ಏಷ್ಯನ್ ಗೇಮ್ಸ್​ನಲ್ಲಿ ಟೀಮ್ ಇಂಡಿಯಾ ಎದುರಾಳಿ ಯಾರು?

Asian Games 2026: 2023ರಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರಿಕೆಟ್ ತಂಡಗಳು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ಬರೆದಿದ್ದವು. ಇದೀಗ 20ನೇ ಏಷ್ಯನ್ ಗೇಮ್ಸ್​​ನಲ್ಲಿ ಟೀಮ್ ಇಂಡಿಯಾ ಮೂರು ಪಂದ್ಯಗಳನ್ನು ಗೆದ್ದರೆ ಚಿನ್ನದ ಪದಕಕ್ಕೆ ಕೊರಳೊಡ್ಡಲಿದ್ದಾರೆ.

ಏಷ್ಯನ್ ಗೇಮ್ಸ್​ನಲ್ಲಿ ಟೀಮ್ ಇಂಡಿಯಾ ಎದುರಾಳಿ ಯಾರು?
Asian Games

Updated on: Jul 25, 2026 | 8:42 AM

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಪ್ರತಿಷ್ಠಿತ 2026ರ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಾವಳಿಯ ಅಧಿಕೃತ ಡ್ರಾ ಮತ್ತು ವೇಳಾಪಟ್ಟಿ ಪ್ರಕಟವಾಗಿದೆ. ಅಗ್ರ ಶ್ರೇಯಾಂಕದ ಬಲದೊಂದಿಗೆ ಭಾರತದ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ನೇರವಾಗಿ ಕ್ವಾರ್ಟರ್‌ಫೈನಲ್ ಹಂತಕ್ಕೆ ಪ್ರವೇಶ ಪಡೆದಿವೆ.

ಐಸಿಸಿ ಟಿ20 ಶ್ರೇಯಾಂಕದ ಆಧಾರದ ಮೇಲೆ ಭಾರತದ ಉಭಯ ತಂಡಗಳಿಗೆ ಈ ವಿಶೇಷ ಸ್ಥಾನ ಲಭಿಸಿದೆ. ಮಹಿಳಾ ವಿಭಾಗದಲ್ಲಿ ಭಾರತಕ್ಕೆ ಎದುರಾಳಿ ಯಾರು ಎಂಬುದು ಖಚಿತವಾಗಿದ್ದರೆ, ಪುರುಷರ ವಿಭಾಗದಲ್ಲಿ ಅರ್ಹತಾ ಸುತ್ತಿನ ಬಳಿಕ ಎದುರಾಳಿ ನಿರ್ಧಾರವಾಗಲಿದೆ.

ಅರ್ಹತಾ ಸುತ್ತಿನ ಸವಾಲು:

ಶ್ರೇಯಸ್ ಅಯ್ಯರ್ ನೇತೃತ್ವದ ಭಾರತೀಯ ಪುರುಷರ ತಂಡಕ್ಕೂ ನೇರ ಕ್ವಾರ್ಟರ್‌ಫೈನಲ್ ಟಿಕೆಟ್ ಸಿಕ್ಕಿದೆ. ಆದರೆ, ಭಾರತದ ಎದುರಾಳಿ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಪ್ರಾಥಮಿಕ ಸುತ್ತಿನ ಗುಂಪು ಹಂತದಿಂದ ಅಗ್ರಸ್ಥಾನ ಪಡೆದು ಅರ್ಹತೆ ಪಡೆಯುವ ಯಾವುದಾದರೊಂದು ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತಕ್ಕೆ ಎದುರಾಳಿಯಾಗಲಿದೆ.

ಎದುರಾಳಿ ಯಾಕೆ ನಿರ್ಧಾರವಾಗಿಲ್ಲ?

ಭಾರತೀಯ ಪುರುಷರ ಕ್ರಿಕೆಟ್ ತಂಡದ ಎದುರಾಳಿಯ ಜಾಗದಲ್ಲಿ TBD (To Be Decided – ಇನ್ನು ನಿರ್ಧಾರವಾಗಬೇಕಿದೆ) ಎಂದು ನೀಡಲು ಮುಖ್ಯ ಕಾರಣ ಟೂರ್ನಿಯ ಫಾರ್ಮ್ಯಾಟ್ ಮತ್ತು ಅರ್ಹತಾ ಸುತ್ತಿನ ಪಂದ್ಯಗಳು ಇನ್ನೂ ಮುಗಿಯದೇ ಇರುವುದು.

