Lakshmi Puja: ತಾಯಿ ಲಕ್ಷ್ಮೀ ದೇವಿಯ ಎಂಟು ರೂಪಗಳು, ಅವುಗಳ ಪ್ರಾಮುಖ್ಯತೆ ತಿಳಿದುಕೊಳ್ಳಿ!
ತಾಯಿ ಲಕ್ಷ್ಮೀ ಸಂಪತ್ತಿನ ದೇವತೆ. ಜೀವನದಲ್ಲಿ ಸಮೃದ್ಧಿಯನ್ನು ಪಡೆಯಲು ದೇವಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮೀ ದೇವಿಯ ಎಂಟು ರೂಪಗಳಿದ್ದು ಅವು ತಮ್ಮದೇ ಆದ ವಿಭಿನ್ನ ಧಾರ್ಮಿಕ ಮಹತ್ವವನ್ನು ಹೊಂದಿವೆ. ಹಾಗಾಗಿ ದೇವಿಯು ತನ್ನ ವಿವಿಧ ರೂಪಗಳಲ್ಲಿ ಭಕ್ತರ ಎಲ್ಲಾ ರೀತಿಯ ತೊಂದರೆಗಳನ್ನು ಪರಿಹರಿಸುತ್ತಾಳೆ ಎಂದು ನಂಬಲಾಗಿದೆ. ಹಾಗಾದರೆ ಆ ಎಂಟು ರೂಪಗಳು ಯಾವುವು? ಪ್ರತಿ ರೂಪದ ಪ್ರಾಮುಖ್ಯತೆ ಏನು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಿಂದೂ ಧರ್ಮದಲ್ಲಿ ತಾಯಿ ಲಕ್ಷ್ಮೀ ದೇವಿಗೆ ಬಹಳ ವಿಶೇಷ ಸ್ಥಾನವಿದೆ. ಆಕೆಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಹೆಚ್ಚಿನ ಜನರು ಸಮೃದ್ಧಿ ಮತ್ತು ಸಂಪತ್ತನ್ನು ಸಂಪಾದಿಸಲು ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. ಇನ್ನು ಪುರಾಣಗಳ ಪ್ರಕಾರ, ಲಕ್ಷ್ಮೀ ದೇವಿಯ ಎಂಟು ರೂಪಗಳಿದ್ದು ಅವು ತಮ್ಮದೇ ಆದ ವಿಭಿನ್ನ ಧಾರ್ಮಿಕ ಮಹತ್ವವನ್ನು ಹೊಂದಿವೆ. ಹಾಗಾಗಿ ಲಕ್ಷ್ಮೀ ದೇವಿಯು ತನ್ನ ವಿವಿಧ ರೂಪಗಳಲ್ಲಿ ಭಕ್ತರ ಎಲ್ಲಾ ರೀತಿಯ ತೊಂದರೆಗಳನ್ನು ಪರಿಹರಿಸುತ್ತಾಳೆ ಎಂದು ನಂಬಲಾಗಿದೆ. ಹಾಗಾದರೆ ಆ ಎಂಟು ರೂಪಗಳು ಯಾವುವು? ಪ್ರತಿ ರೂಪದ ಪ್ರಾಮುಖ್ಯತೆ ಏನು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಲಕ್ಷ್ಮೀ ದೇವಿಯ ಎಂಟು ರೂಪಗಳ ಬಗ್ಗೆ ತಿಳಿದಿದೆಯೇ?
