2007 ರ ಟಿ20 ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ ವಿರುದ್ಧ ಪ್ರಕರಣ ದಾಖಲು..!
Joginder Sharma: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಪ್ರಸ್ತುತ ಹರಿಯಾಣ ಪೊಲೀಸ್‌ನಲ್ಲಿ ಡಿಎಸ್‌ಪಿಯಾಗಿರುವ ಜೋಂಗಿದರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಜೋಗಿಂದರ್ ಸಿಂಗ್ ವಿರುದ್ಧ ಹಿಸ್ಸಾರ್ ಜಿಲ್ಲೆಯ ದಬ್ಡಾ ಗ್ರಾಮದ ನಿವಾಸಿಯೊಬ್ಬರ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ಕೇಳಿಬಂದಿದೆ.
2007ರ ಟಿ20 ವಿಶ್ವಕಪ್ (2007 T20 World Cup) ಅನ್ನು ಯಾರಿಗೆ ತಾನೇ ಮರೆಯಲು ಸಾಧ್ಯ ಹೇಳಿ. ಮಹೇಂದ್ರ ಸಿಂಗ್ ಧೋನಿ (MS Dhoni) ನಾಯಕತ್ವದಲ್ಲಿ ಟಿ20 ವಿಶ್ವಕಪ್ ಅಖಾಡಕ್ಕಿಳಿದಿದ್ದ ಭಾರತ ಯುವ ಪಡೆ ಫೈನಲ್ ಪಂದ್ಯದಲ್ಲಿ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಈ ಟೂರ್ನಿಯನ್ನು ಗೆಲ್ಲುವಲ್ಲಿ, ಅದರಲ್ಲೂ ಫೈನಲ್ ಪಂದ್ಯವನ್ನು ಗೆಲ್ಲುವಲ್ಲಿ ತಂಡದ ಯುವ ಆಟಗಾರರ ಪರಿಶ್ರಮ ಅಪಾರವಾಗಿತ್ತು. ಅಂತಹ ಯುವ ಆಟಗಾರರ ಪೈಕಿ ಫೈನಲ್ ಪಂದ್ಯದ 20ನೇ ಓವರ್ ಬೌಲ್ ಮಾಡಿ ಟೀಂ ಇಂಡಿಯಾಕ್ಕೆ ಗೆಲುವು ತಂದುಕೊಟ್ಟಿದ್ದ ವೇಗಿ ಜೋಗಿಂದರ್ ಶರ್ಮಾ (Joginder Sharma) ಕೂಡ ಒಬ್ಬರು. ಆದರೀಗ ಪ್ರಸ್ತುತ ಹರಿಯಾಣ ಪೊಲೀಸ್‌ನಲ್ಲಿ ಡಿಎಸ್‌ಪಿಯಾಗಿರುವ ಜೋಗಿಂದರ್ ಶರ್ಮಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪವೊಂದು ಕೇಳಿಬಂದಿದೆ.
2007ರ ಟಿ20 ವಿಶ್ವಕಪ್ ಸ್ಟಾರ್
2007ರ ಟಿ20 ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೊನೆಯ ಓವರ್‌ನಲ್ಲಿ ಜೋಗಿಂದರ್ ಶರ್ಮಾ, ಮಿಸ್ಬಾ ಉಲ್ ಹಕ್ ಅವರ ವಿಕೆಟ್ ಕಬಳಿಸಿ ಟೀಂ ಇಂಡಿಯಾ ಗೆಲುವಿಗೆ ನೆರವಾದುದನ್ನು ಎಲ್ಲಾ ಅಭಿಮಾನಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ. 2007ರ ಟಿ20 ವಿಶ್ವಕಪ್‌ನ ಈ ಸ್ಟಾರ್ ಆಟಗಾರ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ ಜೋಗಿಂದರ್ ಶರ್ಮಾ ಹರಿಯಾಣ ಪೊಲೀಸ್‌ನಲ್ಲಿ ಡಿಎಸ್‌ಪಿಯಾಗಿದ್ದಾರೆ. ಇದೀಗ ಹಿಸಾರ್ ಆತ್ಮಹತ್ಯೆ ಪ್ರಕರಣದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರೊಂದಿಗೆ ಇತರ 6 ಜನರ ಹೆಸರುಗಳೂ ಈ ಪ್ರಕರಣದಲ್ಲಿ ಕೇಳಿಬಂದಿವೆ.
ಜೋಗಿಂದರ್ ವಿರುದ್ಧ ಕೇಸ್ ದಾಖಲಿಸಿದ್ದು ಯಾಕೆ?
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಪ್ರಸ್ತುತ ಹರಿಯಾಣ ಪೊಲೀಸ್‌ನಲ್ಲಿ ಡಿಎಸ್‌ಪಿಯಾಗಿರುವ ಜೋಂಗಿದರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಜೋಗಿಂದರ್ ವಿರುದ್ಧ ಹಿಸ್ಸಾರ್ ಜಿಲ್ಲೆಯ ದಬ್ಡಾ ಗ್ರಾಮದ ನಿವಾಸಿಯೊಬ್ಬರ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ಕೇಳಿಬಂದಿದೆ. ಮಾಹಿತಿ ಪ್ರಕಾರ, ಜನವರಿ 1 ರಂದು, ಹಿಸ್ಸಾರ್ ಜಿಲ್ಲೆಯ ದಬ್ಡಾ ಗ್ರಾಮದ ನಿವಾಸಿಯೊಬ್ಬ ಆಸ್ತಿ ವಿವಾದದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಾದ ಬಳಿಕ ಮೃತರ ಕುಟುಂಬಸ್ಥರು 7 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಅದರಲ್ಲಿ ಜೋಗಿಂದರ್ ಶರ್ಮಾ ಅವರ ಹೆಸರೂ ಸಹ ಸೇರಿದೆ.
ಚಿತ್ರಹಿಂಸೆ ನೀಡುತ್ತಿದ್ದಾರೆ
ಹರಿಯಾಣ ಪೊಲೀಸರು ಜೋಗಿಂದರ್ ಶರ್ಮಾ ಮತ್ತು ಇತರ 6 ಜನರ ವಿರುದ್ಧ ಹಿಸಾರ್‌ನ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಎಸ್‌ಸಿ-ಎಸ್‌ಟಿ ವಿಭಾಗದಡಿ ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆಯೂ ಸಹ ಆರೋಪಿಗಳೆಲ್ಲರೂ ತನ್ನ ಮಗನಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಮೃತನ ತಾಯಿ ಆರೋಪಿಸಿದ್ದರು. ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಈ ಬಗ್ಗೆ ಮತ್ತೊಮ್ಮೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Sat, 6 January 24