‘ಕೈ ಕಟ್ಟಿ’ ಸಂಭ್ರಮದ ಹಿಂದಿನ ಕಾರಣ ಬಿಚ್ಚಿಟ್ಟ ಅಭಿಷೇಕ್ ಶರ್ಮಾ

IPL 2026 SRH vs DC: ಹೈದರಾಬಾದ್​ನಲ್ಲಿ ನಡೆದ ಐಪಿಎಲ್​ನ 31ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 242 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್​ಗಳಲ್ಲಿ 195 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಕೈ ಕಟ್ಟಿ ಸಂಭ್ರಮದ ಹಿಂದಿನ ಕಾರಣ ಬಿಚ್ಚಿಟ್ಟ ಅಭಿಷೇಕ್ ಶರ್ಮಾ
Abhishek Sharma

Updated on: Apr 22, 2026 | 2:57 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 31ನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ (Abhishek Sharma) ಅಕ್ಷರಶಃ ಅಬ್ಬರಿಸಿದ್ದರು. ಹೈದರಾಬಾದ್​ನ ರಾಜೀವ್​ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಎಸ್​ಆರ್​ಹೆಚ್ ಪರ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಕೇವಲ 47 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಶತಕದ ಬಳಿಕ ‘ಕೈ ಕಟ್ಟಿ’ ಪೋಸ್ ನೀಡುವ ಮೂಲಕ ಸಂಭ್ರಮಿಸಿದ್ದರು.

ಸಾಮಾನ್ಯವಾಗಿ ಅಭಿಷೇಕ್ ಶರ್ಮಾ ಅರ್ಧಶತಕ ಅಥವಾ ಶತಕ ಸಿಡಿಸಿದ ಬಳಿಕ ತಮ್ಮ ಹೆಬ್ಬೆರಳು ಮತ್ತು ತೋರುಬೆರಳಿನ ಮೂಲಕ ‘L’ ಆಕಾರವನ್ನು ತೋರಿಸುವುದು ವಾಡಿಕೆ. ಇದು ಅಭಿಮಾನಿಗಳ ಮೇಲಿನ ‘ಪ್ರೀತಿ’ (Love) ಮತ್ತು ಬೆಂಬಲವನ್ನು ಸೂಚಿಸುತ್ತದೆ ಎಂದು ಅವರು ಈ ಹಿಂದೆ ಸ್ಪಷ್ಟಪಡಿಸಿದ್ದರು.

ಆದರೆ ಈ ಬಾರಿ ಅವರು ‘L’  ಸಂಭ್ರಮದ ಬದಲಿಗೆ ಕೈ ಕಟ್ಟಿ ಪೋಸ್ ನೀಡಿದ್ದರು.  ಇದರ ಬೆನ್ನಲ್ಲೇ ಹೊಸ ಮಾದರಿಯ ಸಂಭ್ರಮಕ್ಕೇನು ಕಾರಣ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಈ ಪ್ರಶ್ನೆಗೆ ಖುದ್ದು ಅಭಿಷೇಕ್ ಶರ್ಮಾ ಉತ್ತರಿಸಿದ್ದಾರೆ.

ಕೈ ಕಟ್ಟಿದ ಸಂಭ್ರಮಕ್ಕೆ ಕಾರಣವೇನು?

ಪಂದ್ಯದ ಬಳಿಕ ಈ ಬಗ್ಗೆ ಮಾತನಾಡಿದ ಅಭಿಷೇಕ್ ಶರ್ಮಾ, “ಇದು ನಮ್ಮ ಬ್ಯಾಟಿಂಗ್ ಕೋಚ್ ಜೇಮ್ಸ್ ಫ್ರಾಂಕ್ಲಿನ್ ಮತ್ತು ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಅವರಿಗೆ ಅರ್ಪಿಸಿದ ಗೌರವ. ನಾನು ಪಂದ್ಯದ ಕೊನೆಯವರೆಗೂ (20ನೇ ಓವರ್‌ವರೆಗೆ) ಕ್ರೀಸ್‌ನಲ್ಲಿ ನಿಂತು ಬ್ಯಾಟಿಂಗ್ ಮಾಡಬೇಕೆಂದು ಅವರು ನನಗೆ ಸವಾಲು ಹಾಕಿದ್ದರು. ಆ ಗುರಿಯನ್ನು ತಲುಪಿದ ಖುಷಿಗಾಗಿ ಈ ರೀತಿ ಸಂಭ್ರಮಿಸಿದೆ,” ಎಂದು ತಿಳಿಸಿದ್ದಾರೆ.

ಅಲ್ಲದೆ ಈ ಶತಕವನ್ನು ಅನಾರೋಗ್ಯದಿಂದ ಬಳಲುತ್ತಿರುವ ಸಹೋದರಿಗೆ ಅರ್ಪಿಸುತ್ತಿರುವುದಾಗಿ ಅಭಿಷೇಕ್ ಇದೇ ವೇಳೆ ತಿಳಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ 68 ಎಸೆತಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ 10 ಸಿಕ್ಸರ್ ಹಾಗೂ 10 ಫೋರ್​ಗಳೊಂದಿಗೆ ಅಜೇಯ 135 ರನ್ ಬಾರಿಸಿದರು. ಈ ಭರ್ಜರಿ ಶತಕದೊಂದಿಗೆ ಎಸ್​ಆರ್​ಹೆಚ್ ತಂಡವು 20 ಓವರ್​ಗಳಲ್ಲಿ 242 ರನ್​ ಕಲೆಹಾಕಿತು.

ಇದನ್ನೂ ಓದಿ: ದಾಖಲೆ… ವಿಶ್ವ ದಾಖಲೆ… ಅಭಿಷೇಕ್ ಶರ್ಮಾ ಹೆಸರಿಗೆ ಭರ್ಜರಿ ದಾಖಲೆ

ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 195 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡವು 47 ರನ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಎಸ್​ಆರ್​ಹೆಚ್ ತಂಡವು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

 

Published On - 2:56 pm, Wed, 22 April 26

Follow Us