Biodiversity day : ಬಿರುಗಾಳಿ ಎಷ್ಟೇ ಜೋರಾಗಿ ಬೀಸಿದರೂ ಅದೊಮ್ಮೆ ಥಣ್ಣಗಾಗಲೇಬೇಕು!
ಒಮ್ಮೆಯಂತೂ ಅಂಥ ಹೂವಿನ ಮೇಲೆ ಹೊಂಚುಹಾಕಿ ಕುಳಿತಿದ್ದ ಚಿಕ್ಕ ಕ್ರ್ಯಾಬ್ ಸ್ಪೈಡರ್ ದೈತ್ಯ ಪೀಟಿಯನ್ನು ಗಟ್ಟಿಯಾಗಿ ಹಿಡಿದು ಬೇಟೆಯಾಡಿದ್ದ ಅಪರೂಪದ ದೃಶ್ಯ ನೋಡಿ ದಂಗಾದೆ! ಮರುದಿನ ತಿರುಗಾಡುವಾಗ ಅಂಥಾದ್ದೇ ಹೂವು, ಅಂಥಹುದೇ ಕ್ರ್ಯಾಬ್ ಸ್ಪೈಡರ್ ಚಿಟ್ಟೆಯೊಂದನ್ನು ಬಲಿಹಾಕಿ ಪ್ರಾಣತೆಗೆದದ್ದು ಕಾಣಿಸಿ ಕೀಟಲೋಕದ ಅಚ್ಚರಿಗಳಿಗೆ ಬೆರಗಾದೆ!
ತೊಲಗಿತೇನೋ ಎಂದುಕೊಂಡು ಕೊಂಚ ನಿರಾಳವಾಗಿ ಉಸಿರು ಬಿಡುವ ಹೊತ್ತಿನಲ್ಲಿ ಕೊರೋನಾ ಈ ವರ್ಷ ಮತ್ತೆ ಉಲ್ಬಣಿಸಿ ಉಸಿರು ಕಸಿಯುತ್ತಿರುವ, ಎಲ್ಲೆಡೆ ಭಯ ಆತಂಕ ಆವರಿಸಿರುವ ಈ ಹೊತ್ತಿನಲ್ಲಿ, ಇಂಥ ಒಂದು ಸಮಯದಲ್ಲೇ ಕಳೆದ ವರ್ಷ ಊರಲ್ಲಿದ್ದಾಗ ಕಾಡು ಕಣಿವೆ ಹತ್ತಿಳಿಯುತ್ತಾ, ಗದ್ದೆ ಬಯಲು ಅಲೆಯುತ್ತಾ ಸುತ್ತಲಿನ ಪರಿಸರದೊಡನೆ ನಿರಂತರವಾಗಿ ಒಡನಾಡುವ ಅವಕಾಶವೊದಗಿ ಆ ದಿನಗಳ ಸುಂದರ ನೆನಪು, ಅನುಭವವೊಂದನ್ನು ಹಂಚಿಕೊಳ್ಳಬಯಸುವೆ. ನನ್ನ ಮನಸ್ಸಿಗೆ ಸದಾ ಮುದ ನೀಡುವ ಆ ನೆನಪು, ನೆನಪಿನ ಚಿತ್ರಗಳ, ದೃಶ್ಯಗಳ ಮೆಲುಕು ಸದ್ಯ ಎಲ್ಲರ ಮನಸ್ಸನ್ನೂ ಕವಿದಿರುವ ಮಂಕು ಮಬ್ಬನ್ನೂ ತೊಲಗಿಸಿ ಚೂರಾದರೂ ಖುಷಿ ನೀಡೀತು, ನೀಡಲಿ ಎನ್ನುವ ಸದಾಶಯದೊಂದಿಗೆ ಈ ಬರಹ ಮತ್ತು ನಾನೇ ತೆಗೆದ ಫೋಟೋಗಳೂ ನಿಮಗಾಗಿ. -ಶ್ವೇತಾ ಹೊಸಬಾಳೆ
