Kundli Sharada Mathe: ನಿಂತ ಭಂಗಿಯಲ್ಲಿ ಶಾರದಾ ಮಾತೆಯ ನೋಡಬೇಕೆಂದರೆ ಶಿವಮೊಗ್ಗ ಜಿಲ್ಲೆ ಕೂಡ್ಲಿ ಪುಣ್ಯಕ್ಷೇತ್ರಕ್ಕೆ ಬನ್ನಿ!
'ಕೂಡ್ಲಿ'ಯಲ್ಲಿ ಪ್ರಮುಖವಾದದ್ದು 'ಶಾರದಾಂಬೆ' ದೇವಾಲಯ ಮತ್ತು 'ಶಂಕರಾಚಾರ್ಯರ' ಪೀಠ. ಶಾರದೆ ಕೂಡ್ಲಿಯಲ್ಲಿ ನೆಲೆಸಲು ಒಂದು ಕಾರಣವಿದೆ.
ವಿದ್ಯಾಧಿದೇವತೆ ಶಾರದೆ ನೆಲೆಸಿರುವುದು ಪುಣ್ಯ ಕ್ಷೇತ್ರವಾದ ಶೃಂಗೇರಿಯಲ್ಲಿ. ಇದು ಎಲ್ಲರಿಗೂ ತಿಳಿದ ವಿಷಯ. ಬೇರೆ ಬೇರೆ ಕಡೆಯೂ ಶಾರದಾಮ್ಮನವರ ದೇವಸ್ಥಾನಗಳು ಇದ್ದು, ಭಕ್ತಾಭಿಮಾನಿಗಳು ತುಂಬಿದ್ದಾರೆ. ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿ ಶಾರದಾ ಅಮ್ಮನವರನ್ನು ಕುಳಿತ ಭಂಗಿಯಲ್ಲಿ ನೋಡುತ್ತೇವೆ. ನಿಂತ ಭಂಗಿಯಲ್ಲಿರುವ ಶಾರದಾ ಮಾತೆಯನ್ನು ನೋಡ ಬೇಕೆಂದರೆ, ಅಂಥ ಪುಣ್ಯಕ್ಷೇತ್ರ ಇರುವುದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ‘ಕೂಡ್ಲಿ’ ಎಂಬ ಗ್ರಾಮದಲ್ಲಿ. ಇದು ಶಾರದಾ ಮಾತೆಯ ಮೂಲ ಸ್ಥಾನವೆಂದು ತಿಳಿಸಲಾಗಿದೆ. ಇಲ್ಲಿ ಮಾತ್ರ ‘ಶಾರದೆ’ ನಿಂತಿರುವ ಭಂಗಿಯ ವಿಗ್ರಹವವಿದೆ. ಈ ಪುಣ್ಯಕ್ಷೇತ್ರವು ಹಲವು ವಿಶೇಷತೆಗಳಿಂದ ಕೂಡಿದ್ದು, ರಾಜ್ಯದ ನಾನಾ ಭಾಗಗಳಿಂದ ಭಕ್ತ ಸಮೂಹ ಬರುತ್ತಾರೆ.
