ಹಬ್ಬಗಳನ್ನು ಸಾಮಾನ್ಯವಾಗಿ ಆಚರಿಸುವುದು ಚಾಂದ್ರಮಾನದ ಪ್ರಕಾರ. ಚೈತ್ರ ವೈಶಾಖಾದಿ ಮಾಸಗಳ ಆಧಾರದ ಮೇಲೆ ಆಚರಿಸುವುದು. ಚಂದ್ರನ ಗತಿಯನ್ನು ಅನುಸರಿಸಿ ಹಬ್ಬಗಳ ಆಚರಣೆ ಇರಲಿದೆ. ಆದರೆ ಸಂಕ್ರಾಂತಿಗಳು ಅಥವಾ ಸಂಕ್ರಮಣಗಳು ಸೂರ್ಯನ ಆಧಾರದ ಮೇಲೆ ಆಗುವಂಥವಾಗಿವೆ.
ಸಂಕ್ರಾಂತಿ ಎಂದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೆಜ್ಜೆ ಇಡುವುದು ಎಂದರ್ಥ. ಒಟ್ಟು ಹನ್ನೆರಡು ಸಂಕ್ರಾಂತಿಗಳು ಒಂದು ವರ್ಷದಲ್ಲಿ ಅಗುತ್ತವೆ. ಹಾಗಿದ್ದರೂ ಸಿಂಹ ಸಂಕ್ರಾಂತಿಯ ವಿಶೇಷತೆ ಏನು?
ಗ್ರಹ ಮಂಡಲದಲ್ಲಿ ಎಲ್ಲ ಗ್ರಹಗಳಿಗೂ ಎರಡು ರಾಶಿಗಳಿವೆ. ಸೂರ್ಯ ಮತ್ತು ಚಂದ್ರರಿಗೆ ಒಂದೇ ರಾಶಿ. ಸೂರ್ಯನ ಆಧಿಪತ್ಯದ ರಾಶಿ ಸಿಂಹ ರಾಶಿ.
ಆಧುನಿಕರ ಪ್ರಕಾರ ಸೂರ್ಯನು ಒಂದು ನಕ್ಷತ್ರ. ಆದರೆ ಭಾರತೀಯರ ಪ್ರಕಾರ ಸೂರ್ಯ ಗ್ರಹ ಮಾತ್ರವಲ್ಲ ದೇವತೆ ಕೂಡ. ಸೂರ್ಯನಿಗೆ ಬೇರೆ ಹೆಸರುಗಳಿವೆ. ಕರ್ಮಸಾಕ್ಷೀ ಜಗಚ್ಚಕ್ಷು ಮುಂತಾದ ಹೆಸರುಗಳು ಇವೆ. ಜ್ಯೋತಿಷ್ಯ ಪ್ರಕಾರ ಸೂರ್ಯ ಗ್ರಹ ನಾಯಕ. ಹಾಗೆಯೇ ಅವನು ಆತ್ಮಕಾರಣ ಎಂಬುದಾಗಿ ಕರಡಯುತ್ತಾರೆ. ಇಂತಹ ಸೂರ್ಯನು ವರ್ಷಕ್ಕೆ ಒಂದೇ ಬಾರಿ ತನ್ನ ಮನೆಗೆ ಪ್ರವೇಶ ಮಾಡುವುದು. ಜಗತ್ತನ್ನು ರಕ್ಷಿಸುವ ಮುನ್ನಡೆಸುವ ಸೂರ್ಯನು ಸ್ವಗೃಹವನ್ನು ಪ್ರವೇಶಿಸುವಾಗ ಮನುಷ್ಯರೂ ಕೂಡ ಸೂರ್ಯನು ತನ್ನ ಮನೆಗೆ ಪ್ರವೇಶಿದಂತೆ ಕಲ್ಪಿಸಿಕೊಳ್ಳುವುದು, ಆರಾಧಿಸಿ ಆನಂದಿಸುವುದು ವಿಶೇಷ.
