Hindu Rituals: ಜನಿವಾರವನ್ನು ಎಲ್ಲೆಂದರಲ್ಲಿ ತೆಗೆಯಬಾರದು ಏಕೆ? ಯಜ್ಞೋಪವೀತ ಧಾರಣೆ ಮಹತ್ವ ಇಲ್ಲಿ ತಿಳಿಯಿರಿ

ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರ ತೆಗೆಸಲಾಗಿದೆ, ಬಲವಂತವಾಗಿ ಕತ್ತರಿಸಿ ಬಿಸಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಜನಿವಾರಕ್ಕೆ ಅಷ್ಟೊಂದು ಮಹತ್ವ ಏಕೆ, ಎಲ್ಲೆಂದರಲ್ಲಿ ಜನಿವಾರ ಯಾಕೆ ತೆಗೆಯಬಾರದು ?ಯಾವಾಗ ಬದಲಾಯಿಸಬೇಕು? ಇದರ ಮಹತ್ವ, ನಿಯಮಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

Hindu Rituals: ಜನಿವಾರವನ್ನು ಎಲ್ಲೆಂದರಲ್ಲಿ ತೆಗೆಯಬಾರದು ಏಕೆ? ಯಜ್ಞೋಪವೀತ ಧಾರಣೆ ಮಹತ್ವ ಇಲ್ಲಿ ತಿಳಿಯಿರಿ
ಯಜ್ಞೋಪವೀತ ಅಥವಾ ಜನಿವಾರ
Image Credit source: Pinterest

Updated on: Apr 29, 2026 | 1:35 PM

ಹಿಂದೂ ಸಂಪ್ರದಾಯದಲ್ಲಿ ಯಜ್ಞೋಪವೀತ ಅಥವಾ ಜನಿವಾರಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಇದನ್ನು ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಸಮುದಾಯದವರು ಉಪನಯನ ಸಂಸ್ಕಾರದ ನಂತರ ಧರಿಸುತ್ತಾರೆ. ಯಜ್ಞೋಪವೀತವು ಕೇವಲ ದಾರವಲ್ಲ, ಅದು ಧರಿಸಿದವನಿಗೆ ತನ್ನ ಕರ್ತವ್ಯ ಮತ್ತು ಶಿಸ್ತಿನ ನೆನಪು ಮಾಡಿಕೊಡುವ ಒಂದು ದೈವಿಕ ಸಾಧನವಾಗಿದೆ.

ಎಲ್ಲೆಂದರಲ್ಲಿ ಜನಿವಾರ ತೆಗೆಯಬಾರದು ಯಾಕೆ?

ಸಾಮಾನ್ಯವಾಗಿ ಯಜ್ಞೋಪವೀತ(ಜನಿವಾರ) ವನ್ನು ಒಮ್ಮೆ ಧರಿಸಿದ ನಂತರ ದೇಹದಿಂದ ಬೇರ್ಪಡಿಸಬಾರದು. ಆದರೆ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಹಳೆಯದನ್ನು ಬದಲಾಯಿಸಿ ಹೊಸದನ್ನು ಧರಿಸುವುದು ಅನಿವಾರ್ಯವಾಗುತ್ತದೆ. ಪ್ರತಿ ವರ್ಷ ಶ್ರಾವಣ ಮಾಸದ ನೂಲು ಹುಣ್ಣಿಮೆಯಂದು ಹೊಸ ಯಜ್ಞೋಪವೀತವನ್ನು ಧರಿಸುವುದು ರೂಢಿ. ಇದಲ್ಲದೆ ಮನೆಯಲ್ಲಿ ಜನನ ಅಥವಾ ಮರಣ ಸಂಭವಿಸಿ ಸೂತಕದ ಅವಧಿ ಮುಗಿದ ನಂತರ, ಗ್ರಹಣದ ಪರ್ವಕಾಲ ಮುಗಿದ ಬಳಿಕ ಅಥವಾ ಯಜ್ಞೋಪವೀತವು ಬಣ್ಣ ಕಳೆದುಕೊಂಡು ಸವೆದುಹೋಗಿದ್ದರೆ ತಕ್ಷಣವೇ ಅದನ್ನು ಬದಲಾಯಿಸಬೇಕು. ನೆನಪಿಡಬೇಕಾದ ಮುಖ್ಯ ಅಂಶವೆಂದರೆ, ಹೊಸದನ್ನು ಧರಿಸಿದ ನಂತರವೇ ಹಳೆಯದನ್ನು ತೆಗೆಯಬೇಕು; ಉಪನಯನವಾದ ವ್ಯಕ್ತಿಯು ಕ್ಷಣಕಾಲವೂ ಜನಿವಾರವಿಲ್ಲದೆ ಇರಬಾರದು.

