ಮನುಮಹರ್ಷಿಗಳು ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಏನೆಂದರು? ಅವರು ಸ್ತ್ರೀ ವಿರೋಧಿಗಳೇ?

ಸ್ವಾಭಾವಿಕವಾಗಿ ಮನುಷ್ಯನು ಕಾಲಕ್ಕನುಗುಣವಾಗಿ ಬದಲಾಗುವುದು ಸಹಜ. ಇದಕ್ಕೆ ಸರಿಯಾಗಿ ಅವನ ಚಿಂತನೆಗಳು ವ್ಯವಹಾರಗಳು ಆಚಾರಗಳು ಬದಲಾಗುವುದೂ ಸಹಜ. ಕೆಲವೊಂದು ಬಾರಿ ತೀರಾ ಬದಲಾವಣೆಯು ವಿಪತ್ತಿಗೆ ಕಾರಣವಾಗಿಬಿಡುತ್ತದೆ. ಅಂತಹ ಸಂದರ್ಭಗಳನ್ನು ನಾವು ಬಹು ಸೂಕ್ಷ್ಮವಾಗಿ ಗ್ರಹಿಸಬೇಕು ಮತ್ತು ನಿಭಾಯಿಸಬೇಕು.

ಮನುಮಹರ್ಷಿಗಳು ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಏನೆಂದರು? ಅವರು ಸ್ತ್ರೀ ವಿರೋಧಿಗಳೇ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 09, 2023 | 5:53 PM

ಸ್ವಾಭಾವಿಕವಾಗಿ ಮನುಷ್ಯನು ಕಾಲಕ್ಕನುಗುಣವಾಗಿ ಬದಲಾಗುವುದು ಸಹಜ. ಇದಕ್ಕೆ ಸರಿಯಾಗಿ ಅವನ ಚಿಂತನೆಗಳು ವ್ಯವಹಾರಗಳು ಆಚಾರಗಳು ಬದಲಾಗುವುದೂ ಸಹಜ. ಕೆಲವೊಂದು ಬಾರಿ ತೀರಾ ಬದಲಾವಣೆಯು ವಿಪತ್ತಿಗೆ ಕಾರಣವಾಗಿಬಿಡುತ್ತದೆ. ಅಂತಹ ಸಂದರ್ಭಗಳನ್ನು ನಾವು ಬಹು ಸೂಕ್ಷ್ಮವಾಗಿ ಗ್ರಹಿಸಬೇಕು ಮತ್ತು ನಿಭಾಯಿಸಬೇಕು. ಇದಕ್ಕೆ ಒಳ್ಳೆಯ ಅಭ್ಯಾಸ ಅತ್ಯಗತ್ಯ. ನಮ್ಮಲ್ಲಿ ಒಂದು ಪರಂಪರೆ ಇತ್ತೀಚೆಗೆ ಬಹಳ ವಿಸ್ತಾರವಾಗಿ ಬೆಳೆಯುತ್ತಿದೆ. ಅದು ಏನೆಂದರೆ ಒಬ್ಬ ವ್ಯಕ್ತಿಯ ಅಥವಾ ಒಂದು ಗ್ರಂಥದ ಯಾವುದೋ ಒಂದು ಮಾತನ್ನು ಅಥವಾ ಭಾಗವನ್ನು ಮಾತ್ರ ತಿಳಿದುಕೊಂಡು ತಮ್ಮ ಅಭಿಪ್ರಾಯವನ್ನು ಸಾರೋದ್ಧಾರವಾಗಿ ಅಭಿವ್ಯಂಜಿಸುವ ಸಮೂಹ. ಇಲ್ಲಿ ಈ ತರನಾದ ವ್ಯಕ್ತಿಗಳು ಎಂದಿಗೂ ಸಂಪೂರ್ಣ ಅಧ್ಯಯನ ಮಾಡಿರುವುದಿಲ್ಲ. ಇದು ಅವರ ಕುರಿತಾದ ಆಕ್ಷೇಪ ಎಂದು ಭಾವಿಸಬೇಡಿ. ಏಕೆಂದರೆ ವರ್ತಮಾನದಲ್ಲಿ ನಮ್ಮ ಆಯುಷ್ಯದ ಪ್ರಮಾಣ ಕಡಿಮೆ ಇರುವುದರಿಂದ ಮತ್ತು ಕಾರ್ಯದ ಒತ್ತಡಗಳಲ್ಲಿ ಅಧಿಕ ವ್ಯಾಪೃತರಾಗಿರುದರಿಂದ ಪೂರ್ಣ ಪ್ರಮಾಣದ ಅಧ್ಯಯನಕ್ಕೆ ಕಷ್ಟವಾಗುವುದು ಸಹಜ.