ಪ್ರಕೃತಿಯೆದರೇ ಅಚ್ಚರಿ ಬೆರಗುಗಳ ಆಗರ; ಕಾಲಕಾಲಕ್ಕೆ ತಕ್ಕಂತೆ ಋತುಮಾನಕ್ಕೆ ಹೊಂದಿಕೊಂಡಂತೆ ಬದಲಾವಣೆಗಳು ನಿರಂತರ. ಅದರಲ್ಲಿಯೂ ಮಳೆಗಾಲವೆಂದರೆ ಭೂಮಿಯೊಳಗೆ ಹುದುಗಿರುವ ಅದೆಷ್ಟೋ ವಿಸ್ಮಯಗಳು ಹೊರಗೆ ಬರುವ ಪ್ರಕೃತಿಯ ಪರ್ವಕಾಲ. ಹೀಗೆ ಮಳೆಗಾಲ ಶುರುವಾದಾಗಿನಿಂದ, ಏಳೆಂಟು ಎಕರೆ ವಿಸ್ತೀರ್ಣವಿರುವ ಹಸಿರು ಹುಲ್ಲು ದಟ್ಟವಾಗಿ ಬೆಳೆದಿರುವ ಮನೆಯ ಹತ್ತಿರದ ಹುಲ್ಲುಗಾವಲು ಪ್ರದೇಶ ಅಪಾರ ಜೀವವೈವಿಧ್ಯದ ನೆಲೆವೀಡಾಗಿರುವುದು ಕಳೆದ ಬಾರಿ ನನ್ನ ಗಮನಕ್ಕೆ ಬಂತು. ಅಷ್ಟಷ್ಟು ದಿನಗಳಿಗೆ ಹೊಸಾ ಹೊಸಾ ಸಸ್ಯಗಳು, ಕಳೆ ಹೂಗಳು ನೆಲ ಆರ್ಕಿಡ್‌ಗಳು ಏಳುತ್ತಿರುವುದನ್ನು ನೋಡುವುದೇ ಮನಸ್ಸಿಗೆ ಖುಷಿ ಕೊಟ್ಟಿತು. ಜೊತೆಗೆ ಸೂಕ್ಷ್ಮವಾಗಿ ಗಮನಿಸಿದಾಗ ವಿವಿಧ ಜಾತಿಯ ಕೀಟಗಳು, ಚಿಟ್ಟೆಗಳಿಗೂ ಆ ಪ್ರದೇಶ ಆವಾಸಸ್ಥಾನವಾಗಿರುವುದು ಗೊತ್ತಾಗಿ ಕುತೂಹಲ ಹೆಚ್ಚಿತು. ಸಾಧ್ಯವಾದಾಗಲೆಲ್ಲಾ ಅಲ್ಲಿಗೆ ಹೋಗಿ ಕೀಟಲೋಕದ ವಿಸ್ಮಯಗಳನ್ನು, ಸಸ್ಯವರ್ಗಗಳ ವೈವಿಧ್ಯಗಳನ್ನು ನೋಡುವುದೇ ನನ್ನ ಕಾಯಕವಾಯಿತು.
