
2026 ರ ಟಿ20 ವಿಶ್ವಕಪ್ನ (2026 T20 World Cup ) 13ನೇ ಪಂದ್ಯ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ (South Africa vs Afghanistan) ನಡುವೆ ನಡೆಯಿತು. ಅಹಮದಾಬಾದ್ನಲ್ಲಿ ನಡೆದ ಈ ಪಂದ್ಯ ಟಿ20 ವಿಶ್ವಕಪ್ ಇತಿಹಾಸದಲ್ಲೇ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಏಕೆಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಎರಡೆರಡು ಸೂಪರ್ ಓವರ್‌ಗಳು ನಡೆದಿದ್ದು ಇದೇ ಮೊದಲ ಬಾರಿಗೆ. ಈ ದಾಖಲೆಗೆ ಕಾರಣವಾಗಿದ್ದು, ಆಫ್ರಿಕಾ ಹಾಗೂ ಅಫ್ಘನ್ ತಂಡದ ರಣರೋಚಕ ಹೋರಾಟ. ಹಾಗಿದ್ದರೆ ಈ ಪಂದ್ಯದಲ್ಲಿ ಏನೆಲ್ಲ ಆಯ್ತು? ಎರಡೆರಡು ಸೂಪರ್ ಓವರ್ಗಳಲ್ಲಿ ಉಭಯ ತಂಡಗಳ ಪ್ರದರ್ಶನ ಹೇಗಿತ್ತು? ಕೊನೆಯಲ್ಲಿ ಆಫ್ರಿಕಾ ಗೆಲುವು ಸಾಧಿಸಲು ಕಾರಣವಾಗಿದ್ದೇನು ಎಂಬುದನ್ನು ನೋಡುವುದಾದರೆ..
ಮೊದಲಿಗೆ ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಪ್ರಿಕಾ 187 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ 187 ರನ್ ಬಾರಿಸಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿತು. ಹೀಗಾಗಿ ಸೂಪರ್ ಓವರ್ನತ್ತ ಸಾಗಿದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು.
ಅದರಂತೆ ಅಫ್ಘನ್ ಪರ ಅಜ್ಮತುಲ್ಲಾ ಒಮರ್ಜೈ ಹಾಗೂ ರಹಮಾನುಲ್ಲಾ ಗುರ್ಬಾಜ್ ಇನ್ನಿಂಗ್ಸ್ ಆರಂಭಿಸಿದರು. ಇತ್ತ ಆಫ್ರಿಕಾ ಪರ ಲುಂಗಿ ಎಂಗಿಡಿ ಬೌಲಿಂಗ್ ಆರಂಭಿಸಿದರು. ಸ್ಟ್ರೈಕ್ನಲ್ಲಿದ್ದ ಒಮರ್ಜೈ, ಮೊದಲ ಎಸೆತದಲ್ಲಿ ಬೌಂಡರಿ ಹಾಗೂ 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಮೂರನೇ ಎಸೆತದಲ್ಲಿ 1 ರನ್ ಬಂದರೆ, 4ನೇ ಎಸೆತದಲ್ಲೂ 1 ರನ್ ಬಂತು. ಐದನೇ ಎಸೆತವನ್ನು ಒಮರ್ಜೈ ಬೌಂಡರಿಗಟ್ಟಿದರೆ, ಕೊನೆಯ ಎಸೆತದಲ್ಲಿ 1 ರನ್ ಬಂತು. ಹೀಗಾಗಿ ಅಫ್ಘನ್ ತಂಡ ಮೊದಲ ಸೂಪರ್ ಓವರ್‌ನಲ್ಲಿ 17 ರನ್ ಕಲೆಹಾಕಿತು.
ಗೆಲುವಿಗೆ 18 ರನ್ ಗುರಿ ಬೆನ್ನಟ್ಟಿದ ಆಫ್ರಿಕಾ ಪರ ಬ್ರೆವಿಸ್ ಹಾಗೂ ಮಿಲ್ಲರ್ ಇನ್ನಿಂಗ್ಸ್ ಆರಂಭಿಸಿದರೆ, ಅಫ್ಘನ್ ಪರ ಫಾರೂಕಿ ಬೌಲಿಂಗ್ ಮಾಡಿದರು. ಮೊದಲ ಎಸೆತದಲ್ಲಿ ಮಿಲ್ಲರ್ ಸಿಂಗಲ್ ತೆಗೆದುಕೊಂಡರು. ಎರಡನೇ ಎಸೆತದಲ್ಲಿ ಸ್ಟ್ರೈಕ್ಗೆ ಬಂದ ಬ್ರೆವಿಸ್ ಭರ್ಜರಿ ಸಿಕ್ಸರ್ ಬಾರಿಸಿದರು. ಆದರೆ ಮೂರನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಈ ಹಂತದಲ್ಲಿ ಆಫ್ರಿಕಾ ಗೆಲುವಿಗೆ 3 ಎಸೆತಗಳಲ್ಲಿ 11 ರನ್ ಬೇಕಿದ್ದವು. ಬ್ರೆವಿಸ್ ಔಟಾದ ಬಳಿಕ ಬಂದ ಸ್ಟಬ್ಸ್ 4ನೇ ಎಸೆತವನ್ನು ಬೌಂಡರಿಗಟ್ಟಿದರು. ಆದರೆ 5ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಹೀಗಾಗಿ ಕೊನೆಯ ಎಸೆತದಲ್ಲಿ ಗೆಲುವಿಗೆ 7 ರನ್ ಬೇಕಿದ್ದವು. ಇತ್ತ ಕೊನೆಯ ಎಸೆತವನ್ನು ಸ್ಟಬ್ಸ್ ಸಿಕ್ಸರ್ಗಟ್ಟಿದರು. ಹೀಗಾಗಿ ಪಂದ್ಯ ಮತ್ತೆ ಟೈ ಆಯಿತು.