ಅಂತಹ ಅಂಶಗಳಲ್ಲಿ ಒಂದನ್ನು ನೋಡುವುದಾದರೆ ನಾವು ಅತ್ಯಂತ ಆದರದಿಂದ ಗೌರವಿಸಲೇ ಬೇಕಾದ ಮಾತೆಯರ ವಿಚಾರದಲ್ಲಿ ಮನುಮಹರ್ಷಿಗಳ ಅಭಿಪ್ರಾಯವನ್ನು. ವರ್ತಮಾನದಲ್ಲಿ ಮನುವನ್ನು ಸ್ತ್ರೀ ವಿರೋಧಿ ಎಂದು ಹಲವರು ವಿರೋಧಿಸುತ್ತಾರೆ. ಆದರೆ ಅದು ಸರಿಯಲ್ಲ. ವಾಸ್ತವವಾಗಿ ಮನುವಿನಷ್ಟು ಸ್ತ್ರೀಯರನ್ನು ಗೌರವಿಸಿದ ಮಹಾತ್ಮರು ಕಾಣಸಿಗುವುದು ದುರ್ಲಭ.

ನಸ್ತ್ರೀ ಸ್ವಾತಂತ್ರ್ಯಂ ಅರ್ಹತಿ ಅಂದರೆ ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎಂಬ ಮಾತನ್ನು ಹೆಚ್ಚಿನವರು ತಪ್ಪಾಗಿ ಅರ್ಥೈಸುತ್ತಾರೆ. ಅದರ ಮೊದಲ ವಾಕ್ಯಗಳು ಇಂತಿವೆ. ಬಾಲ್ಯದಲ್ಲಿ ತಂದೆಯು, ಯೌವನದಲ್ಲಿ ಗಂಡನು, ಇಳಿವಯಸ್ಸಿನಲ್ಲಿ ಮಕ್ಕಳು ಸ್ತ್ರೀಯನ್ನು ರಕ್ಷಿಸಬೇಕು ಎಂದು ಹೇಳಿದ ಮೇಲೆ ಸ್ತ್ರೀಯು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂಬ ಮಾತಿದೆ. ಇಲ್ಲಿ ಸ್ವಾತಂತ್ರ್ಯ ಎಂಬ ಪದವನ್ನು ಅವಳ ಪವಿತ್ರತೆಯ ಕುರಿತಾಗಿ ಬಳಸಲಾಗಿದೆ. ದೇವಾಲಯದಲ್ಲಿರುವ ದೇವನನ್ನು ಪಾವಿತ್ರ್ಯದ ಸಂರಕ್ಷಣೆಯ ದೃಷ್ಟಿಯಿಂದ ಅರ್ಚಕರನ್ನು ಹೊರತು ಪಡಿಸಿ ಯಾರೂ ಸ್ಪರ್ಶಿಸುವಂತಿಲ್ಲ ಎಂಬ ನಿಯಮವಿದೆ. ಅದು ದೇವರ ಸ್ವಾತಂತ್ರ್ಯದ ಹರಣವಲ್ಲ. ದೇವರ ಮತ್ತು ದೇವಾಲಯದ ಪಾವಿತ್ರ್ಯತೆ ಕಾಪಾಡುವುದು ಭಕ್ತರ ಕರ್ತವ್ಯ. ಅಂತೆಯೇ ಒಬ್ಬ ಮಾತೆಯ / ಹೆಣ್ಣುಮಗಳ ರಕ್ಷಣೆ ತಂದೆ, ಪತಿ, ಮಕ್ಕಳ ಕರ್ತವ್ಯ. ಆದಕಾರಣ ಮೇಲಿನ ಮಾತನ್ನು ಮನುಮಹರ್ಷಿಗಳು ಹೇಳಿರುವುದು.

ಇದನ್ನೂ ಓದಿ:Spiritual: ಪ್ರಾರ್ಥನೆ ಎಂದರೇನು? ಅಷ್ಟಕ್ಕೂ ಪ್ರಾರ್ಥನೆ ಹೇಗಿರಬೇಕು ಗೊತ್ತಾ..!

