ಭಾರತದಿಂದ ವಾಪಸ್ಸಾಗಿರುವ ಆಸ್ಟ್ರೇಲಿಯ ಆಟಗಾರರ ಕ್ವಾರಂಟೈನ್ ವೆಚ್ಚವನ್ನು ಬಿಸಿಸಿಐ ಭರಿಸುತ್ತಿದೆ: ಕ್ರಿಕೆಟ್ ಆಸ್ಟ್ರೇಲಿಯ
ಇತರ ದೇಶಗಳ ಆಟಗಾರರು ನಿರಾತಂಕವಾಗಿ ಹಿಂತಿರುಗಿದರಾದರೂ ಆಸ್ಟ್ರೇಲಿಯ ಸರ್ಕಾರ ಭಾರತದಿಂದ ಬರುವ ವಿಮಾನಗಳ ಮೇಲೆ ನಿಷೇಧ ಹೇರಿದ್ದರಿಂದ ಆಸ್ಸೀ ಆಟಗಾರರು ತವರೂರಿಗೆ ತೆರಳುವುದು ವಿಳಂಬವಾಯಿತು.
ಸಿಡ್ನಿ: ಮಾಲ್ಡೀವ್ಸ್ನಿಂದ ಸಿಡ್ನಿಗೆ ವಾಪಸ್ಸಾಗಿರುವ ಆಸ್ಟ್ರೇಲಿಯ ಆಟಗಾರರ 14-ದಿನದ ಕ್ವಾರಂಟೈನ್ ಬಿಲ್ ಅನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭರಿಸುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಹಂಗಾಮಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿಕ್ ಹಾಕ್ಲೀ ಮಂಗಳವಾರದಂದು ಇಲ್ಲಿ ಹೇಳಿದರು. ಪ್ಯಾಟ್ ಕುಮ್ಮಿನ್ಸ್, ಸ್ಟೀವ್ ಸ್ಮಿತ್ ಸೇರಿದಂತೆ ಆಸ್ಟ್ರೇಲಿಯಾದ ಪ್ರಮುಖ ಆಟಗಾರರು, ಕಾಮೆಂಟೇಟರ್ಗಳು ಮತ್ತು ಅಧಿಕಾರಿಗಳನ್ನೊಳಗೊಂಡ 38-ಸದಸ್ಯರ ಆಸ್ಟ್ರೇಲಿಯನ್ ಬ್ಯಾಚಿನ ಪೈಕಿ ಬಹಳಷ್ಟು ಜನ ಮಾಲ್ಡೀವ್ಸ್ನಲ್ಲಿ ಬಲವಂತದ ಸ್ಟಾಪ್-ಓವರ್ ನಂತರ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಮಂಗಳವಾರದಂದು ಬಂದಿಳಿದರು. ಕೊವಿಡ್ ಪ್ರಕರಣಗಳು ಭಾರತದಲ್ಲಿ ಅಪರಿಮಿತವಾಗಿ ಹೆಚ್ಚುವುದು ಆರಂಭವಾದ ನಂತರ ಆಸ್ಟ್ರೇಲಿಯ ಸರ್ಕಾರವು ಭಾರತದಿಂದ ತನ್ನ ದೇಶಕ್ಕೆ ಪ್ರಯಾಣಿಸಲಿಚ್ಛಿಸುವವರಿಗೆ ಮೇ15 ರವರೆಗೆ ಮೇಲೆ ನಿರ್ಬಂಧ ಹೇರಿದ್ದರಿಂದ ಆಟಗಾರರು ಅನಿವಾರ್ಯವಾಗಿ 10 ದಿನಗಳನ್ನು ಮಾಲ್ಡೀವ್ಸ್ನಲ್ಲಿ ಕಳೆಯಬೇಕಾಯಿತು.ಈ ಎಲ್ಲ ಕಾರ್ಯಾಚರಣೆಯ ವೆಚ್ಚವನ್ನು ಭರಿಸುವ ಮೂಲಕ ಬಿಸಿಸಿಐ ತನ್ನ ಮಾತನ್ನು ಉಳಿಸಿಕೊಂಡಿದೆ ಎಂದು ಹಾಕ್ಲೀ ಹೇಳಿದರು.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಯೊಂದಿಗೆ ಮಾತಾಡಿದ ಹಾಕ್ಲೀ, ಭಾರತದಿಂದ ವಾಪಸ್ಸಾದ ಆಸ್ಸೀ ಆಟಗಾರರ ಕಡ್ಡಾಯ ಕ್ವಾರಂಟೈನ್ಗೆ ತಗಲುವ ವೆಚ್ಚವನ್ನು ಬಿಸಿಸಿಐ ಪಾವತಿಸುತ್ತಿದೆ ಎಂದು ಹೇಳಿದರು.