1. ಆದಿ ಲಕ್ಷ್ಮೀ:
ಧಾರ್ಮಿಕ ಗ್ರಂಥಗಳ ಪ್ರಕಾರ, ಆದಿ ಲಕ್ಷ್ಮೀ ಯನ್ನು ತಾಯಿ ಲಕ್ಷ್ಮೀಯ ಮೊದಲ ರೂಪವೆಂದು ಪರಿಗಣಿಸಲಾಗಿದೆ. ಈಕೆಯನ್ನು ಮಹಾಲಕ್ಷ್ಮೀ ಎಂದೂ ಕರೆಯುತ್ತಾರೆ. ಅಲ್ಲದೆ ಈ ಆದಿ ಲಕ್ಷ್ಮೀಯೇ ಮೂರು ದೇವರುಗಳನ್ನು ಮತ್ತು ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದಳು ಎಂದು ಹೇಳಲಾಗುತ್ತದೆ. ದೇವಿಯ ಆದಿ ಲಕ್ಷ್ಮೀ ರೂಪವನ್ನು ಪೂಜಿಸುವ ಮೂಲಕ, ವ್ಯಕ್ತಿಯು ಜೀವನದಲ್ಲಿ ಸಂತೋಷ, ಸಮೃದ್ಧಿಯನ್ನು ಪಡೆಯುತ್ತಾನೆ ಜೊತೆಗೆ ಮರಣದ ನಂತರ ಮೋಕ್ಷವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.
2. ಧನ ಲಕ್ಷ್ಮೀ:
ಮಾತೆ ಧನ ಲಕ್ಷ್ಮೀಯನ್ನು ದೇವಿಯ ಮತ್ತೊಂದು ರೂಪವೆಂದು ಪರಿಗಣಿಸಲಾಗಿದೆ. ಈಕೆ ಬೇಡಿ ಬಂದ ಭಕ್ತರನ್ನು ಎಂದಿಗೂ ಕೈ ಬಿಡುವುದಿಲ್ಲ. ಜೊತೆಗೆ ಸಂಪತ್ತು, ಸಮೃದ್ಧಿಯನ್ನು ನೀಡುತ್ತಾಳೆ. ದಂತ ಕಥೆಯ ಪ್ರಕಾರ ಒಮ್ಮೆ ವಿಷ್ಣುವು ಕುಬೇರನಿಂದ ಸಾಲ ತೆಗೆದುಕೊಂಡಿದ್ದು ಸಮಯಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲವಂತೆ, ಆಗ ತಾಯಿ ಲಕ್ಷ್ಮೀ ವಿಷ್ಣುವನ್ನು ಕುಬೇರನ ಸಾಲದಿಂದ ಮುಕ್ತಗೊಳಿಸಲು ಧನ ಲಕ್ಷ್ಮೀಯ ಅವತಾರವನ್ನು ತಾಳಿದಳು ಎಂದು ಹೇಳಲಾಗುತ್ತದೆ. ಹಾಗಾಗಿ ದೇವಿಯ ಈ ರೂಪವನ್ನು ಪೂಜಿಸುವುದರಿಂದ ಆರ್ಥಿಕವಾಗಿ ಬಲಗೊಳ್ಳಬಹುದು ಎಂದು ಹೇಳಲಾಗುತ್ತದೆ. ಅಲ್ಲದೆ ಮನೆ ಯಾವಾಗಲೂ ಸಂಪತ್ತು, ಸಮೃದ್ಧಿಯಿಂದ ತುಂಬಿರುತ್ತದೆ ಮತ್ತು ಎಲ್ಲಾ ರೀತಿಯ ಸಾಲಗಳಿಂದ ಮುಕ್ತಿ ಹೊಂದುತ್ತಾರೆ ಎಂದು ಹೇಳಲಾಗುತ್ತದೆ.
3. ತಾಯಿ ಅನ್ನಪೂರ್ಣೆ ಅಥವಾ ಪೂಜ್ಯ ಲಕ್ಷ್ಮೀ:
ಲಕ್ಷ್ಮೀ ದೇವಿಯ ಮೂರನೇ ರೂಪವನ್ನು ಅನ್ನಪೂರ್ಣೆ ಎಂದು ಕರೆಯಲಾಗುತ್ತದೆ. ಈ ಅವತಾರದಲ್ಲಿ ದೇವಿಯು ಆಹಾರ ಧಾನ್ಯಗಳಲ್ಲಿ ನೆಲೆಸಿರುತ್ತಾಳೆ ಆದ್ದರಿಂದ ಆಹಾರವನ್ನು ಗೌರವಿಸಬೇಕು ಜೊತೆಗೆ ಅಗತ್ಯವಿರುವವರಿಗೆ ಅದನ್ನು ದಾನ ಮಾಡಬೇಕು, ಆಗ ಮಾತ್ರ ವ್ಯಕ್ತಿಯು ತಾಯಿ ಅನ್ನಪೂರ್ಣೆ ದೇವಿಯ ಆಶೀರ್ವಾದವನ್ನು ಪಡೆಯುತ್ತಾನೆ. ಅಲ್ಲದೆ ಅವನ ಮನೆಯ ಆಹಾರ ಮಳಿಗೆ ಯಾವಾಗಲೂ ತುಂಬಿ ತುಳುಕುತ್ತಿರುತ್ತವೆ ಎಂದು ಹೇಳಲಾಗುತ್ತದೆ.
