Goddess Durga: ದುರ್ಗಾದೇವಿಯ 10 ಕೈಗಳಲ್ಲಿರುವ 10 ಆಯುಧಗಳ ಅರ್ಥವೇನು ಗೊತ್ತಾ?

Goddess Durga: ದುರ್ಗಾದೇವಿಯ 10 ಕೈಗಳಲ್ಲಿರುವ 10 ಆಯುಧಗಳ ಅರ್ಥವೇನು ಗೊತ್ತಾ?
ದುರ್ಗಾದೇವಿಯ 10 ಕೈಗಳಲ್ಲಿರುವ 10 ಆಯುಧಗಳ ಅರ್ಥವೇನು ಗೊತ್ತಾ?

10 weapons of Goddess Durga: ವಜ್ರವು ಅಚಲತೆಯನ್ನು, ನಿರ್ಣಯವನ್ನು ಮತ್ತು ಸರ್ವೋಚ್ಛ ಶಕ್ತಿಯ ದೃಢತೆಯನ್ನು ಸಂಕೇತಿಸುತ್ತದೆ. ವಜ್ರಾಯುಧವು ಭಗವಾನ್‌ ಇಂದ್ರನ ಆಯುಧವಾಗಿದ್ದು, ತನ್ನ ಆಯುಧವನ್ನು ತಾಯಿ ದುರ್ಗೆಗೆ ಉಡುಗೊರೆಯಾಗಿ ನೀಡುತ್ತಾನೆ. ತಾಯಿ ದುರ್ಗೆಯನ್ನು ಪೂಜಿಸುವುದರಿಂದ ಜೀವನದಲ್ಲಿ ಆತ್ಮವಿಶ್ವಾಸವು ಹೆಚ್ಚಾಗುತ್ತದೆ ಹಾಗೂ ಕಠಿಣ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಲು ಸಹಕರಿಸುತ್ತದೆ.

TV9kannada Web Team

| Edited By: sadhu srinath

Apr 03, 2022 | 6:06 AM

ಸಿಂಹವನ್ನೇ ತನ್ನ ವಾಹನವನ್ನಾಗಿಸಿಕೊಂಡು ಹತ್ತು ಕೈಗಳಿಂದ ದೈತ್ಯ ಮಹಿಷಾಸುರನನ್ನು ಸಂಹಾರ ಮಾಡಿದವಳು ತಾಯಿ ದುರ್ಗೆ. ದುರ್ಗೆಯು ತನ್ನ 10 ಕೈಗಳಲ್ಲಿ 10 ವಿವಿಧ ರೀತಿಯ ಆಯುಧಗಳನ್ನು ಹಿಡಿದುಕೊಂಡಿದ್ದಾಳೆ. ಈ 10 ಆಯುಧಗಳು 10 ವಿವಿಧ ಅರ್ಥವನ್ನು ನೀಡುತ್ತದೆ. ದುರ್ಗಾ ದೇವಿಯು ಶಕ್ತಿಯ ಪ್ರತೀಕವಾಗಿದ್ದಾಳೆ ಹಾಗೂ ಎಲ್ಲಾ ದೇವರು, ದೇವತೆಗಳಿಗಿಂತಲೂ ಅತ್ಯಂತ ಶಕ್ತಿಶಾಲಿಯಾಗಿದ್ದಾಳೆ. ತಾಯಿ ದುರ್ಗೆಯು ಬರೋಬ್ಬರಿ 9 ದಿನಗಳ ಕಾಲ 9 ವಿವಿಧ ರೂಪದಲ್ಲಿ ದೈತ್ಯ ರಾಕ್ಷಸ ಮಹಿಷಾಸುರನೊಂದಿಗೆ ಹೋರಾಡಿ ಆತನನ್ನು ಹತ್ಯೆಗೈಯುತ್ತಾಳೆ, ಆದ್ದರಿಂದ ಈಕೆಯನ್ನು ನವದುರ್ಗ ಎಂದು ಕರೆಯುತ್ತಾರೆ (Spiritual). ತಾಯಿ ದುರ್ಗೆಯು ತನ್ನ (Goddess Durga) 10 ಕೈಗಳಲ್ಲಿ 10 ವಿಧದ ಆಯುಧಗಳನ್ನು ಹಿಡಿದುಕೊಂಡಿದ್ದಾಳೆ. ಈ ಆಯುಧಗಳಲ್ಲಿ ಕೆಲವೊಂದನ್ನು ಉಡುಗೊರೆಯಾಗಿ ಪಡೆದುಕೊಂಡರೆ, ಇನ್ನು ಕೆಲವೊಂದನ್ನು ವರವಾಗಿ ಪಡೆದುಕೊಂಡಿರುವುದಾಗಿದೆ. ಈಕೆಯ ಕೈಯಲ್ಲಿನ ಪ್ರತಿಯೊಂದು ಆಯುಧವು ಮಾನವರ ಚಟುವಟಿಕೆಗಳನ್ನು ಸೂಚಿಸುತ್ತದೆ. ದುರ್ಗಾ ದೇವಿಯು ದುಷ್ಟರನ್ನು ಸಂಹರಿಸಲು ಯಾವೆಲ್ಲಾ ಅಸ್ತ್ರಗಳನ್ನು ಉಪಯೋಗಿಸಿದ್ದಾಳೆ ಗೊತ್ತಾ? (10 weapons of Goddess Durga)