ನಾ ಮೊದಲಿಗೆ ಕಂಡಿದ್ದು ನೆಲದಿಂದಲೇ ಏಳುವ ಹೂವುಗಳಾದ ನೆಲಸಂಪಿಗೆಗಳು. ಒಂದು, ಎರಡು, ಮೂರು, ನಾಲ್ಕು ಬಿಳಿಹೂಗಳನ್ನೊಂಗೊಂಡಿರುವ ಗೊಂಚಲುಗಳು; ಮಧ್ಯೆ ಕೆನ್ನಗೆ ಅರಿಷಿಣ ಬಳಿದುಕೊಂಡಂತಿರುವ ಒಂದು ಪಕಳೆಯ ಆ ಹೂವು ನೆಲದ ತುಂಬಾ ಅಲ್ಲಲ್ಲಿ ಹರಡಿಕೊಳ್ಳಲಾರಂಭಿಸಿತ್ತು. ನಂತರ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಮಣ್ಣು ಹಸಿರಿನ ಮಧ್ಯೆ ನಕ್ಷತ್ರದಂತೆ ಕಂಗೊಳಿಸುತ್ತಿದ್ದ ಎರಡು ರೀತಿಯ ಹಳದಿ ಬಣ್ಣದ ಹೂಗಳು ಕಾಣಿಸಿ ಮನಸೆಳೆದವು. ದಿನಕಳೆದು ಮಳೆ ಹೆಚ್ಚು ಬೀಳುತ್ತಾ ಹಸಿರು ಹುಲ್ಲಿನ ಹಾಸು ದಟ್ಟವಾದಾಗ ಅದೆಲ್ಲಿದ್ದರೋ ಇದ್ದಕ್ಕಿದ್ದಂತೆ ಶ್ವೇತಕನ್ನಿಕೆಯರು ಪ್ರತ್ಯಕ್ಷವಾಗಿದ್ದರು! ಹೆಬನೇರಿಯ ಎಂಬ ಹೆಸರಿನ ಅವು ಬಿಳಿ ಬಣ್ಣದ ನೆಲ ಆರ್ಕಿಡ್‌ಗಳಾಗಿದ್ದು ಭೂಮಿಯಿಂದ ಎದ್ದು ನಿಷ್ಕಲ್ಮಷ ನಗೆ ಬೀರುತ್ತಾ ನಿಂತಿದ್ದವು. ಸಂಜೆ ಹೊತ್ತು ತಂಪು ಗಾಳಿ ಬೀಸಿದಾಗೆಲ್ಲಾ ಹಸಿರು ಹುಲ್ಲಿನ ನಡುವೆ ಹೊಯ್ದಾಡುತ್ತಾ ತಲೆ ಅಲ್ಲಾಡಿಸುತ್ತಿದ್ದ ಆ ಬಿಳಿಹೂಗಳು ಶ್ವೇತಕನ್ನಿಕೆಯರೇ ಆಕಾಶದಿಂದ ಧರೆಗಿಳಿದು ಬಂದು ನೃತ್ಯ ಮಾಡುತ್ತಿರುವಂತೆ ಭಾಸವಾಗುತ್ತಿತ್ತು. ಒಂದು ತಿಂಗಳ ನಂತರ ಅವು ಸ್ವಲ್ಪ ಮರೆಯಾಗುತ್ತಿದ್ದಂತೆ ನೆಲಬಾಗೆ ಎಂಬ ಹೆಸರಿನ ಹಳದಿ ಸುಂದರಿಯರು ಚಿಕ್ಕ ಚಿಕ್ಕ ಗಿಡಗಳಲ್ಲಿ ಅರಳಿ ವರ್ಡ್ಸ್ವರ್ತ್ ಕವಿಯ ಡ್ಯಾಫೋಡಿಲ್ಸ್ ಹೂಗಳನ್ನು ನೆನಪಿಸಿದವು. ಜೊತೆಗೆ ಸ್ವಲ್ಪ ದೊಡ್ಡ ಗಿಡಗಳಲ್ಲಿ ತಿಳಿ ನೇರಳೆ ಬಿಳಿ ಮಿಶ್ರಬಣ್ಣದ ಚಿಕ್ಕ ಚಿಕ್ಕ ಹೂಗಳನ್ನೊಳಗೊಂಡ ಭಾರಂಗಿ ಹೂವಿನ ಗೊಂಚಲೂ ಕಾಣಿಸಿ ಜೇನುಗಳು ಕೀಟಗಳಿಗೆ ಆಹಾರ ಒದಗಿಸುತ್ತಿತ್ತು. ಇಷ್ಟಲ್ಲದೇ ತಿಳಿಗುಲಾಬಿ ಬಣ್ಣದ ಚಿಕ್ಕ ಚಿಕ್ಕ ಹೂಗಳನ್ನೊಳಗೊಂಡ ಬಳ್ಳಿಯನ್ನು ಹೋಲುವ ಸಸ್ಯಗಳು ನೆಲಮಟ್ಟದಲ್ಲಿ ಹರಡಿಕೊಂಡಿದ್ದವು. ಜೊತೆಗೆ ಮತ್ತೊಂದು ಜಾತಿಯ ಗುಲಾಬಿ ಬಣ್ಣದ ಹೂಗಳು ತಲೆ ಎತ್ತಿ ಅವುಗಳ ಮೇಲೆ ಚಿಟ್ಟಗಳು ಕುಳಿತು ಗಾಳಿಗೆ ತಲೆ ಆಡಿಸುತ್ತಾ ಆಕರ್ಷಕವಾಗಿ ಕಾಣುತ್ತಿದ್ದವು.