ಈ ಕ್ಷೇತ್ರವು ಋಷಿ ಮುನಿಗಳು ತಪಸ್ಸನ್ನಾಚರಿಸಿದ ಪುಣ್ಯಕ್ಷೇತ್ರವಾಗಿದೆ. ತುಂಗ-ಭದ್ರಾ ನದಿ ಸಂಗಮವಾಗಿ ‘ಕೂಡಲಿ’ ಎಂಬ ಹೆಸರಿದ್ದು, ಆಡು ಭಾಷೆಯಲ್ಲಿ ‘ಕೂಡ್ಲಿ’ ಆಗಿದೆ. ತುಂಗಭದ್ರಾ ಇಲ್ಲಿ ಸಂಗಮವಾಗಿ ಮುಂದೆ ಹರಿಯುತ್ತದೆ. ಇದನ್ನು ದಕ್ಷಿಣದ ‘ವಾರಣಾಸಿ’ ಎಂದು ಕರೆಯುತ್ತಾರೆ. ಕಾರಣ ರಾಮೇಶ್ವರ, ನರಸಿಂಹ, ವಿದ್ಯಾಶಂಕರ, ಬ್ರಹ್ಮೇಶ್ವರ, ಮುಂತಾದ ದೇವಸ್ಥಾನಗಳು, ಹಾಗೂ ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ ಸಂಗಮೇಶ್ವರ ದೇವಾಲಯವಂತೂ ಸುಂದರವಾದ ಶಿಲ್ಪ ಕಲೆಯಿಂದ ಕಣ್ಸೆಳೆಯುವಂತಿದೆ. ಹರಿ-ಹರರು ಓಡಾಡಿದ ಪುಣ್ಯಸ್ಥಳವೆಂದು ಹೇಳುತ್ತಾರೆ. ಹಾಗೆ ಇಲ್ಲಿ ‘ರಂಗನಾಥ ಸ್ವಾಮಿ’ ಮತ್ತು ಚಿಂತಾಮಣಿ ನರಸಿಂಹ ಸ್ವಾಮಿ ದೇವಸ್ಥಾನವಿದೆ. ಇದನ್ನು ಭಕ್ತ ಪ್ರಹ್ಲಾದ ಸ್ಥಾಪಿಸಿದ್ದನು ಎಂದು ನಂಬಲಾಗಿದೆ. ಭಗವತ್ಪಾದ ಶಂಕರಾಚಾರ್ಯರು ಮತ್ತು ಅಕ್ಷೋಭ್ಯ ತೀರ್ಥರ ಮಠವಿದೆ.
‘ಕೂಡ್ಲಿ’ಯಲ್ಲಿ ಪ್ರಮುಖವಾದದ್ದು ‘ಶಾರದಾಂಬೆ’ ದೇವಾಲಯ ಮತ್ತು ‘ಶಂಕರಾಚಾರ್ಯರ’ ಪೀಠ. ಶಾರದೆ ಕೂಡ್ಲಿಯಲ್ಲಿ ನೆಲೆಸಲು ಒಂದು ಕಾರಣವಿದೆ. ಆದಿ ಗುರು ಶ್ರೀ ಶಂಕರಾಚಾರ್ಯರಿಗೆ ಕಾಶ್ಮೀರ ಪುರವಾಸಿನಿಯಾದ ಶ್ರೀ ಶಾರದಾ ಮಾತೆ ಸಾಕ್ಷಾತ್ಕಾರವಾಗುತ್ತಾಳೆ. ಆಗ ಶಂಕರರು ತಾಯಿ ನೀನು ಉತ್ತರದಿಂದ- ದಕ್ಷಿಣದ ಶೃಂಗೇರಿಗೆ ಬಂದು ನೆಲೆಸು ಎಂದು ಕೇಳಿದಾಗ, ಶಾರದೆ ಶಂಕರರ ಮಾತಿಗೆ ಒಪ್ಪಿಕೊಂಡಳು, ಹಾಗೆ ಒಂದು ಷರತ್ತು ಹಾಕುತ್ತಾಳೆ. ಆ ಷರತ್ತಿನಂತೆ “ಶಂಕರ, ನನ್ನ ತೇಜಸ್ಸು ಉತ್ತರದಿಂದ ದಕ್ಷಿಣದ ಕಡೆಗೆ ಬರುತ್ತದೆ. ನೀನು ಮುಂದೆ ಮುಂದೆ ಹೋಗಬೇಕು ನಾನು ಹಿಂದಿನಿಂದ ಬರುತ್ತೇನೆ. ನನ್ನ ಹೆಜ್ಜೆಯ ಗೆಜ್ಜೆ ಸಪ್ಪಳ ನಿಲ್ಲುವವರೆಗೂ ನೀನು ತಿರುಗಿ ನೋಡ ಬಾರದು. ಯಾವ ಸ್ಥಳದಲ್ಲಿ ನನ್ನ ಗೆಜ್ಜೆಯ ಸಪ್ಪಳ ನಿಲ್ಲುತ್ತದೆಯೋ ಅಲ್ಲಿಯೇ ನಾನು ನೆಲೆಸುತ್ತೇನೆ” ಎಂದಳು.