4. ಗಜ ಲಕ್ಷ್ಮೀ:
ಲಕ್ಷ್ಮೀ ದೇವಿಯ ನಾಲ್ಕನೇ ರೂಪವಾಗಿ ಗಜಲಕ್ಷ್ಮೀಯನ್ನು ಪೂಜಿಸಲಾಗುತ್ತದೆ. ಮಾತೆ ಗಜ ಲಕ್ಷ್ಮೀಯನ್ನು ಕೃಷಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ದೇವತೆ ಎಂದು ಕರೆಯಲಾಗುತ್ತದೆ. ಜೊತೆಗೆ, ತಾಯಿ ಕೂಡ ರಾಜನಂತೆಯೇ ಸಮೃದ್ಧಿಯನ್ನು ನೀಡುವ ದೇವತೆ ಎನ್ನುವ ನಂಬಿಕೆ ಇದೆ. ಆದ್ದರಿಂದ ಅವಳನ್ನು ರಾಜ ಲಕ್ಷ್ಮೀ ಎಂದೂ ಕೂಡ ಕರೆಯಲಾಗುತ್ತದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮತ್ತು ಮಕ್ಕಳ ಭಾಗ್ಯವನ್ನು ಪಡೆಯಲು ಬಯಸುವ ಜನರು ಲಕ್ಷ್ಮೀ ದೇವಿಯ ಈ ರೂಪವನ್ನು ಪೂಜಿಸಬೇಕು.
5. ಸಂತಾನ ಲಕ್ಷ್ಮೀ:
ಸಂತಾನ ಲಕ್ಷ್ಮೀಯು ತಾಯಿ ಲಕ್ಷ್ಮೀಯ ಐದನೇ ರೂಪ ಎಂದು ಹೇಳಲಾಗುತ್ತದೆ. ಅವಳು 4 ಕೈಗಳನ್ನು ಹೊಂದಿದ್ದಾಳೆ. ಸ್ಕಂದನು ಮಗುವಿನ ರೂಪದಲ್ಲಿ ಅವಳ ತೊಡೆಯ ಮೇಲೆ ಕುಳಿತಿದ್ದಾನೆ, ಆದ್ದರಿಂದ ಅವಳನ್ನು ಸ್ಕಂದ ಮಾತಾ ಎಂದೂ ಕರೆಯಲಾಗುತ್ತದೆ. ಅಲ್ಲದೆ ತಾಯಿ ಲಕ್ಷ್ಮೀ ದೇವಿಯು ತನ್ನ ಭಕ್ತರನ್ನು ತನ್ನ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಾಳೆ ಜೊತೆಗೆ ಆಕೆ ತಾಯಿಯಂತೆ, ಭಕ್ತರ ಬಾಳಲ್ಲಿ ಬರುವ ಎಲ್ಲಾ ತೊಂದರೆಗಳಿಂದ ನಮ್ಮನ್ನು ರಕ್ಷಿಸುತ್ತಾಳೆ ಎಂದು ನಂಬಲಾಗಿದೆ. ಇನ್ನು ಮಕ್ಕಳ ಭಾಗ್ಯವನ್ನು ಪಡೆಯಲು ಬಯಸುವವರು ಲಕ್ಷ್ಮೀ ದೇವಿಯ ಈ ಅವತಾರವನ್ನು ಪೂಜಿಸಬೇಕು.