  • ನೇರ ಪ್ರವೇಶ: ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ಭಾರತ ಅತ್ಯುತ್ತಮ ಸ್ಥಾನದಲ್ಲಿರುವ ಕಾರಣ, ಭಾರತ ತಂಡಕ್ಕೆ ಟೂರ್ನಿಯ ಆರಂಭಿಕ ಪಂದ್ಯಗಳನ್ನು ಆಡುವ ಅಗತ್ಯವಿಲ್ಲ. ತಂಡವು ನೇರವಾಗಿ ಕ್ವಾರ್ಟರ್‌ಫೈನಲ್  ಹಂತಕ್ಕೆ ಅರ್ಹತೆ ಪಡೆದಿದೆ.
  • ಅರ್ಹತಾ ಸುತ್ತಿನ ಪಂದ್ಯಗಳು: ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಇತರ ಕೆಳ ಕ್ರಮಾಂಕದ ತಂಡಗಳಾದ ಅಫ್ಘಾನಿಸ್ತಾನ್, ನೇಪಾಳ, ಜಪಾನ್, ಹಾಂಗ್ ಕಾಂಗ್, ಮಲೇಷ್ಯಾ ಮತ್ತು ಒಮಾನ್ ತಂಡಗಳು ಮೊದಲು ಪ್ರಾಥಮಿಕ ಸುತ್ತಿನ ಪಂದ್ಯಗಳನ್ನು ಆಡಲಿದೆ.
  • ಭಾರತದ ಎದುರಾಳಿ: ಈ ಪ್ರಾಥಮಿಕ ಸುತ್ತಿನ ಪಂದ್ಯಗಳು ಮುಗಿದು, ಅದರಲ್ಲಿ ಯಾವ ತಂಡ ಅಗ್ರಸ್ಥಾನ ಪಡೆದು ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯುತ್ತದೆಯೋ, ಆ ತಂಡವು ಭಾರತದ ವಿರುದ್ಧ ಆಡಲಿದೆ.

ಅಂದರೆ ಇಲ್ಲಿ ಟೀಮ್ ಇಂಡಿಯಾಗೆ ಅಫ್ಘಾನಿಸ್ತಾನ್, ನೇಪಾಳ, ಜಪಾನ್, ಹಾಂಗ್ ಕಾಂಗ್, ಮಲೇಷ್ಯಾ ಮತ್ತು ಒಮಾನ್ ತಂಡಗಳಲ್ಲಿ ಯಾವುದಾದರೊಂದು ತಂಡ ಎದುರಾಳಿಯಾಗಿ ಸಿಗಲಿದೆ. ಈ ಪಂದ್ಯದಲ್ಲಿ ಗೆದ್ದರೆ ಟೀಮ್ ಇಂಡಿಯಾ ಸೆಮಿಫೈನಲ್​ಗೇರಲಿದೆ. ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಎದುರಿಸುವ ಸಾಧ್ಯತೆ ಹೆಚ್ಚಿದೆ.

ಇಂಡೊ-ಪಾಕ್ ಕದನ:

ಈ ಬಾರಿಯ ಏಷ್ಯನ್ ಗೇಮ್ಸ್ ಗ್ರೂಪ್​ಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳನ್ನು ವಿರುದ್ಧ ಬದಿಗಳಲ್ಲಿ ಇರಿಸಲಾಗಿದ್ದು, ಉಭಯ ತಂಡಗಳು ತಮ್ಮ ಕ್ವಾರ್ಟರ್‌ಫೈನಲ್ ಗೆದ್ದರೆ ಸೆಮಿಫೈನಲ್ ಹಂತದಲ್ಲೇ ಮುಖಾಮುಖಿಯಾಗಲಿವೆ. ಇಲ್ಲಾ ಫೈನಲ್​ನಲ್ಲಿ ಎದುರು ಬದುರು ಆಗಲಿದೆ.

