
ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ವಾಮನ ಜಯಂತಿಯನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತದೆ. ಬ್ರಹ್ಮಾಂಡದ ರಕ್ಷಕನಾದ ಭಗವಾನ್ ವಿಷ್ಣುವು ತಾಳಿದ ದಶಾವತಾರಗಳಲ್ಲಿ ವಾಮನ ಅವತಾರವು ಐದನೆಯದ್ದಾಗಿದೆ. ಇದನ್ನು ‘ವಾಮನ ದ್ವಾದಶಿ’ ಎಂದೂ ಕರೆಯಲಾಗುತ್ತದೆ. ಈ ದಿನದಂದು ವಿಷ್ಣುವಿನ ವಾಮನ ರೂಪವನ್ನು ಪೂಜಿಸುವುದರಿಂದ, ಆಧ್ಯಾತ್ಮಿಕ ಚಿಂತನೆ ನಡೆಸಿ ದಾನ-ಧರ್ಮ ಮಾಡುವುದರಿಂದ ಸಕಲೈಶ್ವರ್ಯ, ಅಭಿವೃದ್ಧಿ ಹಾಗೂ ನೆಮ್ಮದಿಯ ಜೀವನ ಲಭಿಸುತ್ತದೆ ಎಂಬುದು ಧಾರ್ಮಿಕ ನಂಬಿಕೆ.
ವೈದಿಕ ಪಂಚಾಂಗದ ಪ್ರಕಾರ, 2026 ರಲ್ಲಿ ವಾಮನ ಜಯಂತಿಯನ್ನು ಸೆಪ್ಟೆಂಬರ್ 23, ಬುಧವಾರದಂದು ಆಚರಿಸಲಾಗುತ್ತದೆ. ಭಾದ್ರಪದ ಶುಕ್ಲ ದ್ವಾದಶಿ ತಿಥಿ ಸೆಪ್ಟೆಂಬರ್ 22 ರಂದು ರಾತ್ರಿ 09:43 ಕ್ಕೆ ಆರಂಭ ಮತ್ತು ಭಾದ್ರಪದ ಶುಕ್ಲ ದ್ವಾದಶಿ ತಿಥಿ ಸೆಪ್ಟೆಂಬರ್ 23 ರಂದು ರಾತ್ರಿ 10:50 ಕ್ಕೆ ಮುಕ್ತಾಯ.
ಪುರಾಣಗಳ ಪ್ರಕಾರ, ಸತ್ಯಯುಗದಲ್ಲಿ ದೈತ್ಯರಾಜ ಬಲಿಯು ಅತ್ಯಂತ ಶಕ್ತಿಶಾಲಿಯಾಗಿದ್ದು, ತನ್ನ ತಪೋಬಲದಿಂದ ದೇವಲೋಕವನ್ನು (ಸ್ವರ್ಗ) ವಶಪಡಿಸಿಕೊಂಡಿದ್ದನು. ದೇವತೆಗಳ ಅಧಿಪತಿಯಾದ ಇಂದ್ರನಿಗೆ ತನ್ನ ರಾಜ್ಯವನ್ನು ಕಳೆದುಕೊಂಡು ಸಂಕಷ್ಟ ಎದುರಾಯಿತು. ದೇವತೆಗಳ ತಾಯಿಯಾದ ಅದಿತಿಯು ತನ್ನ ಮಕ್ಕಳ ಕಷ್ಟವನ್ನು ಸಹಿಸದೆ, ಭಗವಾನ್ ವಿಷ್ಣುವನ್ನು ಕುರಿತು ಕಠಿಣ ತಪಸ್ಸನ್ನು ಆಚರಿಸಿದಳು. ಅವಳ ಭಕ್ತಿಗೆ ಮೆಚ್ಚಿದ ವಿಷ್ಣುವು ಪ್ರತ್ಯಕ್ಷನಾಗಿ, ಅವಳ ಗರ್ಭದಲ್ಲಿ ಮಗನಾಗಿ ಜನಿಸಿ ದೇವತೆಗಳ ಹಕ್ಕನ್ನು (ಸ್ವರ್ಗವನ್ನು) ಮರಳಿ ಕೊಡಿಸುವುದಾಗಿ ವರ ನೀಡಿದನು. ಅದರಂತೆ, ಮಹರ್ಷಿ ಕಶ್ಯಪ ಮತ್ತು ಅದಿತಿ ದಂಪತಿಯ ಮಗನಾಗಿ ವಿಷ್ಣುವು ವಾಮನ (ಬಟು ಬ್ರಾಹ್ಮಣ) ರೂಪದಲ್ಲಿ ಜನಿಸಿದನು.