ಒಮ್ಮೆಯಂತೂ ಅಂಥ ಹೂವಿನ ಮೇಲೆ ಹೊಂಚುಹಾಕಿ ಕುಳಿತಿದ್ದ ಚಿಕ್ಕ ಕ್ರ್ಯಾಬ್ ಸ್ಪೈಡರ್ ದೈತ್ಯ ಪೀಟಿಯನ್ನು ಗಟ್ಟಿಯಾಗಿ ಹಿಡಿದು ಬೇಟೆಯಾಡಿದ್ದ ಅಪರೂಪದ ದೃಶ್ಯ ನೋಡಿ ದಂಗಾದೆ! ಮರುದಿನ ತಿರುಗಾಡುವಾಗ ಅಂಥಾದ್ದೇ ಹೂವು, ಅಂಥಹುದೇ ಕ್ರ್ಯಾಬ್ ಸ್ಪೈಡರ್ ಚಿಟ್ಟೆಯೊಂದನ್ನು ಬಲಿಹಾಕಿ ಪ್ರಾಣತೆಗೆದದ್ದು ಕಾಣಿಸಿ ಕೀಟಲೋಕದ ಅಚ್ಚರಿಗಳಿಗೆ ಬೆರಗಾದೆ! ಅರ್ಧ ಮೊಳ ಬೆಳೆದಿದ್ದ ಹುಲ್ಲುಗಳಲ್ಲಿ ಲೀಫ್ ಬೀಟಲ್ಗಳ ಮೇಲೆ ಕೆಳಗೆ ಓಡುವುದೂ, ಅತ್ಯಾಕರ್ಷಕ ಬಣ್ಣ ವಿನ್ಯಾಸವನ್ನು ಹೊಂದಿ ಪತಂಗಗಳಾಗಿ ರೂಪಾಂತರ ಹೊಂದುವ ಕಂಬಳಿಹುಳಗಳೂ, ಹೆಸರೇ ಗೊತ್ತಿಲ್ಲದ ಇದುವರೆಗೂ ನೋಡಿರದ ವಿಚಿತ್ರ ಕೀಟಗಳೂ ಕಣ್ಣಿಗೆ ಬಿದ್ದವು. ಜೊತೆ ಜೊತೆಗೆ ತಿಳಿಗುಲಾಬಿ, ಬಿಳಿ, ನೇರಳೆ, ಬಣ್ಣದ ಚಿಕ್ಕ ಚಿಕ್ಕ ಹೂಗಳೂ ಅಲ್ಲಲ್ಲಿ ಹಸಿರಿನ ಮಧ್ಯೆ ಹುದುಗಿ ದರ್ಶನ ನೀಡಿದ್ದವು.
