ನವರಾತ್ರಿ: ಮನೆ ಮುಂದೆ ನಿಂಬೆ-ಮೆಣಸಿನಕಾಯಿ ಕಟ್ಟುವುದು ಯಾಕೆ? ಇಲ್ಲಿದೆ ಅಧ್ಯಾತ್ಮಿಕ ರಹಸ್ಯ!

ನವರಾತ್ರಿಯಲ್ಲಿ ಮನೆ ಬಾಗಿಲಿಗೆ ನಿಂಬೆ-ಮೆಣಸಿನಕಾಯಿ ನೇತುಹಾಕುವುದು ಅನಾದಿ ಕಾಲದಿಂದಲೂ ಬಂದ ಸಂಪ್ರದಾಯ. ನಕಾರಾತ್ಮಕ ಶಕ್ತಿ, ದೃಷ್ಟಿ ದೋಷದಿಂದ ಮನೆಯನ್ನು ರಕ್ಷಿಸಲು ಇದನ್ನು ಆಚರಿಸಲಾಗುತ್ತದೆ. ಅಲಕ್ಷ್ಮಿಯನ್ನು ತಡೆಯಲು ಹಾಗೂ ಮನೆಗೆ ಸಕಾರಾತ್ಮಕತೆ ತರಲು ಈ ಪದ್ಧತಿಯಿದೆ. ಇದು ಕೇವಲ ನಂಬಿಕೆಯಲ್ಲದೆ, ಸಮೃದ್ಧಿ ಮತ್ತು ರಕ್ಷಣೆಯ ಸಂಕೇತವಾಗಿ ಆಧ್ಯಾತ್ಮಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ.

ನವರಾತ್ರಿ: ಮನೆ ಮುಂದೆ ನಿಂಬೆ-ಮೆಣಸಿನಕಾಯಿ ಕಟ್ಟುವುದು ಯಾಕೆ? ಇಲ್ಲಿದೆ ಅಧ್ಯಾತ್ಮಿಕ ರಹಸ್ಯ!
ನಿಂಬೆ ಮತ್ತು ಮೆಣಸಿನಕಾಯಿ
Image Credit source: Getty Images

Updated on: Oct 14, 2026 | 10:08 AM

ಭಾರತದಲ್ಲಿ ನವರಾತ್ರಿಯನ್ನು ಅತ್ಯಂತ ವೈಭವ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಈ ಒಂಬತ್ತು ದಿನಗಳಲ್ಲಿ ದೇವಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ನಿವಾರಣೆಯಾಗಿ, ಸಕಾರಾತ್ಮಕತೆ ನೆಲೆಸುತ್ತದೆ ಎಂಬುದು ಜನರ ಅಚಲ ವಿಶ್ವಾಸ. ನವರಾತ್ರಿಯ ವಿಶೇಷ ದಿನಗಳಲ್ಲಿ ಜನರು ತಮ್ಮ ಮನೆಗಳಲ್ಲಿ ಪೂಜೆ, ಸಂಜೆ ಆರತಿ, ಭಜನೆ-ಕೀರ್ತನೆ ಹಾಗೂ ಧ್ಯಾನದ ಜೊತೆಗೆ ವಿಶೇಷ ಆಚರಣೆಗಳನ್ನು ಕೈಗೊಳ್ಳುತ್ತಾರೆ. ಭಾರತದ ಅನೇಕ ಮನೆಗಳು ಮತ್ತು ಅಂಗಡಿಗಳ ಪ್ರವೇಶದ್ವಾರಗಳ ಹೊರಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳನ್ನು ನೇತುಹಾಕಿರುವುದನ್ನು ನೀವು ಗಮನಿಸಿರಬಹುದು. ದುಷ್ಟ ಶಕ್ತಿಗಳು ಒಳಗೆ ಬರುವುದಿಲ್ಲ ಎಂಬ ನಂಬಿಕೆಯಿಂದ ಆಚರಿಸಲ್ಪಡುವ ಈ ಜನಪ್ರಿಯ ಪದ್ಧತಿಯ ಹಿಂದಿನ ಆಸಕ್ತಿಕರ ವಿವರಗಳು ಇಲ್ಲಿವೆ.

ನಿಂಬೆ ಮತ್ತು ಮೆಣಸಿನಕಾಯಿ ಆಚರಣೆಗಳು ಮತ್ತು ಮಹತ್ವ:

