Rajiv Gandhi Death Anniversary 2021: ಪೈಲಟ್ನಿಂದ ಪ್ರಧಾನಿ, ಸೋನಿಯಾರ ಜತೆ ವಿವಾಹ, ಪಕ್ಷಾಂತರ ತಡೆ ಕಾಯ್ದೆ..ಇಲ್ಲಿವೆ ರಾಜೀವ್ ಗಾಂಧಿ ವ್ಯಕ್ತಿತ್ವದ ವೈವಿಧ್ಯಮಯ ಮುಖಗಳು
Rajiv Gandhi: ವಿಶ್ವಮಟ್ಟದಲ್ಲಿ ಭಾರತವನ್ನು ಮೊದಲ ಪಂಕ್ತಿಯ ನಾಯನನ್ನಾಗಿ ತಯಾರಿಸುವ ಹುಕಿ ಅವರಲ್ಲಿತ್ತು ಎನ್ನುತ್ತಾರೆ ಹಲವು ರಾಜಕೀಯ ಇತಿಹಾಸಕಾರರು. ಇಂದಿನ ಆತ್ಮನಿರ್ಭರ ಭಾರತ ಅರ್ಥಾತ್ ಭಾರತದಲ್ಲೇ ತಯಾರಿಸುವ ಯೋಜನೆಯನ್ನೂ ರಾಜೀವ್ ಗಾಂಧಿ ಕನಸು ಕಂಡಿದ್ದರು. ಆದರೆ ಬೋಫೋರ್ಸ್ ಹಗರಣ ಅವರ ರಾಜಕೀಯ ಜೀವನಕ್ಕೆ ಒಂದು ಕಪ್ಪುಚುಕ್ಕಿಯಾಗಿತ್ತು.
ರಾಜೀವ್ ಗಾಂಧಿ ದೇಶ ಕಂಡ ಅತ್ಯಂತ ಕಿರಿಯ ಪ್ರಧಾನಿ. ತಮ್ಮ 40ನೇ ವಯಸ್ಸಿನಲ್ಲೇ ಪ್ರಧಾನಿ ಪಟ್ಟ ಏರಿದ್ದ ಅವರದ್ದು ಮಹತ್ವಾಕಾಂಕ್ಷೆಯ ವ್ಯಕ್ತಿತ್ವ. ರಾಜೀವ್ ಗಾಂಧಿ ಕೇವಲ ರಾಜಕಾರಣಿಯೊಂದೇ ಆಗಿರಲಿಲ್ಲ. ಅವರದ್ದು ಅತ್ಯಂತ ವೈವಿಧ್ಯಮಯ ವ್ಯಕ್ತಿತ್ವ. ದೇಶದ 6ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರೊಳಗೊಬ್ಬ ವಿಮಾನಯಾನ ಪಟು ಇದ್ದ. ಚಿತ್ರ ಕಲಾವಿದನಿದ್ದ, ಸಂಗೀತ ಉಪಾಸಕನಿದ್ದ ಎಂಬುದು ಈ ತಲೆಮಾರಿನವರಿಗೆ ತಿಳಿಯದ ವಿಚಾರ.
ತಮ್ಮ ಸಹೋದರ ಸಂಜಯ್ ಗಾಂಧಿಯಂತೆ ರಾಜೀವ್ ಗಾಂಧಿಗೆ ರಾಜಕೀಯ ಅಷ್ಟೇನೂ ಆಸಕ್ತಿಕರ ಕ್ಷೇತ್ರವಾಗಿರಲಿಲ್ಲ. ಆದರೆ ಸಂಜಯ್ ಗಾಂಧಿ ವಿಮಾನ ಪ್ರಯಾಣವೊಂದರಲ್ಲಿ ಅನಿರೀಕ್ಷಿತವಾಗಿ ಅಸುನೀಗಿದರು. ಅಧ್ಯಾತ್ಮಿಕ ಕ್ಷೇತ್ರದಲ್ಲೂ ಕೊಂಚ ಒಲುವು ಹೊಂದಿದ್ದ ರಾಜೀವ್ ಗಾಂಧಿಗೆ ಇದೇ ಸಮಯದಲ್ಲಿ ದೇಶದ ವಿವಿಧ ಸಾಧು ಸಂತರ ಮಾರ್ಗದರ್ಶನ ದೊರೆಯಿತು ಎನ್ನುತ್ತದೆ ಇತಿಹಾಸ. ಹಲವು ಸನ್ಯಾನಿಗಳ ಮತ್ತು ಧಾರ್ಮಿಕ ಮುಖಂಡರ ಸಲಹೆಯೇ ಅವರನ್ನು ರಾಷ್ಟ್ರ ರಾಜಕೀಯಕ್ಕೆ ಧುಮುಕಲು ಪ್ರೇರೇಪಿಸಿತು ಎಂದು ಸಹ ಹೇಳಲಾಗುತ್ತದೆ. ರಾಜೀವ್ ಗಾಂಧಿ ರಾಜಕೀಯ ಪ್ರವೇಶ ಸ್ವತಃ ಅವರಿಗೂ, ಅವರ ಕುಟುಂಬಕ್ಕೂ ಮತ್ತು ಕಾಂಗ್ರೆಸ್ಗೂ ಒಂದು ರೀತಿಯಲ್ಲಿ ಅನಿವಾರ್ಯ ಎಂಬಂತಿತ್ತು.
