ಅಪರೂಪದ ಗಣೇಶೋತ್ಸವ: ಪಿಒಪಿ ಬದಲು 200 ಕೆಜಿ ಕಿವಿ ಹಣ್ಣು, 500 ಕೆಜಿ ಗೋಡಂಬಿಯಿಂದಲೇ ಸಿದ್ಧವಾಯ್ತು ಗಣೇಶ!

ಆಂಧ್ರಪ್ರದೇಶದ ಕಾಕಿನಾಡದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿಶಿಷ್ಟ ಗಣಪತಿ ಮೂರ್ತಿಗಳು ಈ ಬಾರಿಯ ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಿವೆ. 200 ಕೆಜಿ ಕಿವಿ ಹಣ್ಣು ಮತ್ತು 500 ಕೆಜಿ ಗೋಡಂಬಿ ಬಳಸಿ ಸಿದ್ಧಪಡಿಸಿರುವ ಈ ಗಣೇಶ ವಿಗ್ರಹಗಳು ಭಕ್ತರ ಗಮನ ಸೆಳೆಯುತ್ತಿವೆ. ಪರಿಸರ ಸ್ನೇಹಿ ಆಚರಣೆ ಮತ್ತು ಆರೋಗ್ಯಕರ ಪ್ರಸಾದದ ಪರಿಕಲ್ಪನೆ ಮೂಲಕ ಈ ಕಲಾತ್ಮಕ ಮೂರ್ತಿಗಳು ಭಾರಿ ಜನಪ್ರಿಯತೆ ಗಳಿಸಿವೆ.

ಅಪರೂಪದ ಗಣೇಶೋತ್ಸವ: ಪಿಒಪಿ ಬದಲು 200 ಕೆಜಿ ಕಿವಿ ಹಣ್ಣು, 500 ಕೆಜಿ ಗೋಡಂಬಿಯಿಂದಲೇ ಸಿದ್ಧವಾಯ್ತು ಗಣೇಶ!
ಅಪರೂಪದ ಗಣೇಶೋತ್ಸವ

Updated on: Sep 18, 2026 | 4:48 PM

ಗಣೇಶ ಚತುರ್ಥಿಯ ಸಂಭ್ರಮ ದೇಶದೆಲ್ಲೆಡೆ ಮನೆಮಾಡಿದ್ದು, ಗಲ್ಲಿ ಗಲ್ಲಿಗಳಲ್ಲೂ ವಿಧವಿಧದ ಗಣಪತಿಯ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ. ಆದರೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿಶಿಷ್ಟ ಗಣೇಶ ಮೂರ್ತಿಗಳು ಭಕ್ತರ ಮನಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರಿ ಸದ್ದು ಮಾಡುತ್ತಿವೆ. ಪರಿಸರ ಜಾಗೃತಿ ಮತ್ತು ಕಲಾತ್ಮಕತೆಯನ್ನು ಮೇಳೈಸಿ ಭಕ್ತರು ನಿರ್ಮಿಸಿರುವ ‘ಕೀವಿ ಹಣ್ಣಿನ ಗಣೇಶ’ ಹಾಗೂ ‘ಗೋಡಂಬಿ ಗಣೇಶ’ ಸದ್ಯ ಸಾರ್ವಜನಿಕರ ಗಮನಸೆಳೆಯುತ್ತಿದ್ದಾರೆ.

200 ಕೆಜಿ ಕೀವಿ ಹಣ್ಣಿನ ‘ಪ್ರಸಾದ ಗಣೇಶ’

