
2026 ರ ಟಿ20 ವಿಶ್ವಕಪ್ಗೆ (T20 World Cup 2026) ವೇದಿಕೆ ಸಜ್ಜಾಗಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಈ ಮೆಗಾ ಟೂರ್ನಮೆಂಟ್ ಎರಡು ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಟೂರ್ನಿಯಲ್ಲಿ 20 ತಂಡಗಳು ಮುಖಾಮುಖಿಯಾಗುತ್ತಿದ್ದು, ತಲಾ 5 ತಂಡಗಳ 4 ಗುಂಪುಗಳನ್ನು ರಚಿಸಲಾಗಿದೆ. ಗುಂಪು ಹಂತದಲ್ಲಿ ಪ್ರತಿ ತಂಡವೂ ತನ್ನ ಗುಂಪಿನಲ್ಲಿರುವ ಇತರ 4 ತಂಡಗಳ ವಿರುದ್ಧ ಆಡಲಿದೆ. ಆ ಬಳಿಕ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯುತ್ತವೆ. ಆದರೆ ಭಾರತದ ವಿರುದ್ಧ ಪಂದ್ಯವನ್ನಾಡಲು ನಿರಾಕರಿಸಿರುವ ಪಾಕಿಸ್ತಾನ (India vs Pakistan) ತಂಡ 2 ಅಂಕಗಳನ್ನು ಕಳೆದುಕೊಂಡಿರುವುದರಿಂದ ಮುಂದಿನ ಸುತ್ತಿಗೆ ಹೇಗೆ ಅರ್ಹತೆ ಪಡೆಯಲಿದೆ ಎಂಬುದು ಅಲ್ಲರ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರವೆಂದರೆ, ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿರುವುದರ ಹೊರತಾಗಿಯೂ ಪಾಕ್ ತಂಡ ಮುಂದಿನ ಹಂತಕ್ಕೆರುವ ಅವಕಾಶ ಹೊಂದಿದೆ.
ಪಾಕಿಸ್ತಾನ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಪಾಕಿಸ್ತಾನವನ್ನು ಹೊರತುಪಡಿಸಿ ಭಾರತ, ನಮೀಬಿಯಾ, ನೆದರ್‌ಲ್ಯಾಂಡ್ಸ್ ಮತ್ತು ಯುಎಸ್‌ಎ ತಂಡಗಳಿವೆ. ಭಾರತದ ವಿರುದ್ಧ ಪಂದ್ಯವನ್ನಾಡಲು ನಿರಾಕರಿಸಿರುವ ಪಾಕಿಸ್ತಾನ ಉಳಿದ 3 ತಂಡಗಳ ವಿರುದ್ಧ ಪಂದ್ಯವನ್ನಾಡಲಿದೆ. ಪಾಕಿಸ್ತಾನಕ್ಕೆ ಹೋಲಿಸಿದರೆ, ಉಳಿದ ಮೂರು ತಂಡಗಳು ಅಷ್ಟು ಬಲಿಷ್ಠವಾಗಿಲ್ಲ. ಕಳೆದ ವಿಶ್ವಕಪ್ನಲ್ಲಿ ಯುಎಸ್ಎ, ಪಾಕಿಸ್ತಾನವನ್ನು ಸೋಲಿಸಿತ್ತಾದರೂ, ಈ ಬಾರಿ ಪಾಕಿಸ್ತಾನ ಬಲಿಷ್ಠವಾಗಿ ಕಾಣುತ್ತಿದೆ. ಇದಕ್ಕೆ ಪೂರಕವಾಗಿ ತವರಿನಲ್ಲಿ ಇತ್ತಿಚೆಗೆ ನಡೆದಿದ್ದ ಟಿ20 ಸರಣಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಪಾಕಿಸ್ತಾನ ವೈಟ್ ವಾಶ್ ಮಾಡಿದೆ.
