Simha Sankranti: ದಕ್ಷಿಣಾಯನ ಮತ್ತು ಸಿಂಹಸಂಕ್ರಾಂತಿ; ಆಧ್ಯಾತ್ಮಿಕ ಮಹತ್ವ, ಹಬ್ಬ ಹಾಗೂ ಆಚರಣೆಗಳು

ಸೂರ್ಯನ ದಕ್ಷಿಣಾಭಿಮುಖ ಚಲನೆಯಾದ ದಕ್ಷಿಣಾಯನವು ದೇವತೆಗಳ ರಾತ್ರಿ ಎಂದು ಪರಿಗಣಿತವಾಗಿದ್ದು, ಹಬ್ಬಗಳು, ವ್ರತಗಳು, ಪಿತೃ ತರ್ಪಣ ಮತ್ತು ಆಧ್ಯಾತ್ಮಿಕ ಆಚರಣೆಗಳಿಗೆ ಮಹತ್ವದ ಅವಧಿಯಾಗಿದೆ. ಈ ಅವಧಿಯ ಮಧ್ಯದಲ್ಲಿ ಬರುವ ಸಿಂಹಸಂಕ್ರಾಂತಿ, ಸೂರ್ಯನು ಸಿಂಹ ರಾಶಿಗೆ ಪ್ರವೇಶಿಸುವ ಪವಿತ್ರ ದಿನವಾಗಿದೆ. ಈ ಎರಡೂ ಸಂದರ್ಭಗಳು ಕೃಷಿ, ಆರೋಗ್ಯ ಮತ್ತು ಧಾರ್ಮಿಕ ದೃಷ್ಟಿಯಿಂದ ಅಪಾರ ಮಹತ್ವವನ್ನು ಹೊಂದಿವೆ.

Simha Sankranti: ದಕ್ಷಿಣಾಯನ ಮತ್ತು ಸಿಂಹಸಂಕ್ರಾಂತಿ; ಆಧ್ಯಾತ್ಮಿಕ ಮಹತ್ವ, ಹಬ್ಬ ಹಾಗೂ ಆಚರಣೆಗಳು
​ದಕ್ಷಿಣಾಯನ
Image Credit source: Getty Images
Edited By:

Updated on: Aug 18, 2026 | 10:28 AM

ಭಾರತೀಯ ಸಂಸ್ಕೃತಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಕಾಲವನ್ನು ಸೂರ್ಯನ ಗತಿಯನ್ನಾಧರಿಸಿದೆ. ಸೂರ್ಯನ ಚಲನೆಯು ನಮಗೆ ಮುಖ್ಯವಾಗಿ ಎರಡು ಕಾಲಘಟ್ಟಗಳನ್ನು ನೀಡುತ್ತದೆ. ಒಂದು ಉತ್ತರಾಯಣ, ಇನ್ನೊಂದು ದಕ್ಷಿಣಾಯನ. ದಕ್ಷಿಣಾಯನದ ಅವಧಿಯಲ್ಲಿ ಬರುವ ಅತ್ಯಂತ ಪ್ರಮುಖ ಹಾಗೂ ಪವಿತ್ರವಾದ ದಿನವೆಂದರೆ ಸಿಂಹಸಂಕ್ರಾಂತಿ. ಈ ಎರಡೂ ಸಂದರ್ಭಗಳು ಧಾರ್ಮಿಕ, ಆಧ್ಯಾತ್ಮಿಕ ದೃಷ್ಟಿಯಿಂದ ಅಪಾರ ಮಹತ್ವವನ್ನು ಹೊಂದಿವೆ.

​ದಕ್ಷಿಣಾಯನ ಎಂದರೆ ಏನು?

​ಸೂರ್ಯನು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶಿಸುವಾಗ ಸಾಮಾನ್ಯವಾಗಿ ಜುಲೈ 16ರ ಸುಮಾರಿಗೆ ದಕ್ಷಿಣಾಯನ ಪ್ರಾರಂಭವಾಗುತ್ತದೆ. ದಕ್ಷಿಣಾಯನ ಎಂದರೆ ಸೂರ್ಯನ ದಕ್ಷಿಣಾಭಿಮುಖ ಚಲನೆಯಾಗಿದೆ. ಅಂದರೆ ಖಗೋಳದಲ್ಲಿ ಸೂರ್ಯನು ಭೂಮಧ್ಯರೇಖೆಯ ದಕ್ಷಿಣಕ್ಕೆ ತನ್ನ ಪಥವನ್ನು ಬದಲಾಯಿಸಿದಂತೆ ಭೂಮಿಯ ಚಲನೆಯಿಂದ ಭಾಸವಾಗುತ್ತದೆ. ಈ ಅವಧಿಯು ಕರ್ಕಾಟಕ ಸಂಕ್ರಾಂತಿಯಿಂದ ಪ್ರಾರಂಭವಾಗಿ ಮಕರ ಸಂಕ್ರಾಂತಿಯವರೆಗೆ ಸುಮಾರು ಆರು ತಿಂಗಳುಗಳ ಕಾಲ ಇರುತ್ತದೆ.

