Darshan- Prajwal Revanna horoscope: ದರ್ಶನ್- ಪ್ರಜ್ವಲ್ ರೇವಣ್ಣ ಜಾತಕ ಇಬ್ಬರು ಜ್ಯೋತಿಷಿಗಳಿಂದ ವಿಶ್ಲೇಷಣೆ; ಯಾರು, ಏನು ಹೇಳ್ತಾರೆ?
ಈಗಿನ ಸಂದರ್ಭಕ್ಕೆ ರಾಜಕೀಯವಾಗಿ ಹಾಗೂ ಸಿನಿಮಾ ರಂಗದಲ್ಲಿ ದೊಡ್ಡ ಕೋಲಾಹಲ ಎಬ್ಬಿಸಿರುವ ಪ್ರಜ್ವಲ್ ರೇವಣ್ಣ ಹಾಗೂ ದರ್ಶನ್ ಪ್ರಕರಣಗಳನ್ನು ಜ್ಯೋತಿಷ್ಯ ರೀತಿಯಾಗಿ ಇರುವಂಥ ಸಾಮ್ಯತೆ ಹಾಗೂ ಭಿನ್ನತೆಯನ್ನು ತೆರೆದಿಡುವ ಪ್ರಯತ್ನವಾಗಿ ಈ ಲೇಖನ ನಿಮ್ಮೆದುರು ಇದೆ. ಅಕೆಡಮಿಕ್ ಆದ ಆಸಕ್ತಿಯಿಂದ ಇಬ್ಬರು ಜ್ಯೋತಿಷಿಗಳ ಅಭಿಪ್ರಾಯವನ್ನು ಮುಂದಿಟ್ಟುಕೊಂಡು ವಿಶ್ಲೇಷಣೆ ಮಾಡಲಾಗುತ್ತಿದೆ. ಇದು ಬಹಳ ಆಸಕ್ತಿಕರ ವಿಚಾರವಾಗಿದೆ. ಆಯಾ ಜ್ಯೋತಿಷಿಗಳ ಅಧ್ಯಯನ, ಲೆಕ್ಕಾಚಾರ, ಅನುಭವ ಹಾಗೂ ಜ್ಞಾನವು ವಿಭಿನ್ನ ವಿಚಾರಗಳು ಎನಿಸಬಹುದು. ಆದರೆ ಅಂತಿಮವಾಗಿ ಫಲಿತಾಂಶ ಮುಖ್ಯವಾಗುತ್ತದೆ. ಒಬ್ಬರು ತಮ್ಮ ಹೆಸರನ್ನು ಬಹಿರಂಗ ಮಾಡಬಾರದು ಎಂದು ಕೇಳಿಕೊಂಡಿದ್ದು, ಮತ್ತೊಬ್ಬರು ಕರ್ನಾಟಕದ ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿ ಹಾಗೂ ಅಧ್ಯಾತ್ಮ ಚಿಂತಕರು ಪ್ರಕಾಶ್ ಅಮ್ಮಣ್ಣಾಯ. ಹಾಗಿದ್ದರೆ ಇಬ್ಬರು ಜ್ಯೋತಿಷಿಗಳು ಏನು ತಿಳಿಸಿದ್ದಾರೆ ಎಂಬುದನ್ನು ಓದಿಕೊಳ್ಳಿ.
