100 ಕಿ.ಮೀ ದೂರದಿಂದ ಓಡಿ ಬಂದು ಬೌಲಿಂಗ್ ಮಾಡಿದ ಕ್ರಿಕೆಟರ್!

ವೇಗದ ಬೌಲಿಂಗ್ ಎಂದರೆ ಕೇವಲ ಕೈಗಳ ಚಳಕವಲ್ಲ, ಅದಕ್ಕೆ ಬಲವಾದ ರನ್-ಅಪ್ ಕೂಡ ಅಷ್ಟೇ ಮುಖ್ಯ. ಸಾಮಾನ್ಯವಾಗಿ ಬೌಲರ್‌ಗಳು ಕೆಲವೇ ಗಜಗಳಷ್ಟು ದೂರದಿಂದ ಓಡಿ ಬರುವುದನ್ನು ನಾವು ನೋಡಿದ್ದೇವೆ. ಆದರೆ, ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ 100 ಕಿಲೋಮೀಟರ್ ದೂರವನ್ನು ರನ್-ಅಪ್ ಆಗಿ ಬಳಸಿಕೊಂಡು ವಿಭಿನ್ನ ವಿಶ್ವ ದಾಖಲೆ ಬರೆಯಲಾಗಿದೆ. 

100 ಕಿ.ಮೀ ದೂರದಿಂದ ಓಡಿ ಬಂದು ಬೌಲಿಂಗ್ ಮಾಡಿದ ಕ್ರಿಕೆಟರ್!
ಸ್ಯಾಮ್ ಬೊಡೊವಾನೊ
Image Credit source: BBC

Updated on: Sep 03, 2026 | 12:59 PM

ಸಾಮಾನ್ಯವಾಗಿ ಕ್ರಿಕೆಟ್‌ನಲ್ಲಿ ವೇಗದ ಬೌಲರ್‌ಗಳು 20 ರಿಂದ 30 ಗಜಗಳಷ್ಟು ದೂರದಿಂದ ಓಡಿ ಬಂದು ಬೌಲಿಂಗ್ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಕ್ರಿಕೆಟರ್ ಬರೋಬ್ಬರಿ 62 ಮೈಲು (100 ಕಿಲೋಮೀಟರ್) ದೂರದಿಂದ ಓಡಿ ಬಂದು ಚೆಂಡೆಸೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ಹೌದು, ಇಂಗ್ಲೆಂಡ್‌ನ ಕ್ಲಬ್ ಕ್ರಿಕೆಟರ್ ಮತ್ತು ಸೋಶಿಯಲ್ ಮೀಡಿಯಾ ತಾರೆ ಸ್ಯಾಮ್ ಬೊಡೊವಾನೊ ಇಂತಹದ್ದೊಂದು ಕಠಿಣ ಸಾಹಸಕ್ಕೆ ಕೈಹಾಕಿ, ‘ವಿಶ್ವದ ಅತ್ಯಂತ ಸುದೀರ್ಘ ಕ್ರಿಕೆಟ್ ಬೌಲಿಂಗ್ ರನ್-ಅಪ್’ ಎಂಬ ಗಿನ್ನೆಸ್ ವಿಶ್ವ ದಾಖಲೆಯ ಹೊಸ್ತಿಲಿಗೆ ಬಂದು ನಿಂತಿದ್ದಾರೆ.

ಲಾರ್ಡ್ಸ್ ಮೈದಾನದಿಂದ ಆರಂಭವಾದ ಓಟ!

