ಏಸೊಂದು ಮುದವಿತ್ತು : ಪಂಡೋರಳ ಪ್ಲಾಸ್ಟಿಕ್ ಬಾಕ್ಸ್ ತೆರೆಯುವುದಕ್ಕೂ ಮುನ್ನ

‘ಮಣ್ಣಿನ ತತ್ರಾಣಿಗಳಲ್ಲಿ ಕುಡಿಯುವ ನೀರು ಒಯ್ಯುತ್ತಿದ್ದರು. ಉಳ್ಳವರು ಸ್ಟೀಲ್ ಅಥವಾ ಹಿತ್ತಾಳೆಯ ಉಗ್ಗ ಬಳಸುತ್ತಿದ್ದರು. ಯಾವುದೂ ಇಲ್ಲದ ಹೊತ್ತಿನಲ್ಲಿ ಎಂಥ ಅಪರಿಚಿತರ ಮನೆಗೆ ಹೋಗಿ 'ಒಂಚೂರು ನೀರು...' ಅಂದರೆ ಸಾಕು, ಹಳ್ಳಿ ಜನ ಬೆಲ್ಲ, ನೀರು ನೀಡಿ ಉಪಚರಿಸುತ್ತಿದ್ದರು. ಅನಗತ್ಯ ವಸ್ತುಗಳನ್ನು ಶೇಖರಿಸಿ ಇಡದೇ, ಆ ಹೊತ್ತಿನ ಅಗತ್ಯಕ್ಕೆ ತಕ್ಕಂತೆ ಸರಳವಾಗಿ ಬದುಕುವುದು ಅನಿವಾರ್ಯವೂ ಆಗಿತ್ತು. ಈಗ ಟ್ರೆಂಡ್ ಎನಿಸಿಕೊಂಡಿರುವ 'ಝೀರೋ ವೇಸ್ಟ್ ಲಿವಿಂಗ್' ಆಗಿನ ಜೀವನ ಶೈಲಿಯೇ ಆಗಿತ್ತು.‘ ರೇಖಾ ಹೆಗಡೆ ಬಾಳೇಸರ

ಏಸೊಂದು ಮುದವಿತ್ತು : ಪಂಡೋರಳ ಪ್ಲಾಸ್ಟಿಕ್ ಬಾಕ್ಸ್ ತೆರೆಯುವುದಕ್ಕೂ ಮುನ್ನ
ಲೇಖಕಿ ರೇಖಾ ಹೆಗಡೆ ಬಾಳೇಸರ
Follow us
ಶ್ರೀದೇವಿ ಕಳಸದ
|

Updated on:May 21, 2021 | 8:06 PM

ಈ ಔಷಧ ಎಲ್ಲಿಂದ ಬಂದಿತು, ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.  

ಇದೋ ‘ಟಿವಿ9 ಕನ್ನಡ ಡಿಜಿಟಲ್ : ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ ಇ ಮೇಲ್ : tv9kannadadigital@gmail.com

ಲೇಖಕಿ ರೇಖಾ ಹೆಗಡೆ ಬಾಳೇಸರ ಅವರ ಸತ್ವಯುತ ಬಾಲ್ಯದ ನೆನಪುಗಳ ಮುಂದೆ ಇದ್ಯಾವ್ ಪ್ಲಾಸ್ಟಿಕ್ ಮಹಾ! ಎನ್ನಲಾದೀತೆ?

* ತಂಪು ಹೊತ್ತಿನಲ್ಲಿ ಕುಳಿತುಕೊಂಡು ‘ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ…’ ಅಂತ ಯೋಚನೆ ಮಾಡಿದಾಗೆಲ್ಲ ಸೀದಾ ಮನಸ್ಸು ಓಡೋದು ಬಾಲ್ಯದ ಕಡೆಗೇನೇ. ಕುಂತಲ್ಲಿ ನಿಂತಲ್ಲಿ ಆಟ ಆಡಿಕೊಂಡು, ಊರೆಲ್ಲ ಓಡಾಡಿಕೊಂಡು, ಕಾಡು-ಮೇಡು ಗುಡ್ಡ-ಬೆಟ್ಟ ಸುತ್ತುತ್ತ, ಕುಣಿಯುತ್ತ, ಕುತೂಹಲ ತಣಿಸಿಕೊಳ್ಳುತ್ತ, ಕಣ್ಣ ತುಂಬ ಜಗವ ತುಂಬಿಕೊಳ್ಳುತ್ತಿದ್ದ ಬಾಲ್ಯ. ಕರ್ತವ್ಯ, ಜವಾಬ್ದಾರಿಗಳ ಯಾವ ಹೊರೆ ಇರದ, ರಾಗ ದ್ವೇಷಗಳು ಬಾಧಿಸದ, ಡೆಡ್‍ಲೈನ್, ಇಎಂಐ, ಅಪ್ರೈಸಲ್‍ಗಳ ಜಂಜಾಟವಿರದ ಹಗುರ ಹತ್ತಿಯಂಥ ಬಾಲ್ಯ. ಹೊಟ್ಟೆ ತುಂಬಾ ಉಂಡು, ಮಲಗಿದ ಅರ್ಧ ಸೆಕೆಂಡಿಗೆ ನಿದ್ದೆಗೆ ಜಾರುತ್ತಿದ್ದ ನಿರುಮ್ಮಳ ಬಾಲ್ಯ. ಸದಾ ಖುಷಿಖುಷಿಯಾಗಿ, ನಗುನಗುತ್ತ ದೇವರಂತಿದ್ದ ಬಾಲ್ಯ.