ನಟ ದರ್ಶನ್ ಅವರದು ಶ್ರವಣ ನಕ್ಷತ್ರ ಎರಡನೇ ಪಾದ, ಮಕರ ರಾಶಿ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರದು ಉತ್ತರಾಷಾಢ ನಕ್ಷತ್ರ, ಮಕರ ರಾಶಿ. ಇಬ್ಬರೂ ಈಗ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ, ಕಾನೂನಿನ ಸವಾಲು ಎದುರಿಸುತ್ತಿದ್ದಾರೆ. ಒಂದೇ ಜೈಲಿನಲ್ಲಿ ಇದ್ದಾರೆ. ಇಬ್ಬರಿಗೂ ಗೋಚಾರದಲ್ಲಿ ಚಂದ್ರ ಇರುವ ರಾಶಿಯಿಂದ ಎರಡನೇ ಮನೆಯಲ್ಲಿದೆ. ಜೂನ್ ಮೂವತ್ತನೇ ತಾರೀಕಿನಿಂದ ಶನಿ ವಕ್ರೀ ಆಗಿ,ದ್ವಿತೀಯದ ಫಲ ದುಪ್ಪಟ್ಟಾಗುತ್ತದೆ. ನವೆಂಬರ್ ಹದಿನೈದನೇ ತಾರೀಕು ತನಕ ಇದೇ ಸನ್ನಿವೇಶ ಇರುತ್ತದೆ. ಏನಿದು ದ್ವಿತೀಯ ಸ್ಥಾನ ಅಂದರೆ, ಧನ ಸ್ಥಾನ, ವಾಕ್ ಸ್ಥಾನ ಹಾಗೂ ಕುಟುಂಬ ಸ್ಥಾನ. ಇವುಗಳಿಗೆ ಸಂಬಂಧಿಸಿದಂತೆ ಒತ್ತಡ, ಹಿಂಸೆ ಹಾಗೂ ಸಮಸ್ಯೆಗಳು ತೀವ್ರವಾಗುತ್ತವೆ. ಉಗುಳು ನುಂಗುವಂತೆ ತಮ್ಮ ಮಾತನ್ನು ತಾವೇ ಹಳಿದುಕೊಳ್ಳಬೇಕಾಗುತ್ತದೆ. ಹಣಕಾಸಿನ ವ್ಯವಹಾರಗಳು ರಂಕಲಾಗಿ, ಕುತ್ತಿಗೆಗೆ ಕುಣಿಕೆಯಂತೆ ಬಿಗಿದುಕೊಳ್ಳುತ್ತವೆ. ಕುಟುಂಬದ ಒಳಗೆ ನಾನಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ; ಅದು ಕೂಡ ಪರಿಹಾರ ಸಿಗದಷ್ಟು ಜಟಿಲವಾಗಿರುತ್ತದೆ.
ರೇವಣ್ಣನವರಿಗೆ ಪಂಚಮ ಶನಿ
ಇನ್ನು ನಿರ್ದಿಷ್ಟವಾಗಿ ಪ್ರಜ್ವಲ್ ಬಗ್ಗೆ ಹೇಳುವುದಾದರೆ, ಅವರ ತಂದೆ ಎಚ್.ಡಿ. ರೇವಣ್ಣ ಅವರಿಗೆ ಸದ್ಯಕ್ಕೆ ಗೋಚಾರದಲ್ಲಿ ಐದನೇ ಮನೆಯಲ್ಲಿ ಶನಿ ಸಂಚಾರ ಆಗುತ್ತಿದೆ. ಐದನೇ ಮನೆ ಎಂಬುದು ಮಕ್ಕಳ ಬಗ್ಗೆ ಸೂಚಿಸುತ್ತದೆ. ಅದೇ ರೀತಿ ಪೂರ್ವ ಪುಣ್ಯ ಸ್ಥಾನ ಕೂಡ ಹೌದು. ಆದ್ದರಿಂದ ಅವರ ಜಾತಕದ ಫಲವೂ ಸೇರಿ ಮಕ್ಕಳಿಬ್ಬರೂ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಅಂದರೆ ಮಕ್ಕಳಿಂದ ನೆಮ್ಮದಿ ಕಳೆದುಕೊಳ್ಳುವ ಯೋಗ ರೇವಣ್ಣ ಅವರಿಗಿದೆ. ತಮ್ಮ ತಂದೆಯ ಜಾತಕದ ಪ್ರಭಾವ ಮಕ್ಕಳಿಬ್ಬರನ್ನೂ ಇಲ್ಲಿಯ ತನಕ ಕರೆದುಕೊಂಡು ಬಂದಿದೆ. ಇನ್ನು ಸ್ವತಃ ಅವರದೇ ಪೂರ್ವ ಪುಣ್ಯದ ಸ್ಥಾನದಲ್ಲಿ ನಿಂತ ಶನಿಯು ಅವರಿಗೂ ಬಂಧನದ ಯೋಗವನ್ನು ನೀಡಿದ್ದಾನೆ. ಮುಂದಿನ ವರ್ಷದ ಮಾರ್ಚ್ ಇಪ್ಪತ್ತೊಂಬತ್ತನೇ ತಾರೀಕಿಗೆ ಶನಿಯು ಮೀನ ರಾಶಿಗೆ ಪ್ರವೇಶಿಸಿದ ಮೇಲೆ ಗೋಚಾರದ ನಕಾರಾತ್ಮಕ ಫಲವನ್ನು ಕಡಿಮೆ ಮಾಡುತ್ತಾ ಹೋಗುತ್ತಾನೆ. ಅಂದರೆ ಅದರರ್ಥ ಹಾಲಿಗೆ ಹಾಲು- ನೀರಿಗೆ ನೀರು ಅಂತಾಗುತ್ತದೆ.
ದರ್ಶನ್ ವಿಚಾರದಲ್ಲಿ ಹೇಳುವುದಾದರೆ ಹಣ- ಮಾತು ಇವೆರಡೂ ಕುತ್ತಿಗೆಗೆ ಉರುಳಾಗಲಿದೆ. ಮುಂದಿನ ಮಾರ್ಚ್ ಕೊನೆವರೆಗೂ ಪರಿಸ್ಥಿತಿ ತೂಗುಯ್ಯಾಲೆ ಆಗಿರುತ್ತದೆ. ಅವರ ಜನ್ಮ ಜಾತಕದ ಪ್ರಕಾರ ಬಂಧನ ಯೋಗವೇ ಜಾಸ್ತಿ ಕಾಣುತ್ತಿದೆ. ಇನ್ನೇನು ದರ್ಶನ್ ಅವರು ಈ ಪ್ರಕರಣದಿಂದ ಆಚೆ ಬಂದೇಬಿಟ್ಟರು ಅಂದುಕೊಳ್ಳುವ ಹೊತ್ತಿಗೆ ಹೊಸ ಸಮಸ್ಯೆ ಉದ್ಭವಿಸಿ, ಅವರಿಗೆ ಆತ್ಮವಿಶ್ವಾಸವೇ ಕುಗ್ಗಿ ಹೋಗುವಂತಾಗುತ್ತದೆ. ಆದರೆ ತುಂಬ ಪ್ರಭಾವಿ- ಬುದ್ಧಿವಂತ ವಕೀಲರೊಬ್ಬರ ಪ್ರವೇಶದಿಂದ ಈ ಪ್ರಕರಣಕ್ಕೆ ಒಂದು ಆಯಾಮ ದೊರೆಯುತ್ತದೆ. ಅದು ಯಾರೂ ನಿರೀಕ್ಷೆ ಕೂಡ ಮಾಡದಂಥ ಬೆಳವಣಿಗೆ ಆಗಲಿದೆ.
– ಹೀಗೆ ಹೇಳಿ ಟಿವಿ9 ಕನ್ನಡದ ಜೊತೆಗೆ ಮಾತು ಮುಗಿಸಿದ ಆ ಜ್ಯೋತಿಷಿ ತಮ್ಮ ಹೆಸರನ್ನು, ವಿವರವನ್ನು ತಿಳಿಸಬಾರದು ಎಂಬ ಷರತ್ತು ಹಾಕಿರುವುದರಿಂದ ಅವರ ಹೆಸರನ್ನು ಇಲ್ಲಿ ಉಲ್ಲೇಖಿಸುತ್ತಿಲ್ಲ.