​ದಕ್ಷಿಣಾಯನದ ಮಹತ್ವ:

ಹಿಂದೂ ಪುರಾಣಗಳ ಪ್ರಕಾರ, ಒಂದು ಮಾನವ ವರ್ಷವು ದೇವತೆಗಳಿಗೆ ಒಂದು ದಿನಕ್ಕೆ ಸಮಾನ. ಉತ್ತರಾಯಣವನ್ನು ದೇವತೆಗಳ ಹಗಲು ಎಂದು ಪರಿಗಣಿಸಿದರೆ, ದಕ್ಷಿಣಾಯನವನ್ನು ದೇವತೆಗಳ ರಾತ್ರಿ ಎಂದು ಕರೆಯಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಹೆಚ್ಚಿನ ಪೂಜೆ, ವ್ರತ ಮತ್ತು ಆಧ್ಯಾತ್ಮಿಕ ಚಿಂತನೆಗಳಿಗೆ ಪ್ರಾಶಸ್ತ ನೀಡಲಾಗುತ್ತದೆ. ದಕ್ಷಿಣಾಯನವನ್ನು ಹಬ್ಬಗಳ ಸಾಲು ಎನ್ನಬಹುದು. ಚಾತುರ್ಮಾಸ್ಯ ವ್ರತ, ಆಷಾಢ ಶುಕ್ರವಾರ, ಶ್ರಾವಣ ಮಾಸ, ನಾಗರಪಂಚಮಿ, ಗಣೇಶ ಚತುರ್ಥಿ, ನವರಾತ್ರಿ ಮತ್ತು ದೀಪಾವಳಿಯಂತಹ ಪ್ರಮುಖ ಹಬ್ಬಗಳು ಇದೇ ಅವಧಿಯಲ್ಲಿ ಬರುತ್ತವೆ. ಈ ಅವಧಿಯಲ್ಲಿ ಪಿತೃ ತರ್ಪಣ ಮತ್ತು ಶ್ರಾದ್ಧ ಕಾರ್ಯಗಳನ್ನು ಮಾಡುವುದು ವಿಶೇಷ. ಭಾದ್ರಪದ ಮಾಸದ ಮಹಾಲಯ ಅಮಾವಾಸ್ಯೆಯು ಪಿತೃ ದೇವತೆಗಳಿಗೆ ಅರ್ಪಿತವಾದ ಪ್ರಮುಖ ದಿನವಾಗಿದೆ. ದಕ್ಷಿಣಾಯನದಲ್ಲಿ ವರ್ಷ, ಶರತ್ ಮತ್ತು ಹೇಮಂತ ಋತುಗಳು ಬರುತ್ತವೆ. ಭೂಮಿಯಲ್ಲಿ ಬೆಳೆಗಳು ಬೆಳೆಯಲು ಮತ್ತು ಪ್ರಕೃತಿ ಹೊಸ ಜೀವ ಪಡೆಯಲು ಈ ಕಾಲದ ಮಳೆ ಹಾಗೂ ವಾತಾವರಣ ಅತ್ಯಗತ್ಯ.

ಸಿಂಹ ಸಂಕ್ರಾಂತಿ ಮಹತ್ವ:

​ಸೂರ್ಯನು ಕರ್ಕಾಟಕ ರಾಶಿಯಿಂದ ತನ್ನ ಸ್ವಕ್ಷೇತ್ರವಾದ ಸಿಂಹ ರಾಶಿಗೆ ಪ್ರವೇಶಿಸುವ ದಿನವನ್ನು ಸಿಂಹಸಂಕ್ರಾಂತಿ ಅಥವಾ ಸಿಂಹ ಸಂಕ್ರಮಣ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದು ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿ ಸಂಭವಿಸುತ್ತದೆ. ಜ್ಯೋತಿಷ್ಯದಲ್ಲಿ ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿರುವುದರಿಂದ, ತನ್ನ ಸ್ವಂತ ಮನೆಗೆ ಪ್ರವೇಶಿಸುವ ಈ ದಿನಕ್ಕೆ ಅತ್ಯಂತ ಹೆಚ್ಚಿನ ಶಕ್ತಿ ಮತ್ತು ಪವಿತ್ರತೆ ಇದೆ.

