ಶ್ರವಣ ಕುಮಾರನ ಪೋಷಕ ಪ್ರೇಮವೇ ನಮ್ಮ ಬದುಕಿಗೆ ಸ್ಫೂರ್ತಿ

ನಮ್ಮ ಪುರಾಣ ಗ್ರಂಥಗಳಲ್ಲಿ ಬರುವ ಕಥೆಗಳು ನಮ್ಮ ಬದುಕಿಗೆ ಮಾರ್ಗದರ್ಶನ ಮಾಡುತ್ತವೆ. ಆದರೆ ಅವುಗಳನ್ನು ನಾವು ಯಾವ ರೀತಿಯಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂಬುದರ ಮೇಲೆ ಅದರ ಫಲಿತಾಂಶವಿರುತ್ತದೆ. ಹಾಗಾಗಿ ಪ್ರತಿ ಕಥೆಗಳಲ್ಲಿ ಸಕಾರಾತ್ಮಕ ಗುಣಗಳನ್ನು ಹುಡುಕುವುದರ ಮೂಲಕ ಅದನ್ನು ಮೈಗೂಡಿಸಿಕೊಂಡು ಉತ್ತಮ ಜೀವನ ನಡೆಸಬೇಕು.

ಶ್ರವಣ ಕುಮಾರನ ಪೋಷಕ ಪ್ರೇಮವೇ ನಮ್ಮ ಬದುಕಿಗೆ ಸ್ಫೂರ್ತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 10, 2024 | 12:36 PM

ರಾಮಾಯಣದಲ್ಲಿ ರಘುಕುಲ ಭೂಷಿತನಾದ ಶ್ರೀರಾಮನು ನಮ್ಮ ಬದುಕಿಗೆ ಹೇಗೆ ಆದರ್ಶ ಪ್ರಾಯನೋ ಅದೇ ತರನಾಗಿ ನಮ್ಮ ಪುರಾಣ ಗ್ರಂಥಗಳಲ್ಲಿ ಬರುವ ಕಥೆಗಳೂ ಕೂಡ ನಮ್ಮ ಬದುಕಿಗೆ ಮಾರ್ಗದರ್ಶನ ಮಾಡುತ್ತವೆ. ಆದರೆ ಅವುಗಳನ್ನು ನಾವು ಯಾವ ರೀತಿಯಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂಬುದರ ಮೇಲೆ ಅದರ ಫಲಿತಾಂಶವಿರುತ್ತದೆ. ಹಾಗಾಗಿ ಪ್ರತಿ ಕಥೆಗಳಲ್ಲಿ ಸಕಾರಾತ್ಮಕ ಗುಣಗಳನ್ನು ಹುಡುಕುವುದರ ಮೂಲಕ ಅದನ್ನು ಮೈಗೂಡಿಸಿಕೊಂಡು ಉತ್ತಮ ಜೀವನ ನಡೆಸಬೇಕು. ರಾಮಾಯಣ, ಮಹಾಭಾರತ ಮತ್ತು ಇನ್ನಿತರ ಪುರಾಣ ಪ್ರಸಿದ್ಧ ಧರ್ಮ ಗ್ರಂಥಗಳಲ್ಲಿ ನಾವು ಅನೇಕ ರೀತಿಯ ಕೆಥೆಗಳನ್ನು ಕೇಳುತ್ತಾ ಬೆಳೆದು ಬಂದಿದ್ದೇವೆ. ಹಾಗಾಗಿ ಅದರಲ್ಲಿರುವ ಕೆಲವು ಘಟನೆಗಳು ಈಗಿನ ಕಾಲಕ್ಕೆ ಹೇಗೆ ಪ್ರಸ್ತುತ ಎಂಬುದನ್ನು ತಿಳಿಯೋಣ.

ಸಾಮಾನ್ಯವಾಗಿ ನಾವೆಲ್ಲರೂ ಶ್ರವಣ ಕುಮಾರನ ಕಥೆಯನ್ನು ಕೇಳಿದ್ದೇವೆ. ಅವನು ತಂದೆ -ತಾಯಿಗೆ ತೋರಿಸಿದ್ದ ಪ್ರೀತಿ ನಮಗೆಲ್ಲರಿಗೂ ಮಾದರಿ. ಇಂದಿಗೂ ಹೆತ್ತವರನ್ನು ಯಾರಾದರೂ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರೆ ಅವನನ್ನು ಕಲಿಯುಗದ ಶ್ರವಣ ಕುಮಾರ ಎಂದೇ ಬಣ್ಣಿಸುತ್ತೇವೆ. ಏಕೆಂದರೆ ಅವನು ತೋರಿದ ಪ್ರೀತಿಯೇ ಅಂತದ್ದು. ಆದರೆ ಶ್ರವಣ ಕುಮಾರನು ತಂದೆ- ತಾಯಿಗೆ ತೋರಿದ ಮಮತೆ ಮತ್ತು ಅವನ ಆ ನಡತೆಯಿಂದ ನಾವು ಕಲಿಯುವಂತದ್ದು ಏನಿದೆ? ಇದು ಕೇವಲ ಕಥೆಯಾಗಿರದೆ ಜೀವನದ ಪಾಠವಾದರೆ ಬಲು ಉತ್ತಮವಲ್ಲವೇ?