ತಮ್ಮ ಉನ್ನತ ವಿದ್ಯಾಭ್ಯಾಸಕ್ಕೆಂದು ಲಂಡನ್ಗೆ ತೆರಳಿದ್ದ ಅವರು 1966ರಲ್ಲಿ ಭಾರತಕ್ಕೆ ಮರಳಿದರು. ಅದೇ ಸಮಯದಲ್ಲಿ ಇಂದಿರಾ ಗಾಂಧಿ ಭಾರತದ ಪ್ರಧಾನಿಯಾಗಿದ್ದರು. ದೆಹಲಿಯ ಫ್ಲೈಯಿಂಗ್ ಕ್ಲಬ್ನ ಸದಸ್ಯತ್ವ ಪಡೆದ ರಾಜೀವ್ ಗಾಂಧಿ 1970ರಲ್ಲಿ ಏರ್ ಇಂಡಿಯಾದ ಪೈಲೆಟ್ ಆಗಿಯೂ ನೇಮಕಗೊಂಡಿದ್ದರು.
ಸೋನಿಯಾ ಗಾಂಧಿ ಜತೆ ವಿವಾಹ ರಾಜೀವ್ ಗಾಂಧಿ ಇಟಲಿಯಲ್ಲಿದ್ದಾಗ ಸೋನಿಯಾ ಅವರ ಪರಿಚಯವಾಯಿತು. ಪರಿಚಯ ಪ್ರೇಮಕ್ಕೆ ತಿರುಗಲು ಹೆಚ್ಚು ಕಾಲ ತಾಗಲಿಲ್ಲ. 1968ರಲ್ಲಿ, ಮೂರು ವರ್ಷಗಳ ಪ್ರೇಮದ ನಂತರ ರಾಜೀವ್ ಗಾಂಧಿ ಎಟ್ವಿಗೆ ಆಂಟೋನಿಯಾ ಅಲ್ಬಿನಾ ಮಿನೊ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರೇ ಇಂದಿನ ಸೋನಿಯಾ ಗಾಂಧಿ! ಈ ದಂಪತಿಗೆ ಹುಟ್ಟಿದ ಪ್ರಥಮ ಪುತ್ರನೇ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ.
1981ರಲ್ಲಿ ಅಧಿಕೃತವಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ರಾಜೀವ್ ಗಾಂಧಿಯವರನ್ನು ಅಮೇಥಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು. ಮೊದಲ ಚುನಾವಣೆಯಲ್ಲೇ ತಮ್ಮ ಎದುರಾಳಿಯಾಗಿದ್ದ ಶರದ್ ಯಾದವ್ ಅವರನ್ನು 2,37,000 ಮತಗಳಿಂದ ಸೋಲಿಸಿ ಅಭೂತಪೂರ್ವ ವಿಜಯ ದಾಖಲಿಸಿದ್ದರು ರಾಜೀವ್ ಗಾಂಧಿ. ಮುಂದೆ ಕಾಂಗ್ರೆಸ್ನ ರಾಷ್ಟ್ಟೀಯ ಕಾರ್ಯದರ್ಶಿಯೂ ಆಗಿ ಅಧಿಕಾರ ವಹಿಸಿಕೊಂಡ ಅವರಿಗೆ 1982ರಲ್ಲಿ ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸುವ ಹೊಣೆಗಾರಿಕೆಯೂ ಒದಗಿಬಂತು.
