Chanakya Niti: ಈ 5 ಗುಣಗಳಿದ್ದರೆ ಎಂತಹ ಸಂದರ್ಭವನ್ನೂ ನಾವು ಯಶಸ್ವಿಯಾಗಿ ಎದುರಿಸಬಹುದು
ಖುಷಿಯ ಕ್ಷಣಗಳು ಅಥವಾ ಕಷ್ಟದ ಸಮಯಗಳು ಎರಡೂ ಶಾಶ್ವತವಲ್ಲ. ಹಾಗಾಗಿ, ಸಂತುಲಿತ ಜೀವನವನ್ನು ನಾವು ಬಾಳಬೇಕು. ಬದುಕನ್ನು ಸರಿದೂಗಿಸಿಕೊಂಡು ಹೋಗಬೇಕು. ಆಚಾರ್ಯ ಚಾಣಕ್ಯನ ನೀತಿಯಂತೆ ಈ ಐದು ಗುಣಗಳು ಉಳ್ಳವರು ಜೀವನವನ್ನು ಎಲ್ಲಾ ಸಂದರ್ಭದಲ್ಲಿ ಕೂಡ ಸಮಾನವಾಗಿ ಕಾಣಬಲ್ಲರು.
ಜೀವನದಲ್ಲಿ ಖುಷಿ ಮತ್ತು ನೋವಿನ ಕ್ಷಣಗಳು ಎರಡೂ ಇರುತ್ತವೆ. ಪ್ರತಿಯೊಬ್ಬನೂ ತನ್ನ ಜೀವನದಲ್ಲಿ ನೋವು- ನಲಿವುಗಳನ್ನು ಅನುಭವಿಸಲೇ ಬೇಕು. ಆದರೆ, ಕೆಲವೊಂದು ಬಾರಿ ನಾವು ಈ ಸತ್ಯ ತಿಳಿದಿದ್ದರೂ ಜೀವನವನ್ನು ಎದುರಿಸಲು ಸೋಲುತ್ತೇವೆ. ನೋವು, ಸಂಕಷ್ಟವನ್ನು, ಕೆಟ್ಟ ಸಂದರ್ಭವನ್ನು ಎದುರಿಸಿ ಗೆಲ್ಲಲು ಹಿಂಜರಿಯುತ್ತೇವೆ. ಕೆಲವರು ಸಂತೋಷವನ್ನು ಮತ್ತು ದುಃಖವನ್ನು ಅತಿಯಾಗಿ ಅನುಭವಿಸಿಬಿಡುತ್ತಾರೆ. ಖುಷಿಗೆ ಬಹಳಷ್ಟು ಹಿಗ್ಗಿ, ದುಃಖಕ್ಕೆ ಕುಗ್ಗಿ ಹೋಗುತ್ತಾರೆ. ಆದರೆ, ನಾವು ನಿಜವಾಗಿ ಎರಡೂ ಸಂದರ್ಭಗಳಲ್ಲಿ ಸಹಜ ಬದುಕನ್ನು ಕಳೆಯಬೇಕು.
ಖುಷಿಯ ಕ್ಷಣಗಳು ಅಥವಾ ಕಷ್ಟದ ಸಮಯಗಳು ಎರಡೂ ಶಾಶ್ವತವಲ್ಲ. ಹಾಗಾಗಿ, ಸಂತುಲಿತ ಜೀವನವನ್ನು ನಾವು ಬಾಳಬೇಕು. ಬದುಕನ್ನು ಸರಿದೂಗಿಸಿಕೊಂಡು ಹೋಗಬೇಕು. ಆಚಾರ್ಯ ಚಾಣಕ್ಯನ ನೀತಿಯಂತೆ ಈ ಐದು ಗುಣಗಳು ಉಳ್ಳವರು ಜೀವನವನ್ನು ಎಲ್ಲಾ ಸಂದರ್ಭದಲ್ಲಿ ಕೂಡ ಸಮಾನವಾಗಿ ಕಾಣಬಲ್ಲರು. ಖುಷಿ- ದುಃಖ ಎರಡನ್ನೂ ಸ್ವೀಕರಿಸಿ ಗೆಲ್ಲಬಲ್ಲರು. ಈ ಗುಣಗಳು ಇರುವ ಜನರು ನೋವಿನಲ್ಲೂ ತಮ್ಮ ಸ್ಥಿಮಿತ ಕಳೆದುಕೊಳ್ಳದೆ ಇರುತ್ತಾರೆ. ಆ ಐದು ಗುಣಗಳು ಯಾವುವು? ಇಲ್ಲಿದೆ ಮಾಹಿತಿ.
ತಾಳ್ಮೆ: ಬದುಕಿನಲ್ಲಿ ಸಂತಸ, ದುಃಖ ಎರಡೂ ಇರುತ್ತದೆ. ಆದರೆ, ಈ ಎರಡನ್ನು ಕೂಡ ಸಮತೋಲನದಲ್ಲಿ ಇಟ್ಟುಕೊಳ್ಳುವುದು ಒಬ್ಬಾತನಿಗೆ ಗೊತ್ತಿರಬೇಕು. ನೋವು- ನಲಿವುಗಳನ್ನು ಸರಿದೂಗಿಸಿಕೊಂಡು ಹೋಗಬೇಕು. ಅದಕ್ಕಾಗಿ ತಾಳ್ಮೆ ಅಗತ್ಯ. ತಾಳ್ಮೆ ಇರುವ ವ್ಯಕ್ತಿ ಎಂತಹ ಸಂದಿಗ್ಧ ಸಂದರ್ಭವನ್ನು ಕೂಡ ಎದುರಿಸುತ್ತಾನೆ.