ಶ್ರವಣ ಕುಮಾರನ ಕಥೆಯೇನು?

ಶ್ರವಣ ಕುಮಾರನ ವಯಸ್ಸಾದ ಮತ್ತು ಅಂಧ ತಂದೆ -ತಾಯಿಗಳ ಆಸೆಯಂತೆಯೇ ಅವರನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗುತ್ತಾನೆ. ತಂದೆ- ತಾಯಿಯನ್ನು ಒಂದು ಬುಟ್ಟಿಯಲ್ಲಿ ಕೂರಿಸಿ, ಅದಕ್ಕೆ ಬಿದಿರಿನ ಕೋಲನ್ನು ಕಟ್ಟಿ ಅದನ್ನು ಭುಜದ ಮೇಲೆ ಇಟ್ಟುಕೊಂಡು ನಡೆದುಕೊಂಡೇ ಹೋಗುವ ಮೂಲಕ ಅವರ ಆಸೆಯಂತೆ ಯಾತ್ರೆ ಮಾಡಿಸುತ್ತಾನೆ. ಆ ಬಳಿಕ ದಶರಥ ಮಹಾರಾಜನ ರಾಜ್ಯಕ್ಕೆ ಕರೆದುಕೊಂಡು ಹೋಗುವಾಗ, ಆ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ಶ್ರವಣ ಕುಮಾರನ ಪೋಷಕರಿಗೆ ಬಾಯಾರಿಕೆಯಾಗುತ್ತದೆ. ಹಾಗಾಗಿ ಶ್ರವಣ ಕುಮಾರನು ಅವರನ್ನು ಒಂದು ಮರದ ನೆರಳಿನಲ್ಲಿ ಕೂರಿಸಿ, ನೀರು ತರಲೆಂದು ಸರಯೂ ನದಿಯ ತಟಕ್ಕೆ ಹೋಗುತ್ತಾನೆ. ಅಷ್ಟೇ ಹೊತ್ತಿಗೆ ಭೇಟೆಗೆ ಬಂದಿದ್ದ ರಾಜ ದಶರಥನು ಕೂಡ, ಶ್ರವಣ ಕುಮಾರ ನೀರು ತೆಗೆಯುವ ಸಪ್ಪಳ ಕೇಳಿ, ಜಿಂಕೆಗಳು ನೀರು ಕುಡಿಯುತ್ತಿರಬಹುದೆಂದು ಭಾವಿಸಿ ಬಾಣವನ್ನು ಹೂಡುತ್ತಾನೆ. ಬಾಣದ ಏಟಿಗೆ ಶ್ರವಣ ಕುಮಾರನು ಕಿರುಚಾಡಲು ಪ್ರಾರಂಭಿಸಿಸುತ್ತಾನೆ. ಗಾಬರಿಯಿಂದ ದಶರಥ ಮಹಾರಾಜನು ಶ್ರವಣ ಕುಮಾರನ ಬಳಿ ಬಂದು ತನ್ನ ತಪ್ಪಿಗೆ ವಿಷಾಧಿಸಿ, ಕ್ಷಮೆ ಕೇಳುತ್ತಾನೆ. ಆಗ ಶ್ರವಣ ಕುಮಾರನು ತನ್ನ ಕೈಯಲ್ಲಿದ್ದ ನೀರನ್ನು ಪೋಷಕರಿಗೆ ನೀಡುವಂತೆ ದಶರಥನ ಬಳಿ ಬೇಡಿಕೊಳ್ಳುತ್ತಾನೆ. ಹೀಗೆ ಶ್ರವಣ ಕುಮಾರ ಪ್ರಾಣ ಬಿಡುತ್ತಾನೆ.