ಬಾಲ್ಯ ಇಷ್ಟೊಂದು ಇಷ್ಟವಾಗಲು ಈ ನಿರಾಳತೆ ಕಾರಣವೇ, ನಾ ಬೆಳೆದ ಆಧುನಿಕತೆ ಸೋಕದ ಪರಿಸರ ಕಾರಣವೇ ಗೊತ್ತಿಲ್ಲ. ಆದರೆ ಕಣ್ಮುಚ್ಚಿ ಕೂತು ನೆನಪಿನ ಬಂಡಿ ಏರಿ ಹಿಮ್ಮುಖ ಹೊರಟೆನೆಂದರೆ ರಸ್ತೆಯ ಇಕ್ಕೆಲಗಳಲ್ಲಿ ಝುಳುಝುಳು ಹರಿವ ಸ್ಫಟಿಕ ಸ್ವಚ್ಛ ನೀರು, ದೃಷ್ಟಿ ಹಾಯಿಸಿದೆಲ್ಲೆಡೆ ಹಚ್ಚ ಹಸಿರು, ಪರಿಶುದ್ಧ ಗಾಳಿ, ರಸನಾಗ್ರದಲ್ಲಿ ಬೆರಕೆಯ ಭಯವಿಲ್ಲದ ಅಮ್ಮನ ಕೈ ಅಡುಗೆ. ಎಲ್ಲ ನೈಸರ್ಗಿಕ ರೂಪದಲ್ಲಿ, ನಿಸರ್ಗಕ್ಕೆ ಹತ್ತಿರವಾಗಿ, ಪರಿಸರಕ್ಕೆ ಪೂರಕವಾಗಿ. ಮುಖ್ಯವಾಗಿ ಪ್ಲಾಸ್ಟಿಕ್ ರಹಿತವಾಗಿ.

ಈಗೊಂದು ಮೂವತ್ತು ಮೂವತ್ತೈದು ವರ್ಷಗಳ ಹಿಂದೆ ಈಗಿನಂತೆ ಪ್ಲಾಸ್ಟಿಕ್ ಬಳಕೆ ಎಲ್ಲಿತ್ತು? ಬಹುತೇಕ ಮನೆಗಳಲ್ಲಿ ಹೆಚ್ಚೆಂದರೆ ಒಂದೆರಡು ಪ್ಲಾಸ್ಟಿಕ್ ಡಬ್ಬ, ಕೊಡ, ಬಕೆಟ್, ಪೇಟೆಯ ಮಕ್ಕಳ ಬಳಿ ಒಂದ್ನಾಲ್ಕು ಆಟಿಕೆಗಳು ಇರುತ್ತಿದ್ದವೇನೋ. ಪ್ಲಾಸ್ಟಿಕ್ ಕವರುಗಳು, ಪ್ಯಾಕಿಂಗ್ ವಸ್ತುಗಳಂತೂ ಹೆಚ್ಚುಕಮ್ಮಿ ಇರಲೇ ಇಲ್ಲ. 60ರ ದಶಕದಿಂದಲೇ ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ದಿನಬಳಕೆಯ ಉತ್ಪನ್ನಗಳು ಒಂದೊಂದಾಗಿ ಮಾರುಕಟ್ಟೆಗೆ ಬರುತ್ತಿದ್ದರೂ, ಅವು ಷಹರಗಳ ಸರಹದ್ದನ್ನು ದಾಟಿ ಹೊರಗೆ ಹೆಚ್ಚು ವ್ಯಾಪಿಸಿರಲಿಲ್ಲ. ಇನ್ನು ಟಿವಿ, ರೆಫ್ರಿಜರೇಟರ್​ಗಳಂಥ ಗೃಹಬಳಕೆ ಉತ್ಪನ್ನಗಳು ಕೈಗೆಟುಕುವಷ್ಟು ಜನರ ಜೀವನಮಟ್ಟ ಸುಧಾರಿಸಿರದ ಕಾರಣ ಆ ರೀತಿಯಲ್ಲೂ ಪ್ಲಾಸ್ಟಿಕ್ ಪ್ರಸರಣ ಆಗಿರಲಿಲ್ಲ.

