ಬಾಲ್ ಟೆಂಪರಿಂಗ್ ಪ್ರಕರಣ; ಹೊಸ ಬಾಂಬ್ ಸಿಡಿಸಿದ ಬ್ಯಾನ್‌ಕ್ರಾಫ್ಟ್ ಮರು ವಿಚಾರಣೆಗೆ ಮುಂದಾದ ಕ್ರಿಕೆಟ್ ಆಸ್ಟ್ರೇಲಿಯಾ
ಇತ್ತೀಚಿನ ವರದಿಗಳ ಪ್ರಕಾರ, ಕ್ರಿಕೆಟ್ ಆಸ್ಟ್ರೇಲಿಯಾದ ಸಮಗ್ರತೆ ಘಟಕವು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಬ್ಯಾನ್‌ಕ್ರಾಫ್ಟ್ ಅವರನ್ನು ಸಂಪರ್ಕಿಸಿದೆ ಮತ್ತು ಅವರ ಉತ್ತರಕ್ಕಾಗಿ ಕಾಯುತ್ತಿದೆ ಎಂದು ವರದಿಯಾಗಿದೆ.
ಮೂರು ವರ್ಷಗಳ ಹಿಂದೆ ನಡೆದಿದ್ದ ಬಾಲ್ ಟೆಂಪರಿಂಗ್ ಪ್ರಕರಣ ಈಗ ದಿನೇದಿನೇ ಹೊಸ ತಿರುವು ಪಡೆದುಕೊಳ್ಳಲು ಪ್ರಾರಂಭಿಸಿದೆ. ಮಾರ್ಚ್ 2018 ರಲ್ಲಿ ನಡೆದ ಕ್ಯಾಪ್ಟೌನ್ ಟೆಸ್ಟ್ನಲ್ಲಿ ಆಸಿಸ್ ತಂಡದ ಭಾಗವಾಗಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಅವರು ಇತ್ತೀಚೆಗೆ ಅಂದು ನಡೆದಿದ್ದ ಘಟನೆಯ ಬಗೆಗಿನ ಹೊಸ ವಿಚಾರವನ್ನು ಬಹಿರಂಗಪಡಿಸಿದ್ದು, ವಿವಾದವನ್ನು ಮತ್ತೊಮ್ಮೆ ಆಸ್ಟ್ರೇಲಿಯಾದ ಕ್ರಿಕೆಟ್ ಟೇಬಲ್‌ಗೆ ತಂದಿದ್ದಾರೆ. ಬ್ಯಾನ್‌ಕ್ರಾಫ್ಟ್ ಹೇಳಿಕೆಯ ನಂತರ ತಂಡದ ಬೌಲರ್‌ಗಳು ಸಹ ಆತಂಕಕ್ಕೊಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಈ ವಿಷಯದ ಬಗ್ಗೆ ತನಿಖೆ ನಡೆಸಲು ಮತ್ತೆ ಸಕ್ರಿಯವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಕ್ರಿಕೆಟ್ ಆಸ್ಟ್ರೇಲಿಯಾದ ಸಮಗ್ರತೆ ಘಟಕವು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಬ್ಯಾನ್‌ಕ್ರಾಫ್ಟ್ ಅವರನ್ನು ಸಂಪರ್ಕಿಸಿದೆ ಮತ್ತು ಅವರ ಉತ್ತರಕ್ಕಾಗಿ ಕಾಯುತ್ತಿದೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾದ ಬೌಲರ್‌ಗಳಿಗೆ ಮುಂಚೆಯೇ ತಿಳಿದಿತ್ತು ಆ ಘಟನೆಯ 3 ವರ್ಷಗಳ ನಂತರ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಈಗ ತಮ್ಮ ಮೌನವನ್ನು ಮುರಿದಿದ್ದಾರೆ ಮತ್ತು ಇಡೀ ಘಟನೆಯನ್ನು ವಿವರಿಸಿದ್ದರು. ಆ ಘಟನೆಯಲ್ಲಿ ಬ್ಯಾನ್‌ಕ್ರಾಫ್ಟ್ ಈ ಹಿಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು. ಜೊತೆಗೆ ಅಂದು ನಡೆದಿದ್ದ ಘಟನೆಯ ಬಗ್ಗೆ ಶಾಕಿಂಗ್ ಹೇಳಿಕೆಯನ್ನು ನೀಡಿದ್ದರು. ಅಂದು ಮೈದಾನದಲ್ಲಿ ಏನು ನಡೆದಿತ್ತೋ ಅದರ ಬಗ್ಗೆ ಆಸ್ಟ್ರೇಲಿಯಾದ ಬೌಲರ್‌ಗಳಿಗೆ ಮುಂಚೆಯೇ ತಿಳಿದಿತ್ತು ಎಂದು ಅವರು ಹೇಳಿದರು. ವಾಸ್ತವವಾಗಿ, ಪಂದ್ಯದ ಸಮಯದಲ್ಲಿ, ಬ್ಯಾನ್‌ಕ್ರಾಫ್ಟ್ ಚೆಂಡನ್ನು ವಿರೋಪಗೊಳಿಸಿ ಮರಳು ಕಾಗದವನ್ನು ತನ್ನ ಪ್ಯಾಂಟ್‌ನಲ್ಲಿ ಇಟ್ಟುಕೊಂಡಿದ್ದರು, ಅದರ ಚಿತ್ರಗಳನ್ನು ಮೈದಾನದಲ್ಲಿದ್ದ ಕ್ಯಾಮೆರಾದಿಂದ ಸೆರೆಹಿಡಿಯಲಾಗಿತ್ತು.
