ಉಸೇನ್ ಬೋಲ್ಟ್ ರೆಕಾರ್ಡ್ ಬ್ರೇಕ್ ಮಾಡಿದ ಚೀನಾ ರೋಬೋಟ್!

ಟ್ರ್ಯಾಕ್ ಅಂಡ್ ಫೀಲ್ಡ್ ಜಗತ್ತಿನಲ್ಲಿ 'ಲೈಟ್ನಿಂಗ್ ಬೋಲ್ಟ್' ಎಂದೇ ಪ್ರಸಿದ್ಧರಾದ ಉಸೇನ್ ಬೋಲ್ಟ್ ಅವರ ಹೆಸರನ್ನು ಕೇಳದ ಕ್ರೀಡಾಭಿಮಾನಿಗಳಿಲ್ಲ. 100 ಮೀಟರ್ ಓಟವನ್ನು ಕೇವಲ 9.58 ಸೆಕೆಂಡುಗಳಲ್ಲಿ ಮುಗಿಸಿ ಜಗತ್ತನ್ನೇ ಬೆರಗುಗೊಳಿಸಿದ ಬೋಲ್ಟ್ ಅವರ ವಿಶ್ವ ದಾಖಲೆಗೆ ಚೀನಾ ರೋಬೋಟ್ ಸವಾಲೊಡ್ಡಿದೆ.

ಉಸೇನ್ ಬೋಲ್ಟ್ ರೆಕಾರ್ಡ್ ಬ್ರೇಕ್ ಮಾಡಿದ ಚೀನಾ ರೋಬೋಟ್!
Robot - Usain Bolt

Updated on: Aug 20, 2026 | 12:33 PM

ವಿಶ್ವದ ಅತ್ಯಂತ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ದಾಖಲೆಯನ್ನು ಯಾರಾದರೂ ಮುರಿಯಲು ಸಾಧ್ಯವೇ? ಈ ಪ್ರಶ್ನೆಗೆ ಮನುಷ್ಯರಿಗಿಂತ ಮುಂಚಿತವಾಗಿ ಚೀನಾದ ರೋಬೋಟ್ ಒಂದು ಹೌದು ಎಂದು ಉತ್ತರಿಸಿದೆ! ಚೀನಾದ ಪ್ರಮುಖ ರೊಬೊಟಿಕ್ಸ್ ಸಂಸ್ಥೆಯಾದ ‘ಯೂನಿಟ್ರೀ ರೊಬೊಟಿಕ್ಸ್’ (Unitree Robotics) ಅಭಿವೃದ್ಧಿಪಡಿಸಿರುವ “ಸೂಪರ್‌ಮ್ಯಾನ್” (Superman) ಹೆಸರಿನ ಹ್ಯೂಮನಾಯ್ಡ್ ರೋಬೋಟ್, ಓಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದು, ಇದರ ವಿಡಿಯೋ ಸದ್ಯ ಜಗತ್ತಿನಾದ್ಯಂತ ಭಾರಿ ವೈರಲ್ ಆಗಿದೆ.

ಉಸೇನ್ ಬೋಲ್ಟ್ ರೆಕಾರ್ಡ್ ಧೂಳೀಪಟ:

2009ರಲ್ಲಿ ಜಮೈಕಾದ ಸ್ಪೀಡ್​ಸ್ಟರ್ ಉಸೇನ್ ಬೋಲ್ಟ್ 100 ಮೀಟರ್ ಓಟವನ್ನು ಕೇವಲ 9.58 ಸೆಕೆಂಡುಗಳಲ್ಲಿ ಮುಗಿಸಿ ವಿಶ್ವದಾಖಲೆ ಬರೆದಿದ್ದರು. ಆ ಸಮಯದಲ್ಲಿ ಅವರ ಗರಿಷ್ಠ ವೇಗ ಸೆಕೆಂಡಿಗೆ 12.42 ಮೀಟರ್ (ಗಂಟೆಗೆ 27.78 ಮೈಲಿ) ಆಗಿತ್ತು.

