ಇಂದು ಜ್ಯೇಷ್ಠ ಮಾಸ ಮೊದಲ ಸೋಮ ಪ್ರದೋಷ ಉಪವಾಸ. ಈ ದಿನ ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸಲಾಗುತ್ತದೆ. ಪ್ರದೋಷ ವ್ರತಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಪ್ರದೋಷ ವ್ರತ ದಿನದಂದು ಶಿವನನ್ನು ಆರಾಧಿಸುವುದರಿಂದ ಶಿವ ನಿಮ್ಮೆಲ್ಲ ಆಸೆಗಳನ್ನು ಈಡೇರಿಸುತ್ತಾನೆ. ಒಂದು ವರ್ಷದಲ್ಲಿ 24 ಪ್ರದೋಷ ಉಪವಾಸಗಳಿವೆ. ಪ್ರದೋಷ ಎಂದರೆ-ಪಾಪಗಳಿಂದ ಮುಕ್ತಿ ಎಂದರ್ಥ.
ಈ ಬಾರಿ ಪ್ರದೋಷ ವ್ರತ ಸೋಮವಾರ ಬೀಳುತ್ತಿದೆ, ಆದ್ದರಿಂದ ಇದನ್ನು ಸೋಮ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಪ್ರದೋಷ ವ್ರತವನ್ನು ಪ್ರತಿ ತಿಂಗಳು ಎರಡು ಬಾರಿ ಏಕಾದಶಿಯಂತೆ ಆಚರಿಸಲಾಗುತ್ತದೆ. ಒಂದು ವರ್ಷದಲ್ಲಿ 24 ಪ್ರದೋಷ ಉಪವಾಸಗಳಿವೆ. ಸೋಮವಾರ ಶಿವನಿಗೆ ಅರ್ಪಿತವಾಗಿದೆ. ಈ ದಿನ ಶಿವನನ್ನು ಪೂಜಿಸುವುದು ವಿಶೇಷ ಫಲಿತಾಂಶವನ್ನು ನೀಡುತ್ತದೆ. ಈ ದಿನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರದೋಷ ವ್ರತ ಏಕೆ ಮಾಡುತ್ತಾರೆ ಅಮೃತಕ್ಕಾಗಿ ದೇವ ದಾನವರು ಕ್ಷೀರ ಸಾಗರವನ್ನು ಕಡೆಯುವಾಗ ಹಾಲಾಹಲ ವಿಷವು ಉಕ್ಕಿ ಬಂದಿತು. ಆಗ ಧ್ಯಾನಾವಸ್ಥೆಯಲ್ಲಿದ್ದ ಶಿವನು ಲೋಕವನ್ನು ವಿಷದಿಂದ ಕಾಪಾಡಲು ಎಚ್ಚರಗೊಂಡನು. ಆ ಎಚ್ಚರಗೊಂಡ ಕಾಲವೇ ಪ್ರದೋಷ ಕಾಲ. ಸಂಜೆ ನಾಲ್ಕು ಮೂವತ್ತರಿಂದ ಆರೂವರೆಯವರೆಗೆ ಈ ಕಾಲ ಇರುತ್ತದೆ. ಸಾಮಾನ್ಯವಾಗಿ ಧ್ಯಾನದಿಂದ ಶಿವ ಎಚ್ಚರಗೊಂಡಾಗ ಕೋಪಗೊಳ್ಳುವುದು ಸಹಜ. ಆದರೆ ಲೋಕ ಕಲ್ಯಾಣಕ್ಕಾಗಿ ಎಚ್ಚರಗೊಂಡ ಶಿವನು ಹಾಲಾಹಲವನ್ನು ಕುಡಿಯಲು ಸಂತೋಷದಿಂದ ಆಗಮಿಸುತ್ತಾನೆ. ಬರುವ ದಾರಿಯಲ್ಲಿ ನಂದಿಯ ಮೇಲೆ “ಆನಂದ ತಾಂಡವ” (ಸಂತೋಷಕ್ಕಾಗಿ ನೃತ್ಯ ಮಾಡುವ ವಿಧಾನ. ರುದ್ರ ತಾಂಡವ ಎಂದರೆ ಪ್ರಪಂಚದ ಪ್ರಳಯಕ್ಕಾಗಿ ಮಾಡುವ ವಿಧಾನ) ಮಾಡಿಕೊಂಡು ಸ್ವಯಂ ಸಂತೋಷದಿಂದ ಆಗಮಿಸಿದ ಶಿವ ಹಾಲಾಹಲವನ್ನು ಕುಡಿದು ಮೂರ್ಛೆ ತಪ್ಪುತ್ತಾನೆ. ಅದು ಶ್ರಾವಣ ಮಾಸದ ಶನಿವಾರದ ದಿನವಾಗಿರುತ್ತದೆ. ಆಗ ಬ್ರಹ್ಮ ದೇವನು ಗಂಗೆಯನ್ನು ಕರೆದು ಶಿವನ ದೇಹಕ್ಕೆ ನೀರಿನಿಂದ ಜಳಕ ಮಾಡಿಸುತ್ತಾನೆ. ಇದನ್ನೇ ರುದ್ರಾಭೀಷೇಕ ಎಂಬ ಹೆಸರಿನಿಂದ ಈಗ ಕರೆಯುತ್ತಾರೆ. ಅಂದಿನಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಬರುವ ತ್ರಯೋದಶಿಯಂದು ಸಾಕ್ಷಾತ್ ದೇವತೆಗಳೇ ಪ್ರದೋಷ ಪೂಜೆಯನ್ನು ಮಾಡುತ್ತಾ ಬಂದರು. ಅಂದು ಉಪವಾಸವಿದ್ದು, ಶಿವ ಪೂಜೆಯನ್ನು ಮಾಡಿದರೆ ಒಳ್ಳೆಯದು.
ಅಂದಿನ ದಿನ ಪ್ರದೋಷ ಕಾಲದಲ್ಲಿ (ಸೂರ್ಯ ಮುಳುಗುವ ಹೊತ್ತಿನಲ್ಲಿ) ಪೂಜೆ ಮಾಡಿದರೆ ಎಲ್ಲಾ ದೇವರ ಅನುಗ್ರಹವನ್ನು ಗಳಿಸಬಹುದು. ಸೋಮವಾರ ಬರುವ ಪ್ರದೋಷ ಸೋಮ ಪ್ರದೋಷ ಎಂದು ಹೆಸರಾಗಿದೆ. ಶನಿವಾರ ಬರುವ ಪ್ರದೋಷವನ್ನು ಶನಿ ಪ್ರದೋಷ ಎಂದು ಕರೆಯುತ್ತಾರೆ. ಈ ಮೊದಲೇ ತಿಳಿಸಿದಂತೆ, ಈಶ್ವರ ಹಾಲಾಹಲ ಕುಡಿದದ್ದು, ಶನಿವಾರವಾದ್ದರಿಂದ “ಶನಿ ಪ್ರದೋಷ” ತುಂಬಾ ಒಳ್ಳೆಯದಾಗಿರುತ್ತದೆ. ಒಂದು ಶನಿ ಪ್ರದೋಷ ಮಾಡಿದರೆ ಐದು ವರ್ಷ ಪ್ರತಿದಿನ “ಶಿವನ ದೇವಾಲಯಕ್ಕೆ” ಹೋಗಿ ಪೂಜೆ ಮಾಡಿದ ಫಲ ದೊರೆಯುತ್ತದೆ. ಶನಿವಾರ ಪ್ರದೋಷ ಪೂಜೆ ಮಾಡಿದರೆ, ಪದವಿಯಲ್ಲಿ ಉನ್ನತಿ, ಕಳೆದು ಹೋದ ಸಂಪತ್ತು ಮತ್ತೆ ದೊರೆಯುತ್ತದೆ. ಸಾಡೆ ಸಾತಿಯ ಪ್ರಭಾವ ಸಹ ಕಡಿಮೆಯಾಗಬಹುದು/ಹೊರಟು ಹೋಗಬಹುದು. ಈ ದಿನ ಈಶ್ವರ ಮತ್ತು ಶನಿ ಇಬ್ಬರೂ ಈ ಪೂಜೆ ಮಾಡುವವರನ್ನು ಆಶೀರ್ವದಿಸುತ್ತಾರೆ.
