
ಟೀಮ್ ಇಂಡಿಯಾದ 15 ವರ್ಷದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆ ಸೌತ್ ಆಫ್ರಿಕಾ ಮಾಜಿ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ದೊಡ್ಡ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿರುವ ಈ ಯುವ ಆಟಗಾರನಿಗೆ ನಿಜವಾಗಿಯೂ ಟೆಸ್ಟ್ ಕ್ರಿಕೆಟ್ ಆಡುವ ಆಸೆ ಇದೆಯೇ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಿವಿಲಿಯರ್ಸ್,”ಅವನಿಗೆ ನಿಜವಾಗಿಯೂ ಟೆಸ್ಟ್ ಆಡಲು ಆಸೆಯಿದೆಯೇ?” ಸಾಮರ್ಥ್ಯವಿದೆ ನಿಜ. ಆದರೆ ರೆಡ್-ಬಾಲ್ ಕ್ರಿಕೆಟ್ ಆಡಲು ಅವನಿಗೆ ನಿಜವಾಗಿಯೂ ಮನಸಿದೆಯೇ? ಈ ಬಗ್ಗೆ ಅನುಮಾವಿದೆ. ಇದಕ್ಕೆ ಕಾಲವೇ ಉತ್ತರಿಸಬೇಕು” ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಇತ್ತೀಚಿನ ಐಪಿಎಲ್ 2026 ರಲ್ಲಿ ಭರ್ಜರಿ ಯಶಸ್ಸು, ಹಣ ಮತ್ತು ಪ್ರಸಿದ್ಧಿಯನ್ನು ಗಳಿಸಿದ್ದಾರೆ. ಅದು ಸಹ ಅಲ್ಪಾವಧಿಯಲ್ಲಿ. ಆದರೆ ಟೆಸ್ಟ್ ಕ್ರಿಕೆಟ್ ಎಂಬುದು ಕಠಿಣ ಸವಾಲು. ಇಲ್ಲಿ ಗಂಟೆಗಟ್ಟಲೆ ಕ್ರೀಸ್‌ನಲ್ಲಿ ನಿಲ್ಲುವ ತಾಳ್ಮೆ, ರಕ್ಷಣಾತ್ಮಕ ಆಟ ಮತ್ತು ತಾಂತ್ರಿಕ ಶಿಸ್ತು ಅಗತ್ಯವಿರುತ್ತದೆ.
ಆದರೆ ವೈಭವ್ ಕೇವಲ ಟಿ20 ಶೈಲಿಯ ಬಿರುಸಿನ ಬ್ಯಾಟಿಂಗ್ ಮತ್ತು ಪವರ್-ಹಿಟ್ಟಿಂಗ್ ನೆಚ್ಚಿಕೊಂಡಿದ್ದಾರೆ. ಹೀಗಾಗಿ ಟೆಸ್ಟ್ ಕ್ರಿಕೆಟ್‌ನ ಹಾದಿ ಸುಲಭವಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿಯಾಗುವುದು ಕೂಡ ಸುಲಭದ ಮಾತಲ್ಲ. ಅದು ದೈಹಿಕ ಮತ್ತು ಮಾನಸಿಕವಾಗಿ ಕಠಿಣ ಸವಾಲುಗಳನ್ನು ತಂದೊಡ್ಡುತ್ತದೆ. ಕೇವಲ ಬಿರುಸಿನ ಬ್ಯಾಟಿಂಗ್‌ನಿಂದ ಅಲ್ಲಿ ಬದುಕುಳಿಯಲು ಸಾಧ್ಯವಿಲ್ಲ.