ಇವತ್ತು ಅವು ಇಲ್ಲದೇ ಜೀವನ ಇಲ್ಲ ಎಂಬಂಥ ಪರಿಸ್ಥಿತಿ ಮೂಡಿಸಿರುವ ಈ ಪ್ಲಾಸ್ಟಿಕ್ ಮತ್ತಿತರ ಸಿಂಥೆಟಿಕ್ ವಸ್ತುಗಳು ಇಲ್ಲದೆಯೂ ಆಗಿನ ಬದುಕು ಸುಗಮವಾಗಿಯೇ ಇತ್ತು. ಈಗಿನಂತೆ ‘ನಿಮ್ಮ ಚೀಲಗಳನ್ನು ನೀವೇ ತನ್ನಿ’, ‘ಬಟ್ಟೆಯ ಚೀಲಗಳನ್ನು ಬಳಸಿ’ ಎಂದು ದುಡ್ಡು ಖರ್ಚು ಮಾಡಿ ಜಾಹೀರಾತು ಹಾಕುವ ಅನಿವಾರ್ಯತೆಯೇ ಇಲ್ಲದಂತೆ ಅಂಗಡಿ, ಸಂತೆಗೆ ಹೋಗುವ ಪ್ರತಿಯೊಬ್ಬರೂ ಕೈಲೊಂದೆರಡು ಚೀಲ ಹಿಡಿದೇ ಹೋಗಿರುತ್ತಿದ್ದರು. ಅಗತ್ಯಕ್ಕೆ ತಕ್ಕಂತೆ ಬಟ್ಟೆ ಚೀಲ, ಗೋಣಿ ಚೀಲ. ತಗಡಿನ ಡಬ್ಬ, ಬಾಟಲಿ…. ಹೀಗೆ ಎಲ್ಲ ಸಜ್ಜು ಮಾಡಿಕೊಂಡೇ ತೆರಳಿ ಸಾಮಾನು ತರುತ್ತಿದ್ದರು. ಸಿದ್ಧ ಆಹಾರ ಸಾಮಗ್ರಿಗಳ ಪೊಟ್ಟಣ ಕಟ್ಟಲು ಬಾಡಿಸಿದ ಬಾಳೆ ಎಲೆ, ಮುತ್ತುಗದ ಎಲೆ, ತೇರು ಹೂವಿನ ಎಲೆ ಇತ್ಯಾದಿ ಬಳಕೆಯಾದರೆ, ಅವಲಕ್ಕಿ, ರವೆ, ಕಾಳು ಬೇಳೆಗಳೆಲ್ಲ ಕಾಗದದ ಪೊಟ್ಟಣಗಳಲ್ಲಿ ದೊರೆಯುತ್ತಿದ್ದವು. ಎಣ್ಣೆ, ಬೆಣ್ಣೆ, ದ್ರವ ಪದಾರ್ಥಗಳೆಲ್ಲ ಒಂದೋ ತಗಡಿನ ಡಬ್ಬಿಗಳಲ್ಲಿ, ಇಲ್ಲ ಖರೀದಿದಾರರ ಸ್ಟೀಲ್ ಕರಡಿಗೆ, ಗಾಜಿನ ಬಾಟಲಿಗಳಲ್ಲಿ ಸುರಕ್ಷಿತ ಮನೆ ಮುಟ್ಟುತ್ತಿದ್ದವು. ಈ ಎಲ್ಲ ವಸ್ತುಗಳು ವರ್ಷಾನುಗಟ್ಟಲೇ ಬಳಕೆಯಾಗುವಂಥವೇ. ಇವನ್ನೆಲ್ಲ ಹೀಗೆ ಮರುಬಳಕೆ ಮಾಡಿ ಎಂದು ಯಾರೂ ಹೇಳಿಕೊಟ್ಟಿರಲಿಲ್ಲ, ರೀಸೈಕಲ್ ಎಂಬ ಪದವೇ ಬಹುತೇಕರಿಗೆ ಗೊತ್ತಿರಲಿಲ್ಲ. ಆದರೆ ಸರಿಯಾಗಿರುವ ವಸ್ತುವನ್ನು ಮತ್ತೆ ಮತ್ತೆ ಬಳಸುವುದು ಅತ್ಯಂತ ಸಹಜವಾದ ಜೀವನವಿಧಾನವಾಗಿತ್ತು. ಕಾಗದ, ಎಲೆಗಳು ಸಹ ಉರುವಲಾಗಿ, ತಿಪ್ಪೆ ಗೊಬ್ಬರವಾಗಿ ಇನ್ನೊಂದು ರೀತಿಯಲ್ಲಿ ಉಪಯೋಗವಾಗುತ್ತಿದ್ದವು.

