SA vs AFG: ಅಬ್ಬಬ್ಬಾ ಎಂಥಾ ಪಂದ್ಯ! 2ನೇ ಸೂಪರ್ ಓವರ್ನಲ್ಲಿ ಅಫ್ಘನ್ ಮಣಿಸಿದ ಆಫ್ರಿಕಾ
T20 World Cup 2026 SA vs AFG Thriller : ಅಹಮದಾಬಾದ್‌ನಲ್ಲಿ ನಡೆದ 2026ರ ಟಿ20 ವಿಶ್ವಕಪ್‌ನ ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ ಪಂದ್ಯವು ರೋಚಕ ದ್ವಿಗುಣ ಸೂಪರ್ ಓವರ್‌ಗೆ ಸಾಕ್ಷಿಯಾಯಿತು. ಕಗಿಸೋ ರಬಾಡ ಅವರ ನೋ-ಬಾಲ್‌ಗಳು ಪಂದ್ಯವನ್ನು ಸೂಪರ್ ಓವರ್‌ಗೆ ತಳ್ಳಿದವು. 187 ರನ್‌ಗಳ ಸಮಬಲದ ನಂತರ, ಎರಡೆರಡು ಸೂಪರ್ ಓವರ್‌ಗಳ ಬಳಿಕ ಅಂತಿಮವಾಗಿ ದಕ್ಷಿಣ ಆಫ್ರಿಕಾ ವಿಜಯ ಸಾಧಿಸಿತು. ಇದು ಅಭಿಮಾನಿಗಳಿಗೆ ಮರೆಯಲಾಗದ ಪಂದ್ಯವಾಗಿತ್ತು.

ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ (South Africa vs Afghanistan) ನಡುವಿನ 2026 ರ ಟಿ20 ವಿಶ್ವಕಪ್ (T20 World Cup 2026) ಪಂದ್ಯ ರಣರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಎರಡೆರಡು ಸೂಪರ್ ಓವರ್ಗಳು ನಡೆದ ಈ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ದಕ್ಷಿಣ ಆಫ್ರಕಾ ತಂಡ ಯಶಸ್ವಿಯಾಯಿತು. ವಾಸ್ತವವಾಗಿ ಸೂಪರ್ ಓವರ್ಗೂ ಮುನ್ನವೇ ದಕ್ಷಿಣ ಆಫ್ರಿಕಾ ತಂಡಕ್ಕೆ ಸುಲಭ ಜಯ ಧಕ್ಕಿತ್ತು. ಆದರೆ 20ನೇ ಓವರ್ನಲ್ಲಿ ಕಗಿಸೋ ರಬಾಡ ಮಾಡಿದ ಎರಡೆರಡು ನೋ ಬಾಲ್‌ಗಳು ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದಲ್ಲದೆ ಪಂದ್ಯವನ್ನು ಸೂಪರ್ ಓವರ್‌ಗೆ ತಳ್ಳಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ 187 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಅಫ್ಘನ್ ಕೂಡ ಇದೇ ಮೊತ್ತವನ್ನು ಕಲೆಹಾಕಿತು. ಇದರಿಂದ ಪಂದ್ಯ ಸೂಪರ್ ಓವರ್‌ಗೆ ಸಾಗಿತು. ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘನ್ 17 ರನ್ ಕಲೆಹಾಕಿದರೆ, ಇತ್ತ ಆಫ್ರಿಕಾ ಕೂಡ 17 ರನ್ ಬಾರಿಸಿತು. ಇದರಿಂದ ಪಂದ್ಯ ಎರಡನೇ ಸೂಪರ್ ಓವರ್‌ಗೆ ಸಾಗಿತು, ಎರಡನೇ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ 23 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘನ್ 19 ರನ್ ಕಲೆಹಾಕಲಷ್ಟೇ ಶಕ್ತವಾಗಿ ಪಂದ್ಯವನ್ನು ಸೋತಿತು.
187 ರನ್ ಕಲೆಹಾಕಿದ ಆಫ್ರಿಕಾ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 187 ರನ್ ಕಲೆಹಾಕಿತು. ತಂಡದ ಪರ ಅಮೋಘ ಪ್ರದರ್ಶನ ನೀಡಿದ ಕ್ವಿಂಟನ್ ಡಿ ಕಾಕ್ ಮತ್ತು ರಯಾನ್ ರಿಕಲ್ಟನ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಡಿ ಕಾಕ್ 41 ಎಸೆತಗಳಲ್ಲಿ 59 ರನ್ ಗಳಿಸಿದರೆ, ರಯಾನ್ ರಿಕಲ್ಟನ್ ಕೇವಲ 28 ಎಸೆತಗಳಲ್ಲಿ 61 ರನ್‌ಗಳ ಇನ್ನಿಂಗ್ಸ್ ಆಡಿದರು. ಡೆವಾಲ್ಡ್ ಬ್ರೆವಿಸ್ ಹಾಗೂ ಡೇವಿಡ್ ಮಿಲ್ಲರ್ ಕೂಡ ಕ್ರಮವಾಗಿ 23 ಮತ್ತು 20 ರನ್‌ಗಳ ಕಾಣಿಕೆ ನೀಡುವ ಮೂಲಕ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.
