Team India: ರೋಹಿತ್ ಶರ್ಮಾ ಬದಲಿಗೆ ಯುವ ಆಟಗಾರರನಿಗೆ ಅವಕಾಶ: ವರದಿ
Abhimanyu Easwaran: ಭಾರತ-ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿಯು ಡಿಸೆಂಬರ್ 14 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಪಂದ್ಯಗಳನ್ನು ಆಡಲಿದ್ದು, ರೋಹಿತ್ ಶರ್ಮಾ ಅಲಭ್ಯರಾದರೆ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ.
Updated on: Dec 08, 2022 | 6:55 PM

ಢಾಕಾದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಫೀಲ್ಡಿಂಗ್ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ಹಿಟ್ಮ್ಯಾನ್ ಇದೀಗ ಚಿಕಿತ್ಸೆಗಾಗಿ ಭಾರತಕ್ಕೆ ಹಿಂತಿರುಗಿದ್ದಾರೆ. ಅಲ್ಲದೆ ಬಾಂಗ್ಲಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಕೊನೆಯ ಏಕದಿನ ಪಂದ್ಯದಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಟೆಸ್ಟ್ ಸರಣಿಯಲ್ಲೂ ಕಾಣಿಸಿಕೊಳ್ಳುವುದು ಅನುಮಾನ. ಹೀಗಾಗಿ ಟೆಸ್ಟ್ ತಂಡದಲ್ಲಿ ಹಿಟ್ಮ್ಯಾನ್ ಬದಲಿಗೆ ಯುವ ಆಟಗಾರ ಅಭಿಮನ್ಯು ಈಶ್ವರನ್ಗೆ ಸ್ಥಾನ ಸಿಗಲಿದೆ ಎಂದು ವರದಿಯಾಗಿದೆ.

ಭಾರತ-ಎ ತಂಡದ ನಾಯಕರಾಗಿರುವ ಅಭಿಮನ್ಯು ಈಶ್ವರನ್ ಸದ್ಯ ಬಾಂಗ್ಲಾದೇಶದಲ್ಲಿದ್ದಾರೆ. ಬಾಂಗ್ಲಾ-ಎ ತಂಡದ ವಿರುದ್ಧ ಟೀಮ್ ಇಂಡಿಯಾ-ಎ ಟೆಸ್ಟ್ ಸರಣಿ ಆಡುತ್ತಿದೆ. ಈ ತಂಡವನ್ನು ಮುನ್ನಡೆಸುತ್ತಿರುವ ಈಶ್ವನ್ ಭರ್ಜರಿ ಶತಕಗಳನ್ನು ಸಿಡಿಸಿ ಮಿಂಚಿದ್ದಾರೆ.

ಹೀಗಾಗಿ ರೋಹಿತ್ ಶರ್ಮಾ ಬದಲಿಗೆ ಅಭಿಮನ್ಯು ಈಶ್ವರನ್ ಅವರನ್ನೇ ತಂಡಕ್ಕೆ ಕರೆಸಿಕೊಳ್ಳಲಿದೆ. ಬಾಂಗ್ಲಾದೇಶ್-ಎ ತಂಡದ ವಿರುದ್ಧದ ಟೆಸ್ಟ್ ಸರಣಿ ಮುಗಿಸಿ ಈಶ್ವನ್ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.

ಇನ್ನು ಬಾಂಗ್ಲಾದೇಶ್ ವಿರುದ್ಧದ ಸರಣಿಯಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ ಬದಲಿಗೆ ಉಮ್ರಾನ್ ಮಲಿಕ್ ಅಥವಾ ಮುಖೇಶ್ ಕುಮಾರ್ ಸ್ಥಾನ ಪಡೆಯುವ ಸಾಧ್ಯತೆಯಿದೆ. ಹಾಗೆಯೇ ರವೀಂದ್ರ ಜಡೇಜಾ ಟೆಸ್ಟ್ ಸರಣಿಯಿಂದ ಹೊರುಗಳಿಯುವ ಸಾಧ್ಯತೆಯಿದ್ದು, ಬದಲಿ ಆಟಗಾರನಾಗಿ ಭಾರತ-ಎ ತಂಡದಲ್ಲಿರುವ ಸೌರಭ್ ಕುಮಾರ್ಗೆ ಅವಕಾಶ ಸಿಗಬಹುದು.

ಭಾರತ-ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿಯು ಡಿಸೆಂಬರ್ 14 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಪಂದ್ಯಗಳನ್ನು ಆಡಲಿದ್ದು, ರೋಹಿತ್ ಶರ್ಮಾ ಅಲಭ್ಯರಾದರೆ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಈ ಕೆಳಗಿನಂತಿದೆ...

ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್ , ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್. ಗಾಯಗೊಂಡಿರುವ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಆಡುವುದು ಅನುಮಾನ. ಹೀಗಾಗಿ ಬದಲಿ ಆಟಗಾರರನ್ನು ಆಯ್ಕೆ ಮಾಡಲಿದೆ.



















