AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೇಸು ಕ್ರಿಸ್ತನ ಪುನರುತ್ಥಾನ: ಶಿಲುಬೆಗೇರಿ ಸಮಾಧಿ ಸೇರಿದಾತ ಮತ್ತೆ ಎದ್ದು ಬಂದ ರೋಚಕ ಕತೆ

ಅಂದು ಕ್ರಿಸ್ತನು ಮೃತ್ಯುಂಜಯನಾಗಿರದಿದ್ದರೆ ಇಂದು ಕ್ರೈಸ್ತರಾಗಲೀ ಕ್ರೈಸ್ತ ಧರ್ಮವಾಗಲೀ ಇರುತ್ತಿರಲಿಲ್ಲ. ಅಂದು ಸಂಜೆ ಮಹಯಾಜಕರು, ಶಾಸ್ತ್ರಿಗಳ ಭಯದಿಂದ ಬಚ್ಚಿಟ್ಟುಕೊಂಡು ಕೂತಿದ್ದ ಶಿಷ್ಯರ ನಡುವೆ ಯೇಸುಕ್ರಿಸ್ತನು ಬಂದು ತನ್ನ ಕೈಕಾಲುಗಳ ಗಾಯಗಳನ್ನು ತೋರಿಸಿದಾಗ ಅವರು ನಂಬಿ ಧೈರ್ಯಗೊಂಡರು.

ಯೇಸು ಕ್ರಿಸ್ತನ ಪುನರುತ್ಥಾನ: ಶಿಲುಬೆಗೇರಿ ಸಮಾಧಿ ಸೇರಿದಾತ ಮತ್ತೆ ಎದ್ದು ಬಂದ ರೋಚಕ ಕತೆ
ಸಂಗ್ರಹ ಚಿತ್ರ
Skanda
| Updated By: Lakshmi Hegde|

Updated on: Apr 04, 2021 | 11:00 AM

Share

ಪ್ರಜಾ ಪತಿರ್ತೆ ವಾಯಪಿಯಾಮ್, ಆತ್ಮನಾಮ್ ಯಜ್ಞಂ, ಕೃತ್ವಾಪ್ರಯಚ್ಛಿತ್ ಅಂದರೆ ಸರ್ವ ಸೃಷ್ಟಿಕರ್ತನು ಸಕಲ ಜೀವರಾಶಿಯನ್ನು ಪಾಪದಿಂದ ಬಿಡಿಸಲು ತನ್ನ ಸ್ವಂತಃ ದೇಹವನ್ನು ಬಲಿ ಪೀಠದಲ್ಲಿ ಯಜ್ಞ ಮಾಡಬೇಕು, ನರನಾಗಿ ತನ್ನ ಪರಿಶುದ್ಧ ರಕ್ತವನ್ನು ಸುರಿಸಬೇಕು. ಸಕಲ ಸೃಷ್ಟಿಯ ಕರ್ತನಾದ ದೇವರು ಪಾಪದಲ್ಲಿದ್ದ ಸರ್ವ ಮಾನವರನ್ನು ರಕ್ಷಿಸಲು ಕನ್ಯಾ ಮರಿಯಳ ಗರ್ಭದಲ್ಲಿ ಜನಿಸಿ, ಯೇಸುಕ್ರಿಸ್ತನೆಂದು ಕರೆಯಲ್ಪಟ್ಟು 30 ವರ್ಷಗಳ ಕಾಲ ನಝರೇತಿನಲ್ಲಿ ಒಬ್ಬ ಸಾಮಾನ್ಯ ಬಡಿಗನಂತೆ ಬಡಿಗೆ ಕೆಲಸ ಮಾಡಿಕೊಂಡಿದ್ದನು. ನಂತರ ಮುಂದೆ ಮೂರುವರೆ ವರ್ಷಗಳ ಕಾಲ ಆಗಿನ ಇಸ್ರಾಯೇಲ್ ದೇಶವಾಗಿದ್ದ ಗಲೀಲಾಯ, ಸಮಾರ್ಯ ಹಾಗೂ ಯೂದಾಯ ಸೀಮೆಗಳ ಎಲ್ಲಾ ಹಳ್ಳಿಗಳಲ್ಲಿ ಸಂಚರಿಸಿ ದೇವರ ಸಂದೇಶವನ್ನು ಸಾರುತ್ತಾ, ಸರ್ವ ರೋಗಗಳನ್ನು ಗುಣ ಮಾಡುತ್ತಾ, ಸಾಮಾನ್ಯ ಜನರ ಆಶಾಕಿರಣವಾಗಿದ್ದ. ಹೀಗಿದ್ದ ಆತನನ್ನು ಶಿಲುಬೆಗೆ ಹಾಕಲು ಆತನು ಮಾಡಿದ ತಪ್ಪೇನು? ಅಲ್ಲಿನ ಧರ್ಮಾಧಿಕಾರಿಗಳನ್ನು, ಶಾಸ್ತ್ರಿಗಳನ್ನು ಆತ ಸರ್ಪ ಜಾತಿಯವರೇ, ಸುಣ್ಣ ಹಚ್ಚಿದ ಸಮಾಧಿಗಳೇ, ಸ್ವರ್ಗದ ಬಾಗಿಲನ್ನು ಮುಚ್ಚುವವರೇ, ಸೊಳ್ಳೆ ಸೊಸುವವರೇ, ಒಂಟೆ ನುಂಗುವವರೇ ಎಂದೆಲ್ಲಾ ಕಟುವಾಗಿ ಖಂಡಿಸಿದ್ದೇ ಕಾರಣವಾಯಿತೇ?