Yesondu mudavittu

ಕಾಳುಮೆಣಸು ಕೊಯ್ಲಲ್ಲಿ ಬಳಸುವ ಕುಕ್ಕೆ

ಹಾಲು ಗಾಜಿನ ಬಾಟಲಿಗಳಲ್ಲಿ ಮನೆಮನೆಗೆ ಸರಬರಾಜಾಗುತ್ತಿತ್ತು ಇಲ್ಲವೇ ಹಾಲಿನವ ಮನೆಯೆದುರೇ ಬಂದು ಹಾಲು ಹಿಂಡಿ ಕೊಟ್ಟು ಹೋಗುತ್ತಿದ್ದ. ಬಟ್ಟೆ ಅಂಗಡಿಯವರು ಕಾಗದದ ಚೀಲಗಳಲ್ಲಿ ಹೊಸ ಬಟ್ಟೆ ಸುತ್ತಿಕೊಡುತ್ತಿದ್ದರು. ಸೋಡಾ, ಜ್ಯೂಸು, ಔಷಧಗಳು ಗಾಜಿನ ಬಾಟಲಿಗಳಲ್ಲಿ, ಬಿಸ್ಕತ್ತುಗಳು ಡಬ್ಬಗಳಲ್ಲಿ ಬರುತ್ತಿದ್ದವು. ಮಕ್ಕಳಿಗೆ ಇಂದಿನಂತೆ ನೂರಾಎಂಟು ಆಟಿಕೆಗಳು ಇರುತ್ತಿರಲಿಲ್ಲ, ಎಂಥ ಸ್ಥಿತಿವಂತ ಕುಟುಂಬಗಳಲ್ಲೂ ನಾಲ್ಕೆಂಟು ಮರದ, ಮಣ್ಣಿನ ಆಟಿಕೆಗಳಿದ್ದರೆ ಹೆಚ್ಚು, ಬಾಕಿ ಏನಿದ್ದರೂ ಕಲ್ಲು, ಮಣ್ಣು, ಕೋಲು, ತೆಂಗಿನ ಹೆಡೆಪಂಟು, ಬಳೆಚೂರು, ಹಳೆ ಪಾತ್ರೆ ಇಂಥವುಗಳನ್ನೇ ಬಳಸಿ ಆಟ. ಅವನ್ನೇ ಸಂರಕ್ಷಿಸಿಟ್ಟುಕೊಂಡು ಮುಂದಿನ ತಲೆಮಾರಿಗೂ ದಾಟಿಸುತ್ತಿದ್ದರು ಜನ!

ನಾನಂತೂ ಶುದ್ಧ ಹಳ್ಳಿಯ ಪರಿಸರದಲ್ಲಿ ಹುಟ್ಟಿ ಬೆಳೆದಿದ್ದರಿಂದ ಹೆಚ್ಚುಕಮ್ಮಿ ಪ್ಲಾಸ್ಟಿಕ್ ರಹಿತ ಬಾಲ್ಯವನ್ನೇ ಕಳೆದೆ. ಮನೆಯಲ್ಲೇ ಬೆಳೆದ ಭತ್ತ-ಅಕ್ಕಿ, ಕಾಳು ಬೇಳೆ, ಹಣ್ಣು ತರಕಾರಿ, ಹಾಲು ಹೈನು… ಅವಲಕ್ಕಿ, ಮಂಡಕ್ಕಿ, ಪುಟಾಣಿಬೇಳೆಯನ್ನು ಸಹ ಅಪ್ಪ ಮನೆಯಲ್ಲಿ ಬೆಳೆದ ಭತ್ತ, ಕಡಲೆಯಿಂದ ಮಾಡಿಸುತ್ತಿದ್ದರು. ಅಂಗಡಿಯಿಂದ ತರುತ್ತಿದ್ದ ಆಹಾರ ಪದಾರ್ಥಗಳೆಂದರೆ ಸಕ್ಕರೆ, ರವೆ, ಉಳ್ಳಾಗಡ್ಡೆ-ಬೆಳ್ಳುಳ್ಳಿಯಂಥ ಕೆಲವೇ ವಸ್ತುಗಳು. ಸೇಬು, ಕಿತ್ತಳೆ, ದ್ರಾಕ್ಷಿಯಂಥ ಆ ದಿನಗಳ ಮಟ್ಟಿಗೆ ಅಪರೂಪವಾಗಿದ್ದ ಹಣ್ಣುಗಳು ಅಷ್ಟೇ. ದಿನದ ಊಟ, ತಿಂಡಿಯೆಲ್ಲ ತೋಟದಿಂದ ತಂದ ಫ್ರೆಶ್ ಬಾಳೆ ಎಲೆಯಲ್ಲಿ. ಬಿರುಬೇಸಿಗೆಯಲ್ಲಿ ಒಳ್ಳೆಯ ಬಾಳೆ ಎಲೆಯ ಅಭಾವವಿದ್ದಾಗ ಅಥವಾ ಮಳೆಗಾಲದಲ್ಲಿ ಜೋರು ಮಳೆಯಿದ್ದು ಉಂಡ ಎಲೆಯನ್ನು ಹೊರಗಿನ ಗೊಬ್ಬರ ಗುಂಡಿಗೆ ಎಸೆಯುವುದು ಕಷ್ಟ ಎಂದಾಗ ಮಾತ್ರ ಸ್ಟೀಲ್ ತಾಟಿನಲ್ಲಿ ಊಟ. ಹಣ್ಣು, ತರಕಾರಿ ಸಿಪ್ಪೆಯೆಲ್ಲ ಹಿತ್ತಲಿನ ದಡ್ಲಿ/ಕಂಚಿ ಗಿಡಗಳ, ತೆಂಗಿನ ಮರಗಳ ಬುಡಕ್ಕೆ. ಮಿಕ್ಕ ಅನ್ನ ಸಾಕು ನಾಯಿಗಳಿಗೆ. ಹೆಚ್ಚಾದ ಮಜ್ಜಿಗೆ, ಆಹಾರ ಪದಾರ್ಥವೆಲ್ಲ ಕಲಗಚ್ಚಿನ ಮೂಲಕ ಕೊಟ್ಟಿಗೆಯ ದನಗಳಿಗೆ. ಬೇಡದ ಗಿಡಗಂಟಿ, ಕಳೆಗಿಡಗಳೆಲ್ಲ ಗೊಬ್ಬರಗುಂಡಿ ಸೇರಿದರೆ, ಒಣ ಕಡ್ಡಿ, ಕೋಲು, ಚಕ್ಕೆಪಕ್ಕೆ ಎಲ್ಲ ಬಚ್ಚಲೊಲೆ ಸೇರುತ್ತಿದ್ದವು. ಇನ್ನು ತೂತುಬಿದ್ದ ತಗಡಿನ ಕೊಡಪಾನ, ಡಬ್ಬಿ, ಮುರಿದ ಹಾಕೆ, ಪಿಕಾಸು ಇತ್ಯಾದಿ ಲೋಹದ ವಸ್ತುಗಳನ್ನೆಲ್ಲ ವರ್ಷಕ್ಕೊಮ್ಮೆ ಬರುವ ರದ್ದಿಯವ ಒಯ್ಯುತ್ತಿದ್ದ. ಇದನ್ನೇನು ಮಾಡಲಿ ಎಂದು ತಲೆ ಕೆಡಿಸಿಕೊಳ್ಳಬೇಕಾದ, ಅಥವಾ ತ್ಯಾಜ್ಯವೆಂದು ಒಗೆದು ಒಂದು ವರ್ಷವಾದ ಮೇಲೂ ಗಾಳಿಗೆ ಹಾರಿಕೊಂಡು ಬಂದು ನಮ್ಮದೇ ಹಿತ್ತಲು, ಪರಿಸರ ಹಾಳು ಮಾಡುವ ಒಂದೇ ಒಂದು ವಸ್ತು ನಮ್ಮಲ್ಲಿರಲಿಲ್ಲ ಆಗ. ಬಹುಶಃ ಆ ದಿನಗಳಲ್ಲಿ ಮಣ್ಣಲ್ಲಿ ಮಣ್ಣಾಗಲು ಅತಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದ ದಿನಬಳಕೆ ವಸ್ತುವೆಂದರೆ ಹವಾಯಿ ಚಪ್ಪಲಿಯೇ ಇರಬೇಕು.

