Festival Of Snakes: ವಿಷಕಾರಿ ಹಾವುಗಳನ್ನು ಕತ್ತಿಗೆ ಸುತ್ತಿಕೊಂಡು ಸಂಭ್ರಮಿಸುವ ವಿಚಿತ್ರ ಸಂಪ್ರದಾಯ!
ಬಿಹಾರದ ಬೇಗುಸರಾಯ್ ಜಿಲ್ಲೆಯ ನವಟೋಲ್ ಗ್ರಾಮವು ನಾಗಪಂಚಮಿಯಂದು ಅಪರೂಪದ ಸಂಪ್ರದಾಯವನ್ನು ಆಚರಿಸುತ್ತದೆ. ನೂರಾರು ವಿಷಹಾವುಗಳನ್ನು ಬಾಲನ್ ನದಿಯಿಂದ ಹೊರತೆಗೆದು, ಹೆಗಲ ಮೇಲೆ ಹಾಕಿಕೊಂಡು, ಭಗವತಿ ದೇವಸ್ಥಾನಕ್ಕೆ ಮೆರವಣಿಗೆ ನಡೆಸಲಾಗುತ್ತದೆ. 300 ವರ್ಷಗಳಷ್ಟು ಹಳೆಯದಾದ ಈ ಸಂಪ್ರದಾಯವು ಪ್ರಕೃತಿ ಮತ್ತು ಹಾವುಗಳಿಗೆ ಗೌರವ ಸಲ್ಲಿಕೆಯನ್ನು ಸೂಚಿಸುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಸಾಮಾನ್ಯವಾಗಿ ನಾಗರಪಂಚಮಿಯಂದು ಹಾವಿನ ಹುತ್ತಕ್ಕೆ ಹಾಲೆರೆದು ಹಾವಿಗೆ ಪೂಜೆ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಂದು ಹಳ್ಳಿ ಬಹಳ ವಿಚಿತ್ರವಾಗಿದ್ದು, ಇಲ್ಲಿ ನಾಗಪಂಚಮಿಯ ಸಂದರ್ಭದಲ್ಲಿ ನೂರಾರು ವಿಷಪೂರಿತ ಹಾವುಗಳನ್ನು ನದಿಯಿಂದ ಹೊರತರಲಾಗುತ್ತದೆ. ಇಷ್ಟೇ ಅಲ್ಲದೇ, ನದಿಯಿಂದ ಹೊರತೆಗೆದ ಹಾವುಗಳನ್ನು ಹೆಗಲ ಮೇಲೆ ಹಾಕಿಕೊಂಡು, ಕತ್ತಿಗೆ ಸುತ್ತಿಕೊಂಡು ಹಬ್ಬ ಆಚರಿಸುವ ಸಂಪ್ರದಾಯವಿದೆ. ಈ ಭಯಾನಕ ದೃಶ್ಯವನ್ನು ನೋಡಲು ಜನರು ದೂರದೂರದಿಂದ ಬರುತ್ತಾರೆ. ಗ್ರಾಮದ ಹೆಸರು ನವಟೋಲ್ ಮತ್ತು ಈ ಗ್ರಾಮ ಬಿಹಾರದ ಬೇಗುಸರಾಯ್ ಜಿಲ್ಲೆಯ ಮನ್ಸೂರ್ಚಕ್ ನಲ್ಲಿದೆ.
ಜನರು ಈ ಗ್ರಾಮವನ್ನು ಹಾವುಗಳ ಗ್ರಾಮ ಎಂದೂ ಕರೆಯುತ್ತಾರೆ. ನಾಗರ ಪಂಚಮಿಯ ಸಂದರ್ಭದಲ್ಲಿ ಇಲ್ಲಿನ ಜನರು ತಮ್ಮ ಸಂಪ್ರದಾಯವನ್ನು ಅನುಸರಿಸಲು ಬಾಲನ್ ನದಿಗೆ ಹಾರಿ ನೂರಾರು ಹಾವುಗಳನ್ನು ಹಿಡಿದು ದಡಕ್ಕೆ ತರುತ್ತಾರೆ. ಬಳಿಕ ಕುತ್ತಿಗೆಗೆ ಹಾವುಗಳನ್ನು ನೇತುಹಾಕಿಕೊಂಡು, ಡೋಲು ವಾದ್ಯದ ಬಡಿತಕ್ಕೆ ನೃತ್ಯ ಮಾಡುತ್ತಾ ಮತ್ತು ಹಾಡುತ್ತಾ ಭಗವತಿ ದೇವಸ್ಥಾನವನ್ನು ತಲುಪುತ್ತಾರೆ.
300 ವರ್ಷಗಳ ಹಿಂದಿನ ಸಂಪ್ರದಾಯ:
ಈ ಅದ್ಭುತ ದೃಶ್ಯವನ್ನು ನೋಡಲು ನೂರಾರು ಜನರು ನದಿಯ ದಡಕ್ಕೆ ಬರುತ್ತಾರೆ. ಈ ಗ್ರಾಮದ ಈ ಸಂಪ್ರದಾಯವು 300 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಗ್ರಾಮದ ನಿವಾಸಿ ರೌಬಿ ದಾಸ್ ಭಗವತಿಯ ಮಹಾನ್ ಭಕ್ತರಾಗಿದ್ದರು. ಅವರು ಮೊದಲು ಈ ಸ್ಥಳದಲ್ಲಿ ನಾಗ ಪಂಚಮಿಯ ಸಂದರ್ಭದಲ್ಲಿ ಈ ಸಂಪ್ರದಾಯವನ್ನು ಪ್ರಾರಂಭಿಸಿದರು. ಅಂದಿನಿಂದ, ಅವರ ವಂಶಸ್ಥರು ಮತ್ತು ಗ್ರಾಮಸ್ಥರು ಈ ಸಂಪ್ರದಾಯವನ್ನು ಪೂರ್ಣ ಉತ್ಸಾಹದಿಂದ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಮದುವೆ ಸಮಯದಲ್ಲಿ ಅಲಂಕೃತ ತೆಂಗಿನಕಾಯಿ ಬಳಸುವುದು ಶುಭವೇ?
ಈ ಸಂಪ್ರದಾಯದ ಮಹತ್ವವೇನು?
ನಾಗಪಂಚಮಿಯಂದು ನಡೆಯುವ ಹಾವಿನ ಜಾತ್ರೆಯ ಬಗ್ಗೆ ಗ್ರಾಮಸ್ಥರು ಹೇಳುವಂತೆ, ಹಾವುಗಳು ಪ್ರಕೃತಿಯಲ್ಲಿ ಮೀಥೇನ್ ಅನಿಲವನ್ನು ಹೀರಿಕೊಳ್ಳುತ್ತವೆ, ಇದು ಪರಿಸರ ಸಮತೋಲನಕ್ಕೆ ಮುಖ್ಯವೆಂದು ಪರಿಗಣಿಸಲಾಗಿದೆ. ಸನಾತನ ಧರ್ಮದಲ್ಲಿ, ಹಾವುಗಳ ಪ್ರಾಮುಖ್ಯತೆಯನ್ನು ಗುರುತಿಸಲು ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಹಾವುಗಳನ್ನು ಪೂಜಿಸಲಾಗುತ್ತದೆ ಎಂದು ಇಲ್ಲಿನ ಗ್ರಾಮಸ್ಥರು ಹೇಳುತ್ತಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:09 am, Wed, 16 July 25