 1. ಖಡ್ಗ ಅಥವಾ ಕತ್ತಿ: ಖಡ್ಗ ಅಥವಾ ಕತ್ತಿಯು ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಈ ಆಯುಧವನ್ನು ಸಾಮಾನ್ಯವಾಗಿ ಜವಾಬ್ದಾರಿಯುತ ಜನರು, ಸರಿ ಮತ್ತು ತಪ್ಪುಗಳ ಬಗ್ಗೆ ಜ್ಞಾನ ಹೊಂದಿರುವವರು ಹಿಡಿದಿರುತ್ತಾರೆ. ಖಡ್ಗವನ್ನು ನಾವು ರಾಜರುಗಳ ಬಳಿ ಹೆಚ್ಚಾಗಿ ನೋಡಬಹುದು. ತಾಯಿ ದುರ್ಗೆ ಕೈಯಲ್ಲಿ ಹಿಡಿದಿರುವ ಖಡ್ಗವು ಮನುಷ್ಯನ ಭ್ರಮೆಯನ್ನು, ಅತಿ ಆಸೆಯನ್ನು ಹಾಗೂ ಆತನ ಆತ್ಮವನ್ನು ಬಂಧಿಸುತ್ತದೆ. ಇದು ಮನುಷ್ಯನಿಗೆ ತಾನನು ಮಾಡಬೇಕಾದ ನೈಜ ಕರ್ತವ್ಯದ ಅರಿವನ್ನು ಮೂಡಿಸುತ್ತದೆ. ಖಡ್ಗಕ್ಕೆ ನಕಾರಾತ್ಮಕತೆಯನ್ನು ತೊಡೆದು ಹಾಕುವ ಸಾಮರ್ಥ್ಯವಿದೆ.
 2. ತ್ರಿಶೂಲ: ಮೂರು ತೀಕ್ಷ್ಣವಾದ ಆಕಾರವನ್ನು ಹೊಂದಿರುವ ಈ ಆಯುಧವು ಮಾನವಕುಲದ ಮೂರು ಗುಣಗಳನ್ನು ಸಂಕೇತಿಸುತ್ತದೆ. ಮೂರು ಗುಣಗಳೆಂದರೆ ತಮೋಗುಣ, ರಜೋಗುಣ ಮತ್ತು ಸತ್ವಗುಣಗಳಾಗಿವೆ. ಆದ್ದರಿಂದ ದುರ್ಗೆಯನ್ನು ಸಮಯವನ್ನೇ ಮೀರಿದವಳು ಎನ್ನಲಾಗುತ್ತದೆ. ಆಕೆ ಸಮಯಕ್ಕೆ ಮಹತ್ವವನ್ನು ನೀಡಿದವಳಲ್ಲ. ಯಾವ ಸಮಯದಲ್ಲಿ ವ್ಯಕ್ತಿ ಕೆಡುಕನ್ನು ಮಾಡುತ್ತಾನೋ ಅದೇ ಸಮಯದಲ್ಲಿ ಆಕೆ ಶಿಕ್ಷಿಸುತ್ತಾಳೆ. ಪರಶಿವನು ಈ ಆಯುಧವನ್ನು ದುರ್ಗಾದೇವಿಗೆ ನೀಡಿದ್ದಾನೆ. ತ್ರಿಶೂಲದ ಮೂರು ಅಂಶಗಳು ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್‌ಕಾಲವನ್ನು ಪ್ರತಿನಿಧಿಸುತ್ತದೆ.