ಇದನ್ನು ಓದಿ: ಈ ಬಾರಿ ಮಹಾ ಶಿವರಾತ್ರಿ ಮಾರ್ಚ್ 8 ಅಥವಾ 9? ಶಿವ ಪೂಜೆಯ ಮಂಗಳಕರ ಸಮಯ ತಿಳಿಯಿರಿ
6. ವೀರ ಲಕ್ಷ್ಮೀ:
ವೀರ ಲಕ್ಷ್ಮೀ, ದೇವಿಯ ಆರನೇ ರೂಪವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮೀ ದೇವಿಯ ಈ ರೂಪವು ತನ್ನ ಭಕ್ತರಿಗೆ ಶಕ್ತಿ, ಶೌರ್ಯವನ್ನು ನೀಡುತ್ತಾಳೆ. ಆದ್ದರಿಂದ ವೀರ ಲಕ್ಷ್ಮೀಯನ್ನು ಧೈರ್ಯಶಾಲಿ ಎಂದು ಪರಿಗಣಿಸಲಾಗುತ್ತದೆ. ತನ್ನ ಎಂಟು ಕೈಗಳಲ್ಲಿ ವಿವಿಧ ರೀತಿಯ ಆಯುಧಗಳನ್ನು ಹಿಡಿದಿರುವ ಈ ದೇವಿ, ತನ್ನ ಭಕ್ತರಿಗೆ ಶತ್ರುಗಳ ವಿರುದ್ಧ ವಿಜಯ ಸಾಧಿಸಲು ಸಹಾಯ ಮಾಡುತ್ತಾಳೆ. ನ್ಯಾಯಾಲಯದಲ್ಲಿ ಯಾವುದೇ ವಿವಾದವಿದ್ದರೆ, ಎಷ್ಟೇ ವರ್ಷಗಳಾದರೂ ಪರಿಹಾರ ಕಾಣದಿದ್ದಲ್ಲಿ ದೇವಿಯ ವೀರ ಲಕ್ಷ್ಮೀ ರೂಪವನ್ನು ಪೂಜಿಸಬೇಕು.
7. ವಿಜಯ ಲಕ್ಷ್ಮೀ:
ವಿಜಯ ಲಕ್ಷ್ಮೀಯು ದೇವಿಯ ಏಳನೇ ರೂಪವಾಗಿದ್ದಾಳೆ. ಈಕೆಯನ್ನು ಜೈ ಲಕ್ಷ್ಮೀ ಎಂದೂ ಕೂಡ ಕರೆಯುತ್ತಾರೆ. ಲಕ್ಷ್ಮೀ ದೇವಿಯ ಈ ರೂಪವನ್ನು ವಿಜಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈಕೆ ತನ್ನ ಭಕ್ತರಿಗೆ ಎಲ್ಲಾ ರೀತಿಯ ಕೆಲಸದಲ್ಲಿಯೂ ವಿಜಯವನ್ನು ನೀಡುತ್ತಾಳೆ ಎಂದು ಪರಿಗಣಿಸಲಾಗಿದೆ. ಈ ದೇವಿಯನ್ನು ಪೂಜಿಸುವ ಮೂಲಕ, ಒಬ್ಬ ವ್ಯಕ್ತಿಯು ಜೀವನದಲ್ಲಿ ಖ್ಯಾತಿ, ಗೌರವವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.
8. ವಿದ್ಯಾ ಲಕ್ಷ್ಮೀ:
ವಿದ್ಯಾ ಲಕ್ಷ್ಮೀಯನ್ನು ದೇವಿಯು ಎಂಟನೇ ರೂಪವಾಗಿ ಪೂಜಿಸಲಾಗುತ್ತದೆ. ಜೊತೆಗೆ ಈ ದೇವಿಯನ್ನು ಜ್ಞಾನದ ದೇವತೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವಳು ಜ್ಞಾನ, ಕಲೆ ಮತ್ತು ಕೌಶಲಗಳನ್ನು ನೀಡುವ ದೇವತೆಯಾಗಿದ್ದಾಳೆ. ಈ ರೂಪವು ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಜ್ಞಾನ ಮತ್ತು ಯಶಸ್ಸನ್ನು ನೀಡುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