
ಹಿಂದೂ ಧರ್ಮದಲ್ಲಿ ಮನುಷ್ಯನ ಜನನದಿಂದ ಮರಣದವರೆಗೆ ಒಟ್ಟು 16 ಸಂಸ್ಕಾರಗಳನ್ನು ಹೇಳಲಾಗಿದೆ. ಇವುಗಳಲ್ಲಿ 16ನೇ ಹಾಗೂ ಕೊನೆಯ ಸಂಸ್ಕಾರವೇ ‘ಅಂತ್ಯಸಂಸ್ಕಾರ’. ಗರುಡ ಪುರಾಣದ ಪ್ರಕಾರ “ಯಾವುದೇ ವ್ಯಕ್ತಿಯ ಅಂತ್ಯಸಂಸ್ಕಾರ ಮುಗಿದ ನಂತರ, ಅವರ ಕುಟುಂಬದವರು ಅಥವಾ ಸಂಬಂಧಿಕರು ಸ್ಮಶಾನದಿಂದ ವಾಪಸ್ ಬರುವಾಗ ಎಂದಿಗೂ ಹಿಂತಿರುಗಿ (ತಿರುಗಿ) ನೋಡಬಾರದು.” ಇದರ ಹಿಂದೆ ಒಂದು ದೊಡ್ಡ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರಣವಿದೆ.
“ಈ ಜೀವನ ಎಂಬುದು ಒಂದು ಬಾಡಿಗೆ ಮನೆ, ಒಂದು ದಿನ ಇದನ್ನು ಖಾಲಿ ಮಾಡಲೇಬೇಕು” ಎಂಬ ಮಾತನ್ನು ನಾವು ಕೇಳುತ್ತಲೇ ಇರುತ್ತೇವೆ. ಅಂದರೆ ಹುಟ್ಟಿದ ಪ್ರತಿಯೊಬ್ಬರಿಗೂ ಸಾವು ನಿಶ್ಚಿತ. ಆದರೂ ಮನುಷ್ಯ ಸಾವಿನ ಬಗ್ಗೆ ಮಾತನಾಡಲು ಹಿಂಜರಿಯುತ್ತಾನೆ, ಅದಕ್ಕೆ ಹೆದರುತ್ತಾನೆ. ನಮ್ಮ ದೇಹವು ಪಂಚಭೂತಗಳಿಂದ (ಪೃಥ್ವಿ, ಜಲ, ವಾಯು, ಅಗ್ನಿ, ಆಕಾಶ) ಮಾಡಲ್ಪಟ್ಟಿದೆ ಮತ್ತು ಒಂದು ದಿನ ಇದೇ ತತ್ವಗಳಲ್ಲಿ ಲೀನವಾಗುತ್ತದೆ. ಮನುಷ್ಯ ಎಷ್ಟೇ ಆಸ್ತಿ-ಅಂತಸ್ತು ಗಳಿಸಿದರೂ ಕೊನೆಗೆ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿರುವಂತೆ: ‘ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ’ — ಅಂದರೆ, ಹುಟ್ಟಿದವನಿಗೆ ಸಾವು ಖಚಿತ ಮತ್ತು ಸತ್ತವನಿಗೆ ಮರುಜನ್ಮವೂ ಖಚಿತ. ಇದು ಎಂದಿಗೂ ಮುಗಿಯದ ನಿರಂತರ ಚಕ್ರ.
ಗರುಡ ಪುರಾಣದ ಪ್ರಕಾರ, ಚಿತೆಗೆ ಅಗ್ನಿಸ್ಪರ್ಶ ಮಾಡಿದ ನಂತರ ದೇಹವು ಬೂದಿಯಾಗಬಹುದು, ಆದರೆ ಆತ್ಮಕ್ಕೆ ಅಳಿವಿಲ್ಲ. ಭಗವದ್ಗೀತೆಯಲ್ಲಿ ಹೇಳಿರುವಂತೆ ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು, ಅಗ್ನಿಯು ಸುಡಲಾರದು. ದೇಹ ನಶಿಸಿದರೂ, ಆತ್ಮಕ್ಕೆ ತನ್ನ ಕುಟುಂಬದವರ ಮೇಲಿನ ಮೋಹ (ಮಮಕಾರ) ತಕ್ಷಣವೇ ಕರಗುವುದಿಲ್ಲ. ಅದು ತನ್ನವರ ಸುತ್ತಮುತ್ತಲೇ ಸುಳಿದಾಡುತ್ತಿರುತ್ತದೆ. ಈ ಮೋಹದ ಬಂಧನದಿಂದಾಗಿ ಆತ್ಮಕ್ಕೆ ಮುಂದಿನ ಲೋಕದ ಪ್ರಯಾಣ ಬೆಳೆಸಲು ಅಥವಾ ಮುಕ್ತಿ ಪಡೆಯಲು ಕಷ್ಟವಾಗುತ್ತದೆ. ಈ ಮೋಹದ ಪಾಸವನ್ನು ಮುರಿಯಲು ‘ಹಿಂತಿರುಗಿ ನೋಡಬಾರದು’ ಎಂಬ ನಿಯಮವನ್ನು ಮಾಡಲಾಗಿದೆ.
ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?
ಸ್ಮಶಾನದಿಂದ ವಾಪಸ್ ಬರುವಾಗ ಯಾರಾದರೂ ತಿರುಗಿ ನೋಡಿದರೆ, “ನನ್ನವರು ಇನ್ನು ಕೂಡ ನನ್ನ ಮೇಲಿನ ಆಸೆಯನ್ನು ಬಿಟ್ಟಿಲ್ಲ, ನನ್ನನ್ನು ನೆನೆಯುತ್ತಿದ್ದಾರೆ” ಎಂದು ಆತ್ಮ ಭಾವಿಸುತ್ತದೆ. ಇದರಿಂದ ಅದರ ಮೋಹ ಮತ್ತಷ್ಟು ಹೆಚ್ಚಾಗಿ, ಅದು ಮುಂದಿನ ಲೋಕಕ್ಕೆ ಹೋಗದೆ ಇದೇ ಲೋಕದಲ್ಲಿ ಅಲೆಯತೊಡಗುತ್ತದೆ ಎಂದು ನಂಬಲಾಗಿದೆ.
ಇನ್ನೊಂದು ನಂಬಿಕೆಯ ಪ್ರಕಾರ, ಸ್ಮಶಾನದಲ್ಲಿ ತಿರುಗಿ ನೋಡುವುದರಿಂದ ಅಲ್ಲಿನ ನಕಾರಾತ್ಮಕ ಶಕ್ತಿಗಳು ಅಥವಾ ಚಡಪಡಿಸುತ್ತಿರುವ ಆತ್ಮಗಳು ಜೀವಂತ ವ್ಯಕ್ತಿಯ ಮೇಲೆ ಪ್ರಭಾವ ಬೀರಬಹುದು. ವಿಶೇಷವಾಗಿ ಮಕ್ಕಳು ಈ ಪ್ರಭಾವಕ್ಕೆ ಬೇಗ ಒಳಗಾಗುವುದರಿಂದ, ಅವರನ್ನು ಎಂದಿಗೂ ತಿರುಗಿ ನೋಡದಂತೆ ಎಚ್ಚರಿಸಿ ಮುಂದೆ ಕರೆದುಕೊಂಡು ಹೋಗಲಾಗುತ್ತದೆ.
ಅಂತ್ಯಸಂಸ್ಕಾರದ ನಂತರ ಹಿಂತಿರುಗಿ ನೋಡದಿರುವುದು ಕೇವಲ ಒಂದು ಆಚರಣೆಯಲ್ಲ; ಅದು ಬದುಕಿರುವವರಿಗೆ “ಹೋದವರನ್ನು ನೆನೆದು ಮೋಹಕ್ಕೆ ಒಳಗಾಗಬೇಡಿ, ಜೀವನದಲ್ಲಿ ಮುಂದೆ ಸಾಗಿ” ಎಂಬ ಸಂದೇಶ ನೀಡಿದರೆ, ಅಗಲಿದ ಆತ್ಮಕ್ಕೆ “ನಿಮ್ಮ ಲೌಕಿಕ ಬಂಧನಗಳು ಮುಗಿದಿವೆ, ಮುಕ್ತಿಯ ಕಡೆಗೆ ಸಾಗಿ” ಎಂದು ಹೇಳುವ ಅತ್ಯುನ್ನತ ಆಧ್ಯಾತ್ಮಿಕ ಸಂಕೇತವಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