ತಾಯಿ ಇಂದಿರಾ ಗಾಂಧಿ ತಮ್ಮ ಅಂಗರಕ್ಷಕರ ಗುಂಡಿಗೇ ಆಹುತಿಯಾದ ನಂತರ ದೇಶದ ರಾಜಕೀಯದಲ್ಲಿ ದೇಶದ ಸಾರರ್ಥ್ಯ ವಹಿಸುವವರು ಯಾರು ಎಂಬ ಪ್ರಶ್ನೆ ಎದುರಾಯಿತು. ಒಮ್ಮೆಲೆ ಸಾರ್ವತ್ರಿಕ ಚುನಾವಣೆ ಎದುರಾಯಿತು. ಕಾಂಗ್ರೆಸ್ ರಾಜೀವ್ ಗಾಂಧಿಯವರ ನಾಯಕತ್ವದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನಗಳನ್ನು ಪಡೆದು ಅಭೂತಪೂರ್ವ ವಿಜಯ ಸಾಧಿಸಿತು. ಅಂದಿನ 508 ಲೋಕಸಭಾ ಕ್ಷೇತ್ರಗಳಲ್ಲಿ 401 ಕ್ಷೇತ್ರಗಳನ್ನು ಮೊಗೆದು ಬಾಚಿಕೊಂಡಿತು. 1984ರಲ್ಲಿ ಇಂದಿರಾ ಗಾಂಧಿಯವರ ಮಗ ರಾಜೀವ್ ಗಾಂಧಿ ಪ್ರಧಾನಿಯಾದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಜೀವ್ ಗಾಂಧಿಯವರ ಸಂಪುಟದಲ್ಲಿ ಸಚಿವರಾಗಿದ್ದರು ಎಂಬುದು ಉಲ್ಲೇಖನೀಯ.
ಪಕ್ಷಾಂತರ ತಡೆ ಕಾಯ್ದೆ ಯಾವುದೇ ಓರ್ವ ಜನಪ್ರತಿನಿಧಿ ಚುನಾವಣೆಯ ನಂತ ಆಯ್ಕೆಯಾದ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಸೇರ್ಪಡೆಗೊಳ್ಳಬಾರದು ಎಂಬ ಕಾನೂನನ್ನು ರಾಜೀವ್ ಗಾಂಧಿ ಜಾರಿಗೊಳಿಸಿದರು. 1985ರಲ್ಲಿ ಜಾರಿಯಾದ ಈ ಕಾನೂನು ಇಂದಿನ ರಾಜಕಾರಣ, ಸರ್ಕಾರ ರಚನೆಯಂತಹ ಪರಿಸ್ಥಿತಿಯಲ್ಲೂ ಉಲ್ಲೇಖಗೊಳ್ಳುತ್ತದೆ ಎಂಬುದು ಗಮನಾರ್ಹ.
ಅಲ್ಲದೇ ಮುಸ್ಲಿಂ ಮಹಿಳೆಯರು ಮದುವೆ ಮತ್ತು ವಿಚ್ಚೇದನಕ್ಕೆ ಸಂಬಂಧಿಸಿಯೂ ಅತ್ಯಂತ ಪ್ರಮುಖ ಕಾನೂನೊಂದನಗ್ನು ಅವರು ಜಾರೊಗೊಳಿಸಿದರು. ಈ ಕಾನೂನು ಇಸ್ಲಾಂನ ಧಾರ್ಮಿಕ ಕಾನೂನಿಗೆ ವಿರುದ್ಧ ಎಂದು ಆಗ ಬಹಳ ವಿವಾದವೂ ಆಗಿತ್ತು. ದೇಶದ ಆರ್ಥಿಕ ಪದ್ಧತಿಗೆ ಸಂಬಂಧಿಸಿ ಹಲವು ಸುಧಾರಣೆಗಳನ್ನು ತರಲು ರಾಜೀವ್ ಗಾಂಧಿ ಪ್ರಯತ್ನಿಸಿದ್ದರು. ಕಾರ್ಪೊರೇಟ್ ಕಂಪನಿಗಳಿಗೆ ಸಬ್ಸಿಡಿ ಕೊಟ್ಟು ಉತ್ಪಾದನೆ ಹೆಚ್ಚಿಸುವ ಪ್ರಯತ್ನ ಅವರದ್ದಾಗಿತ್ತು. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ಅವರು ನೀಡುತ್ತಿದ್ದ ಬೆಂಬಲ ದೇಶವನ್ನು ಹೊಸ ದಿಶೆಯೆಡೆಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿತ್ತು.
ಆತ್ಮ ನಿರ್ಭರ ಭಾರತದ ಕನಸು ವಿಶ್ವಮಟ್ಟದಲ್ಲಿ ಭಾರತವನ್ನು ಮೊದಲ ಪಂಕ್ತಿಯ ನಾಯನನ್ನಾಗಿ ತಯಾರಿಸುವ ಹುಕಿ ಅವರಲ್ಲಿತ್ತು ಎನ್ನುತ್ತಾರೆ ಹಲವು ರಾಜಕೀಯ ಇತಿಹಾಸಕಾರರು. ಇಂದಿನ ಆತ್ಮನಿರ್ಭರ ಭಾರತ ಅರ್ಥಾತ್ ಭಾರತದಲ್ಲೇ ತಯಾರಿಸುವ ಯೋಜನೆಯನ್ನೂ ರಾಜೀವ್ ಗಾಂಧಿ ಕನಸು ಕಂಡಿದ್ದರು. ಆದರೆ ಬೋಫೋರ್ಸ್ ಹಗರಣ ಅವರ ರಾಜಕೀಯ ಜೀವನಕ್ಕೆ ಒಂದು ಕಪ್ಪುಚುಕ್ಕಿಯಾಗಿತ್ತು.