ಯೇಸುಕ್ರಿಸ್ತನು ತನ್ನ ಹನ್ನೆರಡು ಶಿಷ್ಯರೊಂದಿಗೆ ಪಸ್ಕ ಹಬ್ಬ ಆಚರಿಸಲು ಯೆರೂಸಲೇಮಿಗೆ ಬಂದ. ಗುರುವಾರ ರಾತ್ರಿ ಜಾನ್ ಮಾರ್ಕ ಎಂಬ ವಿಶ್ವಾಸಿಯ ಮನೆಯ ಮೇಲ್ಮಹಡಿಯಲ್ಲಿ ಯೇಸುಕ್ರಿಸ್ತನು ತನ್ನ ಶಿಷ್ಯರೊಂದಿಗೆ ಪಸ್ಕದ ಊಟ ಮಾಡಿದ. ರಾತ್ರಿ 9ರ ಹೊತ್ತಿಗೆ ಪಟ್ಟಣದ ಪೂರ್ವಕ್ಕೆ ಇದ್ದ ಗೆತ್ಸೆಮನೆ ತೋಟಕ್ಕೆ ಹೋದ. ಅಲ್ಲಿ ಆತ ಶಿಷ್ಯರನ್ನು ಬಿಟ್ಟು ಅಂದು ತನಗೆ ಒದಗುವ ಕಷ್ಟಸಂಕಟಗಳಿಗಾಗಿ ಬಹಳ ದುಃಖದಿಂದ ಪ್ರಾರ್ಥಿಸತೊಡಗಿದ. ರಾತ್ರಿ 12ರ ಸುಮಾರಿಗೆ ಆತನ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೊತ ಯೂದನೆಂಬವನು ಯಾಜಕರ ಸಿಪಾಯಿಗಳೊಂದಿಗೆ ಗೆತ್ಸೆಮನೆ ತೋಟಕ್ಕೆ ಬಂದು ಆತನನ್ನು ವೈರಿಗಳಿಗೆ ಹಿಡಿದುಕೊಟ್ಟುಬಿಟ್ಟ. ಅವರು ಆತನನ್ನು ಮಹಾಯಾಜಕನಾದ ಕಾಯಿಫನಲ್ಲಿಗೆ ಹಿಡಿದುಕೊಂಡು ಹೋದರು.

