಕಳೆದುಕೊಂಡಿವೆ.  ಬಿದ್ದ ಚೇತನದ ಬಿಕ್ಕುಗಳು ಸಂಕಲನದುದ್ದಕ್ಕೂ ಅನುರಣಿಸುತ್ತವೆ. ತನ್ನ ಸುತ್ತಲಿನ ಜಗತ್ತು ಭ್ರಷ್ಟಗೊಂಡಿರುವುದು, ಸಹಜ ಸಂಬಂಧಗಳು ಕಡಿದುಬಿದ್ದಿರುವುದು, ಹೃದಯಗಳು ಮಿಡಿಯಲಾರದೆ ಹೋಗಿರುವುದು, ಚೇತನವು ಅರಳಲು ನೆರವಾಗಬೇಕಾದ ಸುತ್ತಲಿನ ಪರಿಸರವೇ ಬಂಧಿಸುವ ಸೆರೆಮನೆಯ ಗೋಡೆಗಳಾಗಿರುವುದು, ಮಾತುಗಳು ಅರ್ಥ ಕಳೆದುಕೊಂಡು ಬರಿಯ ಗದ್ದಲವಾಗಿರುವುದು, ಸಾಮಾಜಿಕ ಪರಿಸರವೇ ಜೀವವಿರೋಧಿಯಾಗಿರುವುದು ಮತ್ತು ಇಂಥವೇ ನೂರಾರು ಕಠೋರ ಸಂಗತಿಗಳು ಈ ಚೈತನ್ಯವನ್ನು ವಿಷಾದದ ಮಡುವಿಗೆ ನೂಕಿವೆ. ನಿರಾಶೆ, ಹತಾಶೆ, ಏಕಾಂಗಿತನ, ಮುತ್ತಿದ ಕತ್ತಲು, ನಿಟ್ಟುಸಿರು, ಸೋತ ದನಿಗಳು, ಬಿಕರಿಯಾದ ನಾಳೆಗಳು, ವಿಳಾಸವಿಲ್ಲದ ಊರಿನಲ್ಲಿ ಕರುಳು ಹರಿದ ಓಣಿ- ಹೀಗೆ ವಿಷಾದವನ್ನು ತುಂಬಿಕೊಂಡ ಚಿತ್ರಗಳೇ ಉದ್ದಕ್ಕೂ ಕಣ್ಣಿಗೆ ರಾಚುತ್ತವೆ. ಸಾಹಿತ್ಯ ಕ್ಷೇತ್ರದಲ್ಲಿ ಮೊದಲ ಹೆಜ್ಜೆಯನ್ನು ಊರಿರುವ ಮೌಲ್ಯಳ ಈ ಸಂಕಲನದಲ್ಲಿ ಗಮನಿಸಬೇಕಾದ ಅನೇಕ ಮುಖ್ಯ ಗುಣಗಳಿವೆ.

ಕೃ: ಚಿತ್ರ ಚಿಗುರುವ ಹೊತ್ತು  (ಕವಿತೆಗಳು)

ಲೇ: ಚಾಂದ್ ಪಾಷ ಎನ್. ಎಸ್. 

ಪ್ರ: ಸಂಗಾತ

ಏನನ್ನೋ ಚಿಂತಿಸಬೇಕಾದ, ಮತ್ತೇನನ್ನೋ ಹುಡುಕಬೇಕಾದ, ಯೌವನದ ಹುರುಪಿನಲ್ಲಿ ಆಕಾಶಕ್ಕೆ ಜಿಗಿಯಬೇಕಾದ ಕವಿ ಚಾಂದ್ ಪಾಷ ತನ್ನ ಗುರುತನ್ನು ತೋರಿಸಬೇಕಾದ ತೊಳಲಾಟದಲ್ಲಿದ್ದಾರೆ. ಇದು ಇವರೊಬ್ಬರ ತೊಳಲಾಟವಲ್ಲ. ಒಂದು ಸಮುದಾಯದ ತೊಳಲಾಟ. ಒಂದು ಧರ್ಮವನ್ನು ನಂಬಿ ಈ ದೇಶದಲ್ಲಿ ‘ಅನ್ಯರಂತೆ’ ಬದುಕುತ್ತಿರುವವರ ತೊಳಲಾಟ.