ಹುಲ್ಲುಗಾವಲಿನ ಆರಂಭದಲ್ಲಿದ್ದ ಬೃಹತ್ ಆಲದ ಮರದ ಸಮೀಪ ನಾನಾ ನಮೂನೆಯ ಹಸಿರು ಗಿಡಗಳು, ಹುಲ್ಲಿನ ತೆನೆಗಳೂ ಹುಟ್ಟಿ ಸೃಷ್ಟಿಯ ಅಂದಕ್ಕೆ ಸಾಕ್ಷಿಯಾಗಿದ್ದವು. ಆಗಸ್ಟ್ ಬಂದಾಗ ಕಾಲಿಟ್ಟಲೆಲ್ಲಾ ಒಂದು ರೀತಿಯ ಸಣ್ಣ ಸಣ್ಣ ಗಿಡಗಳು ಹುಟ್ಟಿದ್ದು ಕಾಣಿಸಿ ಅವುಗಳಲ್ಲಿ ಗುಲಾಬಿ ಬಣ್ಣದ ಆರ್ಕಿಡ್ ರಚನೆಯ ಹೂಗಳು ಜೋತಾಡುತ್ತಿದ್ದು ಹೂ ಕಣಿವೆಯನ್ನು ನೆನಪಿಸಿದವು. ಆನ್ಲಿಯಾ ಇಂಡಿಕಾ ಗಿಡಗಳ ಒಂದೇ ಹೂಗೊಂಚಲಲ್ಲಿ ಕೀಟಗಳೂ ಚಿಟ್ಟೆಗಳೂ ಒಟ್ಟೊಟ್ಟಿಗೇ ಕುಳಿತು ಮಕರಂದ ಹೀರುವಲ್ಲಿ ಮಗ್ನವಾಗಿದ್ದವು. ಗಣೇಶನ ಹಬ್ಬ ಹತ್ತಿರವಾಗುತ್ತಿದ್ದಂತೆ ಗೌರಿಹೂವು ಎಂದು ಕರೆಸಿಕೊಳ್ಳುವ ಕೆಂಪು-ಹಳದಿ ಮಿಶ್ರಿತ ಬೆಂಕಿಯ ಜ್ವಾಲೆಯನ್ನು ಹೋಲುವ ಅಗ್ನಿಶಿಖೆ ಹೂಗಳು ಕಾಣಿಸಿ ಅವುಗಳ ವರ್ಣವಿನ್ಯಾಸ ಎಷ್ಟು ಚೆಂದ ಎನಿಸಿತು. ಮಾರ್ಚ್ ತಿಂಗಳ ಕೊನೆ, ಏಪ್ರಿಲ್‌ನಿಂದ ಶುರು ಆಗಿ ಸೆಪ್ಟೆಂಬರ್‌ವರೆಗೆ ಐದಾರು ತಿಂಗಳಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಬಗೆಯ ಕಳೆಹೂಗಳು, ಲೆಕ್ಕವಿಲ್ಲದಷ್ಟು ಸಸ್ಯಗಳು ಬಳ್ಳಿಗಳು ಪ್ರಕೃತಿಯ ಮಳೆಗಾಲದ ಅತಿಥಿಗಳಾಗಿ ಆ ಹುಲ್ಲುಗಾವಲಿನಲ್ಲಿ ಜನ್ಮತಳೆದಿದ್ದವು!
ಹಬ್ಬಗಳು ಬಂದಾಗ ಊರಿಗೆ ಹೋಗಿ ನಾಲ್ಕುದಿನ ಇದ್ದು ಬರುವುದು ಬೇರೆ; ತಿಂಗಳಾನುಗಟ್ಟಲೆ ಅಲ್ಲಿಯೇ ನೆಲೆಸಿ ಪ್ರಕೃತಿಯ ಅಚ್ಚರಿಗಳನ್ನು ಕಾಲಾಂತರದಲ್ಲಿ ಗಮನಿಸುವ ಖುಷಿಯೇ ಬೇರೆ. ಕಳೆದ ಬಾರಿ ಅಂಥ ಅವಕಾಶ ನನಗೆ ಒದಗಿಸಿದ್ದು ಲಾಕ್‌ಡೌನ್ ಮತ್ತು ಕರೋನಾ ಹಾವಳಿ. ಎಷ್ಟೋ ವರ್ಷಗಳ ನಂತರ ಮತ್ತೆ ಊರಿನ ಮಳೆಗಾಲದಲ್ಲಿ ನೆನೆಯುತ್ತಾ, ನಿಸರ್ಗಕ್ಕೆ ಹತ್ತಿರವಾಗುತ್ತಾ ಸೂಕ್ಷ್ಮಗಳನ್ನು ಗಮನಿಸುತ್ತಾ ಕಾಲ ಕಳೆದಿದ್ದರಿಂದ ಕಲಿತಿದ್ದು ಬಹಳ. ನೋಡಿದ್ದು ವಿಶಿಷ್ಟ ಮತ್ತು ವಿರಳ.