ಅಂದು ರಾತ್ರಿಯೆಲ್ಲ ಸನ್ಹೆದ್ರಿಯನ್ ಎಂಬ ಯೆಹೂದ್ಯರ ಕೋರ್ಟು ಆತನ ವಿಚಾರಣೆ ನಡೆಸಿತು. ಆತನು ದೇವರಕುಮಾರನೆಂದು, ದೇವದೂಷಣೆಯ ಮಾತುಗಳನ್ನು ಆಡಿದ್ದಾನೆ ಎಂದು ಅಪವಾದವನ್ನು ಹೊರಿಸಿ ಆತನನ್ನು ಶಿಲುಬೆಗೇರಿಸಿ ಮರಣ ಶಿಕ್ಷೆಗೆ ಒಳಪಡಿಸಬೇಕೆಂದು ತೀರ್ಮಾನಿಸಿದರು. ಆದರೆ ಮರಣ ಶಿಕ್ಷೆಯನ್ನು ಕೊಡುವ ಅಧಿಕಾರ ಅವರಿಗೆ ಇರಲಿಲ್ಲ. ಅಲ್ಲಿ ಕೇವಲ ರೋಮನ್ ಅಧಿಕಾರಿ ಮಾತ್ರ ಮರಣ ಶಿಕ್ಷೆಯನ್ನು ಕೊಡಬಹುದಾಗಿತ್ತು. ಆದ್ದರಿಂದ ಅವರು ಆತನನ್ನು ಶುಕ್ರವಾರದ ಬೆಳಗಿನ 6 ರ ಹೊತ್ತಿಗೆಲ್ಲಾ ದೇಶಾಧಿಪತಿಯಾದ ಪೊಂತಿ ಪಿಲಾತನ ಬಳಿಗೆ ತೆಗೆದುಕೊಂಡು ಹೋಗಿ, ಆತ ತಾನು ಯೆಹೂದ್ಯರ ಅರಸನೆಂದು ಹೇಳಿಕೊಂಡು ಜನರು ರೋಮನ್‍ರಿಗೆ ತೆರಿಗೆ ಕೊಡಬಾರದೆಂದೂ, ಜನರು ರೋಮನ್‍ರ ವಿರುದ್ಧ ದಂಗೆ ಏಳುವಂತೆ ಪ್ರಚೋದಿಸುತ್ತಿದ್ದಾನೆಂದೂ ಆಪಾದನೆ ಹೊರಸಿದರು. ಪಿಲಾತನು ಆತನನ್ನು ಪರಿಕ್ಷಿಸಿ ಆತನಲ್ಲಿ ಯಾವ ತಪ್ಪನ್ನು ಕಾಣದ ಕಾರಣ ಕೊರುಡೆಗಳಿಂದ ಹೊಡೆಸಿ ಬಿಟ್ಟು ಬಿಡಲು ನಿರ್ಧರಿಸಿ ಕೊರಡೆಯಿಂದ ಹೊಡೆಸಿದ.

