ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಗುರುದೇವ ಶ್ರೀ ಶ್ರೀ ರವಿ ಶಂಕರರೊಂದಿಗೆ ಮಹಾಶಿವರಾತ್ರಿ ಮಹೋತ್ಸವ

ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಮಹಾಶಿವರಾತ್ರಿ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ. ಗುರುದೇವ ಶ್ರೀ ಶ್ರೀ ರವಿ ಶಂಕರರ ಸಾನ್ನಿಧ್ಯದಲ್ಲಿ ರುದ್ರಪೂಜೆ, ಭಜನೆ ಮತ್ತು ಮಧ್ಯರಾತ್ರಿಯ ಧ್ಯಾನ ಕಾರ್ಯಕ್ರಮಗಳು ಜರುಗಲಿವೆ. ಲಕ್ಷಾಂತರ ಭಕ್ತರು ಭಾಗವಹಿಸುವ ಈ ಆಚರಣೆ ಅಂತರಂಗದ ಶಾಂತಿ, ಸಮೂಹ ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ಪುನಶ್ಚೇತನವನ್ನು ಪ್ರತಿಬಿಂಬಿಸಲಿದೆ.

ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಗುರುದೇವ ಶ್ರೀ ಶ್ರೀ ರವಿ ಶಂಕರರೊಂದಿಗೆ ಮಹಾಶಿವರಾತ್ರಿ ಮಹೋತ್ಸವ
ಮಹಾಶಿವರಾತ್ರಿ

Updated on: Feb 14, 2026 | 4:01 PM

ಬೆಂಗಳೂರು, ಫೆಬ್ರವರಿ 13: ಆರ್ಟ್ ಆಫ್ ಲಿವಿಂಗ್​​ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಈ ವರ್ಷವೂ ಮಹಾಶಿವರಾತ್ರಿ ಮಹೋತ್ಸವವನ್ನು ಅತ್ಯಂತ ಭಕ್ತಿಭಾವದಿಂದ ಮತ್ತು ವೈದಿಕ ಸಂಪ್ರದಾಯದಂತೆ ಆಚರಿಸಲಾಗುತ್ತಿದೆ. ರಾತ್ರಿಯಿಡೀ ನಡೆಯಲಿರುವ ಈ ಮಹೋತ್ಸವದಲ್ಲಿ ರುದ್ರಪೂಜೆ, ಭಜನೆ, ಧ್ಯಾನ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಭಾರತದೆಲ್ಲೆಡೆಯಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಗುರುದೇವ ಶ್ರೀ ಶ್ರೀ ರವಿ ಶಂಕರರು ಅವರ ಸಾನ್ನಿಧ್ಯದಲ್ಲಿ ನಡೆಯುವ ಈ ಪವಿತ್ರ ಸಮಾರಂಭವು ಅಂತರಂಗದ ಶಾಂತಿ, ಸಮೂಹ ಪ್ರಾರ್ಥನೆ ಮತ್ತು ಆತ್ಮಪುನಶ್ಚೇತನದ ಅನನ್ಯ ಅನುಭವವನ್ನು ನೀಡಲಿದೆ.

ಮಹಾಶಿವರಾತ್ರಿಯು ವೈದಿಕ ಪರಂಪರೆಯಲ್ಲಿ ಅತ್ಯಂತ ಪವಿತ್ರವಾದ ರಾತ್ರಿಯಾಗಿ ಪರಿಗಣಿಸಲ್ಪಡುತ್ತದೆ. ಇದು ಆಳವಾದ ವಿಶ್ರಾಂತಿ, ಅರಿವಿನ ಉನ್ನತ ಸ್ಥಿತಿ ಮತ್ತು ಆಂತರಿಕ ಪರಿವರ್ತನೆಗೆ ದಾರಿ ಮಾಡಿಕೊಡುವ ವಿಶಿಷ್ಟ ಸಮಯವೆಂದು ಗುರುತಿಸಲಾಗಿದೆ. ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ರಾತ್ರಿಯಿಡೀ ನಡೆಯುವ ಆಚರಣೆ ವೈದಿಕ ವಿಧಿ-ವಿಧಾನಗಳು ಮತ್ತು ಹೃದಯಸ್ಪರ್ಶಿಯಾದ ಸಂಗೀತದಿಂದ ಉಂಟಾಗುವ ಚೈತನ್ಯಮಯ ವಾತಾವರಣಕ್ಕಾಗಿ ಜಾಗತಿಕವಾಗಿ ಪ್ರಸಿದ್ಧವಾಗಿದೆ. ಈ ಮಹೋತ್ಸವವು ಲಕ್ಷಾಂತರ ಭಕ್ತರ ಮನಸ್ಸಿನಲ್ಲಿ ಆಧ್ಯಾತ್ಮಿಕ ಸ್ಪಂದನೆಯನ್ನು ಉಂಟುಮಾಡುತ್ತದೆ.