ಅವಳ ಮಾತಿನಂತೆ ಶಂಕರರು ಮುಂದೆ ಮುಂದೆ ಹೊರಟರು ಶಾರದೆಯ ತೇಜಸ್ಸು ಹಿಂದೆ ಹಿಂದೆ ಬರುತ್ತಿತ್ತು. ಶಂಕರರು ತುಂಗಭದ್ರಾ ನದಿ ಸಂಗಮಿಸುವ ಕೂಡ್ಲಿ ಗೆ ಬರುತ್ತಾರೆ. ಹರಿವ ನೀರಿನ ರಭಸಕ್ಕೆ ಗೆಜ್ಜೆಯ ಸಪ್ಪಳ ಅವರಿಗೆ ಕೇಳಲಿಲ್ಲ. ಆಗ ಹಿಂತಿರುಗಿ ನೋಡಿದರು. ಶಾರದಾ ಮಾತೆ ಹೇಗೆ ನಡೆದು ಬರುತ್ತಿದ್ದಳೋ ಹಾಗೆಯೇ ನಿಂತಳು. ತಾಯಿ ನಿಂತ ಜಾಗವೇ ‘ಕೂಡ್ಲಿ’ಯಾಗಿತ್ತು. ಕಾರ್ಯಕಾರಣವಿಲ್ಲದೆ ಯಾವುದೂ ಆಗುವುದಿಲ್ಲ. ದೇವಿಯ ಇಚ್ಛೆ ಇದೇ ಆಗಿತ್ತು. ಶಾರದೆ ನೆಲೆಸಿದ ತಾಣ ‘ಕೂಡ್ಲಿ’ ಪುಣ್ಯಕ್ಷೇತ್ರ ವಾಯಿತು.
ಪುನಃ ಶಂಕರರು ಶಾರದಾ ಮಾತೆಯನ್ನು ಸ್ತುತಿಸಿ ಶೃಂಗೇರಿಗೆ ಬರುವಂತೆ ಪರಿಪರಿಯಾಗಿ ಕೋರಿಕೊಂಡರು. ತಾಯಿ ಹೇಳಿದಳು ಈಗ ನೀನು ಮುಂದೆ ಹೋಗು ನಾನು ಇಲ್ಲಿಯೇ ಇರುತ್ತೇನೆ . ಆಶ್ವೀಜ ಮಾಸದಲ್ಲಿ ಬರುವ ನವರಾತ್ರಿಯ 10 ದಿನಗಳು ಶೃಂಗೇರಿಗೆ ಬರುತ್ತೇನೆ. ಈಗ ನನ್ನ ನೆಲೆ ಇದೇ ಆಗಿದೆ ಎಂದಳು. ಶಂಕರರು ಶ್ರೀ ಚಕ್ರವನ್ನು ಮತ್ತು ನಿಂತ ಭಂಗಿಯ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಿ ಪೂಜಿಸಿ, ನಿತ್ಯ ಪೂಜೆಗೆ ವ್ಯವಸ್ಥೆ ಮಾಡಿ ಶೃಂಗೇರಿಗೆ ಹೊರಟರು. ಈ ರೀತಿಯಾಗಿ ಶಾರದೆ ಪ್ರಥಮವಾಗಿ ನೆಲೆ ನಿಂತಿರುವ ಪುಣ್ಯಕ್ಷೇತ್ರ ಮತ್ತು ಶಂಕರಾಚಾರ್ಯರ ತಪೋಭೂಮಿಯಾದ ‘ಕೂಡ್ಲಿ’ ಕ್ಷೇತ್ರವಾಗಿದೆ.
