Bali Padayami: ದೀಪಾವಳಿಯ ಮೂರನೇ ದಿನ; ಬಲಿ ಪಾಡ್ಯಮಿ ಮಹತ್ವ ಮತ್ತು ವಾಮನಾವತಾರದ ಕಥೆ
ದೀಪಾವಳಿ ಪರ್ವದ ಮೂರನೇ ದಿನದ ಬಲಿ ಪಾಡ್ಯಮಿಯು ವಿಷ್ಣುವಿನ ವಾಮನಾವತಾರದ ಮಹತ್ವ ಸಾರುತ್ತದೆ. ರಾಕ್ಷಸ ರಾಜ ಬಲಿಯ ಅಹಂಕಾರ ನಿಗ್ರಹಿಸಿದ ವಾಮನನು, ಬಲಿಗೆ ಮೋಕ್ಷದ ವರವಿತ್ತನು. ಈ ದಿನದಂದು ಬಲಿಯನ್ನು ಸ್ಮರಿಸಿ ಪೂಜಿಸುವುದರಿಂದ ಕರ್ಮಗಳು ಕಳೆದು, ಅದೃಷ್ಟ ಹೆಚ್ಚುತ್ತದೆ, ಸದ್ಭಾವನೆ ಮೂಡುತ್ತದೆ, ಆರೋಗ್ಯ ಹಾಗೂ ಆದಾಯ ವೃದ್ಧಿಯಾಗುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ. ಇದು ಸಮಾಜದಲ್ಲಿ ಶಾಂತಿ, ಸಾಮರಸ್ಯ ತರುವ ಆಚರಣೆ.

ಬಲಿ ಪಾಡ್ಯಮಿಯು ದೀಪಾವಳಿ ಪರ್ವಕಾಲದ ಮೂರನೇ ದಿನವಾಗಿದ್ದು, ಈದಿನದ ಮಹತ್ವ ಹಾಗೂ ಶುಭ ಫಲಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, ಈ ದಿನವನ್ನು ವಿಷ್ಣುವಿನ ವಾಮನಾವತಾರದ ಮಹತ್ವವನ್ನು ಸ್ಮರಿಸಲು ಆಚರಿಸಲಾಗುತ್ತದೆ. ವರ್ಷದಲ್ಲಿ ಬರುವ ಕೆಲವು ಪರ್ವ ದಿನಗಳಲ್ಲಿ ಬಲಿ ಪಾಡ್ಯಮಿಯು ವಿಶೇಷ ಸ್ಥಾನವನ್ನು ಪಡೆದಿದೆ. ಇದು ನಮ್ಮ ಕರ್ಮಗಳನ್ನು ಕಳೆಯಲು, ಅದೃಷ್ಟವನ್ನು ಹೆಚ್ಚಿಸಲು ಮತ್ತು ಸಮಾಜದಲ್ಲಿ ಸದ್ಭಾವನೆಯಿಂದ ಬಾಳಲು ಅನುವು ಮಾಡಿಕೊಡುತ್ತದೆ.
ಪುರಾಣಗಳ ಪ್ರಕಾರ, ರಾಕ್ಷಸ ರಾಜ ಬಲಿ ಚಕ್ರವರ್ತಿಯ ಉಪಟಳ ತಾಳಲಾರದೆ ಭಗವಾನ್ ವಿಷ್ಣುವು ವಾಮನ ರೂಪದಲ್ಲಿ ಭೂಲೋಕಕ್ಕೆ ಬಂದನು. ಬಲಿಯು ತನ್ನ ಶಕ್ತಿ ಮತ್ತು ಸಾಮರ್ಥ್ಯದ ಬಗ್ಗೆ ಅಹಂಕಾರದಿಂದ ಮೆರೆಯುತ್ತಿದ್ದನು, ತಾನು ವಿಶ್ವದಲ್ಲೇ ಶ್ರೇಷ್ಠ ಎಂದು ಭಾವಿಸಿದ್ದನು. ಈ ಅಹಂಕಾರವನ್ನು ಮುರಿಯಲು ವಾಮನ ರೂಪದ ವಿಷ್ಣುವು ಬಲಿಯ ಬಳಿ ಕೇವಲ ಮೂರು ಹೆಜ್ಜೆ ಇಡುವಷ್ಟು ಜಾಗವನ್ನು ಕೇಳಿದನು. ಬಲಿಯು ಇದನ್ನು ಅಪಹಾಸ್ಯ ಮಾಡಿ, ತೃಣೀಕರಿಸಿ ಒಪ್ಪಿದನು.