 3. ಸುದರ್ಶನ ಚಕ್ರ: ಚಕ್ರವು ಜೀವಿತಾವಧಿಯನ್ನು ಪ್ರತಿನಿಧಿಸುತ್ತದೆ. ಅದು ನಾವು ಎಷ್ಟು ಸಮಯ ಬದುಕಿರುತ್ತೇವೋ ಅಷ್ಟು ಸಮಯ ನಮ್ಮ ದೇಹದಲ್ಲಿ ಸುತ್ತುತ್ತದೆ. ಚಕ್ರವು ನಮಗೆ ಸಮಯ ಎಲ್ಲವನ್ನು ನಾಶ ಮಾಡುತ್ತದೆ ಎನ್ನುವುದನ್ನು ತಿಳಿಸುತ್ತದೆ. ಆಂತರಿಕ ಜಾಗೃತಿಯನ್ನು ಮುಡಿಸುವಲ್ಲಿ ಚಕ್ರ ಪ್ರಮುಖ ಪಾತ್ರವನ್ನು ವಹಿಸಿದೆ. ಭಗವಾನ್‌ ವಿಷ್ಣು ತಾಯಿ ದುರ್ಗೆಗೆ ಉಡುಗೊರೆಯಾಗಿ ನೀಡಿದ ಸುದರ್ಶನ ಚಕ್ರವು ಸೃಷ್ಟಿಯ ಕೇಂದ್ರವನ್ನು ಸಂಕೇತಿಸುತ್ತದೆ. ದುರ್ಗಾದೇವಿಗೆ ನಿಷ್ಟ, ಭಕ್ತಿ ಮತ್ತು ಪ್ರೀತಿಯನ್ನು ಪ್ರದರ್ಶಿಸಲು ಚಕ್ರವು ಮನುಷ್ಯರನ್ನು ಪ್ರೇರೇಪಿಸುತ್ತದೆ.
 4. ವಜ್ರಾಯುಧ: ವಜ್ರವು ಅಚಲತೆಯನ್ನು, ನಿರ್ಣಯವನ್ನು ಮತ್ತು ಸರ್ವೋಚ್ಛ ಶಕ್ತಿಯ ದೃಢತೆಯನ್ನು ಸಂಕೇತಿಸುತ್ತದೆ. ವಜ್ರಾಯುಧವು ಭಗವಾನ್‌ ಇಂದ್ರನ ಆಯುಧವಾಗಿದ್ದು, ತನ್ನ ಆಯುಧವನ್ನು ತಾಯಿ ದುರ್ಗೆಗೆ ಉಡುಗೊರೆಯಾಗಿ ನೀಡುತ್ತಾನೆ. ತಾಯಿ ದುರ್ಗೆಯನ್ನು ಪೂಜಿಸುವುದರಿಂದ ಜೀವನದಲ್ಲಿ ಆತ್ಮವಿಶ್ವಾಸವು ಹೆಚ್ಚಾಗುತ್ತದೆ ಹಾಗೂ ಕಠಿಣ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಲು ಸಹಕರಿಸುತ್ತದೆ.
 5. ಬಿಲ್ಲು ಮತ್ತು ಬಾಣ: ದುರ್ಗೆಯು ತನ್ನ ಹತ್ತು ಕೈಗಳಲ್ಲಿ ಒಂದು ಕೈಯಲ್ಲಿ ಬಿಲ್ಲು ಮತ್ತು ಬಾಣವನ್ನು ಹಿಡಿದಿದ್ದಾಳೆ. ಇದು ವಾಯುವಿನ ಅಸ್ತ್ರವಾಗಿದ್ದು, ವಾಯು ತನ್ನ ಅಸ್ತ್ರವನ್ನು ದುರ್ಗೆಗೆ ನೀಡುತ್ತಾನೆ. ಅನಾದಿಕಾಲದಿಂದಲೂ ಬಿಲ್ಲ ಮತ್ತು ಬಾಣವನ್ನು ಪ್ರಮುಖ ಶಸ್ತ್ರಾಸ್ತ್ರವನ್ನಾಗಿ ಬಳಸಲಾಗುತ್ತದೆ. ದೇವರುಗಳು, ರಾಜರುಗಳು ಯುದ್ಧದ ಸಮಯದಲ್ಲಿ ಬಿಲ್ಲು, ಬಾಣಗಳನ್ನು ಬಳಸುತ್ತಿದ್ದರು. ದುರ್ಗೆಯ ಕೈಯಲ್ಲಿನ ಬಿಲ್ಲು ಮತ್ತು ಬಾಣವು ಪ್ರತಿಯೊಬ್ಬ ವ್ಯಕ್ತಿಯು ತನ್ನ ಗುರಿಯತ್ತ ಸ್ಥಿರವಾಗಿರಬೇಕು ಮತ್ತು ಅವನು ತನ್ನ ಗುರಿಯತ್ತ ಗಮನಹರಿಸಬೇಕು ಎಂಬೂದನ್ನು ಹೇಳುತ್ತದೆ. ಒಬ್ಬ ವ್ಯಕ್ತಿಯು ತನ್ನ ಗುರಿಗಳನ್ನು ಸ್ವತಂತ್ರವಾಗಿ ಸಾಧಿಸುವ ಸಾಮರ್ಥ್ಯವನ್ನು ಹೊಂದಿರಬೇಕೆಂದು ಸೂಚಿಸುತ್ತದೆ.
 6. ಈಟಿ: ಈಟಿಯು ಅಗ್ನಿ ದೇವರ ಆಯುಧವಾಗಿದ್ದು, ಅಗ್ನಿ ದೇವನು ತನ್ನ ಆಯುಧವನ್ನು ದುರ್ಗಾದೇವಿಗೆ ಉಡುಗೊರೆಯಾಗಿ ನೀಡುತ್ತಾನೆ. ಈಟಿಯು ಶುಭ ಸಂಕೇತವಾಗಿದ್ದರೂ ಅಗ್ನಿಯ ಈ ಉಡುಗೊರೆ ಉರಿಯುವ ಶಕ್ತಿಯನ್ನು ಕೂಡ ಸೂಚಿಸುತ್ತದೆ. ಯಾವುದು ತಪ್ಪು ಮತ್ತು ಯಾವುದು ಅರಿ ಎಂದು ಯೋಚಿಸುವ ಶಕ್ತಿಯನ್ನು ನಾವು ಹೊಂದಿರಬೇಕು ಹಾಗೂ ಅದಕ್ಕೆ ತಕ್ಕಂತೆ ವರ್ತಿಸಬೇಕೆಂದು ಈಟಿ ಹೇಳುತ್ತದೆ. ಇದು ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಮಾನವರ ಗುಪ್ತ ಶಕ್ತಿಯ ಸಂಕೇತವಾಗಿದೆ. ಯಾವಾಗಲು ನಾವು ತಪ್ಪುಗಳಿಂದ ದೂರಿರಬೇಕೆಂದು ಈಟಿ ಹೇಳುತ್ತದೆ.
 7. ಶಂಖ: ಶಂಖವು ಸೃಷ್ಟಿಯ ಆದಿಸ್ವರೂಪ ಧ್ವನಿಯಾದ ಓಂ ನ ಸಂಕೇತವಾಗಿದೆ. ಶಂಖವನ್ನು ವರುಣ ದೇವನು ತಾಯಿ ದುರ್ಗೆಗೆ ನೀಡಿದ್ದಾನೆ. ಬ್ರಹ್ಮಾಂಡವು ಸೃಷ್ಟಿಯಾದಾಗ ಶಂಖವು ಮೊದಲು ಹುಟ್ಟಿಕೊಂಡಿತು. ಆ ಸಂದರ್ಭದಲ್ಲಿ ಶಂಖದಿಂದ ಮೊದಲು ಹೊರಹೊಮ್ಮಿದ ಶಬ್ಧವೇ ಓಂ. ಶಂಖವನ್ನು