ನಮ್ಮ ಮನೆಯಿಂದ ಬಸ್ ಹಿಡಿಯಲು ಏಳು ಕಿಮೀ ನಡೆಯಬೇಕಿತ್ತು. ಪ್ರಯಾಣ ಹೊರಡುವ ಮುನ್ನ ಅಮ್ಮ ದಾರಿ ಖರ್ಚಿಗೆಂದು ಸ್ಟೀಲ್ ಕರಡಿಗೆಗಳಲ್ಲಿ ಸಿಹಿದೋಸೆ-ತುಪ್ಪ ಕಟ್ಟಿಕೊಂಡರೆ, ದಪ್ಪಗಾಜಿನ ಹಳೆ ಗ್ಲುಕೋಸ್ ಬಾಟಲಿಗಳಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದಳು. ದಾರಿ ಮೇಲೆ ಅಪರೂಪಕ್ಕೆ ಒಂದು ಪಾರ್ಲೆ-ಜಿ ಪೊಟ್ಟಣ ಬಿಟ್ಟರೆ ಇನ್ನೇನೂ ಕೊಳ್ಳುತ್ತಿರಲಿಲ್ಲ, ಅದು ಸಹ ಆಗ ಮೇಣದ ಕಾಗದದ ಪೊಟ್ಟಣಗಳಲ್ಲಿ ಬರುತ್ತಿತ್ತು. ಬೇರೆ ಸಿದ್ಧ ಆಹಾರ ತಿಂಡಿ ಕೊಳ್ಳುವ ಅಭ್ಯಾಸವೇ ಇಲ್ಲದ್ದರಿಂದ ಅದಕ್ಕಾಗಿ ಒಂದಷ್ಟು ಪ್ಯಾಕೇಜಿಂಗ್ ಪರಿಕರ ಬಳಸುವ ಪ್ರಮೇಯವೇ ಎಂದೂ ಬರಲಿಲ್ಲ. ಅಪ್ಪನ ಹಳೆ ಪ್ಯಾಂಟುಗಳನ್ನು ಮೊಣಕಾಲಿನ ಬಳಿ ಕತ್ತರಿಸಿ ಅಮ್ಮ ಚೆಡ್ಡಿ ಹೊಲಿದುಕೊಡುತ್ತಿದ್ದಳು. ಅದನ್ನು ಅಪ್ಪ ಕೃಷಿ ಕೆಲಸ ಮಾಡುವಾಗ ತೊಡುತ್ತಿದ್ದ. ಪ್ಯಾಂಟಿನ ಕೆಳಭಾಗ ಕೈಚೀಲವಾಗಿ ಹೊಸಜೀವ ಪಡೆದು ಸಾಮಾನು ಸರಂಜಾಮು ತರಲು ಉಪಯೋಗವಾಗುತ್ತಿತ್ತು. ಹಳೆ ಸೀರೆಗಳೆಲ್ಲ ದುಪ್ಪಟಿ/ಕೌದಿಗಳಾಗಿ, ಕಾಳು ಕಡಿ ಒಣಗಿಸುವ ಹಾಸುಗಳಾಗಿ, ಬೇಲಿಯಾಗಿ ಬದಲಾದರೆ ನಾವು ಮಕ್ಕಳು ತೊಟ್ಟು ಬಿಟ್ಟ ಬಟ್ಟೆ ನಮಗಿಂತ ಬಡವರಾಗಿದ್ದ ಇನ್ಯಾರೋ ಮಕ್ಕಳ ಮುಖದಲ್ಲಿ ನಗು ಅರಳಿಸುತ್ತಿತ್ತು. ಆಟಕ್ಕಂತೂ ನಾಯಿ, ಬೆಕ್ಕು, ಕರುಗಳು. ಸಂಪಿಗೆ ಹರಳು, ಹುಣಸೆ ಬೀಜ, ಕಪ್ಪೆ ಚಿಪ್ಪು, ತೆಂಗಿನ ಮಿಳ್ಳೆ-ಗೆರಟೆ, ಗೀಜಗದ ಗೂಡು ಏನಿತ್ತು, ಏನಿರಲಿಲ್ಲ!