ಇದರ ಜೊತೆಗೆ ಒಂದೇ ಸ್ಥಳದಲ್ಲಿ ಎಲ್ಲಾ ಪಂದ್ಯಗಳನ್ನು ಆಡುವುದು ಪಾಕಿಸ್ತಾನಕ್ಕೆ ದೊಡ್ಡ ಅನುಕೂಲವಾಗಲಿದೆ. ಪಾಕಿಸ್ತಾನ ತನ್ನ ಪಂದ್ಯಗಳನ್ನು ಶ್ರೀಲಂಕಾದ ಎರಡು ಮೈದಾನಗಳಲ್ಲಿ ಆಡಲಿದೆ. ಇದು ಆಟಗಾರರಿಗೆ ಪ್ರಯಾಣದ ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ಪಿಚ್ ಪರಿಸ್ಥಿತಿಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಭಾರತವು 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ದುಬೈ ಸ್ಥಳದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಆಡಿ ಜಯಗಳಿಸಿತು ಎಂಬುದನ್ನು ನೆನಪಿಸಿಕೊಳ್ಳಲಾಗುತ್ತಿದೆ.
ಶ್ರೀಲಂಕಾದ ಹವಾಮಾನ ಪರಿಸ್ಥಿತಿಗಳು ಪಾಕಿಸ್ತಾನಕ್ಕೆ ಹೊಸದೇನಲ್ಲ. ಅದು ಈಗಾಗಲೇ ಇಲ್ಲಿ ಹಲವಾರು ಬಾರಿ ಆಡಿದ್ದು, ದ್ವಿಪಕ್ಷೀಯ ಸರಣಿಗಳನ್ನು ಗೆದ್ದಿದೆ. ಸ್ಪಿನ್‌ಗೆ ಅನುಕೂಲಕರವಾದ ಈ ವಿಕೆಟ್‌ಗಳು ಪಾಕಿಸ್ತಾನಕ್ಕೆ ಹೆಚ್ಚು ನೆರವು ನೀಡುವ ನಿರೀಕ್ಷೆಯಿದೆ. ಪಾಕಿಸ್ತಾನ ಫೆಬ್ರವರಿ 7 ರಂದು ನೆದರ್‌ಲ್ಯಾಂಡ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಫೆಬ್ರವರಿ 10 ರಂದು ಯುಎಸ್‌ಎ ವಿರುದ್ಧ, ಫೆಬ್ರವರಿ 18 ರಂದು ನಮೀಬಿಯಾ ವಿರುದ್ಧ ಆಡಲಿದೆ. ಭಾರತದೊಂದಿಗೆ ಆಡದಿದ್ದರೂ, ಪಾಕಿಸ್ತಾನ ಯುಎಸ್‌ಎ, ನಮೀಬಿಯಾ ಮತ್ತು ನೆದರ್‌ಲ್ಯಾಂಡ್ಸ್ ವಿರುದ್ಧ ಗೆದ್ದರೆ, ಅದು ಸೂಪರ್-8 ಹಂತವನ್ನು ಸುಲಭವಾಗಿ ತಲುಪುತ್ತದೆ.
T20 World Cup 2026: ಟಿ20 ವಿಶ್ವಕಪ್ ಆಡುವ ಸಂಜು ಸ್ಯಾಮ್ಸನ್ ಕನಸು ಭಗ್ನ
ಸೂಪರ್-8ರಲ್ಲಿ ಪಾಕಿಸ್ತಾನ, ಭಾರತವನ್ನು ಎದುರಿಸುವ ಸಾಧ್ಯತೆ ಇಲ್ಲ. ಲೀಗ್ ಹಂತದಲ್ಲಿ ಈ ಎರಡೂ ತಂಡಗಳು ಒಂದೇ ಗುಂಪಿನಲ್ಲಿರುವುದರಿಂದ, ಸೂಪರ್-8ಸುತ್ತಿನಲ್ಲಿ ವಿಭಿನ್ನ ಗುಂಪುಗಳಲ್ಲಿ ಆಡಲಿವೆ. ಅಲ್ಲಿಯೂ ಸಹ, ಪಾಕಿಸ್ತಾನ ಮತ್ತು ಭಾರತ ಗೆದ್ದರೆ, ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಪರಸ್ಪರ ಎದುರಾಗುವ ಸಾಧ್ಯತೆಯಿದೆ. ಆದಾಗ್ಯೂ, ಪಾಕಿಸ್ತಾನವು ಭಾರತದ ವಿರುದ್ಧ ಪಂದ್ಯವನ್ನು ಆಡದಿದ್ದರೂ ಸಹ ಸುಲಭವಾಗಿ ಸೆಮಿಫೈನಲ್ ತಲುಪುವ ಹೆಚ್ಚಿನ ಅವಕಾಶವಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