ಅಚ್ಚರಿಯೆಂದರೆ ಬೆಂಗಳೂರಿಗೆ ಬಂದು ಮತ್ತೆ ಒಂದು ತಿಂಗಳ ನಂತರ ಆಕಸ್ಮಿಕವಾಗಿ ಊರಿಗೆ ಹೋಗುವ ಅವಕಾಶವೊದಗಿ, ಹೋದ ತಕ್ಷಣ ಆ ಹುಲ್ಲುಗಾವಲಿಗೆ ಓಡಿದರೆ ಮತ್ತೆ ಹೊಸಾ ಹೊಸಾ ಹೂಗಳರಳಿದ್ದವು! ಅವುಗಳ ಮೇಲೆ ಚಿತ್ರ ವಿಚಿತ್ರ ಕೀಟಗಳು ಕುಳಿತು ತಮ್ಮ ಕಾಯಕದಲ್ಲಿ ತೊಡಗಿದ್ದವು. ಮಧ್ಯಬಾಗದಲ್ಲಿದ್ದ ಗುಡ್ಡೆಗೇರುಹಣ್ಣಿನ ಮರದಲ್ಲಿದ್ದ ಮಿಡಿಗಳು ಬಲಿತಕಾಯಿಗಳಾಗಿದ್ದವು. ಪ್ರಕೃತಿಯಲ್ಲಿ ಆಯಾ ಕಾಲಕ್ಕೆ ಏನೇನೂ ಆಗಬೇಕೋ ಅದೆಲ್ಲಾ ಕರಾರುವಕ್ಕಾಗಿ ಆ ಕಾಲ ಬರುವವರೆಗೆ ಕಾದು ಆಗುತ್ತವೆ; ಮತ್ತು ಎಷ್ಟೋ ವರ್ಷಗಳಿಂದ ಹಾಗೇಯೇ ಆಗುತ್ತಾ ನಡೆಯುತ್ತಾ ನಿರಂತರತೆಯನ್ನು ಕಾಯ್ದುಕೊಂಡಿರುತ್ತವೆ. ಇಂತಿಂಥ ತಿಂಗಳು ಬಂದಾಗ ಇಂತಿಂಥ ಹೂಗಳು ಅರಳಬೇಕು, ಹುಲ್ಲು, ಸಸ್ಯಗಳು ಏಳಬೇಕು, ಚಿಗುರು ಕಾಯಿಗಳು ಬಲಿಯಬೇಕು ಅವುಗಳಿಗೆ ಹೊಂದಿಕೊಂಡಂತೆ ಕೀಟಗಳ ಜೀವನ ಚಕ್ರ ಈ ಎಲ್ಲವೂ ಒಂದು ಲಯದಲ್ಲಿ ನಡೆಯುತ್ತಿರುತ್ತವೆ; ಪುನಾರವರ್ತನೆಯಾಗುತ್ತಿರುತ್ತವೆ; ನಾವು ಸೂಕ್ಷ್ಮವಾಗಿ ಗಮನಿಸಿರುವುದಿಲ್ಲ ಅಷ್ಟೇ. ಕಳೆದ ವರ್ಷ ಊರಿನ ಮನೆಯ ಹತ್ತಿರದ ಆ ಹುಲ್ಲುಗಾವಲು ಭೂಮಿಯ ಮೇಲಿನ ಪ್ರಕೃತಿಯ ಜೀವವೈವಿಧ್ಯತೆಯ ಸಣ್ಣ ತುಣುಕಾಗಿ, ಮಾದರಿಯಾಗಿ ನನಗೆ ಗೋಚರಿಸಿತು. ಇಡೀ ವಿಶ್ವಕ್ಕೆ ಹೋಲಿಸಿದರೆ ಅದು ತೀರಾ ತೀರಾ ಸಣ್ಣ ಕಣದ ರೀತಿ! ಅಷ್ಟು ಸಣ್ಣ ಜಾಗದಲ್ಲೇ ಎಷ್ಟೆಲ್ಲಾ ಜೀವಿಗಳು, ವೈವಿಧ್ಯತೆ ಇರುವಾಗ ಇನ್ನು ಈ ಬೃಹತ್ ವಿಶ್ವ, ಭೂಮಿಯಲ್ಲಿ ಅದೆಷ್ಟು ಏನೆಲ್ಲಾ ಜೀವಜಂತು