ಇನ್ನು ಉಡುಪಿ ಜಿಲ್ಲೆಯ ಕಾಪು ಮೂಲದ ಖ್ಯಾತ ಜ್ಯೋತಿಷಿಗಳು, ಅಧ್ಯಾತ್ಮ ಚಿಂತಕರು ಪ್ರಕಾಶ್ ಅಮ್ಮಣ್ಣಾಯ ಅವರು ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಆದರೆ ಬಹಳ ಒತ್ತಡ ಹಾಕಿದ ನಂತರವೇ ದರ್ಶನ್ ವಿಚಾರದ ಬಗ್ಗೆ ಅವರು ಹೇಳಿದರು. ಅವರು ಏನು ಅಭಿಪ್ರಾಯ ಪಟ್ಟರು ಎಂಬ ವಿವರ ಹೀಗಿದೆ:
ಜನ್ಮ ಶನಿಯಿಂದ ಗೋಚಾರದ ಶನಿ
ಪ್ರಜ್ವಲ್ ರೇವಣ್ಣ ಅವರ ಜಾತಕ ನನ್ನ ಬಳಿ ಇಲ್ಲ. ಆದರೆ ರೇವಣ್ಣ ಅವರಿಗೆ ಜನ್ಮ ಕಾಲದಲ್ಲಿ ವೃಶ್ಚಿಕದಲ್ಲಿ ಶನಿ. ಯಾವ ಜಾತಕರಿಗೆ ಜನನ ಕಾಲದಲ್ಲಿ ಕರ್ಕಾಟಕದಲ್ಲಿ ಶನಿ ಅಥವಾ ವೃಶ್ಚಿಕದಲ್ಲಿ ಶನಿ ಇರುತ್ತದೋ ಅಂಥವರಿಗೆ ಇದು ಸಂಕಷ್ಟದ ಕಾಲ. ಕರ್ಕಾಟಕ ಮತ್ತು ವೃಶ್ಚಿಕ ರಾಶಿಯಲ್ಲಿ ಜನನ ಕಾಲದಲ್ಲಿ ಶನಿ ಇದ್ದವರಿಗೆ ವೃಥಾ ಅಪವಾದವಾದರೂ ಬಂದೇ ಬರುತ್ತದೆ. ಇವರೇನಾದರೂ ಇದಕ್ಕೆ ಕಿವಿಗೊಡದೆ ಸುಮ್ಮನಿದ್ದರೆ ಸಮಸ್ಯೆ ಇಲ್ಲ. ಈ ಅಪವಾದಕ್ಕೆ ಪ್ರತೀಕಾರಕ್ಕೆ ಹೊರಟರೆ ಜೈಲಿನವರೆಗೂ ಹೋದೀತು.
ಕೆಲವೊಮ್ಮೆ ಕೆಲವು ಗ್ರಹ ಅನನುಕೂಲ ಇದ್ದಾಗ ಸುಮ್ಮನಿರುವುದೇ ಪರಿಹಾರ. ಏನೋ ಮನಸ್ಸು ಶಾಂತವಾಗಿರಲು ಪೂಜೆ- ಪುರಸ್ಸರಾದಿಗಳನ್ನು ಮಾಡಿದರೆ ಉತ್ತಮ. ಈಗಾಗಲೇ ಪರಪ್ಪನ ಅಗ್ರಹಾರಕ್ಕೆ ಹೋದವರಲ್ಲಿ ಒಬ್ಬರು ಕೊಲೆ ಅಪವಾದದಿಂದ ಹಿಂಸೆ ಅನುಭವಿಸುತ್ತಿದ್ದಾರೆ. ಇವರ ಜನ್ಮ ಜಾತಕದಲ್ಲಿ ಕರ್ಕಾಟಕದಲ್ಲಿ ಶನಿ ಇದೆ. ಇನ್ನೊಬ್ಬರು ಕಿಡ್ನಾಪ್, ರೇಪ್ ಅಪವಾದ ಹೊತ್ತು ಜೈಲಿಗೆ ಹೋದರು. ಇವರಿಗೆ ವೃಶ್ಚಿಕ ಶನಿ. ಹಾಗೆ ನೋಡಿದರೆ ನನಗೂ (ಜ್ಯೋತಿಷ್ಯ ಹೇಳುತ್ತಿರುವ ನನಗೂ) ಜನನ ಕಾಲದಲ್ಲಿ ವೃಶ್ಚಿಕ ಶನಿಯೇ. ಅಪವಾದಗಳು ನನ್ನ ಸುತ್ತಮುತ್ತ ನರ್ತನ ಮಾಡುತ್ತಿವೆ. ನಾನು ನಗುತ್ತಾ ಸುಮ್ಮನಿದ್ದೇನೆ. ಕೆಲವೊಮ್ಮೆ ನಮ್ಮ ನಮ್ಮ ಪ್ರತಿಷ್ಠೆ (ಇಗೋ) ಬಿಟ್ಟಿರಬೇಕಾಗುತ್ತದೆ.