ಆದರೆ, ಈಗ ಚೀನಾದ ಈ ಸೂಪರ್‌ಮ್ಯಾನ್ ರೋಬೋಟ್ ರಿಯಲ್-ವರ್ಲ್ಡ್ ಟೆಸ್ಟಿಂಗ್ ವೇಳೆ ಸೆಕೆಂಡಿಗೆ ಬರೋಬ್ಬರಿ 12.66 ಮೀಟರ್ (ಗಂಟೆಗೆ 28.32 ಮೈಲಿ) ವೇಗದಲ್ಲಿ ಓಡುವ ಮೂಲಕ ಬೋಲ್ಟ್ ಅವರ ಗರಿಷ್ಠ ವೇಗದ ದಾಖಲೆಯನ್ನು ಮುರಿದು ಹಾಕಿದೆ.

  • ಉಸೇನ್ ಬೋಲ್ಟ್: ಸೆಕೆಂಡಿಗೆ 12.42 ಮೀಟರ್ (ಗಂಟೆಗೆ 27.78 ಮೈಲಿ). ಬೋಲ್ಟ್ ಅವರು 2009ರ 100 ಮೀಟರ್ ರೇಸ್‌ನ ಮಧ್ಯದಲ್ಲಿ (60 ರಿಂದ 80 ಮೀಟರ್ ತಲುಪಿದಾಗ) ಈ ಗರಿಷ್ಠ ವೇಗವನ್ನು ಪಡೆದುಕೊಂಡಿದ್ದರು.
  • ಚೀನಾ ರೋಬೋಟ್: ಸೆಕೆಂಡಿಗೆ 12.66 ಮೀಟರ್ (ಗಂಟೆಗೆ 28.32 ಮೈಲಿ). ಟೆಸ್ಟಿಂಗ್ ವೇಳೆ ಒಂದು ನಿರ್ದಿಷ್ಟ ಕ್ಷಣದಲ್ಲಿ ರೋಬೋಟ್ ಈ ಗರಿಷ್ಠ ವೇಗವನ್ನು ತಲುಪಿದೆ.
  • ಗರಿಷ್ಠ ವೇಗ: ಗರಿಷ್ಠ ವೇಗದಲ್ಲಿ ಚೀನಾದ ರೋಬೋಟ್, ಉಸೇನ್ ಬೋಲ್ಟ್‌ಗಿಂತ ಸೆಕೆಂಡಿಗೆ 0.24 ಮೀಟರ್ ಹೆಚ್ಚು ವೇಗವಾಗಿ ಓಡಿದೆ.

ಒಲಿಂಪಿಕ್ ಟ್ರ್ಯಾಕ್‌ನಲ್ಲಿ ಅಬ್ಬರ:

ಬೀಜಿಂಗ್‌ನ ಪ್ರಸಿದ್ಧ ನ್ಯಾಷನಲ್ ಸ್ಪೀಡ್ ಸ್ಕೇಟಿಂಗ್ ಓವಲ್‌ನಲ್ಲಿ ಈ ರೋಬೋಟ್‌ನ ಪರೀಕ್ಷೆ ನಡೆಸಲಾಗಿದೆ. ಕೇವಲ ಮೂರೇ ತಿಂಗಳಲ್ಲಿ ಈ ಅದ್ಭುತ ರೋಬೋಟ್ ಪ್ರೊಟೊಟೈಪ್ ಅನ್ನು ಸಿದ್ಧಪಡಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಕೇವಲ ಓಟ ಮಾತ್ರವಲ್ಲದೆ, ಈ ರೋಬೋಟ್ ಸುಮಾರು 6.5 ಅಡಿ (2 ಮೀಟರ್) ಎತ್ತರದ ವರ್ಟಿಕಲ್ ಜಂಪ್ (ಎತ್ತರ ಜಿಗಿತ) ಮಾಡುವ ಮೂಲಕ ಮನುಷ್ಯರ ಜಿಗಿತದ ದಾಖಲೆಯನ್ನೂ ಹಿಂದಿಕ್ಕಿದೆ.

ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ!

