Chris Gayle: ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡಿರದ ವಿಶೇಷ ದಾಖಲೆ ನಿರ್ಮಿಸಿದ ಕ್ರಿಸ್ ಗೇಲ್
Chris Gayle: ಆಸೀಸ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಗೇಲ್ ಕೇವಲ 38 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸ್ ಸಿಡಿಸಿ 67 ರನ್ ಚಚ್ಚಿದರು. ಜೊತೆಗೆ ಟಿ-20 ಇತಿಹಾಸದಲ್ಲಿ ಒಟ್ಟು 14,000 ರನ್ ಪೂರೈಸಿದರು.
ಕೆರಿಬಿಯನ್ನರ ನಾಡಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ (Australia) ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ (West Indies) ತಂಡದ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ (Chris Gayle) ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ಯಾರೂ ಮಾಡಿರದ ವಿಶೇಷ ಸಾಧನೆ ಗೈದಿದ್ದಾರೆ. ಗೇಲ್ ಟಿ-20 ಇತಿಹಾಸದಲ್ಲಿ ಒಟ್ಟು 14,000 ರನ್ ಪೂರೈಸಿದ ಮೊಟ್ಟ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಆಸೀಸ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಗೇಲ್ ಕೇವಲ 38 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸ್ ಸಿಡಿಸಿ 67 ರನ್ ಚಚ್ಚಿದರು. ಈ ಮೂಲಕ ಟಿ-20 ಕ್ರಿಕೆಟ್ನಲ್ಲಿ ಅರ್ಧಶತಕದ ಬರ ಎದುರಿಸುತ್ತಿದ್ದ ಗೇಲ್ ಕೊನೆಗೂ ಕಮ್ಬ್ಯಾಕ್ ಮಾಡಿದರು. 2016 ರಲ್ಲಿ ಗೇಲ್ ಬ್ಯಾಟ್ನಿಂದ ಟಿ-20ಯಲ್ಲಿ ಕೊನೆಯ ಅರ್ಧಶತಕ ಬಂದಿತ್ತು.
ಗೇಲ್ ಅವರ ಸ್ಫೋಟಕ ಆಟದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಆಸೀಸ್ ವಿರುದ್ಧದ ಟಿ-20 ಸರಣಿಯನ್ನೂ ವಶಪಡಿಸಿಕೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಗೇಲ್, “ನಿಮಗೆಲ್ಲ ತಿಳಿದಿರುವಾಗೆ ನಾನು ಬ್ಯಾಟಿಂಗ್ನಲ್ಲಿ ಸ್ಟ್ರಗಲ್ ಮಾಡುತ್ತಿದ್ದೆ. ರನ್ ಗಳಿಸಲು ಕಷ್ಟ ಪಡುತ್ತಿದ್ದೆ. ಇದೊಂದು ಅದ್ಭುತ ಜರ್ನಿ, ಸರಣಿ ಜಯ ಸಾಧಿಸಿದ್ದು ತುಂಬಾನೆ ಸಂತಸ ನೀಡಿದೆ” ಎಂದು ಹೇಳಿದರು.
When the lion roars..? ? #WIvAUS #MissionMaroon pic.twitter.com/L5eDodIR2e
— Windies Cricket (@windiescricket) July 13, 2021
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 20 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿತಷ್ಟೆ. ಹೆನ್ರಿಕ್ಯೂಸ್ 29 ಎಸೆತಗಳಲ್ಲಿ 33 ರನ್ ಬಾರಿಸಿದರೆ, ನಾಯಕ ಆ್ಯರೋನ್ ಫಿಂಚ್ 31 ಎಸೆತಗಳಲ್ಲಿ 30 ರನ್ ಗಳಿಸಿದರು. ವಿಂಡೀಸ್ ಪರ ಹೇಡನ್ ವಾಲ್ಶ್ 2 ವಿಕೆಟ್ ಪಡೆದರು.
ಇತ್ತ 142 ರನ್ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಆರಂಭದಲ್ಲಿ ಆಂಡ್ರೆ ಫ್ಲೆಟ್ಚರ್(4) ಮತ್ತು ಸಿಮಾನ್ಸ್(15) ವಿಕೆಟ್ ಕಳೆದುಕೊಂಡಿತಾದರು, ನಂತರದಲ್ಲಿ ಶುರುವಾಗಿದ್ದು ಗೇಲ್ ಆರ್ಭಟ. ನಾಯಕ ನಿಕೋಲಸ್ ಪೂರನ್ ಜೊತೆಯಾದ ಗೇಲ್ ಮನಬಂದಂತೆ ಬ್ಯಾಟ್ ಬೀಸಿದರು. ಬೌಂಡರಿ-ಸಿಕ್ಸರ್ಗಳ ಮಳೆ ಸುರಿಸಿದರು.
ಗೇಲ್ ಕೇವಲ 38 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸ್ ಸಿಡಿಸಿ 67 ರನ್ ಚಚ್ಚಿದರು. ಪೂರನ್ 27 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿದರು. ವಿಂಡೀಸ್ 14.5 ಓವರ್ನಲ್ಲೇ 4 ವಿಕೆಟ್ ಕಳೆದುಕೊಂಡು 142 ರನ್ ಬಾರಿಸುವ ಮೂಲಕ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ್ದಲ್ಲದೆ ಸರಣಿ ವಶಪಡಿಸಿಕೊಂಡಿತು.
ಸದ್ಯ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ವೆಸ್ಟ್ ಇಂಡೀಸ್ 3-0 ಮುನ್ನಡೆ ಸಾಧಿಸಿದೆ. ನಾಲ್ಕನೇ ಪಂದ್ಯ ಜುಲೈ 14 ರಂದು ನಡೆಯಲಿದೆ.
ICC Player of the Month: ಭಾರತೀಯ ಆಟಗಾರರಿಗೆ ಮತ್ತೊಮ್ಮೆ ನಿರಾಶೆ! ಡೆವೊನ್ ಕಾನ್ವೇಗೆ ಒಲಿದ ಪ್ರಶಸ್ತಿ
IND vs SL: ಭಾರತ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಸೇನೆಗೆ ಸೇರಿದ ಲಂಕಾ ತಂಡದ ಮಾಜಿ ನಾಯಕ
Published On - 10:06 am, Tue, 13 July 21