ನಾನು ಫಾರ್ಮ್ ಕಳೆದುಕೊಂಡಿಲ್ಲ, ರನ್ ಗಳಿಸುತ್ತಿಲ್ಲ ಅಷ್ಟೇ..!
Suryakumar Yadav: ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಇದಕ್ಕೆ ಸಾಕ್ಷಿ ಅವರು ಕಳೆದ 20 ಇನಿಂಗ್ಸ್ಗಳಿಂದ ಕಲೆಹಾಕಿರುವುದು ಕೇವಲ 218 ರನ್‌ಗಳು ಮಾತ್ರ. ಅದರಲ್ಲೂ 2025 ರಲ್ಲಿ ಟೀಮ್ ಇಂಡಿಯಾ ನಾಯಕನ ಬ್ಯಾಟ್ನಿಂದ ಒಂದೇ ಒಂದು ಅರ್ಧಶತಕ ಮೂಡಿಬಂದಿಲ್ಲ. ಹೀಗಾಗಿಯೇ ಇದೀಗ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಬಗ್ಗೆ ಪ್ರಶ್ನೆಗಳೆದ್ದಿವೆ.

ಸೌತ್ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮುಗ್ಗರಿಸಿದ್ದಾರೆ. ಮೊದಲ ಮ್ಯಾಚ್ನಲ್ಲಿ 12 ರನ್ ಬಾರಿಸಿದ್ದ ಸೂರ್ಯ, ದ್ವಿತೀಯ ಪಂದ್ಯದಲ್ಲಿ 5 ರನ್ಗಳಿಸಿ ಔಟಾಗಿದ್ದರು. ಇದೀಗ ಮೂರನೇ ಪಂದ್ಯದಲ್ಲಿ ಮತ್ತೊಮ್ಮೆ 12 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಅಷ್ಟೇ ಅಲ್ಲದೆ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿ ವರ್ಷಗಳೇ ಕಳೆದಿವೆ. ಹೀಗಾಗಿಯೇ ಟೀಮ್ ಇಂಡಿಯಾ ನಾಯಕನ ಫಾರ್ಮ್ ಬಗ್ಗೆ ಪ್ರಶ್ನೆಗಳೆದ್ದಿವೆ.
ಇದೇ ಪ್ರಶ್ನೆಯನ್ನು ಮೂರನೇ ಪಂದ್ಯದ ಮುಕ್ತಾಯದ ಬಳಿಕ ಸೂರ್ಯಕುಮಾರ್ ಯಾದವ್ ಮುಂದಿಡಲಾಗಿದೆ. ಈ ವೇಳೆ ಅವರು ನೀಡಿದ ಉತ್ತರದಿಂದ ಇದೀಗ ಟ್ರೋಲ್ಗೆ ಒಳಗಾಗಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧ ಪಂದ್ಯ ಗೆದ್ದ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್ ಅವರಿಗೆ, ಬ್ಯಾಟಿಂಗ್ ಲಯ ಕಳೆದುಕೊಂಡಿರುವ ಬಗ್ಗೆ ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಸೂರ್ಯ, ನಾನು ಫಾರ್ಮ್ ಕಳೆದುಕೊಂಡಿಲ್ಲ. ನೆಟ್ಸ್ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ.
ನನ್ನ ನಿಯಂತ್ರಣದಲ್ಲಿರುವ ಎಲ್ಲವನ್ನೂ ನಾನು ಪ್ರಯತ್ನಿಸುತ್ತಿದ್ದೇನೆ. ರನ್‌ಗಳು ಬರಬೇಕಾದಾಗ ಸಂದರ್ಭದಲ್ಲಿ ಖಂಡಿತವಾಗಿಯೂ ರನ್ ಬರುತ್ತವೆ. ಸದ್ಯ ನಾನು ಫಾರ್ಮ್ ಕಳೆದುಕೊಂಡಿಲ್ಲ. ರನ್ಗಳಿಸುತ್ತಿಲ್ಲ ಅಷ್ಟೇ ಎಂದಿದ್ದಾರೆ.
ಟೀಮ್ ಇಂಡಿಯಾ ನಾಯಕನ ಈ ಹೇಳಿಕೆಯು ಇದೀಗ ಟ್ರೋಲ್ ಆಗಿದೆ. ಏಕೆಂದರೆ ಅಭ್ಯಾಸದ ವೇಳೆ ರನ್ಗಳಿಸಿ ಪ್ರಯೋಜನವೇನು? ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ ಕಳೆದೊಂದು ವರ್ಷದಿಂದ ಒಂದೇ ಒಂದು ಅರ್ಧಶತಕ ಬಾರಿಸದೇ ಫಾರ್ಮ್ ಕಳೆದುಕೊಂಡಿಲ್ಲ ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ ಎಂದು ಅನೇಕರು ಟೀಕಿಸಿದ್ದಾರೆ.
ಇನ್ನು ಸೂರ್ಯಕುಮಾರ್ ಯಾದವ್ ಅವರ ಕಳೆದ 20 ಇನಿಂಗ್ಸ್ಗಳ ಒಟ್ಟು ಸ್ಕೋರ್ 218 ರನ್‌ಗಳು ಮಾತ್ರ. ಈ 218 ರನ್ಗಳಿಸಲು ಅವರು ಬರೋಬ್ಬರಿ 183 ಎಸೆತಗಳನ್ನು ತೆಗೆದುಕೊಂಡಿದ್ದರು. ಅಂದರೆ 119ರ ಸ್ಟ್ರೈಕ್ ರೇಟ್ನಲ್ಲಿ 12.82 ಸರಾಸರಿಯಲ್ಲಿ ಮಾತ್ರ ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 5.41 ಕೋಟಿ ರೂ: ಹೊಸ ತಂಡಕ್ಕೆ ಫಿಲ್ ಸಾಲ್ಟ್ ಎಂಟ್ರಿ
ಅಷ್ಟೇ ಅಲ್ಲದೆ 2024ರ ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ನಿಂದ ಮೂಡಿಬಂದಿರುವುದು ಕೇವಲ 2 ಅರ್ಧಶತಕಗಳು ಮಾತ್ರ. ಅಲ್ಲದೆ ಒಂದು ವರ್ಷದಿಂದ ಹಾಫ್ ಸೆಂಚುರಿಯನ್ನು ಸಹ ಬಾರಿಸಲು ಸಾಧ್ಯವಾಗಿಲ್ಲ. ಹೀಗಾಗಿಯೇ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಬಗ್ಗೆ ಪ್ರಶ್ನೆಗಳೆದ್ದಿವೆ. ಆದರೆ ಸೂರ್ಯಕುಮಾರ್ ಯಾದವ್ ಪ್ರಕಾರ ಫಾರ್ಮ್ ಕಳೆದುಕೊಂಡಿಲ್ಲ, ಬದಲಾಗಿ ರನ್ಗಳಿಸುತ್ತಿಲ್ಲ ಅಷ್ಟೇ…!
Published On - 8:54 am, Mon, 15 December 25