ಹಿಂದೂ ಧರ್ಮದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಹಿಂದೂ ಧರ್ಮೀಯರ ಪ್ರಕಾರ, ಶಂಖವು ನಕಾರಾತ್ಮಕ ಶಕ್ತಿಯನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ.
 8. ಕಮಲ: ಕಮಲದ ಹೂ ಬ್ರಹ್ಮನ ಸಂಕೇತವಾಗಿದೆ. ಕಮಲವು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ ಹಾಗೂ ಜ್ಞಾನದ ಮೂಲಕ ಮುಕ್ತಿಯನ್ನು ನೀಡುತ್ತದೆ. ಬ್ರಹ್ಮನು ತನ್ನ ಕಮಂಡಲದೊಂದಿಗೆ ಕಮಲವನ್ನು ಹಾಗೂ ಬುದ್ಧಿವಂತಿಕೆಯನ್ನು ತಾಯಿ ದುರ್ಗೆಗೆ ನೀಡಿದನು. ಕಮಲವು ಭಕ್ತಿಯನ್ನು ಮತ್ತು ಭಗವಾನ್‌ ಆಂಜನೇಯನನ್ನು ಸೂಚಿಸುತ್ತದೆ. ನಾವು ಯಾವುದೇ ಕೆಲಸವನ್ನು ಮಾಡಬೇಕಾದರೆ ಅದರ ಫಲವನ್ನು ನಿರೀಕ್ಷಿಸಿಬಾರದು. ಬದಲಾಗಿ, ನಮ್ಮ ಕೈಲಾದಷ್ಟು ಶ್ರಮಿಸಬೇಕು ಅದರ ಫಲವನ್ನು ದೇವರ ಇಚ್ಛೆಗೆ ಬಿಡಬೇಕೆಂದು ದುರ್ಗೆಯ ಕಮಲವನ್ನು ಹಿಡಿದ ಕೈ ಹೇಳುತ್ತದೆ.
 9. ಕೊಡಲಿ: ಕೊಡಲಿ ಕೆಟ್ಟದ್ದನ್ನು ಅಥವಾ ನಕಾರತ್ಮಕತೆಯನ್ನು ಹೊಡೆದೋಡಿಸುವ ಸಾಮರ್ಥ್ಯವನ್ನು ಹೊಂದಿದೆ. ಅಂತೆಯೇ ನಮ್ಮೊಳಗಿನ ಕೆಟ್ಟ ಭಾವನೆಗಳನ್ನು ನಾಶಗೊಳಿಸಿಕೊಳ್ಳಬೇಕೆಂಬೂದನ್ನು ಸೂಚಿಸುತ್ತದೆ. ವಿಶ್ವಕರ್ಮನು ತಾಯಿ ದುರ್ಗೆಗೆ ಕೊಡಲಿಯನ್ನು ನೀಡುತ್ತಾನೆ. ದುಷ್ಟರ ವಿರುದ್ಧದ ಹೋರಾಟದಿಂದ ಮುಂದಾಗುವ ಪರಿಣಾಮಗಳ ಬಗ್ಗೆ ಭಯವಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ.