ಅಷ್ಟೇ ಅಲ್ಲದೆ ಈ ಹಿಂದೆ ಟಿ20 ಕ್ರಿಕೆಟ್‌ನಲ್ಲಿ ಸಿಡಿಲಬ್ಬರದ ಪ್ರದರ್ಶನ ನೀಡುತ್ತಿದ್ದ ಹಲವು ಆಟಗಾರರು ಟೆಸ್ಟ್ ಕ್ರಿಕೆಟ್ನಿಂದ ದೂರವೇ ಉಳಿದಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಎಬಿಡಿ ವೈಭವ್ ಸೂರ್ಯವಂಶಿಯ ಟೆಸ್ಟ್ ಇಂಟ್ರೆಸ್ಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ವೈಭವ್ ಕೇವಲ ಶಾರ್ಟರ್ ಫಾರ್ಮ್ಯಾಟ್‌ಗೆ ಸೀಮಿತವಾದರೆ, ಅವರು ಭವಿಷ್ಯದಲ್ಲಿ ಕೇವಲ “ಟಿ20 ಸ್ಪೆಷಲಿಸ್ಟ್” ಆಗಿ ಉಳಿಯಬೇಕಾಗುತ್ತದೆ ಎಂದು ಎಬಿಡಿ ಡಿವಿಲಿಯರ್ಸ್ ಎಚ್ಚರಿಸಿದ್ದಾರೆ. ಹೀಗಾಗಿ ಮೂರು ಸ್ವರೂಪಗಳಲ್ಲೂ ಆಡುವ ಬಗ್ಗೆ ಆಸಕ್ತಿ ಹೊಂದಬೇಕು. ಸದ್ಯ ಟಿ20 ಕ್ರಿಕೆಟ್‌ನಲ್ಲಿ ಕಣಕ್ಕಿಳಿಯುತ್ತಿರುವ ವೈಭವ್ ಸೂರ್ಯವಂಶಿ, ಟೆಸ್ಟ್ ಆಡಲು ಸಿದ್ಧರಿದ್ದಾರೆಯೇ? ಟಿ20 ಜೊತೆ ಅವರು ರೆಡ್ ಬಾಲ್ ಕ್ರಿಕೆಟ್ ಬಗ್ಗೆ ಆಸಕ್ತಿ ತೋರಬೇಕು ಎಂದು ಎಬಿಡಿ ಸಲಹೆ ನೀಡಿದ್ದಾರೆ.
ಒಂದೆಡೆ ವೈಭವ್ ಸೂರ್ಯವಂಶಿಯ ಟೆಸ್ಟ್ ಕ್ರಿಕೆಟ್ ಇಂಟ್ರೆಸ್ಟ್ ಬಗ್ಗೆ ಎಬಿ ಡಿವಿಲಿಯರ್ಸ್ ಅನುಮಾನ ವ್ಯಕ್ತಪಡಿಸಿದರೆ, ಮತ್ತೊಂದೆಡೆ ವೈಭವ್ ಸೂರ್ಯವಂಶಿ ಮೂರು ಸ್ವರೂಪಗಳಲ್ಲೂ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ವೈಭವ್, ತನಗೆ ಟೀಮ್ ಇಂಡಿಯಾ ಪರ ಟೆಸ್ಟ್, ಟಿ20 ಹಾಗೂ ಏಕದಿನ ಪಂದ್ಯಗಳನ್ನಾಡಬೇಕೆಂಬ ಆಸೆಯಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿ 10-20 ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಬೇಕೆಂಬುದು ಕನಸು ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ಕುತೂಹಲಕಾರಿ ವಿಷಯ ಎಂದರೆ ವೈಭವ್ ಸೂರ್ಯವಂಶಿ ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕಣಕ್ಕಿಳಿದಿದ್ದಾರೆ. ಅಂದರೆ ಟೆಸ್ಟ್ ಮಾದರಿಯ ಪಂದ್ಯಗಳನ್ನಾಡಿದ್ದಾರೆ. ಬಿಹಾರ ಪರ 8 ರಣಜಿ ಮ್ಯಾಚ್ಗಳನ್ನಾಡಿರುವ ವೈಭವ್ ಮೇಘಾಲಯ ವಿರುದ್ಧ 93 ರನ್ ಬಾರಿಸಿದ್ದರು.
ಇದನ್ನೂ ಓದಿ: ಚೊಚ್ಚಲ ಪಂದ್ಯದಲ್ಲೇ ದಾಖಲೆಗಳ ಮೇಲೆ ದಾಖಲೆ ಬರೆದ ಮಾನವ್ ಸುತಾರ್..!
ಹಾಗೆಯೇ 2024 ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 4 ದಿನಗಳ ಯೂತ್ ಟೆಸ್ಟ್ ಪಂದ್ಯದಲ್ಲಿ ಬ್ಯಾಟ್ ಬೀಸಿದ್ದ ವೈಭವ್ ಕೇವಲ 58 ಎಸೆತಗಳಲ್ಲಿ ಶತಕ (104 ರನ್) ಸಿಡಿಸಿದ್ದರು. ಈ ಮೂಲಕ ಅಂಡರ್-19 ಟೆಸ್ಟ್ ಪಂದ್ಯದಲ್ಲಿ ಅತೀ ವೇಗದ ಶತಕ ಬಾರಿಸಿದ ಭಾರತೀಯ ಎಂಬ ದಾಖಲೆ ಬರೆದಿದ್ದರು. ಒಂದು ವೇಳೆ ವೈಭವ್ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡರೆ ಅಲ್ಲೂ ಕೂಡ ಆರ್ಭಟದ ಬ್ಯಾಟಿಂಗ್ ಅನ್ನು ಎದುರು ನೋಡಬಹುದು.