ಕೊನೆಯವರೆಗೂ ಹೋರಾಟ ಬಿಡದ ಅಫ್ಘನ್
ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕ ರಹಮಾನುಲ್ಲಾ ಗುರ್ಬಾಜ್ 42 ಎಸೆತಗಳಲ್ಲಿ 7 ಸಿಕ್ಸರ್ ಸಹಿತ 84 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆದರೆ ಗುರ್ಬಾಜ್ ಔಟಾದ ಬಳಿಕ ತಂಡದ ಮಧ್ಯಮ ಕ್ರಮಾಂಕ ಆಘಾತ ಅನುಭವಿಸಿತು. ನೈಬ್ ಹಾಗೂ ಅಟ್ಟಲ್ ಒಂದೇ ಓವರ್ನಲ್ಲಿ ಶೂನ್ಯಕ್ಕೆ ಔಟಾದರು. ಒಮರ್ಜೈ ಹಾಗೂ ರಶೀದ್ ಖಾನ್ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ವಿಕೆಟ್ ಒಪ್ಪಿಸಿದರು. ಇದರಿಂದ ಅಫ್ಘನ್ ತಂಡದ ಸೋಲು ಖಚಿತ ಎನ್ನಲಾಗುತಿತ್ತು.
ರಬಾಡ ಮಾಡಿದ ಎಡವಟ್ಟು
ಇದಕ್ಕೆ ಪೂರಕವಾಗಿ ಕೊನೆಯ ಓವರ್ನಲ್ಲಿ ಅಫ್ಘನ್ ಗೆಲುವಿಗೆ 12 ರನ್ ಬೇಕಿದ್ದವು, ಕೈಯಲ್ಲಿ ಉಳಿದಿದ್ದು ಕೊನೆಯ ವಿಕೆಟ್ ಮಾತ್ರ. ಸ್ಟ್ರೈಕ್ನಲ್ಲಿದ್ದ ನೂರ್ ಅಹ್ಮದ್ ರಬಾಡ ಬೌಲ್ ಮಾಡಿದ 20ನೇ ಓವರ್ನ ಮೊದಲ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿ ಕ್ಯಾಚ್ ನೀಡಿದರು. ಇಲ್ಲಿಗೆ ಅಫ್ಘನ್ ಇನ್ನಿಂಗ್ಸ್ ಅಂತ್ಯವಾಯಿತು ಎಂದುಕೊಳ್ಳುವಾಗಲೇ ಅಂಪೈರ್ಗಳು ನೋ ಬಾಲ್ ಎಂಬ ಸಿಗ್ನಲ್ ನೀಡುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು.
ಇದರಿಂದ ಬದುಕುಳಿದ ನೂರ್ ಎರಡನೇ ಎಸೆತವನ್ನು ಸಿಕ್ಸರ್ಗಟ್ಟಿದರು. ಹೀಗಾಗಿ ಉಳಿದ ಮೂರು ಎಸೆತಗಳಲ್ಲಿ 4 ರನ್ ಬೇಕಿದ್ದವು. ಇತ್ತ ರಬಾಡ ನಾಲ್ಕನೇ ಎಸೆತವನ್ನು ಸಹ ನೋ ಬಾಲ್ ಎಸೆದರು. ಈ ಎಸೆತದಲ್ಲಿ ಅಫ್ಘನ್ 2 ರನ್ ಕಲೆಹಾಕಿತು. ಒಟ್ಟಾರೆ ಮೂರು ರನ್ ಬಂದವು. ಅಂತಿಮವಾಗಿ 2 ಎಸೆತಗಳಲ್ಲಿ 2 ರನ್ ಬೇಕಿದ್ದವು. ಸ್ಟೈಕ್ನಲ್ಲಿದ್ದ ನೂರ್ ಐದನೇ ಎಸೆತವನ್ನು ವೈಡ್ ಲಾಂಗ್ ಆಫ್ನತ್ತ ಆಡಿ ಎರಡು ರನ್ಗೆ ಓಡಿದರು. ಆದರೆ ನಾನ್ ಸ್ಟ್ರೈಕ್ನಲ್ಲಿದ್ದ ಫಜಲ್ಹಕ್ ಫಾರೂಕಿ ರನ್ ಓಡುವುದರಲ್ಲಿ ತೋರಿದ ಉದಾಸೀನತೆ ತಂಡವನ್ನು ಸೋಲಿನ ದವಡೆಗೆ ತಳ್ಳಿತು.
T20 World Cup: ಟಿ20 ವಿಶ್ವಕಪ್ನಿಂದ 7 ಸ್ಟಾರ್ ಆಟಗಾರರು ಔಟ್
ಸೂಪರ್ ಓವರ್ನಲ್ಲಿ ಗೆದ್ದ ಆಫ್ರಿಕಾ
ಹೀಗಾಗಿ ಐದನೇ ಎಸೆತದಲ್ಲಿ ಅಫ್ಘನ್ ತಂಡಕ್ಕೆ 1 ರನ್ ಸಿಕ್ಕರೆ, ಇತ್ತ ದಕ್ಷಿಣ ಆಫ್ರಿಕಾ ಕೊನೆಯ ವಿಕೆಟ್ ಉರುಳಿಸಿ ಪಂದ್ಯವನ್ನು ಟೈನತ್ತ ಕೊಂಡೊಯ್ಯಿತು. ಪಂದ್ಯ ಟೈ ಆದ ಕಾರಣ ಅಂಪೈರ್ಗಳು ಸೂಪರ್ ಓವರ್ ನಡೆಸಲು ಮುಂದಾದರು. ಒಂದಲ್ಲ ಅಂತಾ ಎರಡೆರಡು ಸೂಪರ್ ಓವರ್ಗಳಿಗೆ ಸಾಕ್ಷಿಯಾದ ಈ ಪಂದ್ಯವನ್ನು ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ ಗೆದ್ದುಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Wed, 11 February 26