Art Of Living Mahashivaratri 2026

ಶಿವರಾತ್ರಿಯ ಮಹತ್ವವನ್ನು ವಿವರಿಸುತ್ತಾ ಗುರುದೇವ ಶ್ರೀ ಶ್ರೀ ರವಿ ಶಂಕರರು, “ಶಿವರಾತ್ರಿಯು ಭೌತಿಕ ಜಗತ್ತು ಮತ್ತು ನಮ್ಮ ಆಂತರ್ಯದ ಅಲೌಕಿಕ ಜಗತ್ತಿನ ನಡುವಿನ ಸೇತುವೆ. ಇದು ಕೇವಲ ಪದ್ಧತಿ ಅಥವಾ ಮನರಂಜನೆಗಾಗಿ ಅಲ್ಲ; ಇದು ಧ್ಯಾನಸ್ಥ ಅರಿವಿನ ಸ್ಥಿತಿಗೆ ಪ್ರವೇಶಿಸುವ ಅವಕಾಶ. ಸಂತೋಷದ ಹಿಂದೆ ಓಡುವುದರಿಂದ ದಣಿವು ಬರುತ್ತದೆ, ಆದರೆ ಆತ್ಮದಲ್ಲಿ ವಿಶ್ರಾಂತಿ ಪಡೆದಾಗ ನಿಜವಾದ ಬಲ ಮತ್ತು ಸಂತೋಷ ದೊರೆಯುತ್ತದೆ. ಮಹಾಶಿವರಾತ್ರಿ ಅಂದರೆ ನಿಮ್ಮೊಳಗಿನ ಆಳವಾದ ವಿಶ್ರಾಂತಿಯ ಸ್ಥಿತಿಗೆ ತಲುಪುವುದು,” ಎಂದು ತಿಳಿಸಿದ್ದಾರೆ.

ಈ ಮಹೋತ್ಸವದ ಪ್ರಮುಖ ಆಕರ್ಷಣೆ ಮಹಾರುದ್ರ ಪೂಜೆ. ಇದು ಭಗವಾನ್ ಶಿವನ ಕರುಣಾಮಯ ರೂಪವಾದ ರುದ್ರನ ಆರಾಧನೆಗೆ ಸಮರ್ಪಿತವಾದ ಶಕ್ತಿಶಾಲಿ ವೈದಿಕ ವಿಧಿ. ಶ್ರೀರುದ್ರಂ ಪಠಣದೊಂದಿಗೆ ನಡೆಯುವ ಈ ಪೂಜೆ, ಪರಿಸರವನ್ನು ಶುದ್ಧಗೊಳಿಸಿ ಸಮೂಹ ಚೈತನ್ಯವನ್ನು ಮೇಲಕ್ಕೆತ್ತುತ್ತದೆ ಎಂದು ನಂಬಲಾಗಿದೆ. ಗುರುದೇವರ ಸಾನ್ನಿಧ್ಯದಲ್ಲಿ ನಡೆಯುವ ಈ ವಿಧಿ ನಕಾರಾತ್ಮಕತೆಯ ವಿಲಯ ಮತ್ತು ಉನ್ನತ ಚೈತನ್ಯದ ಜಾಗೃತಿಯ ಸಂಕೇತವಾಗಿದೆ.

ಸಂಜೆ 7:15ರಿಂದ ಭಜನೆಗಳೊಂದಿಗೆ ಕಾರ್ಯಕ್ರಮ ಆರಂಭವಾಗುತ್ತದೆ. ನಂತರ ಮಹಾರುದ್ರ ಪೂಜೆ, ಗುರುದೇವರ ಪ್ರವಚನ ಹಾಗೂ ರಾತ್ರಿ 11:30ಕ್ಕೆ ವಿಶೇಷ ಮಧ್ಯರಾತ್ರಿಯ ಧ್ಯಾನ ನಡೆಯಲಿದೆ. ಬೆಳಿಗ್ಗೆ 4:00ರಿಂದ ಮಹಾರುದ್ರ ಹೋಮ ನಡೆಯಲಿದೆ. ಶಿವರಾತ್ರಿಯಂದು ಸುಮಾರು 2.5 ರಿಂದ 3 ಲಕ್ಷ ಭಕ್ತರಿಗೆ ಪ್ರಸಾದ ವಿತರಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಸಾವಿರಾರು ಸೇವಾಕರ್ತರು ಭಕ್ತರಿಗೆ ಸೌಲಭ್ಯ ಒದಗಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೇ ವೇಳೆ, ಭಾರತದ ಸುಮಾರು 150 ಸ್ಥಳಗಳಲ್ಲಿ ಲಕ್ಷಾಂತರ ಜನರು ತಮ್ಮ ನಗರಗಳಲ್ಲಿಯೇ ರುದ್ರಪೂಜೆಯಲ್ಲಿ ಭಾಗವಹಿಸುವ ಅವಕಾಶವನ್ನು ಹೊಂದಿದ್ದಾರೆ. ಜಗತ್ತಿನಾದ್ಯಂತದ ಸಾಧಕರ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಮಹಾಶಿವರಾತ್ರಿ ಆಚರಣೆ, ಸಂಭ್ರಮ ಮತ್ತು ಗಹನ ಆಧ್ಯಾತ್ಮಿಕತೆಯ ಸುಂದರ ಸಮನ್ವಯವಾಗಿ ಸಕಾರಾತ್ಮಕ ಚೈತನ್ಯದ ವಾತಾವರಣವನ್ನು ನಿರ್ಮಿಸಲು ಸಜ್ಜಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