ಭಾರತದಲ್ಲಿ ಸಾಮಾನ್ಯ ದಿನಗಳಲ್ಲಿಯೂ ಸಹ ಮನೆಗಳು ಮತ್ತು ವ್ಯಾಪಾರ ಮಳಿಗೆಗಳ ಪ್ರವೇಶದ್ವಾರದ ಹೊರಗೆ ಒಂದು ನಿಂಬೆಹಣ್ಣು ಹಾಗೂ ಏಳು ಹಸಿರು ಮೆಣಸಿನಕಾಯಿಗಳನ್ನು ದಾರದಲ್ಲಿ ಕಟ್ಟಿ ನೇತಾಡಿಸುವುದನ್ನು ಕಾಣಬಹುದು. ಹಿಂದೂ ಧರ್ಮದಲ್ಲಿ ಈ ನಿಂಬೆ-ಮೆಣಸಿನಕಾಯಿ ತಾಯಿತವನ್ನು ನಕಾರಾತ್ಮಕ ಶಕ್ತಿಗಳ ವಿರುದ್ಧ, ಅದರಲ್ಲೂ ಮುಖ್ಯವಾಗಿ ‘ದೃಷ್ಟಿ ದೋಷ’ ಅಥವಾ ‘ದುಷ್ಟ ಕಣ್ಣಿನ’ ವಿರುದ್ಧ ರಕ್ಷಣೆ ನೀಡುವ ಪ್ರಬಲ ಗುರಾಣಿ ಎಂದು ಪರಿಗಣಿಸಲಾಗುತ್ತದೆ.

ಇದು ಹೆಚ್ಚಾಗಿ ದೈವಿಕ ರಕ್ಷಣೆ ಪಡೆಯುವುದು ಮತ್ತು ಅದೃಷ್ಟವನ್ನು ಕಾಪಾಡಿಕೊಳ್ಳುವುದರೊಂದಿಗೆ ನಿಕಟ ಸಂಬಂಧ ಹೊಂದಿದೆ. ನವರಾತ್ರಿ ಮತ್ತು ಇತರ ಹಬ್ಬಗಳ ಸಮಯದಲ್ಲಿ ಈ ರೀತಿ ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳನ್ನು ನೇತುಹಾಕುವ ಪದ್ಧತಿ ನಮ್ಮ ಸಂಪ್ರದಾಯದಲ್ಲಿ ಆಳವಾಗಿ ಬೇರೂರಿದೆ. ಇದು ಅದೃಶ್ಯ ಶಕ್ತಿಗಳು ನಮ್ಮ ಜೀವನ, ಮನೆಗಳು ಮತ್ತು ಅದೃಷ್ಟದ ಮೇಲೆ ಪ್ರಭಾವ ಬೀರುತ್ತವೆ ಎಂಬ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.

ಜಾನಪದ ನಂಬಿಕೆ:

ಈ ಪದ್ಧತಿಯ ಹಿನ್ನೆಲೆಯಲ್ಲಿ ಕೆಲವು ಹಿಂದೂ ಜಾನಪದ ಕಥೆಗಳು ಮತ್ತು ನಂಬಿಕೆಗಳಿವೆ. ಇದರ ಪ್ರಕಾರ, ಈ ಆಚರಣೆಯು ಲಕ್ಷ್ಮಿ ದೇವಿಯ ಸಹೋದರಿ, ದುರದೃಷ್ಟ ಹಾಗೂ ಬಡತನದ ದೇವತೆಯಾದ ‘ಅಲಕ್ಷ್ಮಿ’ಯೊಂದಿಗೆ ಸಂಬಂಧ ಹೊಂದಿದೆ ಎಂದು ವಿವರಿಸಲಾಗುತ್ತದೆ. ಅಲಕ್ಷ್ಮಿಯು ಶ್ರೀಮಂತ ಮತ್ತು ಸಮೃದ್ಧಿಯಿಂದ ಕೂಡಿರುವ ಮನೆಗಳತ್ತ ಹೆಚ್ಚು ಆಕರ್ಷಿತಳಾಗುತ್ತಾಳೆ ಎಂಬ ನಂಬಿಕೆಯಿದೆ.

ಅಲಕ್ಷ್ಮಿಗೆ ಹುಳಿ ಮತ್ತು ಮಸಾಲೆಯುಕ್ತ ಆಹಾರ ಪದಾರ್ಥಗಳು ಎಂದರೆ ತುಂಬಾ ಇಷ್ಟವಂತೆ. ಹೀಗಾಗಿ, ಅವಳು ಮನೆಗೆ ಪ್ರವೇಶಿಸುವುದನ್ನು ತಡೆಯಲು ಮುಖ್ಯ ದ್ವಾರದಲ್ಲಿ ನಿಂಬೆ ಮತ್ತು ಮೆಣಸಿನಕಾಯಿ ತಾಯಿತವನ್ನು ನೇತು ಹಾಕಲಾಗುತ್ತದೆ. ಬಾಗಿಲಲ್ಲಿಯೇ ತನಗೆ ಬೇಕಾದ ಹುಳಿ ಹಾಗೂ ಖಾರದ ಕಾಣಿಕೆಗಳನ್ನು ಸ್ವೀಕರಿಸಿ ಅವಳು ತೃಪ್ತಳಾಗಿ ಅಲ್ಲಿಂದಲೇ ಹಿಂತಿರುಗುತ್ತಾಳೆ ವಿನಃ ಮನೆಗೆ ಪ್ರವೇಶಿಸುವುದಿಲ್ಲ ಎಂಬ ಜನಪದ ನಂಬಿಕೆಯಿದೆ.