ವಿಡಿಯೋ ಇಲ್ಲಿದೆ ನೋಡಿ:
ಆಗ ವಾಮನನು ತನ್ನ ಒಂದು ಹೆಜ್ಜೆಯಿಂದ ಇಡೀ ಭೂಮಂಡಲವನ್ನು ಆವರಿಸಿದನು. ಎರಡನೇ ಹೆಜ್ಜೆಯಿಂದ ಸಂಪೂರ್ಣ ಆಕಾಶವನ್ನು ಆವರಿಸಿದನು. ಮೂರನೇ ಹೆಜ್ಜೆ ಇಡಲು ಜಾಗವೇ ಇಲ್ಲದಿದ್ದಾಗ, ಬಲಿಯು ತನ್ನ ಅಹಂಕಾರವನ್ನು ತೊರೆದು ವಾಮನನಿಗೆ ತನ್ನ ಶಿರವನ್ನು ಅರ್ಪಿಸಿದನು. ವಾಮನನು ಮೂರನೇ ಹೆಜ್ಜೆಯನ್ನು ಬಲಿಯ ಶಿರದ ಮೇಲೆ ಇಟ್ಟು ಅವನ ಅಹಂಕಾರವನ್ನು ನಿಗ್ರಹಿಸಿದನು. ಅಂದಿನಿಂದ ಈ ದಿನವನ್ನು ಬಲಿ ಪಾಡ್ಯಮಿ ಎಂದು ಆಚರಿಸಲಾಗುತ್ತದೆ.
ಈ ಘಟನೆಯ ನಂತರ, ಬಲಿಯು ವಿಷ್ಣುವಿನಿಂದ ಒಂದು ವರವನ್ನು ಪಡೆದನು. ಬಲಿ ಪಾಡ್ಯಮಿಯ ದಿನದಂದು ಯಾರು ತನ್ನನ್ನು ಸ್ಮರಿಸಿ, ತನ್ನ ಹೆಸರಿನಲ್ಲಿ ಪೂಜೆಯನ್ನು ಮಾಡುತ್ತಾರೋ, ಅವರಿಗೆ ಅಹಂಕಾರದಿಂದ ಮುಕ್ತಿ, ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ವರ ಪಡೆದನು. ಆದ್ದರಿಂದ ಈ ದಿನದಂದು ಬಲಿಯನ್ನು ಪೂಜಿಸುವುದು ಅತ್ಯಂತ ಶುಭಕರ.
ಇದನ್ನೂ ಓದಿ: ದೀಪಾವಳಿಯ ಮುಂದಿನ 6 ತಿಂಗಳು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
ಕರ್ನಾಟಕದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಹಳೆ ಮೈಸೂರು ಪ್ರದೇಶದಲ್ಲಿ, ಬಲಿ ಪಾಡ್ಯಮಿಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಗೋವಿನ ಸಗಣಿಯಿಂದ ಚಿಕ್ಕ ಗೋಪುರ ಕಟ್ಟಿ, ಅದನ್ನು ಚೆಂಡು ಹೂವುಗಳು, ರಾಗಿ ತೆನೆ ಮತ್ತು ಇತರ ಅಲಂಕಾರಿಕ ವಸ್ತುಗಳಿಂದ ಸುಂದರವಾಗಿ ಅಲಂಕರಿಸಲಾಗುತ್ತದೆ. ನಂತರ ಈ ಗೋಪುರಕ್ಕೆ ಪೂಜೆ ಸಲ್ಲಿಸಿ, ಸಂಕಲ್ಪ ಮಾಡಲಾಗುತ್ತದೆ. ದೀಪಾರಾಧನೆ ಮಾಡುವುದೂ ಕೂಡ ಈ ಆಚರಣೆಯ ಪ್ರಮುಖ ಭಾಗವಾಗಿದೆ.
ಪಟಾಕಿಗಳನ್ನು ಹಚ್ಚುವುದು ಕೂಡ ಬಲಿ ಪಾಡ್ಯಮಿಯ ಒಂದು ಸಂಪ್ರದಾಯವಾಗಿದೆ. ಪಟಾಕಿ ಹಚ್ಚುವುದು ದುಷ್ಟ ಶಕ್ತಿಗಳನ್ನು ದೂರ ಮಾಡಿ, ಶಿಷ್ಟ ಶಕ್ತಿಗಳನ್ನು ಆಹ್ವಾನಿಸುತ್ತದೆ ಎಂದು ನಂಬಲಾಗಿದೆ. ಬಲಿ ಪಾಡ್ಯಮಿಯ ದಿನ ಮನೆಯಲ್ಲಿ ದೀಪ ಪೂಜೆ, ಸಗಣಿಯ ಕಟ್ಟೆಗೆ ಪೂಜೆ, ಆರತಿ ಮಾಡಿ ಬಲಿಯನ್ನು ಸ್ಮರಣೆ ಮಾಡುವುದರಿಂದ ಕುಟುಂಬದಲ್ಲಿ ಸಾಮರಸ್ಯ, ಬಾಂಧವ್ಯಗಳು ಉತ್ತಮಗೊಳ್ಳುತ್ತವೆ. ಆದಾಯದಲ್ಲಿ ಏರಿಕೆ, ಆರೋಗ್ಯ ವೃದ್ಧಿ ಸೇರಿದಂತೆ ಎಲ್ಲಾ ವಿಧದಲ್ಲೂ ಶುಭವಾಗುತ್ತದೆ ಎಂದು ನಂಬಲಾಗಿದೆ. ಪ್ರತಿಯೊಂದು ನಂಬಿಕೆಯ ಆಧಾರದಲ್ಲಿ ನಡೆಯುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:04 am, Wed, 22 October 25