​ಸಿಂಹಸಂಕ್ರಾಂತಿಯ ಪ್ರಮುಖ ಅಂಶಗಳು:

ಕರ್ನಾಟಕದ ಕರಾವಳಿ ಭಾಗದಲ್ಲಿ ಸಿಂಹ ಸಂಕ್ರಾಂತಿಗೆ ಅತ್ಯಂತ ವಿಶೇಷ ಸ್ಥಾನವಿದೆ. ಇದನ್ನು ಆಟಿ ತಿಂಗಳ ಮುಕ್ತಾಯ ಮತ್ತು ಸೊಣೆ ಶ್ರಾವಣ ಮಾಸದ ಆರಂಭದ ಸಂಕೇತವಾಗಿ ಆಚರಿಸಲಾಗುತ್ತದೆ.

​ಸೂರ್ಯ ಪೂಜೆ ಹಾಗೂ ದಾನ:

ಸಿಂಹ ಸಂಕ್ರಾಂತಿಯಂದು ಬೆಳಗ್ಗೆ ಬೇಗ ಎದ್ದು ನದಿ ಅಥವಾ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡಿ ಸೂರ್ಯದೇವನಿಗೆ ಅರ್ಘ್ಯ ನೀಡುವುದು ಶ್ರೇಷ್ಠ. ಈ ದಿನ ಧಾನ್ಯ, ವಸ್ತ್ರ ಮತ್ತು ಹಣ್ಣುಗಳನ್ನು ದಾನ ಮಾಡುವುದರಿಂದ ಆರೋಗ್ಯ ಮತ್ತು ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ

​ಕೃಷಿಕರಿಗೆ ಇದು ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಸಮಯ. ಪೈರುಗಳು ಬೆಳೆದು ನಿಲ್ಲುವ ಈ ಸಮಯದಲ್ಲಿ ಉತ್ತಮ ಇಳುವರಿಗಾಗಿ ಜಮೀನಿನಲ್ಲಿ ಮತ್ತು ಮನೆಯಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ​ಖಗೋಳ ಮತ್ತು ಆರೋಗ್ಯದ ದೃಷ್ಟಿಕೋನ ​ದಕ್ಷಿಣಾಯನದಲ್ಲಿ ಹಗಲು ಸಣ್ಣದಾಗುತ್ತಾ ರಾತ್ರಿ ಸುದೀರ್ಘವಾಗುತ್ತದೆ. ವಾತಾವರಣದಲ್ಲಿ ತಂಪು ಹೆಚ್ಚಾಗುವುದರಿಂದ ಮತ್ತು ಮಳೆಗಾಲದ ಕಾರಣದಿಂದ ಮಾನವನ ಜೀರ್ಣಶಕ್ತಿ ಮಂದವಾಗುತ್ತದೆ. ಆದ್ದರಿಂದಲೇ ಈ ಸಮಯದಲ್ಲಿ ಸಾತ್ವಿಕ ಆಹಾರ ಸೇವನೆ, ಉಪವಾಸ ಮತ್ತು ವ್ರತಗಳನ್ನು ಆಚರಿಸಲು ನಮ್ಮ ಹಿರಿಯರು ನಿಯಮ ಮಾಡಿದ್ದರು. ಸಿಂಹಸಂಕ್ರಾಂತಿಯ ವೇಳೆಗೆ ಮಳೆ ಕಡಿಮೆಯಾಗಿ ವಾತಾವರಣವು ತಿಳಿಯಾಗಲು ಪ್ರಾರಂಭಿಸುತ್ತದೆ, ಇದು ದೇಹ ಮತ್ತು ಮನಸ್ಸಿಗೆ ನವಚೈತನ್ಯವನ್ನು ನೀಡುತ್ತದೆ.

​ದಕ್ಷಿಣಾಯನ ಮತ್ತು ಸಿಂಹಸಂಕ್ರಾಂತಿಗಳು ಕೇವಲ ದಿನಾಂಕ ಅಥವಾ ಜ್ಯೋತಿಷ್ಯದ ಲೆಕ್ಕಾಚಾರಗಳಷ್ಟೇ ಅಲ್ಲ, ಅವು ಪ್ರಕೃತಿಯ ಋತುಮಾನಗಳ ಬದಲಾವಣೆಗೆ, ಕೃಷಿ ಸಂಸ್ಕೃತಿಗೆ ಮತ್ತು ಮಾನವನ ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕವಾದ ಪವಿತ್ರ ಸಂದರ್ಭಗಳು. ಪ್ರಕೃತಿಯೊಂದಿಗೆ ಒಂದಾಗಿ ಬಾಳುವುದನ್ನು ಕಲಿಸುವ ಈ ಆಚರಣೆಗಳು ನಮ್ಮ ಸಾಂಪ್ರದಾಯಿಕ ಜೀವನ ಶೈಲಿಯ ಜೀವಂತ ನಿದರ್ಶನ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us