ಇಲ್ಲಿ ಶ್ರೀ ಶಾರದಾ ದಕ್ಷಿಣಾಮ್ನಾಯ ಜಗದ್ಗುರು ಪೀಠವನ್ನು ಸ್ಥಾಪಿಸಿ ಈ ಕೂಡ್ಲಿ ಮಠದ ಸಂಸ್ಥಾನವನ್ನು ಮೊದಲ ಬಾರಿಗೆ ಶ್ರೀ ಭಾರತೀ ತೀರ್ಥ ನರಸಿಂಹ ಯತಿಗಳು ಆರಂಭಿಸಿ ಪ್ರಥಮ ಪೀಠಾಧಿಪತಿಗಳಾದರು. ಶೃಂಗೇರಿಯಲ್ಲಿ ಪೀಠಾಧ್ಯಕ್ಷರಾಗಿದ್ದ ನರಸಿಂಹ ತೀರ್ಥ ಭಾರತಿ ಸ್ವಾಮಿಗಳು, ಕೂಡ್ಲಿಯಲ್ಲಿ ಪ್ರಥಮವಾಗಿ ಪೀಠಾಧಿಪತಿಯಾಗಲು ಒಂದು ಸಂದರ್ಭ ಕಾರಣವಾಯಿತು. ಇವರು ಒಮ್ಮೆ ತೀರ್ಥಯಾತ್ರೆಗೆಂದು ಪುಣ್ಯಕ್ಷೇತ್ರ ಕಾಶಿಗೆ ಹೋಗಿದ್ದರು. ತೀರ್ಥಯಾತ್ರೆ ಮುಗಿಸಿ ಕಾಶಿಯಿಂದ ಬಹಳ ದಿನಗಳಾದರೂ ಬರಲಿಲ್ಲ. ಆಗ ಅಲ್ಲಿದ್ದವರು ಶ್ರೀ ನರಸಿಂಹ ಭಾರತಿ ತೀರ್ಥರ ಶಿಷ್ಯರಲ್ಲೇ ಒಬ್ಬರನ್ನು ಪೀಠಾಧ್ಯಕ್ಷರನ್ನಾಗಿ ಮಾಡಿದರು.
ಆ ಸಮಯಕ್ಕೆ ಕಾಶಿಯಾತ್ರೆ ಮುಗಿಸಿಕೊಂಡು ನರಸಿಂಹ ಭಾರತಿ ತೀರ್ಥರು ಬಂದರು. ಅವರ ಶಿಷ್ಯನನ್ನು ಪೀಠಾಧ್ಯಕ್ಷರನ್ನಾಗಿ ಮಾಡಿದ್ದನ್ನು ಮನಗಂಡು ತಾವು ಮತ್ತೆ ಹೋಗುವುದು ತರವಲ್ಲ ಎಂದುಕೊಂಡು ಶೃಂಗೇರಿಯನ್ನು ಪ್ರವೇಶಿಸದೆ ‘ಕೂಡ್ಲಿ’ ಕ್ಷೇತ್ರಕ್ಕೆ ಬಂದರು. ಈ ಕ್ಷೇತ್ರದಲ್ಲಿ ಶಾರದಾ ಪೀಠ ಸ್ಥಾಪಿಸಿ ಮೊದಲ ಪೀಠಾಧ್ಯಕ್ಷರಾದರು. ಅಂದಿನಿಂದ ಇಂದಿನ ತನಕ 24 ಪೀಠಾಧಿಪತಿಗಳು ಆಗಿದ್ದಾರೆ.
ನರಸಿಂಹ ತೀರ್ಥ ಭಾರತಿ ಸ್ವಾಮಿಗಳು ಕೂಡ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರು. ದೇವಾಲಯಕ್ಕೆ ಬರುವ ಭಕ್ತರಿಗೆ ನಿತ್ಯವೂ ಅನ್ನ ಸಂತರ್ಪಣೆ, ವಿಶೇಷ ದಿನಗಳು ಹಾಗೂ ಶುಭ, ತಿಥಿ, ವಾರಗಳಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯುತ್ತದೆ. ಎಲ್ಲೆಲ್ಲಿಂದಲೋ ಭಕ್ತರು ಗುರು ಸನ್ನಿಧಿ ಗೆ ಬಂದು, ಮಕ್ಕಳಿಗೆ ಅಕ್ಷರಾಭ್ಯಾಸ ವಿದ್ಯಾದಿದೇವತೆ ಶಾರದೆ ಸನ್ನಿಧಿಯಲ್ಲಿ ಮಾಡಿಸುತ್ತಾರೆ. ಮಕ್ಕಳಿಗೆ ಅನ್ನಪ್ರಾಶವನ್ನು ಮಾಡಿಸುತ್ತಾರೆ. ಚೌಲ – ಉಪನಯನ, ಹೋಮ -ಹವನ, ಪೂಜೆಗಳು ಇವುಗಳೆಲ್ಲ ನಡೆಯುತ್ತದೆ. ಗೋಶಾಲೆ ಇದ್ದು ನೂರಕ್ಕೂ ಹೆಚ್ಚು ಹಸುಗಳಿವೆ. ‘ಅಕ್ಷೋಭ್ಯತೀರ್ಥ’ ರ ಮಠವನ್ನು ಸ್ಥಾಪನೆ ಮಾಡಿದ್ದಾರೆ. ವೈಭವದಿಂದ ನವರಾತ್ರಿ ನಡೆಯುತ್ತದೆ.