ಆರೋಗ್ಯಂ ಭಾಸ್ಕರಾದಿಚ್ಛೇತ್ ಎನ್ನುತ್ತಾರೆ ಪ್ರಾಚೀನರು. ಸ್ವರಾಶಿಗೆ ಬರುವ ಸೂರ್ಯನನ್ನು ಆರಾಧಿಸಿ, ಆರೋಗ್ಯವನ್ನು ಕೊಡುವಂತೆ ಬೇಡುವುದು ಉಚಿತ. ಇನ್ನು ಸೂರ್ಯನು ಆತ್ಮಕಾರಕನಾದ ಕಾರಣ, ಆತ್ಮಸ್ಥೈರ್ಯ, ಆತ್ಮಬಲ, ಆತ್ಮವಿಶ್ವಾಸವನ್ನು ಪಡೆದುಕೊಂಡು ಜೀವನದಲ್ಲಿ ಸಂತೋಷದಿಂದ ಇರಲೂ ಅನುಕೂಲಕರವಾಗಿದೆ.
ಪ್ರಪಂಚದ ಇರುವಿಕೆ ಕಾರಣನಾದ ಸೂರ್ಯನಿಗೆ ಕೃತಜ್ಞತೆಯನ್ನು ತೋರಿಸುವುದು, ತಮ್ಮ ಮನೆಗೆ ಸೂರ್ಯನ ಪ್ರವೇಶವಾಗಿ, ಆತನಿಂದ ಆಗುವ ಸಕಲ ಮಂಗಲವೂ ಆಗಲಿ ಎನ್ನುವುದಾಗಿದೆ. ಮಳೆಗಾಲದ ಸಂದರ್ಭದಲ್ಲಿ ಸೂರ್ಯನೇ ಕಾಣಿಸದ ಹಾಗೆ ವಾತಾವರಣವಿರುವಾಗ ಈ ಹಬ್ಬದ ಆಚರಣೆ ಬಹಳ ವಿಶೇಷ.
ಸಿಂಹ ರಾಶಿಯನ್ನು ಸೂರ್ಯನು ಪ್ರವೇಶಿಸುವುದು ಆಗಸ್ಟ್ ೧೬ನೇ ತಾರೀಖಿನಂದು, ರಾತ್ರಿ ೭:೪೫ ಗಂಟೆಗೆ. ಹಾಗಾಗಿ ೧೭ ರಂದು ಬೆಳಗ್ಗೆ ಸಿಂಹ ಸಂಕ್ರಮಣದ ಪೂಜೆ ಮಾಡಬೇಕು.
ಸ್ನಾನ ಮಾಡಿ, ಶುದ್ಧವಸ್ತ್ರ ಧರಿಸಿ, ಹೊಸ್ತಿಲನ್ನು ತೊಳೆದು ರಂಗವಲ್ಲಿಯನ್ನು ಹಾಕಿ, ಬಾಗಿಲನ್ನು ಅಲಂಕರಿಸಿ, ಸೂರ್ಯನಾರಾಯಣ ಆಗಮನದ ನಿರೀಕ್ಷೆಯನ್ನು ಮಾಡಬೇಕು. ಅಂದಿನ ಸೂರ್ಯೋದಯವು ೬:೨೦ ಕ್ಕೆ ಆಗಲಿದೆ. ಈ ಸಮಯಕ್ಕೆ ಸಿದ್ಧರಿರಬೇಕು. ಸೂರ್ಯನಿಗೆ ಪ್ರಿಯವಾದ ಎಕ್ಕೆ ಹೂವಿನಿಂದ ಅಲಂಕಾರ ಪೂಜೆಯನ್ನು ಮಾಡುವುದು, ಗೋಧಿಯ ಪಾಯಸದ ನೈವೇದ್ಯವು ಸೂರ್ಯನಿಗೆ ಪ್ರಿಯವಾದುದಾಗಿದೆ.
-ಲೋಹಿತ ಹೆಬ್ಬಾರ್ – 8762924271