ಇದನ್ನೂ ಓದಿ: ಜುಲೈನಲ್ಲಿ ರಾಶಿ ಬದಲಾಯಿಸಲಿರುವ 4 ಪ್ರಮುಖ ಗ್ರಹಗಳು.. ಈ 3 ರಾಶಿಗಳ ಮೇಲೆ ಭಾರೀ ಪ್ರಭಾವ
ಸುಮ್ಮನಿರುವುದೇ ಪರಿಹಾರ ಆಗಬಲ್ಲದು
ಮುಂದಿನ ವರ್ಷದ ಮಾರ್ಚ್ ತನಕ ಶನಿಯು ಕುಂಭದಲ್ಲಿ ಇರುವವರೆಗೆ ಈ ಎರಡು ರಾಶಿಗಳಲ್ಲಿ ಜನನ ಕಾಲದಲ್ಲಿ ಶನಿ ಇದ್ದವರು ಸುಮ್ಮನಿದ್ದುಬಿಡಬೇಕು. ಆ ನಂತರ ಸರಿ ಹೋಗುತ್ತದೆ. ಅದೇ ರೀತಿ ಕರ್ಕಾಟಕ ಲಗ್ನ, ಕರ್ಕಾಟಕ ರಾಶಿ ಆಗಿದ್ದರೂ ಆರೋಗ್ಯದ ಬಗ್ಗೆ, ಈ ವಿವಾದಗಳ ಬಗ್ಗೆ ಎಚ್ಚರ ಇರಬೇಕು.
ಇನ್ನು ದರ್ಶನ್ ಅವರ ಜನ್ಮ ಜಾತಕದಲ್ಲಿ ಅವರ ವೃಷಭ ಲಗ್ನದ ಸಪ್ತಮಾಧಿಪತಿ (ಕುಜ) ಮಕರ ರಾಶಿಯಲ್ಲಿ, ಅಂದರೆ ನವಮದಲ್ಲಿ ಇದೆ. ಇನ್ನು ಮೀನ ರಾಶಿಯಲ್ಲಿ ಶುಕ್ರನಿದ್ದು, ಅಲ್ಲಿಂದ ಹನ್ನೊಂದನೇ ಮನೆಯಲ್ಲಿ ಕುಜ ಗ್ರಹ ಇದೆ. ಆದ್ದರಿಂದ ಇವರ ಬದುಕು ಒಂದು ದಾರಿಗೆ ಬರಬೇಕು, ಅದೇ ದಾರಿಯಲ್ಲಿ ಸಾಗಬೇಕು ಎಂದಾದರೆ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಇರಬೇಕು. ಆಕೆ ಸಂತೋಷವಾಗಿದ್ದಷ್ಟೂ ಅದಕ್ಕೆ ಇವರು ಕಾರಣರಾದಷ್ಟೂ ಯಶಸ್ಸು, ಕೀತಿ, ಹಣ ಎಲ್ಲವೂ ಬರುತ್ತದೆ.
