ಮೈಸೂರು ಅರಮನೆ ಆವರಣದಲ್ಲಿ ಜಂಬೂ ಸವಾರಿ ಸಂಭ್ರಮ: ಇಂದು ನಡೆಯುವ ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ
ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಲಿದ್ದು ಜಂಬೂ ಸವಾರಿ ಮರೆವಣಿಗೆಗೆ ಚಾಲನೆ ನೀಡಲಿದ್ದಾರೆ.
ಮೈಸೂರು: ಐತಿಹಾಸಿಕ ಜಂಬೂ ಸವಾರಿಗೆ ಮೈಸೂರು ಸಜ್ಜಾಗಿದೆ. ಅದ್ಧೂರಿ ಜಂಬೂ ಸವಾರಿಗೆ ಅರಮನೆ ನಗರಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು(ಅ.05) ಮಧ್ಯಾಹ್ನ 2.36 ರಿಂದ 2.50ರ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಲಿದ್ದು ಜಂಬೂ ಸವಾರಿ ಮರೆವಣಿಗೆಗೆ ಚಾಲನೆ ನೀಡಲಿದ್ದಾರೆ.
ಸಂಜೆ 5.07ರಿಂದ 5.18ರವರೆಗೆ ಮಕರ ಲಗ್ನ ಮುಹೂರ್ತದಲ್ಲಿ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಸಿಎಂ ಬೊಮ್ಮಾಯಿ ಪುಷ್ಪಾರ್ಚನೆ ಮಾಡಲಿದ್ದಾರೆ. ಈ ವೇಳೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವ ಎಸ್ ಟಿ ಸೋಮಶೇಖರ್, ಮೇಯರ್ ಶಿವಕುಮಾರ್ ಸೇರಿ ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್, ಪೊಲೀಸ್ ಕಮಿಷನರ್ ಡಾ ಚಂದ್ರಗುಪ್ತ ಭಾಗಿಯಾಗಲಿದ್ದಾರೆ. ಬಳಿಕ ಅರಮನೆ ಆವರಣದಿಂದ ಬನ್ನಿ ಮಂಟಪದವರೆಗೆ ಮೆರವಣಿಗೆ ನಡೆಯಲಿದೆ. ಇನ್ನು ಸಂಜೆ ನಡೆಯಲಿರುವ ಜಂಬೂ ಸವಾರಿ ಮೆರವಣಿಗೆಯಲ್ಲಿ 750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿ ದೇವಿಯನ್ನ ಹೊತ್ತು ಆನೆ ಅಭಿಮನ್ಯು ಸಾಗಲಿದ್ದಾನೆ.
ಇನ್ನು ಮತ್ತೊಂದು ಕಡೆ ವಿಶ್ವವಿಖ್ಯಾತ ಜಂಬೂಸವಾರಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಿವಿಧ ಜಿಲ್ಲೆಗಳಿಂದ ಪೊಲೀಸರು ಮೈಸೂರಿಗೆ ಆಗಮಿಸಿದ್ದಾರೆ. ಗರುಡ ಪಡೆ, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಆಗಮಿಸಿದ್ದು, ಜಂಬೂಸವಾರಿ ಸಾಗುವ ಮಾರ್ಗದುದ್ದಕ್ಕೂ ಪರಿಶೀಲನೆ ನಡೆಸಲಾಗಿದೆ. ಇದನ್ನೂ ಓದಿ: ದೇಶದ ವಿವಿಧ ಪ್ರದೇಶಗಳಲ್ಲಿ ದಸರಾ ಸಂಭ್ರಮಾಚರಣೆ
ಇಂದು ಮೈಸೂರಿನ ಅರಮನೆಯಲ್ಲಿ ವಿವಿಧ ಕಾರ್ಯಕ್ರಮ