ಧರಿಸುವಾಗ ಕೆಲವು ಕಟ್ಟುನಿಟ್ಟಿನ ನಿಯಮಗಳು:

ಯಜ್ಞೋಪವೀತವನ್ನು ಧರಿಸುವಾಗ ಮತ್ತು ನಿರ್ವಹಿಸುವಾಗ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೂತ್ರ ವಿಸರ್ಜನೆ ಅಥವಾ ಮಲ ವಿಸರ್ಜನೆಯ ಸಮಯದಲ್ಲಿ ಜನಿವಾರವನ್ನು ಬಲ ಕಿವಿಯ ಮೇಲೆ ಧರಿಸಬೇಕು. ಪೂಜೆ, ಹೋಮ, ವೇದಾಧ್ಯಯನ ಮತ್ತು ಸಂಧ್ಯಾವಂದನೆಯ ಸಮಯದಲ್ಲಿ ಯಜ್ಞೋಪವೀತ ಧಾರಣೆ ಕಡ್ಡಾಯ. ಹಳೆಯ ಜನಿವಾರವನ್ನು ಬದಲಾಯಿಸಿದಾಗ ಅದನ್ನು ಎಲ್ಲೆಂದರಲ್ಲಿ ಎಸೆಯಬಾರದು ಅಥವಾ ಸುಡಬಾರದು. ಬದಲಾಗಿ ಹರಿಯುವ ನೀರಿಗೆ ಅಥವಾ ಪವಿತ್ರವಾದ ಜಲಮೂಲಕ್ಕೆ ಅರ್ಪಿಸಬೇಕು. ಜನಿವಾರವು ಯಾವಾಗಲೂ ಹೊಕ್ಕುಳಿನ ಮಟ್ಟದಲ್ಲಿರಬೇಕು, ಅದು ತುಂಬಾ ಕೆಳಕ್ಕೆ ಅಥವಾ ಮೇಲಕ್ಕೆ ಇರಬಾರದು ಎಂಬುದು ಶಾಸ್ತ್ರದ ನಿಯಮ.

ಇದನ್ನೂ ಓದಿ: ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಮೋದಿ ವಿಶೇಷ ಪೂಜೆ; ಸರ್ವಾರ್ಥ ಸಿದ್ಧಿ ಯೋಗದ ಮಹತ್ವವೇನು ಗೊತ್ತಾ?

ಹೊಸ ಜನಿವಾರ ಧರಿಸುವಾಗ ಈ ನಿಯಮ ತಿಳಿದಿರಲಿ:

ಹೊಸ ಯಜ್ಞೋಪವೀತವನ್ನು ಧರಿಸುವಾಗ ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ ಕುಳಿತು ಸಂಕಲ್ಪ ಮಾಡಬೇಕು. ಈ ಸಂದರ್ಭದಲ್ಲಿ “ಯಜ್ಞೋಪವೀತಂ ಪರಮಂ ಪವಿತ್ರಂ…” ಎನ್ನುವ ಮಂತ್ರವನ್ನು ಪಠಿಸುತ್ತಾ ಎಡ ಭುಜದ ಮೇಲಿಂದ ಬಲಗೈ ಕೆಳಗೆ ಬರುವಂತೆ ಧರಿಸಬೇಕು. ಗೃಹಸ್ಥರು ತಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ಎರಡು ಅಥವಾ ಮೂರು ಎಳೆಗಳುಳ್ಳ
ಜನಿವಾರಗಳನ್ನು ಧರಿಸಬಹುದು. ಪ್ರತಿ ಬಾರಿ ಹೊಸದನ್ನು ಧರಿಸುವಾಗಲೂ ಮಂತ್ರ ಪಠನೆ ಮತ್ತು ಆಚಮನ ಮಾಡುವುದು ಅಗತ್ಯ. ಈ ವಿಧಿವಿಧಾನದ ನಂತರ ಕನಿಷ್ಠ 10 ಅಥವಾ 28 ಬಾರಿ ಗಾಯತ್ರಿ ಮಂತ್ರವನ್ನು ಜಪಿಸಿ ಸಂಧ್ಯಾವಂದನೆ ಪೂರೈಸುವುದರಿಂದ ಯಜ್ಞೋಪವೀತಕ್ಕೆ ಸಂಪೂರ್ಣ ಚೈತನ್ಯ ಲಭಿಸುತ್ತದೆ ಎಂದು ನಂಬಲಾಗಿದೆ.

ಗಮನಿಸಿ: ವೈಯಕ್ತಿಕ ಗೋತ್ರ ಮತ್ತು ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ನಿಯಮಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳಿರುವುದರಿಂದ ಹೆಚ್ಚಿನ ಮಾಹಿತಿಗಾಗಿ ಕುಟುಂಬದ ಪುರೋಹಿತರನ್ನು ಸಂಪರ್ಕಿಸುವುದು ಉತ್ತಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Wed, 29 April 26

Follow Us