
ಹಿಂದೂ ಧರ್ಮದಲ್ಲಿ ಪಿತೃ ಪಕ್ಷಕ್ಕೆ (Pitru Paksha) ಅತ್ಯಂತ ವಿಶೇಷ ಹಾಗೂ ಧಾರ್ಮಿಕ ಮಹತ್ವವಿದೆ. ಈ ಅವಧಿಯಲ್ಲಿ ಮೃತ ಪೂರ್ವಜರಿಗೆ ಶ್ರಾದ್ಧ ಆಚರಣೆಗಳು ಮತ್ತು ತರ್ಪಣವನ್ನು ನೀಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಹಾಗೂ ಅವರ ಆಶೀರ್ವಾದ ಕುಟುಂಬದ ಮೇಲಿರುತ್ತದೆ ಎಂಬ ನಂಬಿಕೆಯಿದೆ. ಈ ವರ್ಷ (2026) ಶ್ರಾದ್ಧ ಆಚರಣೆಗಳು ಸೆಪ್ಟೆಂಬರ್ 26 ರ ಆರಂಭವಾಗಿ, ಅಕ್ಟೋಬರ್ 10 ರ ‘ಸರ್ವ ಪಿತೃ ಅಮಾವಾಸ್ಯೆ’ಯಂದು ಮುಕ್ತಾಯಗೊಳ್ಳಲಿವೆ. ಈ 15 ದಿನಗಳ ಕಾಲ ಪಿತೃಗಳಿಗೆ ತರ್ಪಣ ಮತ್ತು ಶ್ರಾದ್ಧ ಕಾರ್ಯಗಳನ್ನು ನಡೆಸಲಾಗುತ್ತದೆ.
ಸಾಮಾನ್ಯವಾಗಿ ಪೂರ್ವಜರ ಮರಣ ಹೊಂದಿದ ‘ತಿಥಿ’ಯಂದೇ ಶ್ರಾದ್ಧ ಕಾರ್ಯಗಳನ್ನು ನೆರವೇರಿಸುವುದು ಶಾಸ್ತ್ರೋಕ್ತ ನಿಯಮ. ಆದರೆ ಅಪಘಾತ, ಆತ್ಮಹತ್ಯೆ ಅಥವಾ ಅಕಾಲಿಕವಾಗಿ ಮರಣ ಹೊಂದಿದವರ ದಿನಾಂಕದ ಕುರಿತು ಅನೇಕರಲ್ಲಿ ಗೊಂದಲವಿರುತ್ತದೆ.
ಗರುಡ ಪುರಾಣದ ‘ಸಿಂಹಾವಲೋಕನ’ ಅಧ್ಯಾಯದಲ್ಲಿ ಅಕಾಲಿಕ ಮರಣದ ಕುರಿತು ಸವಿಸ್ತಾರವಾಗಿ ವಿವರಿಸಲಾಗಿದೆ. ಯಾವುದೇ ವ್ಯಕ್ತಿಯು ಅಪಘಾತ, ಆತ್ಮಹತ್ಯೆ, ಕ್ರೂರ ಪ್ರಾಣಿಗಳ ದಾಳಿ ಅಥವಾ ಅನಿರೀಕ್ಷಿತ ತೀವ್ರ ಅನಾರೋಗ್ಯದಿಂದ ಮರಣ ಹೊಂದಿದರೆ ಅದನ್ನು ‘ಅಕಾಲಿಕ ಮರಣ’ ಎನ್ನಲಾಗುತ್ತದೆ. ಅಂತಹ ವ್ಯಕ್ತಿಗಳ ಆತ್ಮವು ದೇಹವನ್ನು ತೊರೆದರೂ ತಕ್ಷಣವೇ ಮುಕ್ತಿ ಪಡೆಯದೆ ಅಲೆದಾಡುತ್ತದೆ ಎಂಬ ಉಲ್ಲೇಖವಿದೆ.
ಇದನ್ನೂ ಓದಿ: ಮನೆಯಲ್ಲಿ ಬೆಳ್ಳಿಯ ಗಣೇಶ ಮೂರ್ತಿ ಇಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?
ಅಕಾಲಿಕ ಮರಣ ಹೊಂದಿದ ಅಥವಾ ಮರಣ ಹೊಂದಿದ ನಿರ್ದಿಷ್ಟ ತಿಥಿ/ದಿನಾಂಕ ತಿಳಿಯದಿರುವ ಪಿತೃಗಳಿಗೆ ಶ್ರಾದ್ಧ ನೆರವೇರಿಸಲು ಗರುಡ ಪುರಾಣದಲ್ಲಿ ಸ್ಪಷ್ಟ ನಿಯಮವಿದೆ. ಅಂತಹ ಪೂರ್ವಜರಿಗೆ ಪಿತೃ ಪಕ್ಷದ ‘ಚತುರ್ದಶಿ’ ತಿಥಿಯಂದು ಶ್ರಾದ್ಧ ವಿಧಿಗಳನ್ನು ನೆರವೇರಿಸಬೇಕು. ಈ ವಿಶೇಷ ದಿನದಂದು ಶ್ರಾದ್ಧ ಹಾಗೂ ತರ್ಪಣ ಮಾಡುವುದರಿಂದ, ಅಕಾಲಿಕವಾಗಿ ಅಗಲಿದ ಆತ್ಮಗಳಿಗೆ ಪ್ರೇತ ಲೋಕದ ಅಲೆದಾಟದಿಂದ ಮುಕ್ತಿ ಸಿಗುತ್ತದೆ ಮತ್ತು ಅವರ ಆತ್ಮಕ್ಕೆ ಪರಮ ಶಾಂತಿ ದೊರೆಯುತ್ತದೆ. ಅಲ್ಲದೆ, ಚತುರ್ದಶಿಯಂದು ಭಕ್ತಿಯಿಂದ ಶ್ರಾದ್ಧ ಮಾಡುವುದರಿಂದ ಪಿತೃಗಳ ವಿಶೇಷ ಆಶೀರ್ವಾದ ಕುಟುಂಬಕ್ಕೆ ಲಭಿಸುತ್ತದೆ ಎಂಬುದು ಧಾರ್ಮಿಕ ನಂಬಿಕೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:55 am, Thu, 24 September 26