ಗುರು- ಕೇತು ಒಟ್ಟಿಗೆ ಇದ್ದಾರೆ
ಜನನ ಕಾಲದಲ್ಲಿ ದರ್ಶನ್ ಅವರಿಗೆ ಲಗ್ನಕ್ಕೆ ಹನ್ನೆರಡರಲ್ಲಿ ಗುರು- ಕೇತು ಇದೆ. ಇವರ ಅಂತರಂಗವನ್ನು ಅರ್ಥ ಮಾಡಿಕೊಂಡವರಿಗೆ ಗೊತ್ತಿರುತ್ತದೆ; ಈ ವ್ಯಕ್ತಿಗೆ ತಿಳಿವಳಿಕೆ ಮಟ್ಟ ತುಂಬ ಚೆನ್ನಾಗಿರುತ್ತದೆ. ಈ ಮಾತನ್ನು ಇವತ್ತಿನ ಸನ್ನಿವೇಶಕ್ಕೆ ಹೋಲಿಸಿ ನೋಡುವ ಅಗತ್ಯವಿಲ್ಲ. ಏಕೆಂದರೆ ಇತರ ಗ್ರಹ ಸ್ಥಿತಿ, ಜತೆಗಿನ ದಶಾ- ಭುಕ್ತಿ ಕಾಲ ಹಾಗೂ ಪತ್ನಿ ಜತೆಗೆ ದರ್ಶನ್ ಇಲ್ಲದಿರುವುದು (ಇದು ಮಾಧ್ಯಮಗಳಿಂದ ಬರುತ್ತಿರುವ ಸುದ್ದಿ) ಇವೆಲ್ಲ ಸೇರಿದೆ.
ಶನಿಯನ್ನು ಚಂದ್ರ ಗೋಚಾರದಿಂದ ಎಷ್ಟನೇ ಸ್ಥಾನದಲ್ಲಿ ಇದೆ ಎಂಬುದರ ಆಧಾರದಲ್ಲಿ ಫಲವನ್ನು ಹೇಳಿದಲ್ಲಿ ಅದು ನಿಖರವಾಗುವುದಿಲ್ಲ ಎಂಬುದನ್ನು ಖಚಿತವಾಗಿ ಹೇಳಬಲ್ಲೆ. ಅದೇ ಜನನ ಕಾಲದಲ್ಲಿ ಶನಿಯಿದ್ದ ಸ್ಥಾನದಿಂದ ಈಗ ಗೋಚಾರದಲ್ಲಿ ಶನಿ ಎಲ್ಲಿದೆ ಎಂಬುದನ್ನು ಆಧಾರವಾಗಿಟ್ಟುಕೊಂಡ ಫಲ ಹೇಳಿದಲ್ಲಿ ಹೆಚ್ಚು ನಿಖರವಾಗಿ ಹೇಳಬಹುದಾಗಿದೆ.
ಅಂದ ಹಾಗೆ ಇಲ್ಲಿ ನೀಡಿರುವ ಸಲಹೆ ನಮ್ಮದು; ಅನುಷ್ಠಾನ ನಿಮ್ಮದು ಎಂದು ಮಾತು ಮುಗಿಸಿದರು ಪ್ರಕಾಶ್ ಅಮ್ಮಣ್ಣಾಯ.
(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಲೇಖಕರದು. ಜ್ಯೋತಿಷದ ಆಧಾರದ ಮೇಲೆ ವಿಶ್ಲೇಷಿಸಲಾಗಿದೆ. ಇದನ್ನು ಟಿವಿ9 ಕನ್ನಡ ವೆಬ್ ಸೈಟ್ ಆಗಲೀ ಅಥವಾ ಸೋದರ ಸಂಸ್ಥೆಗಳಾಗಲೀ ಅನುಮೋದಿಸುವುದಿಲ್ಲ.)
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