ಇದನ್ನೂ ಓದಿ: ನವರಾತ್ರಿಯ 9 ದಿನಗಳ ಮಹತ್ವವೇನು? ನವದುರ್ಗೆಯ ಒಂಬತ್ತು ರೂಪಗಳ ವಿಶೇಷತೆ ತಿಳಿಯಿರಿ

ದುಷ್ಟ ಕಣ್ಣಿನಿಂದ ರಕ್ಷಣೆ ಮತ್ತು ಆಧ್ಯಾತ್ಮಿಕ ತಡೆಗೋಡೆ:

ಅನೇಕ ಹಿಂದೂ ಕುಟುಂಬಗಳಲ್ಲಿ ದುಷ್ಟ ಕಣ್ಣಿನ (ದೃಷ್ಟಿ) ಪರಿಕಲ್ಪನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಉದ್ದೇಶಪೂರ್ವಕವಾಗಿ ಅಥವಾ ಅಜಾಗರೂಕತೆಯಿಂದ ಉಂಟಾಗುವ ತೀವ್ರವಾದ ಅಸೂಯೆ ಅಥವಾ ಮೆಚ್ಚುಗೆಯು ವ್ಯಕ್ತಿಯ ಸಾಮರಸ್ಯ, ಆರೋಗ್ಯ ಮತ್ತು ಯಶಸ್ಸಿಗೆ ಅಡ್ಡಿಪಡಿಸುವ ಸೂಕ್ಷ್ಮ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ ಎಂದು ನಂಬಲಾಗಿದೆ.

ನಿಂಬೆಯ ಹುಳಿ ಗುಣಲಕ್ಷಣಗಳು ಮತ್ತು ಮೆಣಸಿನಕಾಯಿಗಳಲ್ಲಿರುವ ಕಟುವಾದ (ಖಾರ) ಅಂಶಗಳ ಸಂಯೋಜನೆಯು ದುಷ್ಟ ಕಣ್ಣಿನ ಪರಿಣಾಮಗಳನ್ನು ದುರ್ಬಲಗೊಳಿಸಿ ತಟಸ್ಥಗೊಳಿಸುತ್ತದೆ. ರಕ್ಷಣಾತ್ಮಕ ಶಕ್ತಿಯು ಈಗಾಗಲೇ ಸಕ್ರಿಯವಾಗಿರುವ ಜಾಗವನ್ನು ಯಾವುದೇ ನಕಾರಾತ್ಮಕ ಶಕ್ತಿ ಪ್ರವೇಶಿಸಲು ಸಾಧ್ಯವಿಲ್ಲ ಎಂಬುದು ಸಾಂಪ್ರದಾಯಿಕ ನಂಬಿಕೆ. ಪ್ರವೇಶದ್ವಾರದಲ್ಲಿ ಇವುಗಳನ್ನು ನೇತುಹಾಕುವುದರಿಂದ ಒಂದು ಆಧ್ಯಾತ್ಮಿಕ ರಕ್ಷಣಾತ್ಮಕ ತಡೆಗೋಡೆ ಸೃಷ್ಟಿಯಾಗುತ್ತದೆ. ನಾವು ನಮ್ಮ ದೇಹವನ್ನು ಅನಾರೋಗ್ಯದಿಂದ ರಕ್ಷಿಸಿಕೊಳ್ಳುವಂತೆಯೇ, ನಮ್ಮ ಮನೆ ಅಥವಾ ಕೆಲಸದ ಸ್ಥಳವನ್ನು ಕಾಣದ ಅಪಾಯಗಳಿಂದ ರಕ್ಷಿಸಿಕೊಳ್ಳುವ ಒಂದು ಸಾಂಪ್ರದಾಯಿಕ ವಿಧಾನ ಇದಾಗಿದೆ.

ನವರಾತ್ರಿಯ ಪವಿತ್ರ ದಿನಗಳಲ್ಲಿ ಜನರು ತಮ್ಮ ಮನೆಗಳಿಗೆ ದುಷ್ಟ ಕಣ್ಣು ಅಥವಾ ನಕಾರಾತ್ಮಕ ಶಕ್ತಿಗಳು ಪ್ರವೇಶಿಸದಂತೆ ತಡೆಯಲು ಈ ರೀತಿಯ ಸಾಂಪ್ರದಾಯಿಕ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾರೆ. ಇದು ಕೇವಲ ಮೂಢನಂಬಿಕೆಯಲ್ಲದೆ, ಹಿರಿಯರು ನಮಗೆ ಕಲಿಸಿದ ಒಂದು ವಿಶಿಷ್ಟ ಸಾಂಪ್ರದಾಯಿಕ ರಕ್ಷಣಾ ಕವಚ ಹಾಗೂ ನಂಬಿಕೆಯ ಪ್ರತೀಕವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us