ಮನೆ ಬಳಕೆಗೆ ಬಿದಿರಿನ ಚಾಪೆ, ಬೆತ್ತ-ಮರದ ಪೀಠೋಪಕರಣ, ಕೃಷಿ ಕೆಲಸಕ್ಕೆ ಬಿದಿರಿನ ಕುಕ್ಕೆ, ಬುಟ್ಟಿ, ಚೂಳಿ ಎಲ್ಲರ ಮನೆಗಳಲ್ಲಿ ಇದ್ದೇ ಇರುತ್ತಿತ್ತು. ತೋಟದಿಂದ ಬರುವಾಗ ಕುಕ್ಕೆ ಇರದಿದ್ದರೂ ಚಿಂತೆ ಇಲ್ಲ, ಅಡಿಕೆಯ ಹೊಂಬಾಳೆ ಅಥವಾ ಹಾಳೆಯ ಕೌಳಿಗೆ ಮಾಡಿಕೊಂಡು ಅದರಲ್ಲಿ ಉದುರಿದ ಅಡಿಕೆ, ಜಾಯಿಕಾಯಿ, ಯಾಲಕ್ಕಿ ತುಂಬಿಕೊಂಡು ತರುವ ಚಾತುರ್ಯ ಕೃಷಿಕರಲ್ಲಿತ್ತು, ಕೂಲಿ ಕೆಲಸಕ್ಕೆ ಹೋಗುವ ಜನ ಬಟ್ಟೆಯ ಗಂಟಿನಲ್ಲಿ ಬುತ್ತಿ ಕಟ್ಟಿಕೊಂಡರೆ, ಮಣ್ಣಿನ ತತ್ರಾಣಿಗಳಲ್ಲಿ ಕುಡಿಯುವ ನೀರು ಒಯ್ಯುತ್ತಿದ್ದರು. ಉಳ್ಳವರು ಸ್ಟೀಲ್ ಅಥವಾ ಹಿತ್ತಾಳೆಯ ಉಗ್ಗ ಬಳಸುತ್ತಿದ್ದರು. ಯಾವುದೂ ಇಲ್ಲದ ಹೊತ್ತಿನಲ್ಲಿ ಎಂಥ ಅಪರಿಚಿತರ ಮನೆಗೆ ಹೋಗಿ ‘ಒಂಚೂರು ನೀರು…’ ಅಂದರೆ ಸಾಕು, ಹಳ್ಳಿ ಜನ ಬೆಲ್ಲ, ನೀರು ನೀಡಿ ಉಪಚರಿಸುತ್ತಿದ್ದರು. ಅನಗತ್ಯ ವಸ್ತುಗಳನ್ನು ಶೇಖರಿಸಿ ಇಡದೇ, ಆ ಹೊತ್ತಿನ ಅಗತ್ಯಕ್ಕೆ ತಕ್ಕಂತೆ ಸರಳವಾಗಿ ಬದುಕುವುದು ಅನಿವಾರ್ಯವೂ ಆಗಿತ್ತು. ಈಗ ಟ್ರೆಂಡ್ ಎನಿಸಿಕೊಂಡಿರುವ ‘ಝೀರೋ ವೇಸ್ಟ್ ಲಿವಿಂಗ್’ ಆಗಿನ ಜೀವನ ಶೈಲಿಯೇ ಆಗಿತ್ತು.