ಕಾಕಿನಾಡದ ಉಲ್ಲಿಂಕಲ ವಾರಿ ವೀಧಿಯಲ್ಲಿ ಭಕ್ತರಾದ ಟೇಕುಮೂಡಿ ಪೆದ್ದಬಾಬು ಅವರ ನೇತೃತ್ವದಲ್ಲಿ ಸುಮಾರಾಗಿ 200 ಕೆಜಿ ಒಣ ಕೀವಿ (Dry Kiwi) ಹಣ್ಣುಗಳನ್ನು ಬಳಸಿ ಈ ಅಪರೂಪದ ಗಣೇಶ ಮೂರ್ತಿಯನ್ನು ಸಿದ್ಧಪಡಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಬಳಕೆಯಿಂದಾಗುವ ಪರಿಸರ ಮಾಲಿನ್ಯವನ್ನು ತಡೆಯುವುದು ಮತ್ತು ಭಕ್ತಿಗೆ ಆರೋಗ್ಯದ ಸ್ಪರ್ಶ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ವಿಸರ್ಜನೆಯ ದಿನ ಹಾಗೂ ನಂತರದ ದಿನಗಳಲ್ಲಿ ವಿಗ್ರಹ ತಯಾರಿಕೆಗೆ ಬಳಸಲಾದ ಈ 200 ಕೆಜಿ ಕೀವಿ ಹಣ್ಣುಗಳನ್ನು ಭಕ್ತರಿಗೆ ಆರೋಗ್ಯಕರ ಪ್ರಸಾದವಾಗಿ ವಿತರಿಸಲಾಗುವುದು ಎಂಬುದು ಇಲ್ಲಿನ ವಿಶೇಷತೆಯಾಗಿದೆ.

500 ಕೆಜಿ ಗೋಡಂಬಿಯಿಂದ ಅಲಂಕೃತ ಗಣಪತಿ:

ಮತ್ತೊಂದೆಡೆ, ಕಾಕಿನಾಡದ ಜಗನ್ನಾಥಪುರಂ ವ್ಯಾಪ್ತಿಯ ಜಮ್ಮಿಚೆಟ್ಟು ಸೆಂಟರ್‌ನಲ್ಲಿ ಬರೋಬ್ಬರಿ 500 ಕೆಜಿ ಉತ್ತಮ ಗುಣಮಟ್ಟದ ಗೋಡಂಬಿಯನ್ನು ಬಳಸಿ ಮೂರ್ತಿಯನ್ನು ನಿರ್ಮಿಸಲಾಗಿದೆ. ವಿಗ್ರಹದ ಪ್ರತಿಯೊಂದು ಅಂಗದಲ್ಲೂ ಅತ್ಯಂತ ನೈಪುಣ್ಯತೆಯಿಂದ ಗೋಡಂಬಿಯನ್ನು ಜೋಡಿಸಲಾಗಿದ್ದು, ಸಾಂಪ್ರದಾಯಿಕ ಹಾಗೂ ಕಲಾತ್ಮಕ ಸ್ಪರ್ಶ ನೀಡಲಾಗಿದೆ. ಈ ಶೋಭಾಯಮಾನ ಗಣೇಶನನ್ನು ಕಣ್ಣುತುಂಬಿಕೊಳ್ಳಲು ಜನಸಾಗರವೇ ಹರಿದುಬರುತ್ತಿದೆ.

ಇದನ್ನೂ ಓದಿ: ಜಪಾನ್‌ನಲ್ಲಿದೆ ‘ಡಿವೋರ್ಸ್ ಟೆಂಪಲ್’: ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಆಸರೆಯಾಗುವ 700 ವರ್ಷ ಹಳೆಯ ಕ್ಷೇತ್ರ!

ಭಕ್ತರ ಉತ್ಸಾಹ – ಸೆಲ್ಫಿ ಕ್ರೇಜ್:

ಪ್ರಕೃತಿದತ್ತ ಹಾಗೂ ಭಿನ್ನ ಸಾಮಗ್ರಿಗಳಿಂದ ಮೂರ್ತಿಗಳನ್ನು ನಿರ್ಮಿಸಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಅಪರೂಪದ ಗಣೇಶ ವಿಗ್ರಹಗಳ ಮುಂದೆ ಭಕ್ತರು ಸಾಲುಗಟ್ಟಿ ನಿಂತು ಫೋಟೋ ಹಾಗೂ ವೀಡಿಯೊಗಳನ್ನು ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಒಟ್ಟಿನಲ್ಲಿ, ಈ ಬಾರಿಯ ಗಣೇಶೋತ್ಸವದಲ್ಲಿ ಕಾಕಿನಾಡದ ಈ ಸೃಜನಶೀಲ ಗಣಪತಿ ರಾಜ್ಯಾದ್ಯಂತ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us