ಬದುಕನ್ನು ಬಿಡುಗಣ್ಣಿನಿಂದ, ಮುಕ್ತಪ್ರೀತಿಯಿಂದ ನೋಡಲು ಹಂಬಲಿಸುತ್ತಿರುವ ಚಾಂದ್ ಪಾಷರಂಥ ಎಳೆಯ ತರುಣರು ಎತ್ತ ತಿರುಗಿದರೂ ಇಂಥ ಬಲೆಗಳೇ. ಬಲೆಬೀಸಿ, ಹಿಡಿದು, ಬೋನಿಗೆ ಹಾಕಿ ‘ಪಳಗಿಸುವ’ ಹುನ್ನಾರಗಳೇ ಎಲ್ಲೆಲ್ಲೂ. ಒಳಗೂ ಅದೇ, ಹೊರಗೂ ಅದೇ. ಯಾವುದು ಒಳಗು, ಯಾವುದು ಹೊರಗು ಎಂದು ಬಿಡಿಸಲಾಗದ, ತಿಳಿಯಲಾಗದ ಗೋಜಲುಗೋಜಲು ಸ್ಥಿತಿ. ಬಲೆ ಮಾತ್ರ ಹರವಿಕೊಂಡಿರುವುದು ಸತ್ಯ.

ಬಂಧನಗಳನ್ನು ಹರಿದು ಹಾಕುವ, ಸ್ವಚ್ಛಂದ ಬದುಕನ್ನು ಬಯಸುವ, ಮನುಷ್ಯ ಸಹಜ ಸ್ವಾತಂತ್ರ್ಯಕ್ಕೆ ಹಂಬಲಿಸುವ, ಮನುಷ್ಯ ಪ್ರೀತಿಗೆ ಕಾತರಿಸುವ ಮುಗ್ದ ತರುಣರ ಪ್ರತಿನಿಧಿಯಂತೆ ಕಾಣಿಸುತ್ತಿರುವ ಚಾಂದ್ ಪಾಷ ಅವರ ಒಳತುಡಿತ ಇಲ್ಲಿನ ಅಕ್ಷರಗಳಲ್ಲಿ, ಸಾಲುಗಳಲ್ಲಿ, ಪದ, ಪಾದಗಳಲ್ಲಿ, ಪಠ್ಯದಲ್ಲಿ ಬೀಡುಬಿಟ್ಟಿದೆ.

ಚಾಂದ್ ಪಾಷ ತಮ್ಮದೇ ಭಾಷೆಯನ್ನು ರೂಪಿಸಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಕೆಲವೊಮ್ಮೆ ಮಾತು ಅತಿಯಾದಂತೆ ಕಾಣಿಸಿದರೂ, ಅಲ್ಲಲ್ಲಿ ಮುಖದೋರುವ ರೂಪಕಗಳು ಈ ಕಾವ್ಯದ ಅಂದವನ್ನು, ಚೆಲುವನ್ನು ಕಟ್ಟಿಕೊಡುತ್ತದೆ ಮತ್ತು ಕಾವ್ಯದ ಧ್ವನಿಯನ್ನು ಹೆಚ್ಚುಮಾಡುತ್ತವೆ.

‘ಒಂಟಿ ರಾತ್ರಿಗಳೆಲ್ಲ ಒಣಗಿ ಹೋಗುತಿವೆ’, ‘ಈ ಮೊಹಬ್ಬತ್ನ ಮುದಿತನಕೆ ಯೌವನದ ಮುಲಾಮು ತಾಕಿಸು’, ‘ದೂರದ್ವೀಪದಲ್ಲೊಂದು ದೋಣಿಯ ಹೆಜ್ಜೆ’, ‘ಪದಗಳಿಲ್ಲ ವಾಚಿಸಲು ಧ್ವನಿಗೂ ನೋವಿನ ಚಿಂತೆ’, ‘ಕತ್ತಲೆಯ ಕೆಚ್ಚಲಲ್ಲಿ ಬೆಳಕು ಹಾಲಾಗುವಷ್ಟರಲ್ಲಿ’, ‘ಬೆನ್ನಗೋಡೆಯ ಮೇಲೆ ಬೆರಳ ತಾಕಿಸಬೇಡ/ ಭಾವ ಚಿತ್ರವು ಬೆವರ ಬಹುದು’- ಇಂಥ ಅನೇಕ ಸಾಲುಗಳು ಚಾಂದ್ ಪಾಷ  ಅವರ ಕಾವ್ಯದಲ್ಲಿ ಸಿಗುತ್ತವೆ. ಕಾವ್ಯದ ಚೆಲುವು ಮತ್ತು ಸತ್ವವನ್ನು ಬಲ್ಲ ಕವಿ ಮಾತ್ರ ಇಂಥ ಸಾಲುಗಳನ್ನು ಕಟ್ಟುತ್ತಾನೆ. ಇದು ಚಾಂದ್ ಪಾಷ  ಅವರ ಕಾವ್ಯದ ಶಕ್ತಿ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಕವಿ ಸುಬ್ರಾಯ ಚೊಕ್ಕಾಡಿ; ’ಬುದ್ಧ ಚರಣ‘ ಮತ್ತು ‘ಮಾಸ್ತಿ ಬದುಕು’

Published On - 6:10 pm, Mon, 28 December 20

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್