ಬಳಿಕ ರಾಜ ದಶರಥನು ಧೈರ್ಯಮಾಡಿ ಶ್ರವಣನ ಕೊನೆಯ ಆಸೆಯನ್ನು ಪೂರೈಸಲು ಅವನ ತಂದೆ -ತಾಯಿಯ ಬಳಿ ನೀರನ್ನು ತೆಗೆದುಕೊಂಡು ಹೋಗುತ್ತಾನೆ. ದಶರಥ ರಾಜನ ಧ್ವನಿಯಿಂದಲೇ ಅವನು ತಮ್ಮ ಮಗನಲ್ಲ ಎಂಬುದು ಅವರಿಗೆ ತಿಳಿಯುತ್ತದೆ. ಬಳಿಕ ತನ್ನ ಮಗನ ಬಗ್ಗೆ ದಶರಥನನ್ನು ವಿಚಾರಿದಾಗ ಆತ ಅಳುತ್ತಾ ನಡೆದ ದುರ್ಘಟನೆಯನ್ನು ವಿವರಿಸುತ್ತಾನೆ. ಪುತ್ರನ ಸಾವಿನ ಸುದ್ಧಿಯನ್ನು ಕೇಳಿದ ಶ್ರವಣನ ತಂದೆ – ತಾಯಿ ದುಃಖದಿಂದ ”ನೀನು ನಿನ್ನ ಕೊನೆಗಾಲದಲ್ಲಿ ಇದೇ ರೀತಿ ಮಗನನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರಲಿ”. ಎಂದು ಶಾಪವನ್ನು ನೀಡುತ್ತಾ ಶ್ರವಣನ ಹೆತ್ತವರು ಪ್ರಾಣ ತ್ಯಾಗ ಮಾಡುತ್ತಾರೆ. ಶ್ರವಣ ಕುಮಾರನ ತಂದೆ -ತಾಯಿಗಳು ನೀಡಿದ ಶಾಪದ ಪರಿಣಾಮವಾಗಿ ದಶರಥನು ತನ್ನ ಕೊನೆಯ ಕಾಲದಲ್ಲಿ ಮಗನಾದ ರಾಮನಿಂದ ದೂರಾಗಿ ಪ್ರಾಣವನ್ನು ತ್ಯಜಿಸಿದನು.

ಇದನ್ನೂ ಓದಿ: ವಸಂತ ಪಂಚಮಿ ವ್ರತದ ನಿಯಮಗಳೇನು? ವ್ರತದಲ್ಲಿ ಏನನ್ನು ತಿನ್ನಬೇಕು?

ಈ ಕಥೆ ಈಗಿನ ಕಾಲಕ್ಕೆ ಹೇಗೆ ಅನ್ವಯ?

ಶ್ರವಣ ಕುಮಾರ ತನಗೆ ಎಷ್ಟೇ ಕಷ್ಟವಾದರೂ ಕೂಡ ತನ್ನ ಪೋಷಕರ ಆಸೆ ನೆರವೇರಿಸಲು ಮುಂದಾಗುತ್ತಾನೆ. ಆದರೆ ಈಗಿನ ಕಾಲದಲ್ಲಿ ಕೆಲವರು ಎಲ್ಲಾ ಸೌಕರ್ಯವಿದ್ದರೂ ತಮ್ಮ ತಂದೆ- ತಾಯಿಯರನ್ನು ನೋಡಿಕೊಳ್ಳಲು ಹಿಂಜರಿಯುತ್ತಾರೆ. ತಮಗೆ ಜನ್ಮ ನೀಡಿದವರು ಎಂಬ ಕರುಣೆಯೂ ಇಲ್ಲದೆ ಅವರಿಗೆ ನೋವು ನೀಡುತ್ತಾರೆ. ಕೊನೆಗಾಲದಲ್ಲಿ ಮಕ್ಕಳ ಪ್ರೀತಿ ಹಂಬಲಿಸುವವರನ್ನು ಅನಾಥಾಶ್ರಮದ ಪಾಲು ಮಾಡುತ್ತಾರೆ. ಆದರೆ ಶ್ರವಣ ಕುಮಾರ ತನ್ನ ಕೊನೆ ಉಸಿರಿನಲ್ಲೂ ತನ್ನ ತಂದೆ- ತಾಯಿ ಬಾಯಾರಿದ್ದರು, ಅವರಿಗೆ ನೀರು ಕೊಡಬೇಕು ಎಂಬುದನ್ನೇ ಯೋಚಿಸುತ್ತಾನೆ. ಶ್ರವಣ ಕುಮಾರನ ಒಳ್ಳೆ ಗುಣವನ್ನು ಸ್ವಲ್ಪ ಮಟ್ಟಿಗಾದರೂ ನಾವು ಅಳವಡಿಸಿಕೊಂಡರೆ ಬಹುಷಃ ಯಾರ ತಂದೆ ತಾಯಿಯೂ ಬೀದಿಗೆ ಬೀಳುವುದಿಲ್ಲ. ಎಲ್ಲರೂ ತಮ್ಮ ಕೊನೆಗಾಲದಲ್ಲಿ ಮಕ್ಕಳಿಗೆ ಕೊಟ್ಟ ಪ್ರೀತಿಯನ್ನು ಮರಳಿ ಪಡೆಯುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:32 pm, Sat, 10 February 24