ರಾಜ ಬಲಿಯು ಅಶ್ವಮೇಧ ಯಜ್ಞವನ್ನು ಮಾಡುತ್ತಿದ್ದ ಸಮಯದಲ್ಲಿ, ಭಗವಾನ್ ವಾಮನನು ಛತ್ರಿ, ಕೋಲು ಮತ್ತು ಕಮಂಡಲವನ್ನು ಹಿಡಿದು ಕಿರಿಯ ವಟುವಿನ ರೂಪದಲ್ಲಿ ಬಲಿಯ ಬಳಿಗೆ ಬಂದನು. ವಾಮನನು ಬಲಿಯಲ್ಲಿ “ನನಗೆ ತಪಸ್ಸು ಮಾಡಲು ಕೇವಲ ಮೂರು ಹೆಜ್ಜೆ ಭೂಮಿ ದಾನವಾಗಿ ಬೇಕು” ಎಂದು ಕೇಳಿಕೊಂಡನು. ದೈತ್ಯಗುರು ಶುಕ್ರಾಚಾರ್ಯರಿಗೆ ಬಂದಿರುವುದು ಸ್ವತಃ ವಿಷ್ಣು ಎಂದು ತಿಳಿದು, ದಾನ ನೀಡದಂತೆ ಬಲಿಯನ್ನು ತಡೆದರು. ಆದರೆ ಮಾತು ತಪ್ಪದ ಉದಾರಿ ರಾಜ ಬಲಿಯು ಗುರುವಿನ ಮಾತನ್ನೂ ಮೀರಿ ವಾಮನನಿಗೆ ಮೂರು ಹೆಜ್ಜೆ ಭೂಮಿಯನ್ನು ನೀಡಲು ವಚನವಿತ್ತನು.
ಇದನ್ನೂ ಓದಿ: ಮನೆಯಲ್ಲಿ ಬೆಳ್ಳಿಯ ಗಣೇಶ ಮೂರ್ತಿ ಇಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?
ವಚನ ಸ್ವೀಕರಿಸಿದ ತಕ್ಷಣ, ವಾಮನನು ತನ್ನ ದಿವ್ಯವಾದ ‘ತ್ರಿವಿಕ್ರಮ’ ದೈತ್ಯ ರೂಪವನ್ನು ತಾಳಿದನು. ಮೊದಲ ಹೆಜ್ಜೆಯಿಂದ ಇಡೀ ಭೂಮಂಡಲವನ್ನು ಅಳೆದನು. ಎರಡನೇ ಹೆಜ್ಜೆಯಿಂದ ಇಡೀ ಆಕಾಶ ಮತ್ತು ಸ್ವರ್ಗಲೋಕವನ್ನು ಅಳೆದನು. ಈಗ ಮೂರನೇ ಹೆಜ್ಜೆ ಇಡಲು ಜಾಗವೇ ಇಲ್ಲದಿದ್ದಾಗ, ಧರ್ಮನಿಷ್ಠ ರಾಜ ಬಲಿಯು ತನ್ನ ಮಾತನ್ನು ಉಳಿಸಿಕೊಳ್ಳಲು ತನ್ನ ತಲೆಯನ್ನೇ ಮೂರನೇ ಹೆಜ್ಜೆಯಾಗಿ ಭಗವಂತನ ಪಾದದಡಿ ಇಟ್ಟನು. ಬಲಿಯ ಅಪಾರ ಭಕ್ತಿ, ಸತ್ಯನಿಷ್ಠೆ ಮತ್ತು ಉದಾರತೆಯನ್ನು ಕಂಡು ಪ್ರಸನ್ನನಾದ ಭಗವಾನ್ ವಾಮನನು, ಅವನನ್ನು ಪಾತಾಳ ಲೋಕದ ಅಧಿಪತಿಯನ್ನಾಗಿ ಮಾಡಿ ಆಶೀರ್ವದಿಸಿದನು. ಈ ಮೂಲಕ ದೇವತೆಗಳನ್ನು ಬಲಿಯ ಭಯದಿಂದ ಮುಕ್ತಗೊಳಿಸಿ, ಇಂದ್ರನಿಗೆ ಮರಳಿ ಸ್ವರ್ಗವನ್ನು ಪುನಃಸ್ಥಾಪಿಸಲಾಯಿತು.
ವಾಮನ ಅವತಾರವು ನಮಗೆ ಅಹಂಕಾರವನ್ನು ತೊರೆದು, ಕೊಟ್ಟ ಮಾತಿಗೆ ಬದ್ಧರಾಗಿರುವುದನ್ನು ಕಲಿಸುತ್ತದೆ. ವಾಮನ ಜಯಂತಿಯ ದಿನದಂದು ಭಗವಾನ್ ವಿಷ್ಣುವಿನ ಪೂಜೆ ಮಾಡಿ, ಬಡವರಿಗೆ ಧಾನ್ಯ, ಬಟ್ಟೆ, ಕಮಂಡಲ, ಛತ್ರಿ ಅಥವಾ ಮೊಸರನ್ನು ದಾನ ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂಬುದು ನಂಬಿಕೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