ಉತ್ಪನ್ನ ಏಕಾದಶಿಯಂದು ನಿರ್ಜಲ ಉಪವಾಸ ಮಾಡುವುದು ಹೇಗೆ? ಈ ದಿನ ಏನನ್ನು ಸೇವಿಸಬಾರದು?
ಉತ್ಪನ್ನ ಏಕಾದಶಿಯ ಉಪವಾಸವು ದಶಮಿಯ ಸೂರ್ಯಾಸ್ತದ ಒಂದು ದಿನ ಮೊದಲು ಪ್ರಾರಂಭವಾಗುತ್ತದೆ. ಉತ್ಪನ್ನ ಏಕಾದಶಿಯಂದು ನಿರ್ಜಲ ಉಪವಾಸವನ್ನು ಮಾಡಬೇಕು. ಅಂದ್ರೆ ಇಡೀ ದಿನ ಆಹಾರ ಮತ್ತು ನೀರನ್ನು ಸೇವಿಸದೆ ಉಪವಾಸ ಮಾಡಬೇಕು. ಉಪವಾಸ ಆಚರಿಸುವವರು ಸೂರ್ಯಾಸ್ತದ ನಂತರ ಏನನ್ನೂ ತಿನ್ನಬಾರದು ಅಥವಾ ಕುಡಿಯಬಾರದು.
ಸನಾತನ ಹಿಂದೂ ಧರ್ಮದಲ್ಲಿ ಏಕಾದಶಿ ಉಪವಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಕಾರ್ತಿಕ ಪೂರ್ಣಿಮೆಯ ನಂತರ ಕೃಷ್ಣ ಪಕ್ಷದಲ್ಲಿ ಬರುವ ಉತ್ಪನ್ನ ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ. ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ಎಲ್ಲಾ ಏಕಾದಶಿಗಳಲ್ಲಿ ಉತ್ಪನ್ನ ಏಕಾದಶಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ವರ್ಷ ಉತ್ಪನ್ನ ಏಕಾದಶಿಯು ನವೆಂಬರ್ 30ರ ಮಂಗಳವಾರ ಬಂದಿದೆ.
ಉತ್ಪನ್ನ ಏಕಾದಶಿ ಮಹತ್ವ ಏಕಾದಶಿ ಒಂದು ದೇವಿಯಾಗಿದ್ದು ಈಕೆ ಭಗವಾನ್ ವಿಷ್ಣುವಿನಿಂದ ಜನಿಸಿದಳು. ಆದ್ದರಿಂದ ಈ ಏಕಾದಶಿಯನ್ನು ಉತ್ಪನ್ನ ಏಕಾದಶಿಯೆಂದು ಕರೆಯಲಾಗುತ್ತೆ. ಪದ್ಮಪುರಾಣದ ಪ್ರಕಾರ, ಈ ಏಕಾದಶಿಯಂದು ಉಪವಾಸ ಮಾಡುವುದರ ಮೂಲಕ ಎಲ್ಲಾ ಏಕಾದಶಿ ಉಪವಾಸದ ಫಲವನ್ನು ಮತ್ತು ಮೋಕ್ಷವನ್ನು ಪಡೆಯಬಹುದು ಎನ್ನಲಾಗಿದೆ. ಈ ಉತ್ಪನ್ನ ಏಕಾದಶಿ ಉಪವಾಸ ಮಾಡುವುದರಿಂದ ವಿಷ್ಣುವಿನ ಅಪಾರ ಆಶೀರ್ವಾದ ಮತ್ತು ಎಲ್ಲಾ ತೀರ್ಥಯಾತ್ರೆಗಳ ದರ್ಶನಕ್ಕೆ ಸಮನಾದ ಫಲ ಸಿಗುತ್ತದೆ. ಈ ಸಮಯದಲ್ಲಿ ಮಾಡಿದ ದಾನವು ಜನ್ಮ ಜನ್ಮಗಳ ಫಲವನ್ನು ನೀಡುತ್ತದೆ. ಹಾಗೂ ಈ ಉಪವಾಸದ ವೇಳೆ ಮಾಡುವ ಜಪ, ತಪಸ್ಸು ಮತ್ತು ದಾನವು ಅಶ್ವಮೇಧ ಯಜ್ಞಕ್ಕೆ ಸಮವಾಗುವ ಫಲವನ್ನು ನೀಡುತ್ತದೆ ಎಂಬ ನಂಬಿಕೆ ಇದೆ.