ರೋಬೋಟ್ ವೇಗವಾಗಿ ಓಡುವುದನ್ನೇನೋ ಸಾಧಿಸಿದೆ. ಆದರೆ, ಅದಕ್ಕೆ ಇನ್ನೂ ಮನುಷ್ಯನಂತೆ ನಿಖರವಾಗಿ ಬ್ರೇಕ್ ಹಾಕುವ ಕಲೆ ಸಿದ್ಧಿಸಿಲ್ಲ. ಬಿಡುಗಡೆಯಾಗಿರುವ ಬಿಹೈಂಡ್ ದಿ ಸೀನ್ಸ್  ದೃಶ್ಯಗಳಲ್ಲಿ, ಅತಿ ವೇಗವಾಗಿ ಓಡಿ ಬರುವ ರೋಬೋಟ್ ವೇಗವನ್ನು ನಿಯಂತ್ರಿಸಲಾಗದೆ ನೇರವಾಗಿ ಹೋಗಿ ಗೋಡೆಗಳಿಗೆ ಡಿಕ್ಕಿ ಹೊಡೆಯುವುದು ಮತ್ತು ಕೆಳಗೆ ಬಿದ್ದು ಒದ್ದಾಡುವುದನ್ನು ಕಾಣಬಹುದು. ಅಂದರೆ, ಇದಕ್ಕೆ ವೇಗವಿದೆಯೇ ಹೊರತು ಸಂಪೂರ್ಣ ಕಂಟ್ರೋಲ್ ಇನ್ನೂ ಬಂದಿಲ್ಲ.

ಜಾಗತಿಕ ಮಾರುಕಟ್ಟೆಯಲ್ಲಿ ಚೀನಾ ಹವಾ:

ವರದಿಗಳ ಪ್ರಕಾರ, ಯೂನಿಟ್ರೀ ರೊಬೊಟಿಕ್ಸ್ ಸಂಸ್ಥೆಯು ಶಾಂಘೈ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಬರೋಬ್ಬರಿ $9 ಬಿಲಿಯನ್ ಮೌಲ್ಯದ ಐಪಿಒ (IPO) ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಅಮೆರಿಕದ ಟೆಸ್ಲಾ ಆಪ್ಟಿಮಸ್ ಹಾಗೂ ಬೋಸ್ಟನ್ ಡೈನಾಮಿಕ್ಸ್‌ನ ಅಟ್ಲಾಸ್ ರೋಬೋಟ್‌ಗಳಿಗೆ ಭಾರಿ ಪೈಪೋಟಿ ನೀಡಲು ಚೀನಾ ಈ ತಂತ್ರಜ್ಞಾನವನ್ನು ಶರವೇಗದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಮುಂಬರುವ ‘ವಿಶ್ವ ಹ್ಯೂಮನಾಯ್ಡ್ ರೋಬೋಟ್ ಗೇಮ್ಸ್’ನಲ್ಲಿ ಈ ರೋಬೋಟ್‌ಗಳು ಅಧಿಕೃತವಾಗಿ ರೇಸ್‌ಗೆ ಇಳಿಯಲಿವೆ.

ಇದನ್ನೂ ಓದಿ: ಐಸಿಸಿ ಟೆಸ್ಟ್ ಬ್ಯಾಟರ್​ಗಳ ರ‍್ಯಾಂಕಿಂಗ್ ಪ್ರಕಟ

ಒಟ್ಟಾರೆಯಾಗಿ, ತಂತ್ರಜ್ಞಾನ ಜಗತ್ತು ಎಷ್ಟು ಶರವೇಗದಲ್ಲಿ ಬೆಳೆಯುತ್ತಿದೆ ಎಂಬುದಕ್ಕೆ ಈ ರೋಬೋಟ್ ಪ್ರತ್ಯಕ್ಷ ಸಾಕ್ಷಿಯಾಗಿದೆ. ಇದೇ ವೇಗದಲ್ಲಿ ತಂತ್ರಜ್ಞಾನ ಮುಂದುವರಿದರೆ, ಭವಿಷ್ಯದಲ್ಲಿ ಮನುಷ್ಯರು ಮತ್ತು ರೋಬೋಟ್‌ಗಳ ನಡುವೆಯೇ ಒಲಿಂಪಿಕ್ ರೇಸ್ ನಡೆದರೂ ಅಚ್ಚರಿಪಡಬೇಕಾಗಿಲ್ಲ!

 

Published On - 12:29 pm, Thu, 20 August 26

Loading...
Unable to load recommendations.
Follow Us