ಹೈದರಾಬಾದ್‌ನಲ್ಲಿ ಬರೋಬ್ಬರಿ 1.01 ಕೋಟಿ ರೂ.ಗೆ ಹರಾಜಾಯ್ತು ಗಣೇಶನ ಲಡ್ಡು ಪ್ರಸಾದ; ಏನಿದರ ವಿಶೇಷತೆ ಗೊತ್ತಾ?

ಹೈದರಾಬಾದ್‌ನ ಕೀರ್ತಿ ರಿಚ್‌ಮಂಡ್ ವಿಲ್ಲಾಸ್‌ನಲ್ಲಿ ನಡೆದ ಗಣೇಶ ಚತುರ್ಥಿ ಲಡ್ಡು ಹರಾಜು ಈ ಬಾರಿ ಹೊಸ ಇತಿಹಾಸ ಸೃಷ್ಟಿಸಿದೆ. ರೋಮಾಂಚಕ ಬಿಡ್ಡಿಂಗ್‌ನಲ್ಲಿ 'ಶಕ್ತಿಮಾನ್' ತಂಡ 1.01 ಕೋಟಿ ರೂ.ಗೆ ಲಡ್ಡು ಪಡೆದು ದಾಖಲೆ ನಿರ್ಮಿಸಿತು. ಸಂಗ್ರಹವಾದ ಈ ಹಣವನ್ನು 'ಆರ್‌ಪಿ ದಿಯಾ ಚಾರಿಟೇಬಲ್ ಟ್ರಸ್ಟ್' ಮೂಲಕ ಬಡವರ ಮಕ್ಕಳ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮತ್ತು ವಿವಿಧ ದತ್ತಿ ಕಾರ್ಯಗಳಿಗೆ ಬಳಸಲಾಗುತ್ತದೆ. ಇದು ಹಬ್ಬದ ಸಂಭ್ರಮದ ಜೊತೆಗೆ ಸಾಮಾಜಿಕ ಕಲ್ಯಾಣಕ್ಕೆ ಮಾದರಿಯಾಗಿದೆ.

ಹೈದರಾಬಾದ್‌ನಲ್ಲಿ ಬರೋಬ್ಬರಿ 1.01 ಕೋಟಿ ರೂ.ಗೆ ಹರಾಜಾಯ್ತು ಗಣೇಶನ ಲಡ್ಡು ಪ್ರಸಾದ; ಏನಿದರ ವಿಶೇಷತೆ ಗೊತ್ತಾ?
1.01 ಕೋಟಿ ರೂ.ಗೆ ಹರಾಜಾಯ್ತು ಗಣೇಶನ ಲಡ್ಡು ಪ್ರಸಾದ
Image Credit source: Ai generated

Updated on: Sep 24, 2026 | 10:38 AM

ಹೈದರಾಬಾದ್‌ನ ಬಂಡ್ಲಗುಡ ಜಾಗೀರ್‌ನಲ್ಲಿರುವ ಪ್ರಸಿದ್ಧ ‘ಕೀರ್ತಿ ರಿಚ್‌ಮಂಡ್ ವಿಲ್ಲಾಸ್’ನಲ್ಲಿ ಗಣೇಶ ಚತುರ್ಥಿ ಆಚರಣೆಯ ಅಂಗವಾಗಿ ನಡೆದ ಲಡ್ಡು ಹರಾಜು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಗಣೇಶ ವಿಸರ್ಜನೆಗೂ ಮುನ್ನ ನಡೆದ ಈ ರೋಚಕ ಹರಾಜಿನಲ್ಲಿ ಭಕ್ತರ ನಡುವೆ ತೀವ್ರ ಪೈಪೋಟಿ ಏರ್ಪಟ್ಟು, ಅಂತಿಮವಾಗಿ ಪ್ರಸಾದದ ಲಡ್ಡು ಕೋಟಿ ಬೆಲೆಗೆ ಹರಾಜಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಕ್ಷಣಕ್ಷಣಕ್ಕೂ ಹೆಚ್ಚಿದ ಪೈಪೋಟಿ: ಶಕ್ತಿಮಾನ್ ತಂಡಕ್ಕೆ ಒಲಿದ ಪ್ರಸಾದ:

ರಿಚ್‌ಮಂಡ್ ವಿಲ್ಲಾಸ್ ಆವರಣದಲ್ಲಿ ವಿಲ್ಲಾ ನಿವಾಸಿಗಳು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಈ ಹರಾಜಿನಲ್ಲಿ ಭಾಗವಹಿಸಿದ್ದರು. ಹರಾಜಿನಲ್ಲಿ ಗೆಲ್ಲಲು ನಿವಾಸಿಗಳು ವಿವಿಧ ಗುಂಪುಗಳನ್ನು ರಚಿಸಿಕೊಂಡು ಸ್ಪರ್ಧೆಗಿಳಿದಿದ್ದರು. ಕ್ಷಣಕ್ಷಣಕ್ಕೂ ಬಿಡ್ಡಿಂಗ್ ಬೆಲೆ ಏರುತ್ತಾ ಸಾಗಿ, ಅಂತಿಮವಾಗಿ ‘ಶಕ್ತಿಮಾನ್’ ಎಂಬ ತಂಡವು ಬರೋಬ್ಬರಿ 1.01 ಕೋಟಿ ರೂ.ಗೆ ಈ ಪವಿತ್ರ ಲಡ್ಡುವನ್ನು ತನ್ನದಾಗಿಸಿಕೊಂಡಿತು. ಆದರೆ, ಕಳೆದ ಮೂರು ವರ್ಷಗಳ ದಾಖಲೆಗೆ ಹೋಲಿಸಿದರೆ ಈ ಬಾರಿ ಲಡ್ಡುವಿನ ಬೆಲೆಯಲ್ಲಿ ಕೊಂಚ ಇಳಿತ ಕಂಡುಬಂದಿದೆ. ಈ ಹಿಂದೆ 2024 ರಲ್ಲಿ 1.87 ಕೋಟಿ ಹಾಗೂ 2025 ರಲ್ಲಿ 2.31 ಕೋಟಿ ಭಾರಿ ಮೊತ್ತಕ್ಕೆ ಈ ಲಡ್ಡು ಹರಾಜಾಗಿತ್ತು.

ಕೋಟ್ಯಂತರ ರೂಪಾಯಿ ನಿಧಿ ಬಡವರ ಕಲ್ಯಾಣಕ್ಕೆ ಬಳಕೆ:

ಹರಾಜಿನಿಂದ ಸಂಗ್ರಹವಾದ ಕೋಟ್ಯಂತರ ರೂಪಾಯಿಗಳನ್ನು ಸಂಘಟಕರು ‘ಆರ್‌ಪಿ ದಿಯಾ ಚಾರಿಟೇಬಲ್ ಟ್ರಸ್ಟ್’ ಮೂಲಕ ಉದಾತ್ತ ಸಾಮಾಜಿಕ ಸೇವಾ ಕಾರ್ಯಕ್ರಮಗಳಿಗೆ ಬಳಸುತ್ತಿದ್ದಾರೆ. ವಿಲ್ಲಾಗಳಲ್ಲಿ ಕೆಲಸ ಮಾಡುವ ಬಡ ಚಾಲಕರು, ಕೆಲಸದವರ ಮತ್ತು ಸ್ಥಳೀಯ ಕಾರ್ಮಿಕರ ಮಕ್ಕಳ ಶಾಲಾ ಶುಲ್ಕವನ್ನು ಈ ನಿಧಿಯಿಂದ ಪಾವತಿಸಲಾಗುತ್ತದೆ. ಇದಲ್ಲದೇ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಅಗತ್ಯ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ. ವೃದ್ಧಾಶ್ರಮಗಳು, ಅನಾಥಾಶ್ರಮಗಳು ಮತ್ತು ವಿವಿಧ ದತ್ತಿ ಸಂಸ್ಥೆಗಳಿಗೆ ನೇರ ಆರ್ಥಿಕ ನೆರವು ಒದಗಿಸಲಾಗುತ್ತದೆ.

ಇದನ್ನೂ ಓದಿ: ಮನೆಯಲ್ಲಿ ಬೆಳ್ಳಿಯ ಗಣೇಶ ಮೂರ್ತಿ ಇಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

25 ಸಾವಿರದಿಂದ ಕೋಟಿ ರೂಪಾಯಿವರೆಗಿನ ಅದ್ಭುತ ಪಯಣ:

2018 ರಲ್ಲಿ ಕೇವಲ 25,000 ರಿಂದ ಪ್ರಾರಂಭವಾದ ರಿಚ್‌ಮಂಡ್ ವಿಲ್ಲಾಸ್‌ನ ಈ ಲಡ್ಡು ಹರಾಜು, ಇಂದು ವರ್ಷದಿಂದ ವರ್ಷಕ್ಕೆ ಅಭೂತಪೂರ್ವ ಜನಪ್ರಿಯತೆ ಗಳಿಸುತ್ತಿದೆ. ಕೇವಲ ಹಬ್ಬದ ಆಚರಣೆಗೆ ಸೀಮಿತವಾಗದೆ, ಸಂಗ್ರಹವಾದ ಹಣವನ್ನು ಸಮುದಾಯದ ಕಲ್ಯಾಣಕ್ಕೆ ಬಳಸುವ ಮೂಲಕ ಕೀರ್ತಿ ರಿಚ್‌ಮಂಡ್ ವಿಲ್ಲಾಸ್ ನಿವಾಸಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us