ಪ್ರಾಣಿಪಕ್ಷಿಕೀಟ ಸಂಕುಲಗಳಿರಬಹುದು! ಅವೆಲ್ಲಾ ಎಷ್ಟೋ ಮಿಲಿಯ ವರ್ಷಗಳಿಂದ ಭೂಮಿಯ ಮೇಲೆ ಬದುಕಿ ಬಾಳುತ್ತಿರುತ್ತವೆ; ಈ ಭೂಮಿಯ ಮೇಲೆ ಮನುಷ್ಯನಿಗೆ ಮಾತ್ರ ಹಕ್ಕಿಲ್ಲ, ಅವನಿಗೊಂದೇ ಸೇರಿದ್ದಲ್ಲ ಎಂದು ಸಾರಿ ಹೇಳುತ್ತಿರುತ್ತವೆ. ಆದರೂ ಮನುಷ್ಯ ಮಾತ್ರ ತನ್ನ ಬುದ್ಧಿವಂತಿಕೆಯ ಅಹಂಕಾರದಲ್ಲಿ ಮೆರೆಯುತ್ತಿರುತ್ತಾನೆ. ಪ್ರಕೃತಿಗೆ ಹತ್ತಿರವಾದರೆ, ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡರೆ ಕೊನೆಗೆ ಏನಾಗದಿದ್ದರೂ ನಮ್ಮ ಪ್ರಜ್ಞೆ ವಿಶಾಲವಾಗುವುದಂತೂ ಖಚಿತ ಎಂದು ಕಳೆದ ವರ್ಷ ಆ ಹುಲ್ಲುಗಾವಲಿನ ಒಡನಾಟದಿಂದ ನನಗೆ ಮನದಟ್ಟಾಯಿತು.
ಈ ವರ್ಷ, ಈಗ ಬೆಂಗಳೂರಿನಲ್ಲೇ ಇದ್ದೇನೆ; ಅಲ್ಲಿ ಆ ಹುಲ್ಲುಗಾವಲಿನಲ್ಲಿ ಮತ್ತೆ ಹೂವುಗಳು ಅರಳಲು ಶುರುವಾಗಿರಬಹುದು; ಹೊಸ ಕೀಟಗಳು ಅವತರಿಸಿರಬಹುದು, ಚಿಟ್ಟೆಗಳು ಉತ್ಸಾದೊಂದಿಗೆ ನಲಿಯುತ್ತಿರಬಹದು. ಒಂದಂತೂ ಸತ್ಯ, ಯಾವ ಸ್ಥಿತಿಯೂ ಶಾಶ್ವತವಲ್ಲ; ದಿಸ್ ಟೂ ವಿಲ್ ಪಾಸ್… ಬಿರುಗಾಳಿ ಎಷ್ಟೇ ಬಿರುಸಾಗಿ ಬೀಸಿದರೂ ಕೊನೆಗೊಮ್ಮೆ ತಣ್ಣಗಾಗಲೇಬೇಕು; ಕಷ್ಟಗಳನ್ನು ಅರೆದು ಕುಡಿದು ಅನುಭವಿಸಿ ನೋಡಿ ಮನಸ್ಸು ಮತ್ತಷ್ಟು ಮಾಗಿ ಪಾಠಗಳನ್ನು ಕಲಿತು ಶಾಂತವಾಗಿ ಮತ್ತೆ ಹೊಸ ದೃಷ್ಟಿ ಸೃಷ್ಟಿಗಳೊಂದಿಗೆ ಬದುಕು ಅರಳಲೇಬೇಕು.
ಇದನ್ನೂ ಓದಿ : ಶರಣು ಮಣ್ಣಿಗೆ : ಆಗುವುದೆಲ್ಲಾ ಎಷ್ಟೊಂದು ಒಳ್ಳೆಯದಕ್ಕೆ! ಇದೋ ನಿನಗೆ ವಂದನೆ ನನ್ನೊಳು ಹೊಕ್ಕ ರೋಗವೇ..
Published On - 3:07 pm, Sat, 22 May 21