ಉತ್ಪನ್ನ ಏಕಾದಶಿ ಉಪವಾಸ ವಿಧಾನ ಉತ್ಪನ್ನ ಏಕಾದಶಿಯ ಉಪವಾಸವು ದಶಮಿಯ ಸೂರ್ಯಾಸ್ತದ ಒಂದು ದಿನ ಮೊದಲು ಪ್ರಾರಂಭವಾಗುತ್ತದೆ. ಉತ್ಪನ್ನ ಏಕಾದಶಿಯಂದು ನಿರ್ಜಲ ಉಪವಾಸವನ್ನು ಮಾಡಬೇಕು. ಅಂದ್ರೆ ಇಡೀ ದಿನ ಆಹಾರ ಮತ್ತು ನೀರನ್ನು ಸೇವಿಸದೆ ಉಪವಾಸ ಮಾಡಬೇಕು. ಉಪವಾಸ ಆಚರಿಸುವವರು ಸೂರ್ಯಾಸ್ತದ ನಂತರ ಏನನ್ನೂ ತಿನ್ನಬಾರದು ಅಥವಾ ಕುಡಿಯಬಾರದು. ದ್ವಾದಶಿಯಂದು ಉಪವಾಸವನ್ನು ಮುರಿಯಲಾಗುತ್ತದೆ. ಉತ್ಪನ್ನ ಏಕಾದಶಿಯ ದಿನ ಸೂರ್ಯೋದಯಕ್ಕೆ ಮುನ್ನವೇ ಎದ್ದು ಸ್ನಾನ ಮಾಡಬೇಕು. ನಂತರ ವಿಷ್ಣು ದೇವರಿಗೆ ಪೂಜೆ ಸಲ್ಲಿಸಿ ಉಪವಾಸದ ಪ್ರತಿಜ್ಞೆಯನ್ನು ತೆಗೆದುಕಳ್ಳಬೇಕು. ಸೂರ್ಯನಿಗೆ ನೀರನ್ನು ಅರ್ಪಿಸಿ. ಮತ್ತೊಂದೆಡೆ ವಿಷ್ಣುವಿನ ಪೂಜೆಗೆ ಹಳದಿ ಹೂವುಗಳು, ಹಳದಿ ಹಣ್ಣುಗಳು, ಧೂಪದ್ರವ್ಯ, ತುಳಸಿ ದಳಗಳನ್ನು ಅರ್ಪಿಸಬೇಕು. ಸಂಜೆಯೂ ಆರತಿ ಮಾಡಿ ಪೂಜೆ ಮಾಡುವುದರಿಂದ ನಿಮಗೆ ಒಳಿತಾಗಲಿದೆ.
ಮೋಕ್ಷ ಪ್ರಾಪ್ತಿಯಾಗುತ್ತದೆ ಉತ್ಪನ್ನ ಏಕಾದಶಿಯಂದು ಉಪವಾಸ ಮಾಡಿದ್ರೆ ಭಕ್ತನು ಮರಣಾನಂತರ ಮೋಕ್ಷವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಈ ವ್ರತವನ್ನು ಆಚರಿಸುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ. ಈ ಉಪವಾಸವನ್ನು ಆಚರಿಸುವ ಭಕ್ತರಿಗೆ ಭಗವಾನ್ ವಿಷ್ಣುವು ವಿಶೇಷ ಅನುಗ್ರಹವನ್ನು ನೀಡುತ್ತಾನೆ. ಇದಲ್ಲದೆ ಅವರ ಎಲ್ಲಾ ಆಸೆಗಳು ಈಡೇರುತ್ತವೆ.
ವಿಷ್ಣುವಿಗೆ ಇವುಗಳನ್ನು ಅರ್ಪಿಸಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಉತ್ಪನ್ನ ಏಕಾದಶಿಯ ದಿನದಂದು ಭಗವಾನ್ ವಿಷ್ಣುವನ್ನು ಮೊದಲು ಪೂಜಿಸಬೇಕು. ಸಾಧ್ಯವಾದರೆ, ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ಅಲ್ಲಿ ಯಾವುದೇ ಹಳದಿ ಹೂವಿನ ಹಾರವನ್ನು ಅರ್ಪಿಸಿ. ಇದರ ನಂತರ, ಕೇಸರಿ ಪಾಯಸವನ್ನು ಅರ್ಪಿಸಿ. ಆದರೆ ಖೀರ್‌ಗೆ ತುಳಸಿ ಎಲೆಗಳನ್ನು ಸೇರಿಸಿರಬೇಕು. ನಂತರ, ಅರಳಿ ಮರಕ್ಕೆ ನೀರನ್ನು ಅರ್ಪಿಸಿ, ನಂತರ ಅರಳಿ ಮರದ ಬೇರಿಗೆ ಹಸಿ ಹಾಲನ್ನು ಅರ್ಪಿಸಿ, ತುಪ್ಪದ ದೀಪವನ್ನು ಹಚ್ಚಿ ಭಕ್ತಿಯಿಂದ ಪೂಜಿಸಿ. ಇದನ್ನು ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಹೆಚ್ಚು ಸಂತೋಷಪಡುತ್ತಾಳೆ ಮತ್ತು ಸ್ಥಳೀಯರ ಅಪೇಕ್ಷೆಗಳು ಈಡೇರುತ್ತವೆ ಎಂದು ನಂಬಲಾಗಿದೆ.
ಉತ್ಪನ್ನ ಏಕಾದಶಿಯಂದು ಇವುಗಳನ್ನು ಸೇವಿಸಬಾರದು ಉತ್ಪನ್ನ ಏಕಾದಶಿ ವ್ರತದ ದಿನ ಅನ್ನ ಮತ್ತು ಉದ್ದಿನ ಬೇಳೆಯನ್ನು ಸೇವಿಸಬಾರದು. ಈ ದಿನ ಸಾತ್ವಿಕ ಆಹಾರವನ್ನು ಹಗಲಿನಲ್ಲಿ ಮಾತ್ರ ಸೇವಿಸಬೇಕೆಂಬ ಪದ್ಧತಿ ಇದೆ. ಈ ಏಕಾದಶಿ ವ್ರತವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುವುದರಿಂದ ಉಪವಾಸದ ಪುಣ್ಯಕ್ಕಿಂತ ಅನೇಕ ಪಟ್ಟು ಪುಣ್ಯವನ್ನು ಪಡೆಯಬಹುದು.
ಇದನ್ನೂ ಓದಿ: ವಿಷ್ಣು ಪ್ರಿಯ, ಅತ್ಯಂತ ಮಹತ್ವವಿರುವ ಉತ್ಪನ್ನ ಏಕಾದಶಿ ಕಥೆ ಏನು? ಇಲ್ಲಿದೆ ಉತ್ಪನ್ನ ಏಕಾದಶಿ ಶುಭ ಮುಹೂರ್ತ ಮತ್ತು ಪೂಜಾ ವಿಧಾನ