ಆದರೆ, ಅದನ್ನು ಒಪ್ಪಿಕೊಳ್ಳದವರು ಆತನನ್ನು ಬಿಟ್ಟುಬಿಟ್ಟರೆ ಮುಂದೆ ಅವನು ರೋಮ್ ಚಕ್ರವರ್ತಿಯ ವಿರುದ್ಧ ದಂಗೆ ಎಬ್ಬಿಸುವನೆಂದು ಗದ್ದಲವೆಬ್ಬಿಸಿದರು. ಕೊನೆಗೂ ಪಿಲಾತನು ಆತನನ್ನು ಶಿಲುಬೆಗೆ ಹಾಕಿಸಲು ಒಪ್ಪಿಗೆ ಕೊಟ್ಟನು. ಸಿಪಾಯಿಗಳು ಮತ್ತು ಧರ್ಮಾಧಿಕಾರಿಗಳು ಆತನಿಗೆ ನಾನಾ ಹಿಂಸೆಗಳನ್ನು ಕೊಟ್ಟು, ಶಿಲುಬೆಯನ್ನು ಆತನ ಮೇಲೆ ಹೊರಿಸಿಕೊಂಡು ಗೊಲ್ಗಥಾ ಗುಡ್ಡಕ್ಕೆ ಬೆಳಗ್ಗೆ 9.00ಗಂಟೆಗೆ ಹೊರಟು 11.00ಗಂಟೆ ಸುಮಾರಿಗೆ ತಲುಪಿದರು. ಆತನನ್ನು ಶಿಲುಬೆಯ ಮೇಲೆ ಮಲಗಿಸಿ ಆತನ ಕೈಕಾಲುಗಳಲ್ಲಿ 6 ಇಂಚಿನ ಮೊಳೆಗಳನ್ನು ಹೊಡೆದರು. ಸುಮಾರು ಮದ್ಯಾಹ್ನ 12 ರ ಹೊತ್ತಿಗೆ ಆತನ ಶಿಲುಬೆಯನ್ನು ಎತ್ತಿ, ತೋಡಿದ್ದ ತಗ್ಗಿನಲ್ಲಿ ಶಿಲುಬೆಯನ್ನು ನಿಲ್ಲಿಸಿದರು. ಆತನ ಬಲಗಡೆಯಲ್ಲಿ ಮತ್ತು ಎಡಗಡೆಯಲ್ಲಿ ಇಬ್ಬರು ಕಳ್ಳರನ್ನೂ ಶಿಲುಬೆಗೆ ಏರಿಸಲಾಯಿತು. ಆತನ ತಲೆಯಿಂದ ಕಾಲಿನವರೆಗೆ ಗಾಯಗಳಾಗಿದ್ದು ಪೂರ್ತಿ ದೇಹದಿಂದ ರಕ್ತ ಸುರಿಯುತ್ತಿತ್ತು. ಆತನ ಕಷ್ಟ ನೋಡಲಾಗದೇ ಸೂರ್ಯನು ಮಂಕಾದಾಗ ನಡು ಮಧ್ಯಾಹ್ನವೇ ಕತ್ತಲಾವರಿಸಿತು.

ತಂದೆಯೇ ಇವರನ್ನು ಕ್ಷಮಿಸು, ತಾವು ಏನು ಮಾಡುತ್ತಿದ್ದೇವೆಂದು ಅವರು ಅರಿಯರು ಆತನು ಪ್ರಾಣ ಬಿಡುವ ಮುಂಚೆ ಶಿಲುಬೆಯ ಮೇಲೆ ಆಡಿದ ಏಳು ಮಾತುಗಳು ಬಹು ಅಮೂಲ್ಯವಾದವುಗಳು. ಅದರಲ್ಲಿಯೂ ಆತನು ನುಡಿದ ಮೊದಲನೆಯ ಮಾತು, ತನ್ನನ್ನು ವಿನಾಃಕಾರಣ ಹಿಂಸಿಸುತ್ತಿರುವವರನ್ನು ಕುರಿತದ್ದಾಗಿದೆ. ತಂದೆಯೇ ಇವರನ್ನು ಕ್ಷಮಿಸು, ತಾವು ಏನು ಮಾಡುತ್ತಿದ್ದೇವೆಂದು ಅವರು ಅರಿಯರು ಎಂದು ಪ್ರಾರ್ಥಿಸಿದನು. ಈ ಮಾತಿಗೆ ಎಷ್ಟು ಪ್ರಾಮುಖ್ಯತೆ ಇದೆಯೆಂದರೆ ಇದೇ ಕ್ರೈಸ್ತ ಧರ್ಮದ ತಿರುಳಾಗಿದೆ.