‘ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಭಾಗವಹಿಸಿಲು ಭಾರತಕ್ಕೆ ಹೋಗಿದ್ದ ಆಸ್ಟ್ರೇಲಿಯನ್ ಆಟಗಾರರರು ಆದಷ್ಟು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಇಲ್ಲಿಗೆ ವಾಪಸ್ಸಾಗುವಂತೆ ಮಾಡಲು ಬಿಸಿಸಿಐ ಕಟಿಬದ್ಧವಾಗಿತ್ತು. ನಾವು ಅಲ್ಲಿನ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೆವು. ಅವರ ಕಮಿಟ್ಮೆಂಟ್ ಅದ್ಭುತವಾದದ್ದು, ತಾವು ಕೊಟ್ಟ ಮಾತನ್ನು ಉಳಿಸಿಕೊಂಡರು,’ ಎಂದು ಹಾಕ್ಲೀ ಹೇಳಿದರು.
ಬೇರೆ ಬೇರೆ ಫ್ರಾಂಚೈಸಿಗಳಿಗೆ ಸೇರಿದ ನಾಲ್ವರು ಆಟಗಾರರು ಮತ್ತು ಇಬ್ಬರ ಕೋಚ್ಗಳು ಬಯೋ-ಬಬಲ್ನಲ್ಲಿ ಇದ್ದಾಗ್ಯೂ ಕೊರೊನಾ ವೈರಸ್ನಿಂದ ಸೋಂಕಿತರಾಗಿದ್ದು ಬೆಳಕಿಗೆ ಬಂದ ಮೇಲೆ ಬಿಸಿಸಿಐ ಮೇ 4 ರಂದು ಐಪಿಎಲ್ ಸೀಸನ್ 14 ಅನ್ನು ಅನಿರ್ದಾಷ್ಟಾವಧಿವರೆಗೆ ಮುಂದೂಡಿತು.
ಇತರ ದೇಶಗಳ ಆಟಗಾರರು ನಿರಾತಂಕವಾಗಿ ಹಿಂತಿರುಗಿದರಾದರೂ ಆಸ್ಟ್ರೇಲಿಯ ಸರ್ಕಾರ ಭಾರತದಿಂದ ಬರುವ ವಿಮಾನಗಳ ಮೇಲೆ ನಿಷೇಧ ಹೇರಿದ್ದರಿಂದ ಆಸ್ಸೀ ಆಟಗಾರರು ತವರೂರಿಗೆ ತೆರಳುವುದು ವಿಳಂಬವಾಯಿತು.
ಆ ಸಮಯದಲ್ಲೇ ಬಿಸಿಸಿಐ, ಆಟಗಾರರಿಗೆ ಆಸ್ಟ್ರೇಲಿಯಾಗೆ ಸುರಕ್ಷಿತವಾಗಿ ತಲುಪಿಸುವ ಭರವಸೆ ನೀಡಿತು.
‘ನಾವು ಖಂಡಿತವಾಗಿಯೂ ಭಾರತದಲ್ಲಿರುವ ನಮ್ಮ ಸ್ನೇಹಿತರ ಬಗ್ಗೆ ಯೋಚಿಸುತ್ತಿದ್ದೇವೆ. ಅಲ್ಲದೆ ನಾವು ಸಹ ಆಸ್ಟ್ರೇಲಿಯಾ ಸರ್ಕಾರದೊಂದಿಗೆ ನಮಗಿರುವ ಪರಮಿತಿಯಲ್ಲೇ ಆಟಗಾರರು ಆದಷ್ಟು ಬೇಗ ಸುರಕ್ಷಿತವಾಗಿ ವಾಪಸ್ಸು ಬರವಂತಾಗಲು ಪ್ರಯತ್ನಪಟ್ಟೆವು,’ ಎಂದು ಹಾಕ್ಲೀ ಹೇಳಿದ್ದಾರೆ.
‘ನನಗೆ ಟೆಕ್ಸ್ಟ್ ಮಾಡಿರುವ ಕೆಲವು ಆಟಗಾರರು, ಬಿಸಿಸಿಐ ಮಾಡಿದ ಪ್ರಯತ್ನಗಳ ಬಗ್ಗೆ ಪ್ರಶಂಸೆ ಮಾಡಿದ್ದಾರೆ, ಅವರೆಲ್ಲ ಸುರಕ್ಷಿತವಾಗಿ ವಾಪಸ್ಸಾಗಿರುವುದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಗೂ ಬಹಳ ಸಂತಸವಾಗಿದೆ,’ ಎಂದು ಹಾಕ್ಲೀ ಹೇಳಿದ್ದಾರೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರು ಐಪಿಎಲ್ಲ್ಲಿ ಆಡಲು ಹೋಗಿರುವ ಆಸ್ಸೀ ಆಟಗಾರರು ಸ್ವದೇಶಕ್ಕೆ ವಾಪಸ್ಸಾಗಲು ವ್ಯವಸ್ಥೆಗಳನ್ನು ತಾವೇ ಮಾಡಿಕೊಳ್ಳಬೇಕು ಎಂದು ಖಡಾಖಂಡಿತವಾಗಿ ಹೇಳಿದ್ದರು.
ಇದನ್ನೂ ಓದಿ: IPL ರದ್ದಾದ ಬಳಿಕ ಆಸೀಸ್ ಆಟಗಾರರನ್ನು ಮನೆಗೆ ಕಳಿಸಲು ಸೋನು ಸೂದ್ಗೆ ಮನವಿ; ನಟನ ಉತ್ತರ ಏನು?