ಫಾಫ್ ಡುಪ್ಲೆಸಿಸ್ ಸೂಪರ್​ಮ್ಯಾನ್ ಕ್ಯಾಚ್​ಗೆ ಕ್ರಿಕೆಟ್ ಪ್ರಿಯರು ಫಿದಾ!

Major League Cricket 2026: ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್​ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಾಲೀಕತ್ವದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ಭರ್ಜರಿ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ಟಿಎಸ್​ಕೆ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಮತ್ತು ಫೀಲ್ಡಿಂಗ್​ ಮೂಲಕ ಕ್ರಿಕೆಟ್​ ಪ್ರೇಮಿಗಳನ್ನು ನಿಬ್ಬೆರಗಾಗಿಸುತ್ತಿದ್ದಾರೆ.

ಫಾಫ್ ಡುಪ್ಲೆಸಿಸ್ ಸೂಪರ್​ಮ್ಯಾನ್ ಕ್ಯಾಚ್​ಗೆ ಕ್ರಿಕೆಟ್ ಪ್ರಿಯರು ಫಿದಾ!
Faf Du Plessis

Updated on: Jun 25, 2026 | 10:42 AM

ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ ಎಂಬುದನ್ನು ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಬಾರಿ ಸಾಬೀತುಪಡಿಸಿರುವುದು 42ನೇ ವಯಸ್ಸಿನಲ್ಲಿ ಎಂಬುದು ವಿಶೇಷ. ಅದು ಸಹ ಅತ್ಯದ್ಭುತ ಫ್ಲೇಯಿಂಗ್ ಕ್ಯಾಚ್ ಹಿಡಿದು!

ಪ್ರಸ್ತುತ ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC) ಟೂರ್ನಿಯಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ನಾಯಕನಾಗಿ ಕಣಕ್ಕಿಳಿಯುತ್ತಿರುವ ಫಾಫ್ ಡುಪ್ಲೆಸಿಸ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಶತಕ ಬಾರಿಸಿದ ಅತ್ಯಂತ ಹಿರಿಯ ಬ್ಯಾಟರ್ ಎನಿಸಿಕೊಂಡಿದ್ದರು. ಇದೀಗ ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಇಡೀ ಕ್ರಿಕೆಟ್ ಜಗತ್ತೇ ಹುಬ್ಬೇರಿಸುವಂತೆ ಮಾಡಿದ್ದಾರೆ.

“ಸೂಪರ್ ಮ್ಯಾನ್” ಕ್ಯಾಚ್!

ಓಕ್ಲ್ಯಾಂಡ್ ಕೊಲಿಸಿಯಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಹಾಗೂ ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ತಂಡವು ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಟಿಎಸ್​ಕೆ ತಂಡ ದಾಂಡಿಗರು 20 ಓವರ್​ಗಳಲ್ಲಿ 161 ರನ್ ಕಲೆಹಾಕಿದ್ದರು.

162 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಲು ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ಪರ ಲೂವಾನ್-ಡ್ರೆ ಪ್ರಿಟೋರಿಯಸ್ ಹಾಗೂ ಫಿನ್ ಅಲೆನ್ ಕಣಕ್ಕಿಳಿದಿದ್ದರು. ಆದರೆ ಎರಡನೇ ಓವರ್​ನ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ಫಿನ್ ಅಲೆನ್ (3) ಔಟಾದರು.

ಇದಾಗ್ಯೂ ಡೇಂಜರಸ್ ಲೂವಾನ್-ಡ್ರೆ ಪ್ರಿಟೋರಿಯಸ್ ಕ್ರೀಸ್​ ಕಚ್ಚಿ ನಿಲ್ಲುವ ಸೂಚನೆ ನೀಡಿದ್ದರು. ಆದರೆ ಪಂದ್ಯದ 5ನೇ ಓವರ್​ನ ಮೊದಲ ಎಸೆತದಲ್ಲಿ ಪ್ರಿಟೋರಿಯಸ್  ಬಾರಿಸಿದ ಚೆಂಡನ್ನು ಮಿಡ್-ಆಫ್‌ನಲ್ಲಿದ್ದ ಫಾಫ್ ಡು ಪ್ಲೆಸಿಸ್  ನಂಬಲಸಾಧ್ಯದಂತೆ ಹಿಡಿದರು.

ಗಾಳಿಯಲ್ಲಿ ಸಂಪೂರ್ಣವಾಗಿ ತೇಲುತ್ತಾ, ಕೇವಲ ಒಂದೇ ಕೈಯಿಂದ ಅವರು ಹಿಡಿದ ಆ ಡೈವಿಂಗ್ ಕ್ಯಾಚ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 41 ವರ್ಷ ದಾಟಿದರೂ ಯುವ ಆಟಗಾರರನ್ನು ಮೀರಿಸುವಂತೆ ಫೀಲ್ಡಿಂಗ್ ಮಾಡುತ್ತಿರುವ ಫಾಫ್ ಡು ಪ್ಲೆಸಿಸ್ ಅವರ ಚುರುಕುತನಕ್ಕೆ ಕ್ರಿಕೆಟ್ ಪ್ರೇಮಿಗಳು ಬಹುಪರಾಕ್ ಅನ್ನುತ್ತಿದ್ದಾರೆ.

ಇದನ್ನೂ ಓದಿ: FIFA World Cup 2026: ನಾಕೌಟ್ ರೌಂಡ್​ಗೆ ಬ್ರೆಝಿಲ್ ಎಂಟ್ರಿ

ಗೆದ್ದು ಬೀಗಿದ TSK:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 161 ರನ್ ಕಲೆಹಾಕಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ತಂಡವು 17.4 ಓವರ್​ಗಳಲ್ಲಿ 139 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟಿಎಸ್​ಕೆ ತಂಡವು 22 ರನ್​ಗಳ ಭರ್ಜರಿ ಜಯ ಸಾಧಿಸಿದೆ.

 

 

Follow Us