T20 ವಿಶ್ವಕಪ್ ಆಯೋಜನೆ ಬಗ್ಗೆ ಐಸಿಸಿ ಇನ್ನೂ ಸ್ಪಷ್ಟವಾದ ನಿರ್ಧಾರವನ್ನ ಕೈಗೊಳ್ಳಲು ವಿಳಂಬ ಮಾಡ್ತಿರೋದಕ್ಕೆ ಬಿಸಿಸಿಐ ಬೇಸರ ವ್ಯಕ್ತಪಡಿಸಿದೆ. ಆದ್ದರಿಂದ, ಇನ್ಮೇಲೆ ಐಸಿಸಿ ನಿರ್ಧಾರಕ್ಕೆ ಕಾಯದೇ ಪಂದ್ಯಾವಳಿಯ ಆಯೋಜನೆಯ ಬಗ್ಗೆ ನಿರ್ಧಾರ ಕೈಗೊಳ್ಳೋದಕ್ಕೆ ಮುಂದಾಗಿದೆ.
ಜೂನ್ನಲ್ಲಿ ಸಭೆ ಸೇರಿದ್ದ ಐಸಿಸಿ, ಜುಲೈ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ T20 ವಿಶ್ವಕಪ್ ಬಗ್ಗೆ ಅಂತಿಮ ನಿರ್ಧಾರವನ್ನ ಪ್ರಕಟಿಸೋದಾಗಿ ತಿಳಿಸಿತ್ತು. ಆದರೆ ಈ ಬಗ್ಗೆ ಇನ್ನೂ ಸಹ ನಿರ್ಧಾರ ಕೈಗೊಂಡಿಲ್ಲ. ಹಾಗಾಗಿ, T20 ವಿಶ್ವಕಪ್ ಬಗ್ಗೆ ಮುಂದುವರಿಯುವ ನಿರ್ಧಾರವನ್ನ ಬಿಸಿಸಿಐ ಕೈಗೊಂಡಿದೆ.
ಕೆಲವು ಪ್ರಕಟಣೆಗಳ ವಿಳಂಬದಿಂದಾಗಿ ಬಿಸಿಸಿಐ ಈಗಾಗಲೇ ಸಾಕಷ್ಟು ಸಮಯವನ್ನ ಕಳೆದುಕೊಂಡಿದೆ. ಯಾವಾಗ ಏನು ಮಾಡ್ಬೇಕು ಎಂದು ಬೇರೆಯವರು ನಿರ್ಧರಿಸೋವರೆಗೂ ನಾವು ಕಾಯುವುದಕ್ಕೆ ಸಾಧ್ಯವಿಲ್ಲ ಅನ್ನೋದು ನಮಗೆ ಮನವರಿಕೆಯಾಗಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಸ್ಪಷ್ಟಪಡಿಸಿದ್ದಾರೆ.
ಅಮೆರಿಕದಲ್ಲಿ NBA ಸಂರಕ್ಷಿತ ವಲಯದಲ್ಲಿ ಪ್ರಾರಂಭವಾಗುತ್ತಿದೆ. ಇಂಗ್ಲಿಷ್ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಮತ್ತು FA ಕಪ್ ಪಂದ್ಯಾವಳಿಯೂ ಕೂಡ ಆರಂಭವಾಗಿದೆ. ಆಸ್ಟ್ರೇಲಿಯಾದ ದೇಶೀಯ ರಗ್ಬಿ ಲೀಗ್ ಕೂಡ ಪ್ರಾರಂಭವಾಗಲಿದೆ. ಹಾಗಾಗಿ ಸೆಪ್ಟೆಂಬರ್‌ನಿಂದ ಯೋಜನೆಗಳನ್ನು ರೂಪಿಸುವ ಅವಶ್ಯಕತೆಯ ಬಗ್ಗೆ ಬಿಸಿಸಿಐ ಎದುರುನೋಡುತ್ತಿದೆ ಎಂದು ಅರುಣ್ ಧುಮಾಲ್ ಹೇಳಿದ್ದಾರೆ.
ಈ ವರ್ಷ ನಡೆಯಬೇಕಾದ T20 ವಿಶ್ವಕಪ್ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳೋದಕ್ಕೆ ಐಸಿಸಿ ವಿಳಂಬ ಧೋರಣೆ ತಳೆದಿರೋದು ಉದ್ದೇಶ ಪೂರ್ವಕವೋ ಅನ್ನೋದು ಗೊತ್ತಿಲ್ಲ. ಆದರೆ, ಇದರ ಬಗ್ಗೆ ಚಿಂತಿಸದೆ, ಬಿಸಿಸಿಐ IPL ಆಯೋಜಿಸುವ ಬಗ್ಗೆ ಯೋಜನೆ ರೂಪಿಸಿದೆ.
Published On - 4:36 pm, Mon, 6 July 20