ಶಾರದಾ ಮಾತೆ ದೇವಸ್ಥಾನದ ಪಕ್ಕದಲ್ಲಿ ಚಂದ್ರಮೌಳೇಶ್ವರ, ಇನ್ನೊಂದು ಪಕ್ಕದಲ್ಲಿ ಭವಾನಿ ಶಂಕರ ಗುಡಿಗಳಿವೆ. ಶ್ರಾವಣ ಮಾಸ, ನವರಾತ್ರಿ, ಚೈತ್ರ ವೈಶಾಖ ಮಾಸಗಳಲ್ಲಿ ಬಹಳ ವಿಶೇಷವಾಗಿ ಪೂಜೆಗಳು ನಡೆಯುತ್ತದೆ. ಭಕ್ತಾದಿಗಳು ಬಂದು ಹಲವಾರು ಸೇವೆಯನ್ನು ಮಾಡಿಸುತ್ತಾರೆ. ಶುಕ್ರವಾರ ಮಂಗಳವಾರ ವಿಶೇಷ ಪೂಜೆ ನಡೆಯುತ್ತದೆ. ಭಕ್ತರು ದರ್ಶನಕ್ಕೆ ಬರುತ್ತಾರೆ. ಶ್ರೀ ಆದಿ ಗುರು ಶಂಕರಾಚಾರ್ಯರಿಂದ ಸ್ಥಾಪಿತವಾದ ಕೂಡ್ಲಿ ಕ್ಷೇತ್ರದ ಶಾರದಾಂಬೆಯ ದರ್ಶನ ಮಾಡಲು, ಎಲ್ಲಾ ಕಡೆಯಿಂದಲೂ ಭಕ್ತರು ಬರುತ್ತಾರೆ. ಇಲ್ಲಿರುವ ಎಲ್ಲಾ ದೇವಾಲಯಗಳನ್ನು, ಪ್ರಕೃತಿ ತಾಣವನ್ನು ವೀಕ್ಷಿಸಿ ತುಂಗಭದ್ರ ನದಿಯಲ್ಲಿ ಆಟವಾಡುತ್ತಾ ಸಂಭ್ರಮಿಸುತ್ತಾರೆ.