ಅಂದು ಮಧ್ಯಾಹ್ನ 3 ಗಂಟೆ ವೇಳೆಗೆ ಆತ ಪ್ರಾಣ ಬಿಟ್ಟಾಗ ಭೂಕಂಪವಾಯಿತು. ಗುಡುಗು ಮಿಂಚಿನಿಂದ ಕೂಡಿದ ಮಳೆ ಸುರಿಯಿತು. ಆತನನ್ನು ಕಾಯುತ್ತಿದ್ದ ಸಿಪಾಯಿಗಳ ಶತಾಧಿಪತಿಯು, ನಾವು ದೇವರಕುಮಾರನನ್ನು ಕೊಂದೆವು ಎಂದು ಉದ್ಗಾರ ತೆಗೆದ. ಸಂಜೆ 4 ಗಂಟೆ ಸುಮಾರಿಗೆ ಅರಿಮತ್ತಾಯದ ಯೊಸೇಫನೆಂಬ ಸನ್ಹೆಂದ್ರಿಯ ಸಭೆಯ ಸದಸ್ಯ ಪಿಲಾತನ ಅಪ್ಪಣೆ ಪಡೆದು ಸಿಪಾಯಿಗಳ ಸಹಾಯದಿಂದ ಯೇಸುಕ್ರಿಸ್ತನ ದೇಹವನ್ನು ಶಿಲುಬೆಯಿಂದ ಇಳಿಸಿ, ದೇಹಕ್ಕೆ ಸುಗಂಧ ದ್ರವ್ಯವನ್ನು ಲೇಪಿಸಿ, ನಾರುಮಡಿಯಲ್ಲಿ ಸುತ್ತಿ ಗೊಲ್ಗಥಾ ಗುಡ್ಡದ ಕೆಳಬಾಗದಲ್ಲಿರುವ ತನ್ನ ತೋಟದಲ್ಲಿ ತನಗಾಗಿ ನಿರ್ಮಿಸಿದ ಸಮಾಧಿಯಲ್ಲಿ ಆತನ ಶವವನ್ನು ತಂದಿಟ್ಟ. ಅವನ ಜೊತೆಯಲ್ಲಿ ಸಿಪಾಯಿಗಳು, ನಿಕೋದೇಮ ಮತ್ತು ಕೆಲವು ಸ್ತ್ರೀಯರು ಸಹ ಇದ್ದರು. ಸಮಾಧಿಯನ್ನು ದೊಡ್ಡ ಬಂಡೆಯಿಂದ ಮುಚ್ಚಿ ರಾಜಮುದ್ರೆಯನ್ನು ಹಾಕಿ ಅದನ್ನು ಕಾಯಲು ಕಾವಲುಗಾರರನ್ನು ನೇಮಿಸಿದ. ಸಂಜೆ 6.00ಗಂಟೆಗೆ ಯೆಹೂದ್ಯರ (ಇಸ್ರಾಯೇಲ್ಯರ) ಸಬ್ಬತ್ತು ಪ್ರಾರಂಭವಾಗತ್ತಿದ್ದ ಕಾರಣ ಅಷ್ಟರೊಳಗಾಗಿ ಎಲ್ಲಾ ಸಂಸ್ಕಾರವನ್ನು ಮುಗಿಸಿ ಮನೆ ಸೇರಿಕೊಂಡರು. ನಿಯಮಮದಂತೆ ಸಬ್ಬತ್ತು ದಿನದಂದು (ಈಗಿನ ಶನಿವಾರ) ವಿಶ್ರಮಿಸಿಕೊಂಡರು.