ಸಂಪತ್ತು: ನಾವು ಸಣ್ಣ ವಯಸ್ಸಿನಿಂದಲೂ ಅಗತ್ಯ ಎನಿಸಿದ್ದನ್ನು ಕೂಡಿಡುವ ಅಥವಾ ಸಂರಕ್ಷಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಮನೆಯಲ್ಲಿ ಕಲಿಸಿಕೊಡುತ್ತಾರೆ. ಅದು ಹಣ ಅಥವಾ ಯಾವುದೇ ಬೆಲೆಬಾಳುವ ಮತ್ತು ಅಗತ್ಯ ವಸ್ತುಗಳನ್ನು ನಾವು ಜಾಗ್ರತೆಯಿಂದ ಇಟ್ಟುಕೊಳ್ಳುತ್ತೇವೆ. ಚಾಣಕ್ಯ ಹೇಳುವಂತೆ, ನಮ್ಮ ಸಂಪತ್ತು ನಮ್ಮ ಕಷ್ಟದ ಸಮಯದಲ್ಲಿ ನಮ್ಮ ಸಂಪತ್ತು ನಮಗೆ ನೆರವಾಗುತ್ತದೆ. ಹಾಗಾಗಿ, ನಮ್ಮ ಭವಿಷ್ಯದ ದಿನಗಳಿಗಾಗಿ ಅಗತ್ಯಕ್ಕೆ ತಕ್ಕಷ್ಟು ಸಂಪತ್ತು ಕೂಡಿಡಬೇಕು.
ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ: ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇರುವುದು ಪ್ರತಿಯೊಬ್ಬನ ಅಗತ್ಯವಾಗಿದೆ. ಯಾವಾಗ ಸಮಯ ನಮಗೆ ಸವಾಲೊಡ್ಡುತ್ತದೆ ಎಂದು ಹೇಳಲಾಗುವುದಿಲ್ಲ. ನಮ್ಮ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಗಟ್ಟಿಯಾಗಿದ್ದರೆ ಎಂತಹ ಸಂದರ್ಭವನ್ನು ಕೂಡ ಎದುರಿಸಬಹುದು. ಯಾವ ಸನ್ನಿವೇಷದಲ್ಲೂ ಧೃತಿಗೆಡಬೇಕಾಗಿಲ್ಲ. ಹಾಗಾಗಿ, ಸಮಯ ಸಂದರ್ಭ ಅನುಸಾರ ಸರಿಯಾದ ನಿರ್ಧಾರ ಕೈಗೊಳ್ಳುವವನು ಸನ್ನಿವೇಶವನ್ನು ಗಟ್ಟಿಯಾಗಿ ಗೆಲ್ಲಬಲ್ಲ.
ಧೈರ್ಯ: ನಮಗೆ ಕಷ್ಟದ ಪರಿಸ್ಥಿತಿ ಎದುರಾದಾಗ ಎಲ್ಲರೂ ನಮ್ಮ ಜೊತೆಗಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಖುಷಿ ಇದ್ದಾಗ ಜೊತೆಗೆ ಬರುವಷ್ಟು ಜನರು ಕಷ್ಟಕ್ಕೆ ಆಗಬೇಕು ಎಂದಿಲ್ಲ. ಅಂಥಾ ಸಂದರ್ಭದಲ್ಲಿ ನಮ್ಮಲ್ಲಿ ನಮ್ಮ ಬಗ್ಗೆ ಆತ್ಮವಿಶ್ವಾಸ, ಧೈರ್ಯ ಇರುವುದು ಅಗತ್ಯವಾಗಿದೆ. ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟುಕೊಂಡವ ಯಾವ ಸಂದರ್ಭವನ್ನೂ ಜಯಿಸಬಲ್ಲ.
ಜ್ಞಾನ: ಕೆಟ್ಟ ಸಂದರ್ಭದಲ್ಲಿ ಕೂಡ ಹೋರಾಡಲು ಸಹಾಯ ಮಾಡುವ ಮತ್ತೊಂದು ಅಮೂಲ್ಯ ಸಂಪತ್ತು ಜ್ಞಾನ. ನಾವು ಹೆಚ್ಚು ಹೆಚ್ಚು ಹೊಸ ವಿಷಯಗಳ ಕಲಿಕೆ, ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದರಿಂದ ನಮ್ಮ ಆತ್ಮವಿಶ್ವಾಸ, ಸ್ಫೂರ್ತಿ ಹೆಚ್ಚುತ್ತದೆ. ಮತ್ತು ಕಠಿಣ ಸಂದರ್ಭದಲ್ಲಿ ನೆರವಾಗುತ್ತದೆ.
ಇದನ್ನೂ ಓದಿ: Chanakya Niti: ಈ ಗುಣಗಳನ್ನು ಹೊಂದಿರುವ ವ್ಯಕ್ತಿ ಎಲ್ಲರ ಇಷ್ಟದ ನಾಯಕನಾಗುತ್ತಾನೆ; ಚಾಣಕ್ಯನ ವಿವರಣೆ ಇಲ್ಲಿದೆ