‘ಕೂಡ್ಲಿ’ ಕ್ಷೇತ್ರ, ಶಿವಮೊಗ್ಗ ಜಿಲ್ಲೆ ಸಮೀಪವೇ ಇರುವುದರಿಂದ ಪ್ರವಾಸಿ ತಾಣವು ಆಗಿದೆ. ಹಾಗೆ ಶಿವಮೊಗ್ಗದ ಸುತ್ತಮುತ್ತಲು ಪ್ರೇಕ್ಷಣೀಯ ಸ್ಥಳಗಳು ಪ್ರಸಿದ್ಧ ಪುಣ್ಯ ಕ್ಷೇತ್ರಗಳು ಇದ್ದು, ಪ್ರವಾಸಿಗರಿಗೆ ಒಳ್ಳೆಯ ಪ್ರವಾಸಿ ತಾಣವು ಆಗಿದೆ. ಶಿವಮೊಗ್ಗದ ಸುತ್ತಮುತ್ತ ಅಂದರೆ ಜೋಗ ಫಾಲ್ಸ್, ಪ್ರಸಿದ್ಧಚೌಡೇಶ್ವರಿ ದೇವಸ್ಥಾನ, ಸಿಗಂದೂರು ದೇವಸ್ಥಾನ, ಇತಿಹಾಸ ಪ್ರಸಿದ್ಧ ಶಿವಪ್ಪ ನಾಯಕ ಆಳಿದ ಕೆಳದಿ, ಇಕ್ಕೇರಿ, ಸಾಗರದ ಮಾರಿಕಾಂಬ ದೇವಸ್ಥಾನ, ಹತ್ತಿರದಲ್ಲಿ ಸ್ವಲ್ಪ ಮುಂದೆ ಹೋದರೆ ಶಿರಸಿ ಮಾರಿಕಾಂಬ, ಬನವಾಸಿ, ಹುಂಚ ಪದ್ಮಾವತಿ ಅಮ್ಮನವರ ದೇವಸ್ಥಾನ, ಇನ್ನೂ ಹೋದರೆ ಶೃಂಗೇರಿ, ಹೊರನಾಡು, ಬಾಳೆಬರೇ ಘಾಟಿ ಅಮ್ಮ, ಕೊಲ್ಲೂರು, ಋಷ್ಯಶೃಂಗರ ಕಿಗ್ಗ ಕ್ಷೇತ್ರ, ಆಗುಂಬೆ, ಮೃಗವಧೆ, ಈ ಕಡೆ ಕೊಡಚಾದ್ರಿ ಬೆಟ್ಟ, ಅಲ್ಲಲ್ಲಿ ಸಣ್ಣಪುಟ್ಟ ನೀರಿನ ಝರಿಗಳು, ದೊಡ್ಡ ಫಾಲ್ಸ್ ಗಳು, ಹೊಸನಗರ ಶ್ರೀರಾಮಚಂದ್ರಾಪುರಮಠ, ಇಲ್ಲಂತೂ ಗೋಶಾಲೆ ನೋಡಲು ಮತ್ತು ದೇವರ ದರ್ಶನ ಮಾಡಿ, ಬಾಳೆಎಲೆ ಊಟ, ಮಿಡಿ ಉಪ್ಪಿನಕಾಯಿ, ಕಷಾಯ, ಎಂದೆಂದಿಗೂ ಮರೆಯುವುದಿಲ್ಲ.
ಹೊಸನಗರ ಪ್ರಸಿದ್ಧ ಗಣಪತಿ ದೇವಸ್ಥಾನ, ಜೇನುಕಲ್ಲಮ್ಮ, ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನ, ಪುತ್ತಿಗೆ ಮಠ, ತುಂಗಾ ನದಿ ಚಕ್ರತೀರ್ಥ, ಸಿದ್ದೇಶ್ವರ ಬೆಟ್ಟ, ಗಾಜನೂರು, ಲಯನ್ ಸಫಾರಿ, ತಾವರೆಕೆರೆ, ಕೋಟೆ ಆಂಜನೇಯ, ಇನ್ನು ಹತ್ತು ಹಲವಾರು ಪ್ರೇಕ್ಷಣೀಯ ಸ್ಥಳಗಳು, ಚಾರಣಿಗರಿಗೆ ಬೆಟ್ಟ ಗುಡ್ಡಗಳು, ಬಯಲು ತಪ್ಪಲುಗಳು, ಸಹ್ಯಾದ್ರಿ ಬೆಟ್ಟ ತಪ್ಪಲುಗಳ ರಮಣೀಯ ದೃಶ್ಯ ನಗರದ ಕೋಟೆ ಕೊತ್ತಲಗಳು, ಮಲೆನಾಡ ಸವಿರುಚಿಯ ಹೋಟೆಲ್ ಗಳು, ಖುಷಿಯಾಗಿ ಹೋಗಿ ಮಲೆನಾಡ ಸೊಬಕನ್ನು ಕಣ್ತುಂಬಾ ನೋಡಿ ಬರಬಹುದಾದ ಚಂದದ ತಾಣ. (ಬರಹ: ಆಶಾ ನಾಗಭೂಷಣ)