ಎಲ್ಟಿಟಿಇ ಉಗ್ರ ಪಡೆಯನ್ನು ಮಟ್ಟಹಾಕುವ ಉದ್ದೇಶದಿಂದ ಶ್ರೀಲಂಕಾಕ್ಕೆ ಭಾರತೀಯ ಸೈನ್ಯವನ್ನು ಕಳುಹಿಸಿದ್ದ ನಿರ್ಧಾರವೇ ರಾಜೀವ್ ಗಾಂಧಿಯವರ ಜೀವಕ್ಕೆ ಮುಳುವಾಯಿತು. ಎಲ್ಟಿಟಿಟಿಯ ಸದಸ್ಯರು ಸ್ವತಃ ಮಾನವ ಬಾಂಬ್ ಆಗಿ ಪರಿವರ್ತನೆಗೊಂಡು ರಾಜೀವ್ ಗಾಂಧಿಯವರು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಪೆರಂಬದೂರ್ಗೆ ಆಗಮಿಸಿದ್ದರು. ಪ್ರಧಾನಿಯವರಿಗೆ ನಮಸ್ಕರಿಸುವುದಾಗಿ ಕೆಳಗೆ ಬಾಗಿ ರಾಜೀವ್ ಗಾಂಧಿಯವರ ಪಾದಗಳನ್ನು ಸ್ಪರ್ಶಿಸುತ್ತಿದ್ದಂತೆಯೇ ಮಾನವ ಬಾಂಬ್ ಸಿಡಿದಿತ್ತು. ಮಾನವ ಬಾಂಬ್ ಆಗಿದ್ದ ವ್ಯಕ್ತಿಯು ಸೇರಿ ಒಟ್ಟು 14 ಜನರು ಈ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದರು.
ಶ್ರೀಲಂಕಾಕ್ಕೆ ಎಲ್ಟಿಟಿಇ ಉಗ್ರಪಡೆಯ ನಿವಾರಣೆಗೋಸ್ಕರ ಭಾರತದ ಸೇನೆಯನ್ನು ಕಳಿಸುವ ನಿರ್ಧಾರವೇ ರಾಜೀವ್ ಗಾಂಧಿಯವರ ಬಲಿ ಪಡೆದಿತ್ತು. ಪೆರಂಬದೂರ್ನಲ್ಲಿ ಎಲ್ಟಿಟಿಇ ಉಗ್ರರ ಮಾನವ ಬಾಂಬ್ ದಾಳಿಗೆ ರಾಜೀವ್ ಗಾಂಧಿಯವರ ದೇಹ ಛಿದ್ರವಾಗಿತ್ತು. 40ನೇ ವಯಸ್ಸಿನಲ್ಲೀ ಭಾರತದ ಪ್ರಧಾನಿ ಪಟ್ಟ ಅಲಂಕರಿಸಿದ್ದ ಅವರು ದೇಶದ ಬೆಳವಣಿಗೆ ಬಗ್ಗೆ ಅತೀವ ಮಹತ್ವಾಕಾಂಕ್ಷೆ ಹೊಂದಿದ್ದರು ಎಂಬುದು ಅವರು ಹತ್ಯೆಯಾಗದಿದ್ದರೆ ಎಂಬ ಆಸೆಯನ್ನು ಭಾರತೀಯರ ಮನಸ್ಸಿನಲ್ಲಿ ಹುಟ್ಟಿಸುತ್ತದೆ, ಖಚಿತವಾಗಿಯೂ..
ಇದನ್ನೂ ಓದಿ: Anti Terrorism Day 2021 May 21: ನಾಳೆಯೇ ಭಯೋತ್ಪಾದನಾ ವಿರೋಧಿ ದಿನ: ಏನಿದರ ಮಹತ್ವ, ಆಚರಣೆಯ ಹಿಂದಿನ ಕಾರಣವೇನು?
(Rajiv Gandhi Death Anniversary 2021 Rajiv Gandhi Was a Successful Politician, Photographer, Music Lover And Pilot)
Published On - 6:55 am, Fri, 21 May 21