ಪೂಜೆಯ ಶುಭ ಸಮಯ ಸೋಮ ಪ್ರದೋಷ ವ್ರತ ಪ್ರಾರಂಭವಾಗುವುದು- ಜೂನ್ 07 ರಂದು ಬೆಳಿಗ್ಗೆ 08:48 ಕ್ಕೆ ಮತ್ತು ಜೂನ್ 08 ರಂದು ಬೆಳಿಗ್ಗೆ 11:24 ಕ್ಕೆ ಕೊನೆಗೊಳ್ಳುತ್ತದೆ. ಸೋಮ ಪ್ರದೋಷ ವ್ರತ ಪೂಜೆಯ ಶುಭ ಸಮಯ ಸಂಜೆ 07.17 ರಿಂದ ಸಂಜೆ 09.18 ರವರೆಗೆ ಇರುತ್ತದೆ.
ಈ ದಿನ ಮಾಡಬಹುದಾದ ಪೂಜೆಗಳು -ಅರ್ಚನೆ, ಶಿವ ಅಷ್ಟೋತ್ತರದ ಸಮೇತ -ಹಾಲಿನ ಅಭಿಷೇಕ -ಮಹಾಮೃತ್ಯುಂಜಯ ಮಂತ್ರ ನೂರ ಎಂಟು ಬಾರಿ ಪಠಣೆ -ಶಿವನ ದೇವಾಲಯದಲ್ಲಿ ದೀಪ ಹಚ್ಚುವಿಕೆ
ಪ್ರದೋಷ ಅಭಿಷೇಕದ ವಸ್ತುಗಳು ಮತ್ತು ಅದರ ಫಲಗಳು ಪಂಚಗವ್ಯ- ಎಲ್ಲಾ ಪಾಪಗಳಿಂದ ಮುಕ್ತಿ ಪಂಚಾಮೃತ- ಸಂಪತ್ತನ್ನು ನೀಡುತ್ತದೆ ತುಪ್ಪ- ಮೋಕ್ಷವನ್ನು ನೀಡುತ್ತದೆ ಹಾಲು- ದೀರ್ಘಾಯುಷ್ಯ ಮೊಸರು- ಮಕ್ಕಳ ಭಾಗ್ಯ ಜೇನು ತುಪ್ಪ- ಉತ್ತಮ ಧ್ವನಿ ಅಕ್ಕಿ ಪುಡಿ- ಸಾಲಗಳಿಂದ ಮುಕ್ತಿ ಕಬ್ಬಿನ ರಸ- ಆರೋಗ್ಯ ಭಾಗ್ಯ, ಶತ್ರು ನಾಶ ನಿಂಬೆ ರಸ- ಸಾವಿನ ಭಯದಿಂದ ದೂರ ಮಾಡುತ್ತದೆ ಎಳೆನೀರು- ಸಂತೋಷ ಮತ್ತು ಜೀವನ ಆನಂದ ಬೇಯಿಸಿದ ಅನ್ನ- ಜೀವನವನ್ನು ಅದ್ಭುತ ಗೊಳಿಸುತ್ತದೆ. ಗಂಧ (ಗಂಧದ ಪೇಸ್ಟ್)- ಲಕ್ಷ್ಮಿ ಕಟಾಕ್ಷ ಸಕ್ಕರೆ- ಶತ್ರು ನಾಶ ಪ್ರದೋಷವು ಪ್ರತಿಯೊಬ್ಬರಿಗೂ ಒಳ್ಳೆಯದನ್ನು ನೀಡುವ ಒಂದು ಆಚರಣೆ. ದಯವಿಟ್ಟು ಇದನ್ನು ಆಚರಿಸಿ, ಆಸಕ್ತಿ ಇರುವವರಿಗೂ ಸಹ ತಿಳಿಸಿ.