ಕತ್ತಲು ಸರಿಯಿತು, ಬೆಳಕು ಹರಿಯಿತು ಭಾನುವಾರ ಬೆಳಿಗ್ಗೆ ಇನ್ನೂ ಕತ್ತಲೆಯಿರುವಾಗಲೇ ಸಮಾಧಿಗೆ ಮುಚ್ಚಿದ ಕಲ್ಲು ತನಾಗಿಯೇ ಪಕ್ಕಕ್ಕೆ ಸರಿಯಿತು. ಕಾವಲುಗಾರರು ಆ ಬೆಳಕನ್ನು ನೋಡಲಾಗದೆ ಮೂರ್ಛೆ ಹೋದರು. ಅವರಿಗೆ ಎಚ್ಚರವಾದಾಗ ಸಮಾಧಿಗೆ ಮುಚ್ಚಿದ ಕಲ್ಲು ಪಕ್ಕಕ್ಕೆ ಸರಿದು ಸಮಾಧಿ ಖಾಲಿಯಿರುವುದು ಕಂಡು ಬಂತು. ಊರೊಳಗೆ ಓಡಿ ಬಂದು ಯೇಸುಕ್ರಿಸ್ತನು ಮೃತ್ಯುಂಜಯನಾದ ವಿಚಾರವನ್ನು ಮಹಾಯಾಜಕರಿಗೂ, ಶಾಸ್ತ್ರೀಗಳಿಗೂ ತಿಳಿಸಿದರು. ಮಗ್ದಲದ ಮರಿಯಳು ಮತ್ತು ಮೂರು ನಾಲ್ಕು ಜನ ಸ್ತ್ರೀಯರು ಸಮಾಧಿಗೆ ಬಂದಾಗ ಸಮಾಧಿಗೆ ಹಾಕಿದ ಬಂಡೆ ಸರಿದು ಸಮಾಧಿ ತೆರೆದುಕೊಂಡಿತ್ತು. ಅಲ್ಲಿ ಇಬ್ಬರು ಶ್ವೇತವಸ್ತ್ರಧಾರಿಗಳನ್ನು ಕಂಡು ಯೇಸುವಿನ ದೇಹ ಎಲ್ಲಿ ಎಂದು ಅವರನ್ನು ಪ್ರಶ್ನಿಸಿದರು. ಆಗ ಅವರು, ಬದುಕಿರುವವನನ್ನು ಸತ್ತವರೊಳಗೆ ಹುಡುಕುವುದೇನು? ಆತನು ಇಲ್ಲಿ ಇಲ್ಲ. ಸತ್ತವರೊಳಗಿನಿಂದ ಎದ್ದಿದ್ದಾನೆ ಹೋಗಿ ಆತನ ಶಿಷ್ಯರಿಗೆ ಈ ಶುಭವಾರ್ತೆಯನ್ನು ತಿಳಿಸಿ ಎಂದು ಹೇಳಿದರು.

ಆ ಸಂದರ್ಭದಲ್ಲಿ ಮಗ್ದಲದ ಮರಿಯಳು ಅಳುತ್ತಾ ಅಲ್ಲಿಯ ತೋಟದಲ್ಲಿಯೇ ನಿಂತಿದ್ದಳು. ಆಗ ಯೇಸುಕ್ರಿಸ್ತ ಅಲ್ಲಿಗೆ ಬಂದು ಅಮ್ಮಾ ಏಕೆ ಅಳುತ್ತಿರುವೆ ಎಂದು ಕೇಳಿದ. ಆದರೆ, ಆಕೆ ಯೇಸುವನ್ನು ಗುರುತಿಸಲಾಗದೇ ತೋಟಗಾರನೆಂದು ತಿಳಿದು, ಅಯ್ಯಾ, ನೀನು ನನ್ನ ಸ್ವಾಮಿಯ ದೇಹವನ್ನು ತೆಗೆದುಕೊಂಡು ಹೋಗಿದ್ದರೆ, ಎಲ್ಲಿಟ್ಟಿದ್ದಿ? ಎಂದು ತಿಳಿಸು. ನಾನು ತೆಗೆದುಕೊಂಡು ಹೋಗುತ್ತೇನೆ ಎಂದಳು. ಆಗ ಯೇಸು ಆಕೆಗೆ ಮರಿಯಳೇ ಎಂದಾಗ ಮರಿಯಳು ಆತನ ಸ್ವರವನ್ನು ಗರುತಿಸಿ ರಬ್ಬೂನಿ (ಗುರುವೇ) ಎಂದು ಹೇಳಿ ಆತನ ಪಾದಕ್ಕೆ ನಮಿಸಲು ಹೋದಳು.