ಬ್ಯಾನ್‌ಕ್ರಾಫ್ಟ್‌ನಿಂದ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನ ಬ್ಯಾನ್‌ಕ್ರಾಫ್ಟ್ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಮಂಡಳಿ ಇದರ ಬಗ್ಗೆ ತನಿಖೆ ಆರಂಭಿಸಿದೆ. ಕ್ರಿಕೆಟ್ ವೆಬ್‌ಸೈಟ್ ಇಎಸ್‌ಪಿಎನ್-ಕ್ರಿಕ್ಇನ್‌ಫೊ ನೀಡಿದ ವರದಿಯ ಪ್ರಕಾರ, ಸಿಎಯ ಸಮಗ್ರತೆ ಘಟಕವು ಬ್ಯಾನ್‌ಕ್ರಾಫ್ಟ್ ಅವರನ್ನು ಸಂಪರ್ಕಿಸಿದೆ ಮತ್ತು ಅವರ ಇತ್ತೀಚಿನ ಹೇಳಿಕೆಗಳ ಹೊರತಾಗಿ, ಈ ಸಂದರ್ಭದಲ್ಲಿ ಅವರು ಕೆಲವು ಹೊಸ ಮಾಹಿತಿಯನ್ನು ನೀಡಬಹುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಊಹಿಸಿದೆ. ಜೊತೆಗೆ ಸಿಎಯ ಸಮಗ್ರತೆ ಘಟಕವು ಅವರಿಂದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದೆ.
ಘಟನೆಯ ತನಿಖೆಯಲ್ಲಿದ್ದ ಸಿಎ ಅಧಿಕಾರಿಯೊಬ್ಬರು ಬೆನ್ ಆಲಿವರ್ ಕೂಡ ಈ ವಿಷಯ ಬೆಳಕಿಗೆ ಬಂದಾಗ, ಮಂಡಳಿಯು ಅದನ್ನು ಕೂಲಂಕಷವಾಗಿ ತನಿಖೆ ಮಾಡಿದೆ ಎಂದು ಸ್ಪಷ್ಟಪಡಿಸಿದರು. ಖಂಡಿತವಾಗಿಯೂ ಆ ಪ್ರಕರಣವನ್ನು ವಿವರವಾಗಿ ತನಿಖೆ ಮಾಡಲಾಗಿದೆ. ಜೊತೆಗೆ ತನಿಖೆಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಯಿತು ಮತ್ತು ಅಂದಿನಿಂದ ತಂಡದ ಪ್ರತಿಯೊಬ್ಬ ಸದಸ್ಯರು ಆತ್ಮವಿಶ್ವಾಸವನ್ನು ಹೆಚ್ಚಿಸಲು ಶ್ರಮಿಸಿದರು ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್ ತಂಡದಲ್ಲಿ ಎಲ್ಲಾ ಆಟಗಾರರು ಸಹಜ ಸ್ಥಿತಿಯತ್ತ ಮರಳುತ್ತಿದ್ದಾರೆ ಎಂದು ಹೇಳಿದರು.
ಅಂದು ನಡೆದಿದ್ದ ಘಟನೆ ಕೇಪ್‌ಟೌನ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವಿನ 3ನೇ ಟೆಸ್ಟ್ ಪಂದ್ಯದ ವೇಳೆ ಆಸಿಸ್ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಹೀಗಾಗಿ ಪೂರ್ವ ನಿಯೋಜನೆಯಂತೆ ಆಸಿಸ್ ತಂಡದ ಯುವ ಆಟಗಾರ ಬ್ಯಾನ್‌ಕ್ರಾಫ್ಟ್ ಅಂದಿನ ಪಂದ್ಯದಲ್ಲಿ ಬಳಸಲಾಗಿದ್ದ ಬಾಲ್ ಅನ್ನು ಸ್ಯಾಂಡ್ ಪೇಪರ್‌ನಿಂದ ತಿಕ್ಕಿ ವಿರೂಪಗೊಳಿಸಿದ್ದರು. ಇದು ಮೈದಾನದಲ್ಲಿದ್ದ ವಿಡಿಯೋ ಕ್ಯಾಮರದಲ್ಲಿ ಸೆರೆಯಾಗಿತ್ತು. ತನಿಖೆ ನಡೆದಾಗ ಈ ಘಟನೆಯ ರುವಾರಿಗಳಾಗಿ ನಾಯಕ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಸಿಕ್ಕಿಬಿದ್ದಿದ್ದರು. ಹೀಗಾಗಿ ಸ್ಟೀವ್ ಮತ್ತು ಡೇವಿಡ್‌ಗೆ 12 ತಿಂಗಳು, ಬ್ಯಾನ್‌ಕ್ರಾಫ್ಟ್‌ಗೆ 9 ತಿಂಗಳು ನಿಷೇಧ ಶಿಕ್ಷೆಯಾಗಿತ್ತು. ಈ ಕಳ್ಳಾದ ಹೊರತಾಗಿಯೂ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1ರಿಂದ ದಕ್ಷಿಣ ಆಫ್ರಿಕಾ ಗೆದ್ದಿತ್ತು.