
ಪ್ರತಿ ತಿಂಗಳೂ ಕೂಡ ಭಾರತೀಯ ಹಬ್ಬಗಳು ವೈವಿಧ್ಯಮಯವಾಗಿರುವುದನ್ನು ನಾವು ಕಾಣಬಹುದು. ಜೊತೆಗೆ ಪ್ರತಿ ಹಬ್ಬವೂ ನಮ್ಮ ದೇಶದ ಶ್ರೀಮಂತ ಸಾಂಸ್ಕೃತಿಕ ಛಾಯೆಯನ್ನು ಪ್ರತಿಬಿಂಬಿಸುತ್ತದೆ. ಈ ಸಂದರ್ಭಗಳು ಜನರನ್ನು ಒಟ್ಟುಗೂಡಿಸುವಲ್ಲಿ ಮತ್ತು ತಲೆಮಾರುಗಳಿಂದ ರವಾನಿಸಲ್ಪಟ್ಟ ಸಂಪ್ರದಾಯಗಳನ್ನು ಆಚರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಬಾರಿ ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ತಿಳಿಯಿರಿ.
ಪ್ರತಿ ತಿಂಗಳ ಚತುರ್ಥಿ ತಿಥಿಯಂದು ಸಂಕಷ್ಟ ಚತುರ್ಥಿ ವ್ರತವನ್ನು ಆಚರಿಸಲಾಗುತ್ತದೆ. ಈ ದಿನ ಗಣಪತಿಯನ್ನು ಪೂಜಿಸುವುದರಿಂದ ಜೀವನದಲ್ಲಿನ ಸಕಲ ಸಂಕಷ್ಟಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಕಾರಣಕ್ಕಾಗಿ ಸಂಕಷ್ಟ ಚತುರ್ಥಿ ದಿನದಂದು ಹೆಚ್ಚಿನ ಜನರು ಗಣಪತಿ ಆರಾಧನೆಯನ್ನು ಮಾಡುತ್ತಾರೆ. ಈ ಬಾರಿಯ ಸಂಕಷ್ಟ ಚತುರ್ಥಿಯನ್ನು ಅಕ್ಟೋಬರ್ 2 ರಂದು ಆಚರಣೆ ಮಾಡಲಾಗುತ್ತದೆ.
ಭಗವಾನ್ ಶ್ರೀ ಕೃಷ್ಣನ ಅಣ್ಣ ಬಲರಾಮ ಅವರತಾರವೆತ್ತಿ ಭೂಮಿಗೆ ಬಂದ ದಿನವನ್ನು ಹಾಲ ಷಷ್ಠಿ ಅಥವಾ ‘ಚಂದ್ರ ಷಷ್ಠಿ’ ಅಥವಾ ಬಲರಾಮ ಜಯಂತಿಯನ್ನಾಗಿ ಆಚರಿಸಲಾಗುತ್ತದೆ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಆರನೆಯ ದಿನದಂದು ಈ ಪವಿತ್ರ ದಿನವನ್ನು ಆಚರಿಸುತ್ತಾರೆ. ದೇಶದ ಬೇರೆ ಬೇರೆ ಭಾಗದಲ್ಲಿ ಇದನ್ನು ಬೇರೆ ಬೇರೆ ಹೆಸರುಗಳಿಂದ ಈ ದಿನವನ್ನು ಆಚರಿಸಲಾಗುತ್ತದೆ.
ಭಾದ್ರಪದ ಮಾಸದ ಕೃಷ್ಣ ಪಕ್ಷವನ್ನು ಪಿತೃಪಕ್ಷ ಎಂದು ಕರೆಯುತ್ತಾರೆ. ಈ ಪಕ್ಷದಲ್ಲಿ ಪಿತೃ ಕಾರ್ಯಗಳನ್ನು ಮಾಡಲಾಗುತ್ತದೆ. ಇನ್ನು ಪಿತೃಪಕ್ಷದ ಒಂಭತ್ತನೇ ದಿನ ಅಂದರೆ ನವಮಿಯಂದು ಮಾಡುವ ಸಂಸ್ಕಾರವೇ ಅವಿಧವಾ ನವಮಿ ಶ್ರಾದ್ಧ. ಪತಿಗಿಂತ ಮೊದಲೇ ನಿಧನ ಹೊಂದಿದ ಸ್ತ್ರೀಯರ ಶ್ರಾದ್ಧವನ್ನು ಈ ದಿನ ಮಾಡಲಾಗುತ್ತದೆ.