ಆಗ ಕ್ರಿಸ್ತ, ನನ್ನನ್ನು ಮುಟ್ಟಬೇಡ, ನಾನಿನ್ನೂ ತಂದೆಯ ಬಳಿಗೆ ಹೋಗಿಲ್ಲ. ಹೋಗಿ ನಾನು ಎದ್ದಿದ್ದೇನೆಂದು ನನ್ನ ಶಿಷ್ಯರಿಗೆ ತಿಳಿಸು ಎಂದು ಹೇಳಿದನು. ಆದರೆ, ಇದನ್ನು ಆಕೆ ಹೋಗಿ ಹೇಳಿದರೂ ಶಿಷ್ಯರು ನಂಬಲಿಲ್ಲ. ನಂತರ ಪೇತ್ರ ಯೊಹಾನರು ಸಮಾಧಿಗೆ ಹೋಗಿ ನೋಡಿ ಸಮಾಧಿ ಖಾಲಿ ಇರುವುದನ್ನು ಬಂದು ತಿಳಿಸಿದರು. ಅಂದು ಕ್ರಿಸ್ತನು ಮೃತ್ಯಂಜಯನಾಗಿರದಿದ್ದರೆ ಇಂದು ಕ್ರೈಸ್ತರಾಗಲೀ ಕ್ರೈಸ್ತ ಧರ್ಮವಾಗಲೀ ಇರುತ್ತಿರಲಿಲ್ಲ. ಅಂದು ಸಂಜೆ ಮಹಯಾಜಕರು, ಶಾಸ್ತ್ರಿಗಳ ಭಯದಿಂದ ಬಚ್ಚಿಟ್ಟುಕೊಂಡು ಕೂತಿದ್ದ ಶಿಷ್ಯರ ನಡುವೆ ಯೇಸುಕ್ರಿಸ್ತನು ಬಂದು ತನ್ನ ಕೈಕಾಲುಗಳ ಗಾಯಗಳನ್ನು ತೋರಿಸಿದಾಗ ಅವರು ನಂಬಿ ಧೈರ್ಯಗೊಂಡರು. ಹೀಗೆ ಆತನು 40 ದಿನಗಳ ಕಾಲ ಅವರನ್ನು ಭೇಟಿಯಾಗುತ್ತಾ ಧೈರ್ಯಪಡಿಸಿದನು, 40ನೆಯ ದಿನ ಶಿಷ್ಯರನ್ನು ಮತ್ತು ಅವರ ಜೊತೆಯಲ್ಲಿದ್ದವರನ್ನು ಕರೆದುಕೊಂಡು ಯೆರೂಸಲೇಮಿನ ಪೂರ್ವಕ್ಕೆ ಬೆತಾನ್ಯ ಎಂಬ ಊರಿನ ಹತ್ತಿರ ಎತ್ತರವಾದ ಸ್ಥಳದಲ್ಲಿ ನಿಂತುಕೊಂಡು ತನ್ನ ಶಿಷ್ಯರಿಗೆ, ಲೋಕದ ಕಟ್ಟಕಡೆಯವರೆಗೆ ಹೋಗಿ ನನ್ನ ಸುವಾರ್ತೆಯನ್ನು ಸಾರಿ ನನ್ನ ಶಿಷ್ಯರನ್ನಾಗಿ ಮಾಡಿರಿ. ಯುಗದ ಅಂತ್ಯದವರೆಗೂ ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿ ಅವರನ್ನು ಕೈಯತ್ತಿ ಆಶಿರ್ವದಿಸುತ್ತಿರುವಾಗಲೇ ಎಲ್ಲರ ಕಣ್ಣ ಮುಂದೆಯೇ ಆತ ಸ್ವರ್ಗಾರೋಹಣ ಮಾಡಿದನು.

ಲೇಖಕರು: ಹೆಚ್.ವಿಜಯ ಭಾಸ್ಕರ ನಿವೃತ್ತ ಪ್ರಾಂಶುಪಾಲರು, ಯಾದಗಿರಿ

ಇದನ್ನೂ ಓದಿ: Good Friday 2021: ಬದುಕಿನುದ್ದಕ್ಕೂ ಪ್ರೀತಿ, ಮಾನವೀಯ ಮೌಲ್ಯಗಳನ್ನು ಸಾರಿದ ಏಸುವಿನ ಮರಣದ ಶೋಕದ ದಿನ ಈ ಗುಡ್​ಫ್ರೈಡೇ.. 

Christmas 2020 | ಕೆಲವರು ಸದಾ ಪ್ರಸ್ತುತ; ಉದಾಹರಣೆಗೆ ಯೇಸುಕ್ರಿಸ್ತ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