ಶನಿವಾರ ಮಧ್ಯರಾತ್ರಿ 12 ಗಂಟೆಗೆ ಕ್ರಿಕೆಟ್‌ನ ಕಾಶಿ ಎಂದೇ ಕರೆಯಲಾಗುವ ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಿಂದ ಸ್ಯಾಮ್ ತಮ್ಮ ಓಟವನ್ನು ಆರಂಭಿಸಿದರು. ಅಲ್ಲಿಂದ ಸತತವಾಗಿ 14 ಗಂಟೆಗಳ ಕಾಲ ರಾತ್ರಿಯಿಡೀ ಓಡಿದ ಅವರು, ಭಾನುವಾರ ಮಧ್ಯಾಹ್ನ ವೋಕಿಂಗ್‌ನ ವ್ಯಾಲಿ ಎಂಡ್ ಕ್ರಿಕೆಟ್ ಕ್ಲಬ್ ತಲುಪಿದರು.

ಕಠಿಣವಾಗಿದ್ದ ಗಿನ್ನೆಸ್ ನಿಯಮಗಳು:

ಸ್ಯಾಮ್ ಬೊಡೊವಾನೊ ತಮ್ಮ ಸುದೀರ್ಘ ಕ್ರಿಕೆಟ್ ಬೌಲಿಂಗ್ ರನ್-ಅಪ್ ದಾಖಲೆಗಾಗಿ ಗಿನ್ನೆಸ್ ಸಂಸ್ಥೆಯ ಕೆಲ ಕಠಿಣ ನಿಯಮಗಳನ್ನು ಪಾಲಿಸಬೇಕಾಗಿತ್ತು. ಆ ನಿಯಮಗಳೆಂದರೆ…

  • ಸಂಪೂರ್ಣ ಕ್ರಿಕೆಟ್ ಗೇರ್: 100 ಕಿಲೋಮೀಟರ್ ದೂರವನ್ನು ಸಾಮಾನ್ಯ ರನ್ನಿಂಗ್ ಸೂಟ್‌ನಲ್ಲಿ ಓಡದೆ, ಸಂಪೂರ್ಣವಾಗಿ ಬಿಳಿ ಬಣ್ಣದ ಕ್ರಿಕೆಟ್ ಜೆರ್ಸಿ ಹಾಗೂ ಪ್ಯಾಂಟ್ ಧರಿಸಿ ಓಡಬೇಕಿತ್ತು.
  • ಕೈಯಲ್ಲೇ ಕ್ರಿಕೆಟ್ ಬಾಲ್: ಓಟದ ಮೊದಲ ಹೆಜ್ಜೆಯಿಂದ ಹಿಡಿದ ಚೆಂಡು ಕೊನೆಯವರೆಗೂ ಕೈಯಲ್ಲೇ ಇರಬೇಕಿತ್ತು.
  • ಪಂದ್ಯದಲ್ಲಿ ಭಾಗಿ: ಈ ಓಟದೊಂದಿಗೆ ಅಧಿಕೃತ ಅಂಪೈರ್‌ಗಳು ಇರುವ ಪೂರ್ಣ ಪ್ರಮಾಣದ ಕ್ರಿಕೆಟ್ ಪಂದ್ಯವನ್ನು ಆಡಬೇಕಿತ್ತು

ತಂದೆಗೆ ಮೊದಲ ಬಾಲ್:

ಗಿನ್ನೆಸ್ ಸಂಸ್ಥೆಯ ಈ ನಿಯಮಗಳನ್ನು ಪಾಲಿಸಿ ಓಡಿದ ಸ್ಯಾಮ್ ಬೊಡೊವಾನೊ 14 ಗಂಟೆಗಳ ಸುದೀರ್ಘ ಓಟದ ನಂತರ ವ್ಯಾಲಿ ಎಂಡ್ ಮೈದಾನಕ್ಕೆ ಬಂದರು. ಅಲ್ಲದೆ ಅದೇ ರನ್-ಅಪ್ ವೇಗದಲ್ಲಿ ತಮ್ಮ ತಂದೆಗೆ ಪಂದ್ಯದ ಮೊದಲ ಎಸೆತವನ್ನು ಬೌಲ್ ಮಾಡಿದರು. ಅಲ್ಲದೆ ಈ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಮೂಲಕ ಸ್ಯಾಮ್ ಇದೀಗ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಹಳೆಯ ದಾಖಲೆ ಉಡೀಸ್!