ನಿಧಾನಕ್ಕೆ ಪ್ಲಾಸ್ಟಿಕ್ ನಮ್ಮ ಜೀವನದಲ್ಲಿ ಇಣುಕತೊಡಗಿತು. ಹಗುರ ಎಂದೋ, ಸೋವಿ ಎಂದೋ, ಅನುಕೂಲ ಎಂದೋ… ಅಂತೂ ಒಂದಲ್ಲಾ ಒಂದು ಕಾರಣಕ್ಕೆ ಬಣ್ಣಬಣ್ಣದ ಪ್ಲಾಸ್ಟಿಕ್ ಸಾಮಾನುಗಳು ಒಂದೊಂದಾಗಿ ಮನೆ ತುಂಬತೊಡಗಿದವು. ಮಣಭಾರದ ತಗಡಿನ, ಅಲ್ಯೂಮಿನಿಯಂ ಕೊಡ, ಬಕೆಟ್‍ಗಳೆಲ್ಲ ಹಳೆಪಾತ್ರೆ ಅಂಗಡಿ ಸೇರಿದವು. ಪಾಚಿಗಟ್ಟುತ್ತಿದ್ದ ಸಿಮೆಂಟ್ ಟ್ಯಾಂಕ್ ಜಾಗದಲ್ಲಿ ದೊಡ್ಡ ದೊಡ್ಡ ಪ್ಲಾಸ್ಟಿಕ್ ಡ್ರಮ್ಮುಗಳು ಬಂದವು. ವಿವಿಧ ಗಾತ್ರದ ಪಾರದರ್ಶಕ ಡಬ್ಬಗಳು ಅಡುಗೆಮನೆ ಅಲಂಕರಿಸಿದವು. ಮಳೆಗಾಲದಲ್ಲಿ ಮನೆಗಳ ಮಾಡಿನ ಮೇಲೆ, ಅಟ್ಟದ ಮೇಲೆ ಮೇಣಗಬಟದ (ಟಾರ್ಪಾಲಿನ್) ಬದಲು ಪ್ಲಾಸ್ಟಿಕ್ ಶೀಟುಗಳು ರಾರಾಜಿಸಿದವು. ಹಾಲು, ಜ್ಯೂಸು ಕೊನೆಗೆ ನೀರು ಸಹ ಪ್ಲಾಸ್ಟಿಕ್‍ನೊಳಗೆ ಪ್ಯಾಕ್ ಆಗಿ ಬಂತು. ಅಂಗಡಿಗಳ ಮುಂಬಾಗಿಲಲ್ಲಿ ತೋರಣದ ಹಾಗೆ ಉದ್ದುದ್ದ ಗುಟಕಾ, ಚಿಪ್ಸ್, ಶಾಂಪೂ ಸರಗಳು ಜೋಲತೊಡಗಿದವು. ಆಟಿಕೆಯಾಗಿ, ಬಳೆಯಾಗಿ, ಧ್ವಜ ಕರಪತ್ರವಾಗಿ, ನೋಟು ಸಹ ಆಗಿ ಜನರ ಕೈಯಲ್ಲಿ ರಾರಾಜಿಸತೊಡಗಿದವು. ಚೈನಾಬಜಾರಿನವರ ಅಗ್ಗದ ವಸ್ತುಗಳನ್ನು ಜನ ಮುಗಿಬಿದ್ದು ಕೊಂಡರು. ಊರಿಗೆ ಬಂದವರು ನೀರಿಗೆ ಬಾರರೇ ಎಂದಂತೆ ಬಳಸಿದವರು ಬೀಸಾಡದೇ ಇರುತ್ತಾರೆಯೇ? ನೋಡನೋಡುತ್ತಿದ್ದಂತೆ ಪ್ಲಾಸ್ಟಿಕ್ ತ್ಯಾಜ್ಯ ಚರಂಡಿ, ಕಾಲುವೆ, ಹಳ್ಳಗಳಿಂದ ಹಿಡಿದು ಮಹಾಸಾಗರಗಳ ಉಸಿರು ಕಟ್ಟತೊಡಗಿತು. ಇವತ್ತು ಸಾವಿಲ್ಲದ ಮನೆಯ ಸಾಸಿವೆಯಾದರೂ ಸಿಗಬಹುದು, ಮೈಕ್ರೋಪ್ಲಾಸ್ಟಿಕ್ ಮಾಲಿನ್ಯವಿಲ್ಲದ ತಾಣ ಭೂಮಿಯ ಮೇಲೆ ಸಿಗದು ಎನ್ನುತ್ತಾರೆ ಪರಿಸರ ತಜ್ಞರು. ಕಳೆದ 40ರಿಂದ 50 ವರ್ಷಗಳ ಬಳಕೆ ಮುಂದಿನ ಒಂದು ಸಾವಿರ ವರ್ಷಗಳವರೆಗೂ ಕರಗದ ಪ್ಲಾಸ್ಟಿಕ್ ತ್ಯಾಜ್ಯವನ್ನು ಭೂಮಿಗೆ ಹೊರೆಯಾಗಿಸಿದೆ.