ಹಿಂದೂ ಧಾರ್ಮಿಕ ಪಂಚಾಗ ಪ್ರಕಾರ ಸರ್ವೈಕಾದಶಿಯಂದು ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ವ್ರತವನ್ನು ಆಚರಿಸುವುದರಿಂದ ಮತ್ತು ಕ್ರಮಬದ್ಧವಾಗಿ ಮಹಾವಿಷ್ಣುವನ್ನು ಪೂಜಿಸುವುದರಿಂದ ವ್ಯಕ್ತಿಯ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಇಷ್ಟಾರ್ಥ ಎಲ್ಲಾ ಕಾರ್ಯಗಳು ನೆರವೇರುತ್ತವೆ.
ಯತಿ ಮಹಾಲಯ ಅಥವಾ ದ್ವಾದಶಿ ಶ್ರಾದ್ಧವನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ದ್ವಾದಶಿಯಂದು ಆಚರಿಸಲಾಗುತ್ತದೆ. ಯತಿ ಮಹಾಲಯವು ಮಹಾಲ್ಯ ಪಕ್ಷದ ಹನ್ನೆರಡನೇ ದಿನವಾಗಿದೆ. ಯತಿ ಮಹಾಲಯದಂದು ದೇಹವನ್ನು ತೊರೆದ ಋಷಿಗಳು ಅಥವಾ ಸಂತರಿಗೆ ಶ್ರಾದ್ಧವನ್ನು ನಡೆಸಲಾಗುತ್ತದೆ. ಈ ದಿನ ಯತಿಗಳಿಗೆ ಶ್ರಾದ್ಧವನ್ನು ನಡೆಸುವುದರಿಂದ ಇದನ್ನು ಯತಿ ಮಹಾಲ್ಯ ಎಂದು ಕರೆಯಲಾಗುತ್ತದೆ. ಈ ದಿನ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಅಥವಾ ಆಹಾರವನ್ನು ನೀಡಲಾಗುತ್ತದೆ.
ಪಿತೃ ಪಕ್ಷದ ಕೊನೆಯ ದಿನವನ್ನೇ ಮಹಾಲಯ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಇದನ್ನು ಸರ್ವಪಿತ್ರಿ ಅಮಾವಾಸ್ಯೆ ಅಥವಾ ಪಿತೃ ಪಕ್ಷ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ ಮತ್ತು ನಿಮ್ಮ ಅಗಲಿದ ಪೂರ್ವಜರಿಗೆ ತರ್ಪಣವನ್ನು ನೀಡಲು ಸೂಕ್ತ ದಿನವಾಗಿದೆ. ಈ ಬಾರಿ ಮಹಾಲಯ ಅಮಾವಾಸ್ಯೆಯನ್ನು ಅಕ್ಟೋಬರ್ 14 ರಂದು ಆಚರಿಸಲಾಗುತ್ತದೆ.
ಹಿಂದೂಗಳಿಗೆ ಅತ್ಯಂತ ಶುಭಕರ ದಿನಗಳಲ್ಲಿ ನವರಾತ್ರಿ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ನವರಾತ್ರಿ ಒಂಬತ್ತು ದಿನಗಳ ಸುದೀರ್ಘ ಹಬ್ಬವಾಗಿದ್ದು ದುರ್ಗಾ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಈ ಹಬ್ಬವನ್ನು ಭಕ್ತಿಯಿಂದ ಆಚರಿಸುವುದರಿಂದ ಸುಖ, ಶಾಂತಿ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಈ ಬಾರಿ ಅಕ್ಟೋಬರ್ 15 ರಂದು ನವರಾತ್ರಿ ಆರಂಭವಾಗಿ ಅಕ್ಟೋಬರ್ 24 ರಂದು ಕೊನೆಗೊಳ್ಳಲಿದೆ.
ಹಿಂದೂಗಳು ನದಿಯನ್ನು ದೇವರಂತೆ ಪೂಜಿಸುತ್ತಾರೆ. ಹಾಗಾಗಿ ವರ್ಷಕ್ಕೊಮ್ಮೆ ಕಾವೇರಿ ಸಂಕ್ರಮಣ ಅಥವಾ ತುಲಾ ಸಂಕ್ರಮಣವನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 17 ರಂದು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ನವರಾತ್ರಿ ಹಬ್ಬದ 5 ನೇ ದಿನವನ್ನು ಲಲಿತಾ ಪಂಚಮಿ ಎಂದು ಆಚರಿಸಲಾಗುತ್ತದೆ. ಈ ದಿನದಂದು ಸತಿ ದೇವಿಯ ರೂಪವಾದ ಲಲಿತಾ ದೇವಿಯನ್ನು ಪೂಜಿಸಲಾಗುತ್ತದೆ. ಈ ಬಾರಿ ಲಲಿತಾ ಪಂಚಮಿಯನ್ನು ಅಕ್ಟೋಬರ್ 19 ರಂದು ಗುರುವಾರ ಆಚರಿಸಲಾಗುತ್ತದೆ.