ಕ್ರಿಕೆಟ್ ಇತಿಹಾಸದಲ್ಲೇ ಸುದೀರ್ಘ ರನ್ ಅಪ್​ನೊಂದಿಗೆ ಬೌಲಿಂಗ್ ಮಾಡಿದ ದಾಖಲೆ ಟಾಮ್ ಡನ್ ಹೆಸರಿನಲ್ಲಿತ್ತು. 2024 ರ ಆಗಸ್ಟ್‌ನಲ್ಲಿ ಟಾಮ್ ಡನ್ ಎಂಬುವವರು ಬೆಥ್ನಲ್ ಗ್ರೀನ್‌ನಿಂದ ವ್ಯಾಂಡ್ಸ್‌ವರ್ತ್ ಕಾಮನ್‌ವರೆಗೆ 15 ಮೈಲು (24 ಕಿಲೋಮೀಟರ್) ಓಡಿ ಬಂದು ಬೌಲಿಂಗ್ ಮಾಡಿ ಇತಿಹಾಸ ನಿರ್ಮಿಸಿದ್ದರು.

ಇದೀಗ ಸ್ಯಾಮ್ ಬೊಡೊವಾನೊ ಆ ದಾಖಲೆಯನ್ನು ಬರೋಬ್ಬರಿ 62 ಮೈಲುಗಳಿಗೆ ವಿಸ್ತರಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಗಿನ್ನೆಸ್ ದಾಖಲೆಗೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಈ ಸಾಹಸವನ್ನು ಗಿನ್ನೆಸ್ ಸಂಸ್ಥೆ ಪರಿಶೀಲಿಸುತ್ತಿದ್ದು, ಮುಂದಿನ ಎರಡು ವಾರಗಳಲ್ಲಿ ಅಧಿಕೃತವಾಗಲಿದೆ.

ಇದನ್ನೂ ಓದಿ: ಪಾಕಿಸ್ತಾನ್ ತಂಡದ ಅಧಃಪತನಕ್ಕೆ ಇಬ್ಬರು ಆಟಗಾರರೇ ಕಾರಣ!

ಕ್ಯಾನ್ಸರ್ ಪೀಡಿತರ ಸಹಾಯಕ್ಕಾಗಿ ಓಟ:

ಈ ಮ್ಯಾರಥಾನ್ ರನ್-ಅಪ್ ಕೇವಲ ದಾಖಲೆಗಾಗಿ ಮಾತ್ರ ಆಗಿರಲಿಲ್ಲ. ಸ್ಯಾಮ್ ತಮ್ಮ ಈ ಸಾಹಸದ ಮೂಲಕ ಬ್ರಿಟನ್‌ನ ಪ್ರಸಿದ್ಧ ಕ್ಯಾನ್ಸರ್ ಚಾರಿಟಿ ಸಂಸ್ಥೆಯಾದ ‘ರೂತ್ ಸ್ಟ್ರಾಸ್ ಫೌಂಡೇಶನ್’ಗಾಗಿ ಸುಮಾರು £6,000 (ಅಂದಾಜು ₹6.5 ಲಕ್ಷಕ್ಕೂ ಹೆಚ್ಚು) ಹಣವನ್ನು ದೇಣಿಗೆಯಾಗಿ ಸಂಗ್ರಹಿಸಿದ್ದಾರೆ. ಛಲ ಮತ್ತು ಸಾಮಾಜಿಕ ಕಳಕಳಿ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸ್ಯಾಮ್ ಬೊಡೊವಾನೊ ಅವರ ಈ 100 ಕಿಲೋಮೀಟರ್ ರನ್-ಅಪ್ ಬೌಲಿಂಗ್ ಅತ್ಯುತ್ತಮ ಉದಾಹರಣೆಯಾಗಿದೆ.

 

Published On - 12:57 pm, Thu, 3 September 26

Loading...
Unable to load recommendations.
Follow Us