Yesondu mudavittu

ಬಾಳೆಎಲೆಯ ದೊನ್ನೆಗಳು

ಶುರುವಿನಲ್ಲಿ ಅರಿವಿಲ್ಲದೇ ಹೋದರೂ ನಿಧಾನವಾಗಿಯಾದರೂ ‘ಪ್ಲಾಸ್ಟಿಕ್ ಸುಲಭಕ್ಕೆ ಮಣ್ಣಿನಲ್ಲಿ ಕೊಳೆಯದು, ಇದು ಪರಿಸರಕ್ಕೆ ಮಾರಕ’ ಎಂಬುದು ನಮಗೆಲ್ಲ ಗೊತ್ತಾಗಿತ್ತಲ್ಲ. ನಾವೇಕೆ ಅದನ್ನು ಬಿಟ್ಟು ಮತ್ತೆ ಹಳೆಯ ಪರಿಸರಸ್ನೇಹಿ ವಿಧಾನಗಳಿಗೆ ಬದಲಾಗಲಿಲ್ಲ? ಪ್ಲಾಸ್ಟಿಕ್ ಅನ್ನು ನಮ್ಮ ಅನುಕೂಲಕ್ಕೆ, ಅಗತ್ಯಕ್ಕೆ ತಕ್ಕಂತೆ ಸುಧಾರಣೆ ಮಾಡುತ್ತಲೇ ಹೋದೆವೇ ಹೊರತು, ನಿಸರ್ಗಕ್ಕೆ ಅನುಕೂಲವಾಗುವ ರೀತಿಯಲ್ಲಿ ಬದಲಾಯಿಸಲೇ ಇಲ್ಲ. ಇಂದು ಅಂತರಿಕ್ಷನೌಕೆಗಳಿಂದ ಹಿಡಿದು ಮನುಷ್ಯರ ದೇಹದೊಳಗಿನ ಇಂಪ್ಲಾಂಟ್‍ಗಳವರೆಗೆ ಪ್ಲಾಸ್ಟಿಕ್ ಬಳಕೆಯಾಗುತ್ತಿದ್ದು ಅದರ ಬಳಕೆಯನ್ನು ಸಂಪೂರ್ಣ ನಿಲ್ಲಿಸುವುದು ಸಾಧ್ಯವೇ ಇಲ್ಲ ಎಂಬಂಥ ಸ್ಥಿತಿ ಇದೆ. ಆದರೆ ಅನಗತ್ಯ ಬಳಕೆಗೆ ಕಡಿವಾಣ ಹಾಕುವುದು ಕಷ್ಟವೇನಲ್ಲ, ಇಚ್ಛಾಶಕ್ತಿ ಬೇಕಷ್ಟೇ. ಡೈಪರ್, ಸ್ಯಾನಿಟರಿ ನ್ಯಾಪ್‍ಕಿನ್‍ಗಳ ಜಾಗದಲ್ಲಿ ಒದ್ದೆಬಟ್ಟೆ ನಿಭಾಯಿಸುವುದು ಕಷ್ಟವಾಗಬಹುದು, ಆದರೆ ದಾರಿಮೇಲೆ ತಿಂಡಿ, ನೀರು ಖರೀದಿಸಿ ಕುಡಿದು ಕಸ ಬೀಸಾಡುವುದಕ್ಕಿಂತ ಮನೆಯಿಂದ ಒಯ್ದು ಬಳಸುವುದು ಹೊಟ್ಟೆಗೆ, ಜೇಬಿಗೆ, ಪರಿಸರಕ್ಕೆ ಎಲ್ಲದಕ್ಕೂ ಹಿತ. ಪ್ಲಾಸ್ಟಿಕ್ ಜಾಗದಲ್ಲಿ ಬಿದಿರು, ಬೆತ್ತ, ಹತ್ತಿ ಬಟ್ಟೆಯ ಸಾಮಗ್ರಿಗಳನ್ನು ಬಳಸಿದಲ್ಲಿ ಸ್ಥಳೀಯ ಕುಶಲಕರ್ಮಿಗಳಿಗೂ ಲಾಭ.

ಪುಟ್ಟ ಪುಟ್ಟ ಹೆಜ್ಜೆಗಳೂ ಗಮ್ಯ ತಲುಪಿಸಬಲ್ಲವು, ದೃಢವಾಗಿ ನಡೆಯಬೇಕಷ್ಟೇ. ಆಗಲೇ ‘ಏಸೊಂದು ಮುದವಿತ್ತ…’ ಎಂಬುದು ಹಳಹಳಿಕೆಯಾಗದೇ ಕೈಹಿಡಿದು ನಡೆಸುವ ಶಕ್ತಿಯಾಗಬಲ್ಲದು.

ಇದನ್ನೂ ಓದಿ : ಏಸೊಂದು ಮುದವಿತ್ತು : ‘ನೀವು ಮೋದಿ ಪರವೆಂದು ತಿಳಿಯಿತು ನಿಮ್ಮೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಿದ್ದೇನೆ’

Published On - 8:02 pm, Fri, 21 May 21

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್