ಒಂದು ವೇಳೆ ಪಾಕಿಸ್ತಾನ್ ತಂಡವು ಸೆಮಿಫೈನಲ್ ತಲುಪಲು ವಿಫಲವಾದರೆ, ಆ ಬದಿಯಿಂದ ಕ್ವಾರ್ಟರ್‌ಫೈನಲ್ ಗೆದ್ದು ಬರುವ ಅರ್ಹತಾ ಸುತ್ತಿನ ಬಲಿಷ್ಠ ತಂಡಗಳಲ್ಲಿ ಒಂದಾದ ಶ್ರೀಲಂಕಾ ಅಥವಾ ಅಫ್ಘಾನಿಸ್ತಾನ್ ತಂಡವು ಭಾರತಕ್ಕೆ ಎದುರಾಳಿಯಾಗಿ ಸಿಗಬಹುದು.

ಕೇವಲ 3 ಪಂದ್ಯಗಳು:

2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಚಿನ್ನದ ಪದಕ ಗೆಲ್ಲಬೇಕಾದರೆ ಒಟ್ಟು 3 ಪಂದ್ಯಗಳನ್ನು ಆಡಬೇಕಾಗುತ್ತದೆ. ಅಂದರೆ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಮೂಲಕ ಟೀಮ್ ಇಂಡಿಯಾ ಚಿನ್ನದ ಪದಕಕ್ಕೆ ಕೊರೊಳೊಡ್ಡಬಹುದು.

ಏಷ್ಯನ್ ಗೇಮ್ಸ್ ಪ್ರಾಥಮಿಕ ಹಂತದ​ ಗ್ರೂಪ್:

  • ಗ್ರೂಪ್ A:
  • ಅಫ್ಘಾನಿಸ್ತಾನ್
  • ನೇಪಾಳ
  • ಜಪಾನ್
  • ಗ್ರೂಪ್ B:
  • ಒಮಾನ್
  • ಹಾಂಗ್ ಕಾಂಗ್
  • ಮಲೇಷ್ಯಾ

ಭಾರತ ತಂಡದ ವೇಳಾಪಟ್ಟಿ:

ಪಂದ್ಯದ ಹಂತ ದಿನಾಂಕ ಎದುರಾಳಿ ತಂಡ
ಕ್ವಾರ್ಟರ್‌ಫೈನಲ್ ಸೆಪ್ಟೆಂಬರ್ 28 ಅರ್ಹತಾ ಸುತ್ತಿನಿಂದ ಬರುವ ತಂಡ
ಸೆಮಿಫೈನಲ್ ಸೆಪ್ಟೆಂಬರ್ 30 / ಅಕ್ಟೋಬರ್ 1 ಪಾಕಿಸ್ತಾನ್ (ಉಭಯ ತಂಡಗಳು ಕ್ವಾರ್ಟರ್ ಫೈನಲ್ ಗೆದ್ದರೆ)
ಫೈನಲ್ / ಕಂಚಿನ ಪದಕದ ಪಂದ್ಯ ಅಕ್ಟೋಬರ್ 1 / ಅಕ್ಟೋಬರ್ 3 ನಿರ್ಧಾರವಾಗಬೇಕಿದೆ (ಸೆಮಿಫೈನಲ್​ನಲ್ಲಿ ಭಾರತ ಗೆದ್ದರೆ)

2023ರ ಚೀನಾದ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು. ರುತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ತಂಡ ಮತ್ತು ಅಫ್ಘಾನಿಸ್ತಾನ್ ನಡುವಿನ ಫೈನಲ್ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.

ಇದನ್ನೂ ಓದಿ: 18 ತಂಡಗಳು… ಹೀಗಿರಲಿದೆ ಏಷ್ಯನ್ ಗೇಮ್ಸ್​ ಟಿ20 ಟೂರ್ನಿ

ಆದರೆ, ಐಸಿಸಿ ರ್ಯಾಂಕಿಂಗ್‌ನಲ್ಲಿ ಭಾರತ ಅಗ್ರ ಶ್ರೇಯಾಂಕ ಹೊಂದಿದ್ದ ಕಾರಣ ನಿಯಮದ ಪ್ರಕಾರ ಟೀಮ್ ಇಂಡಿಯಾಗೆ ಚಿನ್ನದ ಪದಕ ನೀಡಲಾಯಿತು. ಈ ಬಾರಿ ಕೂಡ ಟೀಮ್ ಇಂಡಿಯಾ ಚಿನ್ನದ ಪದಕ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

 

Loading...
Unable to load recommendations.
Follow Us