ಪಂದ್ಯ ಮತ್ತೆ ಟೈ ಆದ ಕಾರಣ ಎರಡನೇ ಸೂಪರ್ ಓವರ್ ನಡೆಸಲಾಯಿತು. ಈ ಬಾರಿ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಪರ ಮಿಲ್ಲರ್ ಹಾಗೂ ಸ್ಟಬ್ಸ್ ಇನ್ನಿಂಗ್ಸ್ ಆರಂಭಿಸಿದರೆ, ಅಫ್ಘನ್ ಪರ ಅಜ್ಮತುಲ್ಲಾ ಒಮರ್ಜೈ ಬೌಲಿಂಗ್ ಮಾಡಿದರು. ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ ಸ್ಟಬ್ಸ್ ಎರಡನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ನಂತರ ಸ್ಟ್ರೈಕ್ಗೆ ಬಂದ ಮಿಲ್ಲರ್ ಮೂರನೇ ಎಸೆತದಲ್ಲಿ 2 ರನ್ ತೆಗೆದುಕೊಂಡರೆ, ಆ ಬಳಿಕ ಸತತ 2 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲಿ ಎರಡು ರನ್ ಬಂದವು. ಹೀಗಾಗಿ ಆಫ್ರಿಕಾ 23 ರನ್ ಕಲೆಹಾಕಿತು.
SA vs AFG: ಅಬ್ಬಬ್ಬಾ ಎಂಥಾ ಪಂದ್ಯ! 2ನೇ ಸೂಪರ್ ಓವರ್‌ನಲ್ಲಿ ಅಫ್ಘನ್ ಮಣಿಸಿದ ಆಫ್ರಿಕಾ
ಗೆಲುವಿಗೆ 24 ರನ್ಗಳ ಗುರಿ ಬೆನ್ನಟ್ಟಿದ ಅಫ್ಘನ್ ಪರ ಅನುಭವಿ ನಬಿ ಹಾಗೂ ಒಮರ್ಜೈ ಬ್ಯಾಟಿಂಗ್ ಆರಂಭಿಸಿದರೆ, ಆಫ್ರಿಕಾ ಪರ ಸ್ಪಿನ್ನರ್ ಕೇಶವ್ ಮಹಾರಾಜ್ ಬೌಲಿಂಗ್ ಮಾಡಿದರು. ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ ನಬಿ ಅದರಲ್ಲಿ ವಿಫಲರಾದರು. ನಂತರ ಎರಡನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಹೀಗಾಗಿ ಕೊನೆಯ 4 ಎಸೆತಗಳಲ್ಲಿ ಅಫ್ಘನ್ ಗೆಲುವಿಗೆ 24 ರನ್ ಬೇಕಿದ್ದವು. ಈ ವೇಳೆ ಬ್ಯಾಟಿಂಗ್ಗೆ ಬಂದ ಗುರ್ಬಾಜ್ ಸತತ ಮೂರು ಎಸೆತಗಳಲ್ಲಿ 3 ಸಿಕ್ಸರ್ ಬಾರಿಸಿ ಪಂದ್ಯವನ್ನು ರೋಚಕಗೊಳಿಸಿದರು.
ಇದರಿಂದ ಒತ್ತಡಕ್ಕೊಳಗಾದ ಮಹಾರಾಜ್ 6ನೇ ಎಸೆತವನ್ನು ವೈಡ್ ಮಾಡಿದರು. ಹೀಗಾಗಿ ಅಫ್ಘನ್ ತಂಡಕ್ಕೆ ಕೊನೆಯ ಎಸೆತದಲ್ಲಿ 5 ರನ್ ಬೇಕಿದ್ದವು. ಆದರೆ ಕೊನೆಯ ಎಸೆತದಲ್ಲಿ ಗುರ್ಬಾಜ್ಗೆ ಯಾವುದೇ ರನ್ ಕಲೆಹಾಕಲು ಸಾಧ್ಯವಾಗದೆ ಕ್ಯಾಚ್ ನೀಡಿ ಔಟಾದರು. ಅಂತಿಮವಾಗಿ ಅಫ್ಘನ್ ತಂಡ 4 ರನ್‌ಗಳಿಂದ ಪಂದ್ಯ ಸೋತಿತು. ಒಂದು ವೇಳೆ ಅಫ್ಘನ್ ಪರ ಗುರ್ಬಾಜ್ ಮೊದಲೇ ಬ್ಯಾಟಿಂಗ್ಗೆ ಬಂದಿದ್ದರೆ ಪಂದ್ಯದ ಫಲಿತಾಂಶ ಬೇರೆಯದ್ದೇ ಆಗುವ ಸಾಧ್ಯತೆಗಳಿದ್ದವು. ಆದರೆ ಅದು ಆಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Wed, 11 February 26