40 ಎಸೆತಗಳಲ್ಲಿ 11 ಸಿಕ್ಸರ್ ಸಹಿತ 111 ರನ್ ಚಚ್ಚಿದ ಎಬಿ ಡಿವಿಲಿಯರ್ಸ್..!

ಶಾರ್ಜಾದಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಎಬಿ ಡಿವಿಲಿಯರ್ಸ್ ಅಬ್ಬರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಬಾರಿಸಿ ತಂಡಕ್ಕೆ ಏಕಪಕ್ಷೀಯ ಗೆಲುವು ತಂದುಕೊಟ್ಟಿದ್ದಾರೆ. ಈ ಮೂಲಕ ಅವರು ಟೂರ್ನಿಯಲ್ಲಿ ತಮ್ಮ ಅತ್ಯುತ್ತಮ ಫಾರ್ಮ್ ಮುಂದುವರಿಸಿದ್ದು, ಹಿಂದಿನ ಏಳು ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳನ್ನು ಸಿಡಿಸಿದ್ದಾರೆ. ಡಿವಿಲಿಯರ್ಸ್ ರನ್ ಸುರಿಮಳೆಯಿಂದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡ ಜಯಭೇರಿ ಬಾರಿಸಿದೆ.

40 ಎಸೆತಗಳಲ್ಲಿ 11 ಸಿಕ್ಸರ್ ಸಹಿತ 111 ರನ್ ಚಚ್ಚಿದ ಎಬಿ ಡಿವಿಲಿಯರ್ಸ್..!
ಎಬಿ ಡಿವಿಲಿಯರ್ಸ್​

Updated on: Oct 09, 2026 | 9:40 PM

ಶಾರ್ಜಾದಲ್ಲಿ ನಡೆಯುತ್ತಿರುವ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ ಲೀಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ರನ್​ಗಳ ಸುರಿಮಳೆಯನ್ನು ಮುಂದುವರೆಸಿದ್ದಾರೆ. ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡದ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಬೌಂಡರಿಗಳ ಮಳೆಗರೆದ ಡಿವಿಲಿಯರ್ಸ್ ಕೇವಲ 37 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಲ್ಲದೆ ತಂಡವನ್ನು ಏಕಪಕ್ಷೀಯ ಗೆಲುವಿಗೆ ಕೊಂಡೊಯ್ದಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ 210 ರನ್​ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಡಿವಿಲಿಯರ್ಸ್ ಅಬ್ಬರದ ನೆರವಿನಿಂದ ಕೇವಲ 15.4 ಓವರ್‌ಗಳಲ್ಲಿ ಜಯದ ನಗೆ ಬೀರಿತು.

209 ರನ್ ಕಲೆಹಾಕಿದ ಆಸ್ಟ್ರೇಲಿಯಾ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡದ ಪರ ನಾಯಕ ಡೇವಿಡ್ ವಾರ್ನರ್ 48 ರನ್​ಗಳ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಮೂರನೇ ಕ್ರಮಾಂಕದಲ್ಲಿ ಬಂದ ಡಾರ್ಸಿ ಶಾರ್ಟ್ ಕೇವಲ 25 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 66 ರನ್​​ಗಳ ಇನ್ನಿಂಗ್ಸ್ ಆಡಿದರು. ಜೋ ಬರ್ನ್ಸ್ 38 ರನ್​ಗಳ ಕಾಣಿಕೆ ನೀಡಿದರೆ, ಜೊನಾಥನ್ ವೆಲ್ಸ್ ಕೊನೆಯಲ್ಲಿ 23 ರನ್ ಬಾರಿಸಿದರು. ಇವರ ಆಟದಿಂದಾಗಿ ಆಸ್ಟ್ರೇಲಿಯಾ 5 ವಿಕೆಟ್‌ಗಳನ್ನು ಕಳೆದುಕೊಂಡು 209 ರನ್ ಕಲೆಹಾಕಿತು.

ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪರ ರಿಚರ್ಡ್ ಲೆವಿ 29 ಎಸೆತಗಳಲ್ಲಿ 66 ರನ್ ಬಾರಿಸಿದರೆ, ನಾಯಕ ಎಬಿ ಡಿವಿಲಿಯರ್ಸ್ ಕೇವಲ 40 ಎಸೆತಗಳಲ್ಲಿ 11 ಸಿಕ್ಸರ್ ಸಹಿತ 111 ರನ್ ಬಾರಿಸಿ ಅಜೇಯರಾಗಿ ಉಳಿದರು. ಫಾರ್ಮ್​ನ ಉತ್ತುಂಗದಲ್ಲಿರುವ ಡಿವಿಲಿಯರ್ಸ್, ಈ ಟೂರ್ನಮೆಂಟ್‌ನಲ್ಲಿ ತಮ್ಮ ಕೊನೆಯ ಏಳು ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳನ್ನು ಬಾರಿಸಿದ್ದಾರೆ. ಉಳಿದಂತೆ ಎರಡು ಅರ್ಧಶತಕಗಳನ್ನು ಸಹ ಕಲೆಹಾಕಿದ್ದಾರೆ.

37 ಎಸೆತಗಳಲ್ಲಿ ಶತಕ

ಇನ್ನು ಈ ಪಂದ್ಯದಲ್ಲಿ ಡಿವಿಲಿಯರ್ಸ್ 37 ಎಸೆತಗಳಲ್ಲಿ ಶತಕ ಬಾರಿಸಿದರು. ಆದರೆ ಮೊದಲ ಮೂರು ಎಸೆತಗಳಲ್ಲಿ ಅವರಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ತಮ್ಮ ಏಳನೇ ಎಸೆತದಲ್ಲಿ ಮೊದಲ ಸಿಕ್ಸರ್ ಬಾರಿಸಿದ ಎಬಿಡಿ ನಂತರ ಬೌಂಡರಿಗಳ ಸುರಿಮಳೆಗೈದರು. ಆಸ್ಟ್ರೇಲಿಯಾದ ವೇಗದ ಬೌಲರ್‌ಗಳಾದ ಬೆನ್ ಲಾಫ್ಲಿನ್ ಮತ್ತು ಕೇನ್ ರಿಚರ್ಡ್ಸನ್ ಅವರನ್ನು ದಂಡಿಸಿದ ಡಿವಿಲಿಯರ್ಸ್ 23 ಎಸೆತಗಳಲ್ಲಿ ಅರ್ಧಶತಕ ಮತ್ತು ಮುಂದಿನ 14 ಎಸೆತಗಳಲ್ಲಿ ಶತಕವನ್ನು ತಲುಪಿದರು. ಬೆನ್ ಹೆಲ್ಫೆನ್‌ಹೌಸ್ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಡಿವಿಲಿಯರ್ಸ್ ತಮ್ಮ ಶತಕವನ್ನು ಪೂರೈಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us