ಇಲ್ಲಿ ಸ್ವಾತಂತ್ರ್ಯವಿಲ್ಲ ಅಂದರೆ ಅವರು ಎಲ್ಲೂ ಹೋಗದೆ ಗ್ರಹಬಂಧನದಲ್ಲೇ ಇರಬೇಕೆಂದು ಅರ್ಥವಲ್ಲ. ಅವರೊಂದಿಗೆ ನಾವು ಸ್ವೇಚ್ಛಾಚಾರದಿಂದ ವರ್ತಿಸಬಾರದು ಎಂದು ಅರ್ಥ. ಈಗ ನೀವನ್ನಬಹುದು ಇದು ನಿಮ್ಮ ಕಲ್ಪನೆ ಎಂದು. ಆದರೆ ಮೇಲಿನ ಸ್ವಾತಂತ್ರ್ಯದ ಕುರಿತಾದ ಮನುವಿನ ಮಾತೇನಿದೆ.. ಅದಕ್ಕಿಂತ ಪೂರ್ವದಲ್ಲಿ ಅದೇ ಮನುವಿನ ಗ್ರಂಥದಲ್ಲಿ ಮನುಮಹರ್ಷಿಗಳು ಹೇಳುತ್ತಾರೆ ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂದು. ಅರ್ಥ ಹೀಗಿದೆ – ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಅಥವಾ ಗೌರವದಿಂದ ಕಾಣಲ್ಪಡುತ್ತಾರೋ ಅಲ್ಲಿ ದೇವತೆಗಳೂ ಸಹ ಆನಂದದಿಂದ ಇರುತ್ತಾರೆ ಎಂದು. ಭಾವಾರ್ಥ ಹೀಗಿದೆ ದೇವತಾರಾಧನೆಯಿಂದ ದೇವತೆಗಳಿಗೆ ಯಾವ ಆನಂದ ಸಿಗುತ್ತದೋ ಅದೇ ಆನಂದ ಭಗವಂತನಿಗೆ ಸ್ತ್ರೀಯರನ್ನು ಗೌರವದಿಂದ ಆದರಿಸಿದರೆ ಸಿಗುತ್ತದೆ ಎಂದು. ಇದು ಮನುಮಹರ್ಷಿಗಳ ಅಂತರಂಗ. ನಾವುಗಳು ಕೆಲವು ಬಾರಿ ಅನವಧಾನದಿಂದ ಸರಿಯಾಗಿ ಗ್ರಹಿಸದೇ ಕೆಲವರ ಬಗ್ಗೆ ಅಥವಾ ಕೆಲವು ವಿಚಾರಗಳ ಬಗ್ಗೆ ಮಾತನಾಡಿಬಿಡುತ್ತೇವೆ.

ಆದರೆ ಕಣ್ಣಾರೆ ಕಂಡರೂ ಪರಾಂಪರಿಸಿ ನೋಡು ಎಂಬ ಗಾದೆಯ ಮಾತಿನಂತೆ ಸೂಕ್ಷ್ಮವಾಗಿ ಗಮನಿಸಿದಾಗ ಗ್ರಂಥಕಾರನ ಹಾಗೇ ವ್ಯಕ್ತಿಯ ಅಭಿಪ್ರಾಯ ತಿಳಿದುಬರುವುದು. ನಮ್ಮ ಸನಾತನ ಪರಂಪರೆಯ ಹೆಚ್ಚಿನ ರಸಋಷಿಗಳು ತತ್ವಜ್ಞಾನಿಗಳು ಸ್ತ್ರೀಯರನ್ನು ದೇವತೆಯಂತೆ ಆದರಿಸಿದ್ದಾರೆ ಎಂಬುದರಲ್ಲಿ ಸಂಶಯಬೇಡ. ಆದಿಶಂಕರರ ಮಾತಿನಂತೆ ಕು ಮಾತಾ ನ ಭವತಿ”ಅಂದರೆ ಕೆಟ್ಟಮಾತೆ ಎಂದೂ ಇರಲಾರಳು. ಒಟ್ಟಾರೆಯಾಗಿ ಹೇಳುವುದಾದರೆ ಸ್ತ್ರೀಯೆಂದರೆ ಬಂಗಾರದಂತೆ, ಕಾಪಾಡುವುದು ನಮ್ಮ ಧರ್ಮ. ಅದು ಅವಳ ಸ್ವಾತಂತ್ರ್ಯದ ಹರಣವಲ್ಲ ಅಲ್ಲವೇ ?

ಡಾ.ಕೇಶವ ಕಿರಣ ಬಿ

ಧಾರ್ಮಿಕ ಸಲಹೆಗಾರರು ಮತ್ತು ಚಿಂತಕರು

Published On - 5:53 pm, Thu, 9 February 23