ಬೆಳಗ್ಗೆ 9.45ಕ್ಕೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಮೈಸೂರು ಅರಮನೆಯ ಆನೆ ಬಾಗಿಲಿಗೆ ಆಗಮಿಸಲಿವೆ. 10.15ಕ್ಕೆ ಕಲ್ಯಾಣಮಂಟಪದಲ್ಲಿ ಖಾಸಾ ಆಯುಧಗಳಿಗೆ ಪೂಜೆ ನಡೆಯಲಿದ್ದು 10.30ಕ್ಕೆ ಅರಮನೆ ಆವರಣದಲ್ಲಿ ಜಟ್ಟಿ ಕಾಳಗ ನಡೆಯಲಿದೆ. ಎರಡು ವರ್ಷಗಳ ನಂತರ ಈಗ ಜಟ್ಟಿಕಾಳಗಕ್ಕೆ ಅವಕಾಶ ನೀಡಲಾಗಿದೆ. ಬಳಿಕ 11 ಗಂಟೆಗೆ ವಿಜಯದಶಮಿ ಯಾತ್ರೆ ಆರಂಭವಾಗುತ್ತೆ. ಅರಮನೆ ಆನೆ ಬಾಗಿಲಿನಿಂದ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನಡೆಯುತ್ತೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಲ್ಲಕ್ಕಿಯಲ್ಲಿ ವಿಜಯ ಯಾತ್ರೆ ನಡೆಸಲಿದ್ದು ಭುವನೇಶ್ವರಿ ದೇಗುಲದಲ್ಲಿ ಶಮಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಅರಮನೆಗೆ ವಾಪಸ್ಸಾಗಲಿದ್ದಾರೆ.
ತಾಯಿ ಚಾಮುಂಡೇಶ್ವರಿ ಕಣ್ತುಂಬಿಕೊಳ್ಳಲು ಅರಮನೆಯತ್ತ ಜನ ಸಾಗರ
ವಿಶ್ವವಿಖ್ಯಾತ ನಾಡಹಬ್ಬ ಜಂಬೂ ಸವಾರಿ ಹಿನ್ನೆಲೆ ಚಾಮುಂಡಿ ಬೆಟ್ಟದಿಂದ ತೆರೆದ ವಾಹನದಲ್ಲಿ ಮೈಸೂರು ಅರಮನೆಗೆ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ತರಲಾಗುತ್ತೆ. ಈ ಮೆರವಣಿಗೆಯಲ್ಲಿ ಕಲಾತಂಡಗಳು ಭಾಗಿಯಾಗಲಿವೆ. ತಾಯಿ ಚಾಮುಂಡೇಶ್ವರಿ ಮಹಿಷಾಸುರ ಮರ್ಧಿನಿ ವಿಗ್ರಹ ಕಣ್ತುಂಬಿಕೊಳ್ಳಲು ಸಾವಿರಾರು ಜನರು ಅರಮನೆಯತ್ತ ಬರುತ್ತಾರೆ. ಇದನ್ನೂ ಓದಿ: Karnataka Rain: ಬೆಂಗಳೂರು, ಮಲೆನಾಡಿನಲ್ಲಿ ಇಂದು ಕೂಡ ಮಳೆ ಸಾಧ್ಯತೆ; ಉತ್ತರ ಕರ್ನಾಟಕದಲ್ಲಿ ತಗ್ಗಿದ ವರುಣನ ಅಬ್ಬರ
ಸ್ತಬ್ಧ ಚಿತ್ರಗಳ ಪ್ರದರ್ಶನ
ಇನ್ನು ಜಂಬೂ ಸವಾರಿ ವೇಳೆ ನಡೆಯುವ ಪ್ರದರ್ಶನದಲ್ಲಿ ಸ್ತಬ್ಧ ಚಿತ್ರಗಳ ಪ್ರದರ್ಶನ ಕೂಡ ಆಗಲಿದೆ. 2 ವರ್ಷಗಳ ಬಳಿಕ ದಸರಾದಲ್ಲಿ ಸ್ತಬ್ಧ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು 31 ಜಿಲ್ಲೆಗಳ ಕಲೆ, ಸಾಹಿತ್ಯ, ಇತಿಹಾಸವಿರುವ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಲಾಗುತ್ತೆ. ಹಾಗೂ ಈ ಬಾರಿ ದಸರಾದಲ್ಲಿ ಪುನೀತ್ ಸ್ತಬ್ಧ ಚಿತ್ರವೂ ಪ್ರದರ್ಶನಗೊಳ್ಳಲಿದೆ.
Published On - 7:50 am, Wed, 5 October 22