ನವರಾತ್ರಿಯ ಆರನೇ ದಿನದಂದು ಮನೆ ಮನೆಯಲ್ಲಿ ಶಾರದೇಯ ಪ್ರತಿಷ್ಠಾಪನೆ ಮಾಡಿ ವಿದ್ಯೆ, ಬುದ್ದಿ ಕೊಡು ಎಂದು ಬೇಡಿಕೊಳ್ಳುವುದರ ಜೊತೆಗೆ ಪುಸ್ತಕವನ್ನಿಟ್ಟು ಪೂಜೆ ಮಾಡಲಾಗುತ್ತದೆ. ಈ ದಿನ ಶಾರದೆಯನ್ನು ಭಕ್ತಿಯಿಂದ ಮೆಚ್ಚಿಸುವುದರಿಂದ ವಿದ್ಯಾ ಬುದ್ದಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ನವರಾತ್ರಿಯ ಎಂಟನೇ ದಿನದಂದು, ದುರ್ಗಾ ದೇವಿಯ ಎಂಟನೇ ಶಕ್ತಿಯಾದ ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಕೈಗೊಳ್ಳುವ ಪೂಜೆಯಿಂದ ಭಕ್ತರಿಗೆ ಬಹಳಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. ಭಕ್ತರ ಬದುಕಿನಲ್ಲಿ ಬರುವ ಸಂಕಷ್ಟಗಳನ್ನು ತಾಯಿ ಗೌರಿ ಪರಿಹರಿಸಿ ತನ್ನ ಆಶೀರ್ವಾದದಿಂದ ದುಃಖಗಳನ್ನು ದೂರ ಮಾಡುತ್ತಾಳೆ ಎಂಬ ನಂಬಿಕೆ ಇದೆ. ಈ ದಿನ ಆಕೆಗೆ ಪ್ರೀಯವಾದ ತೆಂಗಿನಕಾಯಿ ಮತ್ತು ತೆಂಗಿನಕಾಯಿಯಿಂದ ಮಾಡಿದ ಪದಾರ್ಥಗಳನ್ನು ಮಾತೆ ಗೌರಿಗೆ ಅರ್ಪಿಸಲಾಗುತ್ತದೆ.
ಇದನ್ನೂ ಓದಿ:ಗೋಂದೋಲು ಆಚರಣೆ: ಬಡವರ ಹಬ್ಬಗಳು ಶ್ರೀಮಂತವಾಗಿರುತ್ತವೆ! ಇಂತಹ ಆಚರಣೆಗಳೇ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಗೆ ಆಧಾರ
ಆಯುಧ ಪೂಜೆಯು ನವರಾತ್ರಿ ಹಬ್ಬದ 9ನೇ ದಿನದಂದು ಅಂದರೆ ಮಹಾನವಮಿಯಂದು ಆಚರಣೆ ಮಾಡಲಾಗುತ್ತದೆ. ನವಮಿ ತಿಥಿಯಂದು ಆಯುಧಪೂಜೆ ಮಾಡಲಾಗುತ್ತದೆ. ಆಯುಧ ಪೂಜೆಯನ್ನು ಶಸ್ತ್ರಪೂಜೆ ಮತ್ತು ಅಸ್ತ್ರಪೂಜೆ ಎಂದೂ ಕರೆಯುತ್ತಾರೆ. ಈ ದಿನದಂದು ಶಾರದಾ ವಿಸರ್ಜನೆ ಕೂಡ ನಡೆಯುತ್ತದೆ.
ವಿಜಯದಶಮಿ ನವರಾತ್ರಿಯ ಕೊನೆಯ ದಿನ. ಈ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದಸರಾ ದಿನದಂದು ಶಮೀ ವೃಕ್ಷವನ್ನು ಅಥವಾ ಬನ್ನಿ ಮರವನ್ನು ಪೂಜಿಸುವ ಸಂಪ್ರದಾಯ ಬಹಳ ಹಿಂದಿನಿಂದಲೂ ಇದೆ. ಈ ಬಾರಿ ವಿಜಯದಶಮಿಯನ್ನು ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ.
ಖಂಡಗ್ರಾಸ ಚಂದ್ರಗ್ರಹಣ ಅಕ್ಟೋಬರ್ 28 ರಂದು ಗೋಚರವಾಗಲಿದೆ. ಈ ಪೆನಂಬ್ರಲ್ ಗ್ರಹಣವು ಅಕ್ಟೋಬರ್ 28 ರಂದು ರಾತ್ರಿ 11 ಗಂಟೆಗೆ ಆರಂಭವಾಗಿ ಮಧ್ಯರಾತ್ರಿ 3. 56ಕ್ಕೆ ಮುಕ್ತಾಯಗೊಳ್ಳಲಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