 10. ಹಾವು: ದುರ್ಗಾ ಮಾತೆಯ ಹತ್ತು ಕೈಗಳಲ್ಲಿ ಒಂದು ಕೈ ಖಾಲಿ ಇರುತ್ತದೆ. ಆ ಕೈಯಲ್ಲಿ ಆಕೆ ಭಕ್ತರನ್ನು ಆಶೀರ್ವದಿಸುತ್ತಾಳೆ. ಆದರೆ ಆ ಕೈಯಲ್ಲಿ ದುರ್ಗೆ ಹಾವನ್ನು ಹಿಡಿದಿದ್ದಾಳೆ. ಅಥವಾ ಮಹಿಷಾಸುರನನ್ನು ಸಂಹರಿಸಲು ಆಕೆ ಅದೇ ಕೈಯಲ್ಲಿ ತ್ರಿಶೂಲವನ್ನೂ ಕೂಡ ಹಿಡಿದಿದ್ದಾಳೆ. ಹತ್ತನೇ ಕೈಯಲ್ಲಿ ದುರ್ಗೆ ಹಾವನ್ನು ಹಿಡಿದಿದ್ದಾಳೆ. ಹಾವು ಯಾವಾಗಲೂ ಶಿವನ ಕೊರಳಲ್ಲಿ ಇರುತ್ತದೆ. ಅದೇ ಹಾವನ್ನು ಶಿವನು ಮಾತೆ ದುರ್ಗೆಗೆ ನೀಡಿದ್ದಾನೆ. ದುರ್ಗೆಯ ಹತ್ತನೇ ಕೈಯಲ್ಲಿರುವ ಹಾವು ಪ್ರಜ್ಞೆಯನ್ನು ಮತ್ತು ಶಿವನ ಪುರುಷ ಶಕ್ತಿಯನ್ನು ಸಂಕೇತಿಸುತ್ತದೆ.
 11. ಸಿಂಹವನ್ನು ಕಾಡಿನ ರಾಜ, ಎಲ್ಲಾ ಪ್ರಾಣಿಗಳ ರಾಜನೆಂದು ಹೇಳಲಾಗುತ್ತದೆ. ಹಾಗೂ ಅತ್ಯಂತ ಶಕ್ತಿಶಾಲಿ ಪ್ರಾಣಿ. ದುರ್ಗಾದೇವಿಯು ಸಿಂಹವನ್ನು ತನ್ನ ವಾಹನವನ್ನಾಗಿಸಿ ಕೊಂಡಿದ್ದಾಳೆ. ಯಾವುದೇ ಓರ್ವ ವ್ಯಕ್ತಿಯು ತನ್ನ ಶಕ್ತಿ ಮತ್ತು ಸಾಮರ್ಥ್ಯವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬೇಕು ಹಾಗು ಅವಶ್ಯಕತೆಯಿದ್ದಾಗ ಮಾತ್ರ ಅದನ್ನು ಪ್ರಯೋಗಿಸಬೇಕೆಂಬುದನ್ನು ದುರ್ಗೆಯು ಸೂಚಿಸುತ್ತಾಳೆ.

ಸರ್ವ ಮಂಗಲ ಮಾಂಗಲ್ಯ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರಯಂಬಕೇ ಗೌರೀ ನಾರಾಯಣಿ ನಮೋಸ್ತುತೆ ಓಂ ನಮೋ ಭಗವತೇ ವಾಸುದೇವಾಯ (ಬರಹ -ಆಶಾ ನಾಗಭೂಷಣ)

Follow us on

Related Stories

Most Read Stories

Click on your DTH Provider to Add TV9 Kannada